Wednesday, September 28, 2016

ನನ್ನ ಸಾವಿನ ಸುದ್ದಿ ಒಮ್ಮೆಲೇ ಕೊಡಬೇಡ ...

ಮನೆಗೆ ಹೋಗಿ ನನ್ನ ಸಾವಿನ ಸುದ್ದಿ
ಒಮ್ಮೆಲೇ ಕೊಡಬೇಡ ಗೆಳೆಯ
ನನ್ನವರ ಹೃದಯಗಳು ಒಡೆದಾವು...

ನನ್ನ ಅಮ್ಮ ನನ್ನ ಬಗ್ಗೆ ಕೇಳಿದರೆ
ಉರಿಯುತ್ತಿರುವ ದೀಪವನು ಆರಿಸಿಬಿಡು
ಆದರೂ ಅರ್ಥವಾಗಲಿಲ್ಲವೆಂದರೆ
ಎರಡು ಹನಿ ಕಣ್ಣೀರು ಸುರಿಸಿಬಿಡು

ನನ್ನ ಅಪ್ಪ ನನ್ನ ಬಗ್ಗೆ ಕೇಳಿದರೆ
ಅವರ ಬೆನ್ನನ್ನೊಮ್ಮೆ ನೇವರಿಸಿಬಿಡು
ಆದರೂ ಅರ್ಥವಾಗಲಿಲ್ಲವೆಂದರೆ
ಅವರ ಊರುಗೋಲನ್ನು ಮುರಿದುಬಿಡು

ನನ್ನ ತಂಗಿ ನನ್ನ ಬಗ್ಗೆ ಕೇಳಿದರೆ
ಬರಿದಾದ ಕೈಯ ಮಣಿಕಟ್ಟ ತೋರಿಸು
ಆದರೂ ಅರ್ಥವಾಗಲಿಲ್ಲವೆಂದರೆ
ರಕ್ತಸಿಕ್ತವಾದ ಈ ರಾಖಿಯನು ಮುಂದಿರಿಸು

ನನ್ನ ತಮ್ಮ ನನ್ನ ಬಗ್ಗೆ ಕೇಳಿದರೆ
ನಾ ಬರುತ್ತಿದ್ದ ಬರಿ ದಾರಿ ತೋರಿಸು
ಆದರೂ ಅರ್ಥವಾಗಲಿಲ್ಲವೆಂದರೆ
ಅವನ ಮುಖವನ್ನೊಮ್ಮೆ ಎದೆಗವಚಿ ಸಂತೈಸು

ನನ್ನ ಹೆಂಡತಿ ನನ್ನ ಬಗ್ಗೆ ಕೇಳಿದರೆ
ತಲೆ ತಗ್ಗಿಸಿ ಒಂದು ದೀರ್ಘ ನಿಟ್ಟುಸಿರು ಬಿಡು
ಆದರೂ ಅರ್ಥವಾಗಲಿಲ್ಲವೆಂದರೆ
ಅವಳ ಕಾಲಿಗೆ ಬಿದ್ದು ಕಾಲುಂಗರ ತೆಗೆದುಬಿಡು

ನನ್ನ ಮಗಳು ನನ್ನ ಬಗ್ಗೆ ಕೇಳಿದರೆ
ಅವಳ ಹಣೆಗೊಂದು ಹೂಮುತ್ತನಿಡು
ಆದರೂ ಅರ್ಥವಾಗಲಿಲ್ಲವೆಂದರೆ
ಅವಳನ್ನು ಬಿಗಿದಪ್ಪಿ ಜೋರಾಗಿ ಅತ್ತುಬಿಡು

ಮನೆಗೆ ಹೋಗಿ ನನ್ನ ಸಾವಿನ ಸುದ್ದಿ
ಒಮ್ಮೆಲೇ ಕೊಡಬೇಡ ಗೆಳೆಯ
ನನ್ನವರ ಹೃದಯಗಳು ಒಡೆದಾವು…

ಎಸ್. ಡಿ. ಮಂಜುವಾಣಿ

Friday, September 23, 2016

ಚಂದಿರನ ಕೇಳಿದೆ ...

