Showing posts with label ಕುವೆಂಪು. Show all posts
Showing posts with label ಕುವೆಂಪು. Show all posts

Sunday, May 11, 2014

ನೂರು ದೇವರನೆಲ್ಲ ನೂಕಾಚೆ ದೂರ

ನೂರು ದೇವರನೆಲ್ಲ ನೂಕಾಚೆ ದೂರ
ಭಾರತಾಂಬೆಯೇ ದೇವಿ ನಮಗಿಂದು
ಪೂಜಿಸುವ ಬಾರಾ ಬಾರಾ

ಶತಮಾನಗಳು ಬರಿಯ ಜಡಶಿಲೆಯ ಪೂಜಿಸಾಯ್ತು
ಹಾವುಗಳಿಗೆ ಹಾಲೆರೆದು ಪೋಷಿಸಾಯ್ತು
ಬಿಸಿಲು ಮಳೆ ಗಾಳಿ ಬೆಂಕಿಯನೆಲ್ಲ ಬೇಡಿಯಾಯ್ತು
ದಾಸರನು ಪೂಜಿಸಿಯೇ ದಾಸ್ಯವಾಯ್ತು

ಗುಡಿಯೊಳಗೆ ಕಣ್ಮುಚ್ಚಿ ಬೆಚ್ಚಗಿರುವರನೆಲ್ಲ
ಭಕ್ತ ರಕ್ತವ ಹೀರಿ ಕೊಬ್ಬಿಹರನೆಲ್ಲ
ಘಂಟೆ ಜಾಗಟೆಗಳಿಂ ಬಡಿದು ಕುತ್ತಿಗೆ ಹಿಡಿದು
ಕಡಲಡಿಗೆ ತಳ್ಳಿರೈ ಶಂಖದಿಂ ನುಡಿದು
                                                            
ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು
ಜೀವದಾತೆಯನಿಂದು ಕೂಗಬೇಕು
ಶಿಲೆಯ ಮೂರ್ತಿಗೆ ನೇಯ್ದ ಕಲೆಯ ಬಲೆಯನು ಒಯ್ದು
ಚಳಿಯು ಮಳೆಯಲಿ ನವೆವ ತಾಯ್ಗೆ ಹಾಕು
                                                         

ಕುವೆಂಪು
ಈ ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

Wednesday, April 23, 2014

ತೆರೆದಿದೆ ಮನೆ ಓ ಬಾ ಅತಿಥಿ

ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ

ಆವರೂಪದೊಳು ಬಂದರು ಸರಿಯೇ
ಆವವೇಷದೊಳು ನಿಂದರು ಸರಿಯೇ
ನೇಸರುದಯದೊಳು ಬಹೆಯಾ ಬಾ
ತಿಂಗಳಂದದಲಿ ಬಹೆಯಾ ಬಾ

ತೆರೆದಿದೆ ಮನೆ ಓ ಬಾ ಅತಿಥಿ...

ಇಂತಾದರು ಬಾ ಅಂತಾದರು ಬಾ
ಎಂತಾದರು ಬಾ ಬಾ
ಬೇಸರವಿದಕೂ ಸರಿಸುವ ಹೊಸ ಬಾಳ
ಉಸಿರಾಗಿ ಬಾ ಬಾ ಬಾ

ತೆರೆದಿದೆ ಮನೆ ಓ ಬಾ ಅತಿಥಿ...

ಕಡಲಾಗಿ ಬಾ ಬಾನಾಗಿ ಬಾ
ಗಿರಿಯಾಗಿ ಬಾ ಕಾನಾಗಿ ಬಾ
ಕಡಲಾಗಿ ಬಾನಾಗಿ ಗಿರಿಯಾಗಿ ಕಾನಾಗಿ
ತೆರೆದಿದೆ ಮನ ಓ ಬಾ
ಹೊಸ ತಾನದ ಹೊಸ ಗಾನದ
ಹೊಸ ತಾನದ ಹೊಸ ಗಾನದ
ರಸ ಜೀವವ ತಾ ತಾ ತಾ

ತೆರೆದಿದೆ ಮನೆ ಓ ಬಾ ಅತಿಥಿ...

