Showing posts with label ದಾಸರ ಪದಗಳು. Show all posts
Showing posts with label ದಾಸರ ಪದಗಳು. Show all posts

Thursday, August 7, 2014

ನಾನೇಕೆ ಬಡವನೊ ನಾನೇಕೆ ಪರದೇಶಿ

ನಾನೇಕೆ ಬಡವನೊ ನಾನೇಕೆ ಪರದೇಶಿ
ಶ್ರೀನಿಧೇ ಹರಿ ಎನಗೆ ನೀನಿರುವ ತನಕ

ಹುಟ್ಟಿಸಿದ ತಾಯ್ತಂದೆ ಇಷ್ಟಮಿತ್ರನು ನೀನೆ
ಅಷ್ಟ ಬಂಧು ಬಳಗ ಸರ್ವ ನೀನೆ
ಪೆಟ್ಟಿಗೆಯೊಳಗಿನ ಅಷ್ಟಾಭರಣ ನೀನೆ
ಶ್ರೇಷ್ಠ ಮೂರುತಿ ಕೃಷ್ಣ ನೀನಿರುವತನಕ

ಒಡಹುಟ್ಟಿದವ ನೀನೆ ಒಡಲಿಗಾಕುವ ನೀನೆ
ಉಡಲು ಹೊದೆಯಲು ವಸ್ತ್ರ ಕೊಡುವ ನೀನೆ
ಮಡದಿ ಮಕ್ಕಳನೆಲ್ಲ ಕಡೆಹಾಯಿಸುವ ನೀನೆ
ಬಿಡದೆ ಸಲಹುವ ಒಡೆಯ ನೀನಿರುವತನಕ

ವಿದ್ಯೆ ಹೇಳುವ ನೀನೆ ಬುದ್ಧಿ ಕಲಿಸುವ ನೀನೆ
ಉದ್ಧಾರಕರ್ತ ಮಮಸ್ವಾಮಿ ನೀನೆ
ಮುದ್ದು ಶ್ರೀ ಪುರಂದರವಿಠಲ ನಿನ್ನಡಿ ಮೇಲೆ
ಬಿದ್ದು ಕೊಂಡಿರುವ ಎನಗೆ ಏತರ ಭಯವೊ

ಪುರಂದರ ದಾಸರು
ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

Sunday, August 3, 2014

ಗುಮ್ಮನ ಕರೆಯದಿರೆ ಅಮ್ಮ ನೀನು

ಗುಮ್ಮನ ಕರೆಯದಿರೆ ಅಮ್ಮ ನೀನು
ಸುಮ್ಮನೆ ಇದ್ದೇನು ಅಮ್ಮಿಯ ಬೇಡೆನು
ಮಮ್ಮು ಉಣ್ಣುತೇನೆ ಅಮ್ಮ ಅಳುವುದಿಲ್ಲ

ಹೆಣ್ಣುಗಳಿರುವಲ್ಲಿ ಪೋಗಿ ಅವರ
ಕಣ್ಣು ಮುಚ್ಚುವದಿಲ್ಲವೆ
ಚಿಣ್ಣರ ಬಡಿಯೆನು, ಅಣ್ಣನ ಬೈಯೆನು
ಬೆಣ್ಣೆಯ ಬೇಡೆನು ಮಣ್ಣು ತಿನ್ನುವುದಿಲ್ಲ

ಬಾವಿಗೆ ಪೋಗೆ ಕಾಣೆ ಅಮ್ಮ ನಾನು
ಹಾವಿನೊಳಾಡೆ ಕಾಣೆ
ಆವಿನ ಮೊಲೆಯೂಡೆ ಕರುಗಳ ಬಿಡೆ ನೋಡೆ
ದೇವರಂತೆ ಒಂದು ಠಾವಿಲಿ ಕೂಡುವೆ

ಮಗನ ಮಾತ ಕೇಳಿ ಗೋಪಿದೇವಿ
ಮುಗುಳು ನಗೆ ನಗುತ
ಜಗದೊಡೆಯನ ಶ್ರೀ ಪುರಂದರವಿಠಲನ
ಬಿಗಿದಪ್ಪಿಕೊಂಡಳು ಮೋಹದಿಂದಲಾಗ

ಪುರಂದರ ದಾಸರು
ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

Monday, July 21, 2014

ಕಲ್ಲುಸಕ್ಕರೆ ಕೊಳ್ಳಿರೋ

ಕಲ್ಲುಸಕ್ಕರೆ ಕೊಳ್ಳಿರೋ ನೀವೆಲ್ಲರು
ಕಲ್ಲುಸಕ್ಕರೆ ಕೊಳ್ಳಿರೋ

ಕಲ್ಲುಸಕ್ಕರೆ ಸವಿ ಬಲ್ಲವರೆ ಬಲ್ಲರು
ಪುಲ್ಲಲೋಚನ ಶ್ರೀಕೃಷ್ಣನಾಮವೆಂಬ

ಎತ್ತು ಹೇರುಗಳಿಂದ ಹೊತ್ತು ಮಾರುವುದಲ್ಲ
ಒತ್ತೊತ್ತಿ ಗೋಣಿಯೊಳು ತುಂಬುವದಲ್ಲ
ಎತ್ತ ಹೋದರು ಬಾಡಿಗೆ ಸುಂಕವಿದಕಿಲ್ಲ
ಉತ್ತಮ ಸರಕಿದು ಅತಿ ಲಾಭ ಬರುವಂಥ

ನಷ್ಟ ಬೀಳುವುದಲ್ಲ ನಾತ ಹುಟ್ಟುವುದಲ್ಲ
ಎಷ್ಟು ಒಯ್ಡರು ಬೆಲೆ ರೊಕ್ಕವಿದಕಿಲ್ಲ
ಕಟ್ಟಿರುವೆಯು ತಿಂದು ಕಡಮೆಯಾಗುವುದಲ್ಲ
ಪಟ್ಟಣದೊಳಗೆ ಪ್ರಸಿದ್ದವಾಗಿರುವಂಥ

ಸಂತೆ ಸಂತೆಗೆ ಹೋಗಿ ಶ್ರಮಪಡುವುದಲ್ಲ
ಸಂತೆಯೊಳಗೆ ಇಟ್ಟು ಮಾರುವುದಲ್ಲ
ಸಂತತ ಭಕ್ತರ ನಾಲಗೆ ಸವಿಗೊಂಬ
ಕಾಂತ ಪುರಂದರವಿಠಲ ನಾಮವೆಂಬ

ಪುರಂದರ ದಾಸರು
ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