ಚಂದಿರನ ಕೇಳಿದೆ
ಕರೆತರುವೆಯಾ ನನ್ನವಳ
ಮೋಡದಲ್ಲಿ ಮರೆಯಾಗಿ
ನನ್ನ ಪ್ರಶ್ನೆಗೆ ಉತ್ತರಿಸದೆ
ಮರೆಯಾಗಿ ಹೋದ
ಸದಾ ಅವಳದೇ ಕನವರಿಕೆ
ಅವಳಿಲ್ಲದ ಬಾಳು ಹೇಳಲಾಗದ
ಚಡಪಡಿಕೆ ...
ರುಚಿಯಿಲ್ಲ , ಹಸಿವಿಲ್ಲ
ದಿನ ಬೆಳಗಾದರೆ ಅವಳದೇ ಧ್ಯಾನ
ಮಾತು ನೂರಿದ್ದರೂ ಮನದಲ್ಲಿ ಮೌನ
ಜನುಮ‌ ಮುಗಿಯುವ ತನಕ
ಉಸಿರಲ್ಲಿ ಉಸಿರಾಗಿ ಕಾಯುವೆನು
ಜೀವದಲಿ ಉಸಿರು ನಿಂತರೂ ಸಹ
ಇಹಲೋಕದಲಿ ಅವಳಿಗೆ ಒಳಿತು ಬಯಸುವೆನು
ಚಂದಿರನ ಕೇಳಿದೆ
ಕರೆತರುವೆಯಾ ನನ್ನವಳ
ಒಳ್ಳೆಯ ದಿನ ಬರುವುದೆಂದು
ತೋರಿಸಿದನು ಚಂದಿರನು ನಕ್ಷತ್ರಗಳ
ಹೀಗೊಂದು ದಿನ ಕಳೆಯಲು
ಬಂದಳವಳು ನನಸಾಗಿ
ವರವಾಗಿ ,ವಧುವಾಗಿ
ಸಿಹಿಯಾಗಿ ಬಾಳಲ್ಲಿ
ಸುಂದರ ಗೀತೆಯಾಗಿ
ಬರಿದಾದ ಬಾಳಲ್ಲಿ ನಕ್ಷತ್ರವಾಗಿ
ನನ್ನ ಹೆಜ್ಜೆಗೆ ಗುರುತಾಗಿ
ಅವಳೇ ನನ್ನ ಭಾವನೆಯ ಸ್ಪೂರ್ತಿಯಾಗಿ

Saturday, September 10, 2016

ನೆನಪು ....


ನೆನಪು ...

ಸಾಯುತ್ತೇನೆಂದು ತಿಳಿಯದ
ಅವಳು ಬೆಳಿಗ್ಗೆ ತಾನೇ
ಮದುವೆಗೆ ಹೋಗಿ ಬಂದು
ಕಳಚಿ ಬಿಸುಟ ನೀಲ ರೇಷಿಮೆ ಸೀರೆ,
ಇನ್ನೂ ಲಾಕರಿನಲಿ ಭದ್ರಪಡಿಸದ ಒಡವೆ,
ಹರಡಿದ್ದ ಕ್ಲಿಪ್ಪು, ಪೌಡರ್, ಒಣಹೂವು,
ಮೂಲೆಯಲಿ ಕಳಚಿದ ಮ್ಯಾಚಿಂಗ್ ಚಪ್ಪಲಿ;

ಮನೆಯ ತುಂಬ ಇನ್ನೂ ಮಾಸದ
ಅವಳು ಮೊನ್ನೆ ತಾನೇ ಮಾಡಿಟ್ಟ
ಸಾರಿನ ಪುಡಿಯ ಪರಿಮಳ,
ಒಣಹಾಕಿದ್ದ ಬಟ್ಟೆಗಳ ರಾಶಿ,
ಮಡಿಸದೇ ಬಿಟ್ಟ ಮೃದು ಹೊದಿಕೆ,
ಅವಳು ಮಲಗಿದ್ದ ನಲುಗಿದ ಹಾಸಿಗೆ,
ಅವಳೊರಗಿ ಕೂತಿದ್ದ ಕುರ್ಚಿ;

ಕೋಣೆಯಲಿ ಬೀಡುಬಿಟ್ಟ ಅವಳ ಮುನಿಸು,
ಕೋಣೆಯಲಿ ಅಡಗಿ ಕೂತ ಅವಳ ಕನಸು,
ಇಲ್ಲೇ ಅಡುಗೆ ಕೋಣೆಯಲಿ ನಕ್ಕ ನಗು,
ಬಚ್ಚಲಿನಲಿ ಅವಳ ಗುನುಗು ರಾಗ,
ಹಿತ್ತಲಿನಲ್ಲಿ ಎದೆ ಕಲಕುವ ಬಿಕ್ಕು,
ಅಲ್ಲಲ್ಲಿ ಅಡಗಿ ಕೂತ ಅವಳ ತಳಮಳ, ವಿಷಾದ,
ತುಂಟತನ, ಮೃದು ಪಾದದ ಹೆಜ್ಜೆ ಸದ್ದು ...