ಕುವೆಂಪು
ಈ ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

ತನುವು ನಿನ್ನದು ಮನವು ನಿನ್ನದು

ತನುವು ನಿನ್ನದು ಮನವು ನಿನ್ನದು
ನನ್ನ ಜೀವನ ಧನವು ನಿನ್ನದು
ನಾನು ನಿನ್ನವನೆಂಬ ಹೆಮ್ಮೆಯ
ತೃಣವು ಮಾತ್ರವೆ ನನ್ನದು

ನೀನು ಹೊಳೆದರೆ ನಾನು ಹೊಳೆವೆನು
ನೀನು ಬೆಳೆದರೆ ನಾನು ಬೆಳೆವೆನು
ನನ್ನ ಹರಣದ ಹರಣ ನೀನು
ನನ್ನ ಮರಣದ ಮರಣವು

ನನ್ನ ಮನದಲಿ ನೀನೆ ಯುಕ್ತಿ
ನನ್ನ ಹೃದಯದಿ ನೀನೆ ಭಕ್ತಿ
ನೀನೆ ಮಾಯಾ ಮೋಹ ಶಕ್ತಿಯು
ನನ್ನ ಜೀವನ ಮುಕ್ತಿಯು

ಕುವೆಂಪು
ಈ ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

ಓ ನನ್ನ ಚೇತನ ಆಗು ನೀ ಅನಿಕೇತನ

ಓ ನನ್ನ ಚೇತನ
ಆಗು ನೀ ಅನಿಕೇತನ

ರೂಪ ರೂಪಗಳನು ದಾಟಿ
ನಾಮ ಕೋಟಿಗಳನು ಮೀಟಿ
ಎದೆಯ ಬಿರಿಯೆ ಭಾವದೀಟಿ

ನೂರುಮತದ ಹೊಟ್ಟ ತೂರಿ
ಎಲ್ಲ ತತ್ವದೆಲ್ಲೆ ಮೀರಿ
ನಿರ್ದಿಗಂತವಾಗಿ ಏರಿ

ಎಲ್ಲಿಯೂ ನಿಲ್ಲದಿರು
ಮನೆಯನೆಂದು ಕಟ್ಟದಿರು
ಕೊನೆಯನೆಂದು ಮುಟ್ಟದಿರು

ಅನಂತ ತಾನನಂತವಾಗಿ
ಆಗುತಿಹನೆ ನಿತ್ಯ ಯೋಗಿ
ಅನಂತ ನೀ ಅನಂತವಾಗು
ಆಗು ಆಗು ಆಗು ಆಗು

ಕುವೆಂಪು
ಈ ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

ಯಾವ ಜನ್ಮದ ಮೈತ್ರಿ

ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು 
ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ
ಎಲ್ಲಿದ್ದರೇನಂತೆ ನಿನ್ನನೊಲಿಯದೆ ಮಾಣೆ

ಗುರುದೇವನಾಣೆ, ಓ ನನ್ನ ನೆಚ್ಚಿನ ಬಂಧು 
ವಿಶ್ವ ಜೀವನವೊಂದು ಪಾರವಿಲ್ಲದ ಸಿಂಧು
ಮೇಲೆ ತೆರೆನೊರೆಯೆದ್ದು ಭೋರ್ಗರೆಯುತಿರೆ ರೇಗಿ
ಅದರಂತರಾಳದಲಿ ಗುಪ್ತಗಾಮಿನಿಯಾಗಿ

ಹೃದಯಗಳು ನಲಿಯುತಿರೆ ಪ್ರೇಮ ತೀರ್ಥದಿ ಮಿಂದು
ಅದರರ್ಥಗಿರ್ಥಗಳು ಸೃಷ್ಟಿಕರ್ತನಿಗಿರಲಿ
ವ್ಯರ್ಥ ಜಿಜ್ಞಾಸೆಯಲಿ ಕಾಲಹರಣವದೇಕೆ?
ಕುರುಡನಾದಗೆ ದಾರಿಯರ್ಥ ತಿಳಿಯಲೆ ಬೇಕೆ?

ಹಾದಿ ಸಾಗಿದರಾಯ್ತು ಬರುವುದೆಲ್ಲಾ ಬರಲಿ 
ಬಾರಯ್ಯ, ಮಮಬಂಧು, ಜೀವನಪಥದೊಳಾವು
ಒಂದಾಗಿ ಮುಂದುವರಿಯುವ; ಹಿಂದಿರಲಿ ಸಾವು

ಕುವೆಂಪು
ಈ ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

Friday, April 18, 2014

ದೀಕ್ಷೆಯ ತೊಡು ಇಂದೇ ...

ದೀಕ್ಷೆಯ ತೊಡು ಇಂದೇ
ಕಂಕಣ ಕಟ್ಟಿಂದೇ
ಕನ್ನಡ ನಾಡೊಂದೇ
ಇನ್ನೆಂದೂ ತಾನೊಂದೇ

ನೃಪತುಂಗನ ದೊರೆಮುಡಿ ಸಾಕ್ಷಿ
ಪಂಪನ ಪದ ಧೂಳಿಯ ಸಾಕ್ಷಿ
ಕೂಡಲ ಸಂಗನ ಅಡಿ ಸಾಕ್ಷಿ
ಗದುಗಿನ ಕವಿದೇವನ ಸಾಕ್ಷಿ

ಇಡು ಸಹ್ಯಾದ್ರಿಯ ಮೇಲಾಣೆ
ಇಡು ಕಾವೇರಿಯ ಮೇಲಾಣೆ
ಇಡು ಚಾಮುಂಡಿಯ ಮೇಲಾಣೆ
ಇಡು ಗೊಮ್ಮಟ ಗುರುದೇವಾಣೆ

ಕಾಣಲಿ ಕನ್ನಡ ವ್ಯೋಮಾಕ್ಷಿ
ನಿಲ್ಲಲಿ ರವಿ ಚಂದ್ರರ ಸಾಕ್ಷಿ
ಕೇಳಲಿ ಕನ್ನಡ ಪಶು ಪಕ್ಷಿ
ಸರ್ವ ದೇವರೂ ಶ್ರೀ ಸಾಕ್ಷಿ

ಇಡು ನಿನ್ನಯ ಸತಿಯಾಣೆ
ಇಡು ನಿನ್ನಯ ಪತಿಯಾಣೆ
ಮಕ್ಕಳ ಮೇಲಾಣೆ
ಅಕ್ಕರೆ ಮೇಲಾಣೆ
ಗುರುದೇವರ ಆಣೆ
ನನ್ನಾಣೆ
ನಿನ್ನಾಣೆ
ತೊಡು ದೀಕ್ಷೆಯ
ಇಡು ರಕ್ಷೆಯ
ಕಂಕಣ ಕಟ್ಟಿಂದೇ
ಇನ್ನೆಂದೂ ತಾನೊಂದೇ
ಕನ್ನಡ ನಾಡೊಂದೇ