ಅಯ್ಯೋ ನೋಯಿಸುತ್ತವೆ ಎಲ್ಲ ನೆನಪುಗಳು,
ಸುಟ್ಟುಬಿಡಬೇಕಿತ್ತು ಎಲ್ಲವನೂ ಅವಳೊಡನೆಯೇ...
ಚಟ್ಟದ ಮೇಲೆ ಎಲ್ಲ ಒಟ್ಟಿ
ಛಟ್ಟಂತ ಸಿಡಿವ ಮೂಳೆಗಳೊಡನೆ
ಸುಟ್ಟು ಬೂದಿಯಾಗಿಸಬೇಕಿತ್ತು
ಎದೆಕೊರೆವ ಎಲ್ಲ ನೆನಪುಗಳನ್ನೂ ...

ಹೀಗೆಂದುಕೊಳ್ಳುವುದರಲ್ಲೇ ಕಂಡಿತು
ಅವಳು ಮುತ್ತಿಡುತ್ತಿದ್ದ ನನ್ನ ಗಲ್ಲ, ತುಟಿ
ಅವಳ ಬಳಸುತ್ತಿದ್ದ ನನ್ನ ಕೈಗಳು,
ಅವಳು ಕೆದರುತ್ತಿದ್ದ ತಲೆಗೂದಲು,
ಅವಳಲ್ಲಿ ಬೆರೆಯುತ್ತಿದ್ದ ನನ್ನ ದೇಹ,
ಅವಳಾಡುತ್ತಿದ್ದ ನನ್ನ ಬೆರಳುಗಳು,
ಅವಳು ಓಡಾಡುತ್ತಿದ್ದ ನನ್ನ ಮನಸ್ಸಿನ ಒಳಕೋಣೆ ...

ನೆನಪುಗಳೇ ಹೀಗೆ ... ಒದ್ದೆ ಒದ್ದೆ ..
ಹಸಿ ಹಸಿ ಕಟ್ಟಿಗೆಯಂತೆ ...
ಹೊತ್ತಿ ಉರಿಸುವುದು ಸುಲಭವಲ್ಲ ...

ಭಾರತಿ ಬಿ.ವಿ.

Tuesday, August 30, 2016

ಹೇ… ಹೂವೇ…



ಹೇ… ಹೂವೇ…

ಸಾಗರದ ಅಲೆಗಳು ಜೋರಾಗಿ
ದಡವ ಅಪ್ಪಳಿಸಲು ಮತ್ತದೇ
ನೆನಪು ಸದಾ ಕಾಡುವುದು
ಮರಳ ರಾಶಿಯ ಮೇಲೆ
ನೀ ಬರೆದ ನನ್ನ ಹೆಸರು

ಆ ಒಂದು ನಿಮಿಷ ಭೋರ್ಗರೆಯುವ
ಅಲೆ ಬಾರದಿದ್ದರೆ ಉಳಿಯುತಿತ್ತು
ನೀ ಮರಳ ರಾಶಿಯ ಮೇಲೆ ಬರೆದ
ನನ್ನ ಹೆಸರು, ಬಹುಷಃ ಅಲೆಗೂ ಸಹ
ನನ್ನ ಮೇಲೆ ನಂಬಿಕೆ ಇರಲಿಲ್ಲ ಎಂಬ
ಭಾವ ಸದಾ ಕಾಡುವುದು, ಹೂವೇ…

Saturday, June 25, 2016

ನನ್ನ ಜೀವನ ಒಂದು ಖಾಲಿ ಹಾಳೆಯಂತೆ…
ಖಾಲಿಯಾಗಿಯೇ ಉಳಿದುಹೋಯ್ತು
ಅದರಲ್ಲಿ ಬರೆದಿದ್ದೆಲ್ಲವೂ
ಕಣ್ಣೀರಿನ ಜೊತೆ ಕೊಚ್ಚಿಹೋಯ್ತು…
(ಮೇರಾ ಜೀವನ್ ಕೋರಾ ಕಾಗಜ್
ಕೋರ ಹೀ ರಹ ಗಯಾ
ಜೋ ಲಿಖಾ ಥಾ
ಆಸುಓಂ ಕೆ ಸಂಗ್ ಬೆಹ ಗಯಾ)

Friday, June 10, 2016

ಮೋಡ ಮಳೆ ಸುರಿಸಿದರೆ
ಇಡೀ ಪ್ರಪಂಚಕ್ಕೆ ತಿಳಿಯುತ್ತದೆ
ಕಣ್ಣುಗಳು ನೀರು ಸುರಿಸಿದರೆ
ಯಾರಿಗೂ ಗೊತ್ತಾಗುವುದಿಲ್ಲ
ಮನಸ್ಸಿನ ಮಾತು 
ಮನಸ್ಸಿಗೆ ಮಾತ್ರ ಗೊತ್ತಾಗುತ್ತದೆ
[ಬಾದಲ್ ಬರಸೆ
ದುನಿಯಾ ಜಾನೆ
ಅಖಿಯಾ ಬರಸೆ
ಕೋಯಿ ನ ಜಾನೆ
ದಿಲ್ ಕೀ ಬಾತೆ
ದಿಲ್ ಹೀ ಜಾನೆ]

Tuesday, May 10, 2016

ಅಕ್ಷಯ ತೃತೀಯದ ಕಾಣಿಕೆಯಾಗಿ...

ಹೇ ಗೆಳತಿ
ಅಕ್ಷಯ ತೃತೀಯದ
ಕಾಣಿಕೆಯಾಗಿ
ನಿನ್ನ ನಲಿವ ಮನಸಿಗೆ
ಕುಣಿವ ಕಾಲ್ಗೆಜ್ಜೆಯನು
ತೊಡಿಸಿಹೆನು
ಅದಕ್ಕೆ ಪ್ರತಿಯಾಗಿ
ನನಗೆ ನೀನೇನು ಕೊಡುವೆ?
ನಿನ್ನ ಪ್ರೀತಿಯನ್ಹೊರತುಪಡಿಸಿ
ಬೇರೀನ್ನೇನನು ಕೇಳಲಿ?
ಅಷ್ಟೇ ಸಾಕು ನನಗೆ...

Saturday, May 7, 2016

ಸುಳ್ಳನ್ನಾಡು...

ಸುಳ್ಳನ್ನಾಡು
ನೂರಾರು ಗೆಳೆಯರಿರುತ್ತಾರೆ
ಸತ್ಯವನ್ನಾಡು
ಸಾವಿರಾರು ಶತ್ರುಗಳಿರುತ್ತಾರೆ

-ಬೀchi

ನಿರ್ಭಾವುಕರು...

ನಮ್ಮ ದುಃಖ ನೋವು ಕಣ್ಣೀರಿಗೆ ಸ್ಪಂದಿಸದ ಜನ
ನಮ್ಮ ಸಣ್ಣಪುಟ್ಟ ಲೋಪದೋಷಗಳನ್ನು
ಹುಡುಕುವುದರಲ್ಲಿ ಅತಿಯಾದ ಆಸಕ್ತಿ ತೋರಿಸುತ್ತಾರೆ ...

Sunday, April 17, 2016

ಉಳಿದ ಮಲ್ಲೆಯ ಹೂವ ಸಣ್ಣ ಮಾಲೆಯ ಕಟ್ಟಿ

ದಿನದ ವ್ಯಾಪಾರದಲಿ ಹೂವ ರಾಶಿಯ ಮಾರಿ
ಎಷ್ಟು ಗಳಿಸಿದರೇನು? ಲೆಕ್ಕವಲ್ಲ
ಉಳಿದ ಮಲ್ಲೆಯ ಹೂವ, ಸಣ್ಣ ಮಾಲೆಯ ಕಟ್ಟಿ
ಮಡದಿ ಹೆರಳಿಗೆ ಮುಡಿಸೆ, ನಕ್ಕಳಲ್ಲ!

Saturday, April 9, 2016

ಬದುಕು...

ಹೇ ಮನವೇ
ಕೊರಗದಿರು
ಬಾಳಹಾದಿಯಲ್ಲಿ
ಕಲ್ಲುಮುಳ್ಳುಗಳಿರುವುದು
ಸಹಜ
ಅವುಗಳನು
ದಾಟಿ ನಿಂತರೆ
ನೀನಾಗುವೆ ಮನುಜ
ಹೇ ಮನವೇ...