ಕುವೆಂಪು
ಈ ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

Friday, January 3, 2014

ಹಾಲು ಹಳ್ಳ ಹರಿಯಲಿ

ಹಾಲು ಹಳ್ಳ ಹರಿಯಲಿ
ಬೆಣ್ಣೆ ಬೆಟ್ಟವಾಗಲಿ
ಜೇನು ಮಳೆಯು ಸುರಿಯಲಿ
ತೊಟ್ಟಿಲೊಲಿದು ತೂಗಲಿ

ಪೈರು ಪಚ್ಚೆ ಬೆಳೆಯಲಿ
ತೆನೆಯ ಚಿನ್ನ ಹೊಳೆಯಲಿ
ಹಕ್ಕಿ ಹೊಟ್ಟೆ ತಣಿಯಲಿ
ಮಿಗವು ಸೊಗಸಿ ನಲಿಯಲಿ

ಮುಗಿದು ಸಮರ ನರಗಲಿ
ನರರು ನರರ ನಂಬಲಿ
ಸ್ವಾಮಿ ಅಮೃತ ಕೃಪೆಯಲಿ
ಶಾಂತಿ ಜಗವ ತುಂಬಲಿ

ಕುವೆಂಪು
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

Monday, December 16, 2013

ಬಾ ಫಾಲ್ಗುಣ ರವಿ ದರ್ಶನಕೆ

ಶಿವಮಂದಿರಸಮ ವನಸುಂದರ ಸುಮಶೃಂಗಾರದ ಗಿರಿಶೃಂಗಕೆ ಬಾ
ಬಾ ಫಾಲ್ಗುಣ ರವಿ ದರ್ಶನಕೆ

ಕುಂಕುಮ ಧೂಳಿಯ ದಿಕ್ತಟವೇದಿಯೊಳೋಕುಳಿಯಲಿ ಮಿಂದೇಳುವನು
ಕೋಟಿವಿಹಂಗಮ ಮಂಗಲರವ ರಸನೈವೇದ್ಯಕೆ ಮುದ ತಾಳುವನು
ಚಿನ್ನದ ಚೆಂಡನೆ ಮೂಡುವನು; ಹೊನ್ನನೆ ಹೊಯ್‌ನೀರ್ ನೀಡುವನು
ಸೃಷ್ಟಿಯ ಹೃದಯಕೆ ಪ್ರಾಣಾಗ್ನಿಯ ಹೊಳೆಹರಿಯಿಸಿ ರವಿ ದಯಮಾಡುವನು

ತೆರೆತೆರೆಯಾಗಿಹ ನೊರೆನೊರೆ ಕಡಲೆನೆ ನೋಡುವ ಕಣ್ಣೋಡುವವರೆಗೆ
ಬನಸಿರಿ ತುಂಬಿದ ಕಣಿವೆಯ ಹಂಬಿರೆ ಧೂಳೀಸಮಹಿಮ ಬಾನ‌ಕರೆಗೆ
ಪ್ರತಿಭೆಯ ಹೋಮಾಗ್ನಿಯ ಮೇಲೆ ಕವಿಮನ ತಾನುರಿದುರಿದೇಳೆ
ಮರಗಿಡದಲಿ ಜಡದೊಡಲಲಿ ಇದೆಕೋ ಸ್ಪಂದಿಸುತಿದೆ ಭಾವಜ್ವಾಲೆ

ವರ್ಣನದಿಂದ್ರಿಯ ನಂದನವನು ದಾಂಟುತೆ ದರ್ಶನ ಮುಕ್ತಿಯ ಸೇರಿ
ವ್ಯಕ್ತಿತೆ ಮೈಮರೆವುದು ಸೌಂದರ್ಯ ಸಮಾಧಿಯೊಳಾನಂದವ ಹೀರಿ
ಸರ್ವೇಂದ್ರಿಯ ಸುಖನಿಧಿ ಅಲ್ಲಿ ಸರ್ವಾತ್ಮನ ಸನ್ನಿಧಿ ಅಲ್ಲಿ
ಸಕಲಾರಾಧನ ಸಾಧನಬೋಧನ ಅನುಭವರಸ ತಾನಹುದಲ್ಲಿ

ಕುವೆಂಪು
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

Sunday, December 15, 2013

ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ

ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು

ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು
ಧನ್ಯತೆಯ ಕುಸುಮಗಳ ಅರ್ಪಿಸಿಲ್ಲಿ 

ಗಂಟೆಗಳ ದನಿಯಿಲ್ಲ ಜಾಗಟೆಗಳಿಲ್ಲಿಲ್ಲ
ಕರ್ಪೂರದಾರತಿಯ ಜ್ಯೋತಿ ಇಲ್ಲ

ಭಗವಂತನಾನಂದ ರೂಪುಗೊಂಡಿಹುದಿಲ್ಲಿ
ರಸಿಕತೆಯ ಕಡಲುಕ್ಕಿ ಹರಿದಿಹುದಿಲ್ಲಿ

ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ
ಬಾದರಾಯಣನಂತೆ ಬೋಧಿಸಿದೆ ಭಾರತವನಿಲ್ಲಿ
ಕುಶಲತೆಗೆ ಬೆರಗಾಗಿ ಮೂಕವಾಗಿದೆ ಕಾಲವಿಲ್ಲಿ
ಮೂರ್ಛೆಯಲಿ ಮೈಮರೆತು ತೇಲುವುದು ಭೂಭಾರವಿಲ್ಲಿ

ಕುವೆಂಪು
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

Monday, October 28, 2013

ಜಯ ಭಾರತ ಜನನಿಯ ತನುಜಾತೆ

ಜಯ ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ
ಜಯ ಸುಂದರ ನದಿ ವನಗಳ ನಾಡೆ
ಜಯ ಹೇ ರಸಋಷಿಗಳ ಬೀಡೆ

ಭೂದೇವಿಯ ಮಕುಟದ ನವಮಣಿಯೆ
ಗಂಧದ ಚಂದದ ಹೊನ್ನಿನ ಗಣಿಯೆ
ರಾಘವ ಮಧುಸೂದನರವತರಿಸಿದ
ಭಾರತ ಜನನಿಯ ತನುಜಾತೆ..

ಜನನಿಯ ಜೋಗುಳ ವೇದದ ಘೋಷ
ಜನನಿಗೆ ಜೀವವು ನಿನ್ನಾವೇಶ
ಹಸುರಿನ ಗಿರಿಗಳ ಸಾಲೇ
ನಿನ್ನಯ ಕೊರಳಿನ ಮಾಲೆ
ಕಪಿಲ ಪತಂಜಲ ಗೌತಮ ಜಿನನುತ
ಭಾರತ ಜನನಿಯ ತನುಜಾತೆ..

ಶಂಕರ ರಾಮಾನುಜ ವಿದ್ಯಾರಣ್ಯ
ಬಸವೇಶ್ವರ ಮಧ್ವರ ದಿವ್ಯಾರಣ್ಯ
ರನ್ನ ಷಡಕ್ಷರಿ ಪೊನ್ನ
ಪಂಪ ಲಕುಮಿಪತಿ ಜನ್ನ
ಕಬ್ಬಿಗರುದಿಸಿದ ಮಂಗಳ ಧಾಮ
ಕವಿ ಕೋಗಿಲೆಗಳ ಪುಣ್ಯಾರಾಮ
ನಾನಕ ರಾಮಾನಂದ ಕಬೀರರ
ಭಾರತ ಜನನಿಯ ತನುಜಾತೆ..

ತೈಲಪ ಹೊಯ್ಸಳರಾಳಿದ ನಾಡೆ
ಡಂಕಣ ಜಕಣರ ನೆಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗಾ
ಕಾವೇರಿಯ ವರ ರಂಗಾ
ಚೈತನ್ಯ ಪರಮಹಂಸ ವಿವೇಕರ
ಭಾರತ ಜನನಿಯ ತನುಜಾತೆ..

ಸರ್ವ ಜನಾಂಗದ ಶಾಂತಿಯ ತೋಟ
ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ
ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ
ಗಾಯಕ ವೈಣಿಕರಾರಾಮ
ಕನ್ನಡ ನುಡಿ ಕುಣಿದಾಡುವ ಗೇಹ
ಕನ್ನಡ ತಾಯಿಯ ಮಕ್ಕಳ ದೇಹ
ಭಾರತ ಜನನಿಯ ತನುಜಾತೆ..

ಕುವೆಂಪು
ಈ ಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