Showing posts with label ಪುಸ್ತಕ ವಿಮರ್ಶೆ. Show all posts
Showing posts with label ಪುಸ್ತಕ ವಿಮರ್ಶೆ. Show all posts

Sunday, January 29, 2017

ಪ್ರಶ್ನೆಗಳನ್ನು ಎಬ್ಬಿಸುವ ‘ಉತ್ತರಕಾಂಡ’

ಎಸ್‌. ಸೂರ್ಯಪ್ರಕಾಶ ಪಂಡಿತ್‌ 

ಸ್.ಎಲ್. ಭೈರಪ್ಪನವರ ನೂತನ ಕಾದಂಬರಿ ‘ಉತ್ತರಕಾಂಡ’. ಶೀರ್ಷಿಕೆಯೇ ಅದರ ವಸ್ತುವನ್ನು ಗುಟ್ಟು ಮಾಡದೆ ನೇರವಾಗಿ ವಾಲ್ಮೀಕಿ ರಾಮಾಯಣ ಎಂದು ಹೇಳಿಬಿಡುತ್ತದೆ. ರಾಮಾಯಣವನ್ನು ಆಧರಿಸಿ ರಚಿತವಾದ ಅಸಂಖ್ಯ ಕಾವ್ಯ–ನಾಟಕ–ಕಥೆ–ಕಾದಂಬರಿಗಳ ಉದ್ದೇಶವಾದರೂ ಏನು ಎನ್ನುವುದನ್ನು ನಾವು ಗಂಭೀರವಾಗಿ ಅಧ್ಯಯನ ಮಾಡಬೇಕಿದೆ. ರಾಮಾಯಣದ ಬಹುಪಾಲು ‘ಪುನರ್‌ಸೃಷ್ಟಿ’ಗಳು ರಾಮಾಯಾಣವನ್ನು ವಿಮರ್ಶಾತ್ಮಕವಾಗಿಯೇ ಕಂಡರಿಸಲು ತವಕಿಸಿವೆ ಎಂಬುದು ನಮ್ಮ ದೇಶದ ಕಾವ್ಯಪರಂಪರೆಯ ಬಹುದೊಡ್ಡ ಸಿದ್ಧಿಯಾಗಿದೆ. ಉದಾಹರಣೆಗಾಗಿ, ಕಾಳಿದಾಸನ ‘ರಘುವಂಶ’ವನ್ನು ಗಮನಿಸಬಹುದು. ಅವನು ತನ್ನ ಕಾವ್ಯದಲ್ಲಿ ಚಿತ್ರಿಸಿರುವುದು ‘ರಘುವಂಶ’ದ ಏಳು–ಬೀಳುಗಳನ್ನು. ರಾಮನಂಥ ಆದರ್ಶರಾಜನನ್ನು ಕೊಟ್ಟ ವಂಶದ ಅಧಃಪತನವನ್ನು ಅಗ್ನಿವರ್ಣನ ಮೂಲಕ ಚಿತ್ರಿಸಿದ್ದಾನೆ; ಆ ಮೂಲಕ ಆದರ್ಶದ ಭಾಗ್ಯವನ್ನೇ ಅವನು ವಿಮರ್ಶೆಗೆ ಒಡ್ಡಿದ್ದಾನೆ. ಆದರೆ, ಕಾಳಿದಾಸಾದಿಗಳ ಈ ರಾಮಾಯಣದ ವಿಮರ್ಶೆ ಕೇವಲ ಬೌದ್ಧಿಕ ವ್ಯಾಯಾಮವಾಗಿರದೆ ಕಾವ್ಯದ ಭಿತ್ತಿಯಲ್ಲಿ ನಡೆದಿರುವ ರಸವ್ಯಾಪಾರ ಎನ್ನುವುದನ್ನು ಮರೆಯುವಂತಿಲ್ಲ. ಅಂತೆಯೇ ರಾಮನನ್ನೂ ರಾಮಾಯಣವನ್ನೂ ಸೀತೆಯ ನೋಟದಿಂದ ಕಂಡರಿಸಲು ಹೊರಟಿರುವುದೇ ಭೈರಪ್ಪನವರ ಕೃತಿ ‘ಉತ್ತರಕಾಂಡ’. 

ರಾಮಾಯಣ ನಮ್ಮ ಪಾಲಿಗೆ ಕೇವಲ ಒಂದು ಮಹಾಕಾವ್ಯವಷ್ಟೆ ಅಲ್ಲ; ಅದು ಇತಿಹಾಸ; ಪುರಾಣವೂ ಕೂಡ. ಮಾತ್ರವಲ್ಲ, ನಮ್ಮ ಸಂಸ್ಕೃತಿಯ ಆಧಾರಶ್ರುತಿಯೂ ಹೌದು. (ಮಹಾಭಾರತವನ್ನು ‘ಇತಿಹಾಸ’ ಎಂದೂ ರಾಮಾಯಣವನ್ನು ‘ಕಾವ್ಯ’ ಎಂದೂ ವಿಂಗಡಿಸಲಾಗಿದ್ದರೂ ವಿಶಾಲಾರ್ಥದಲ್ಲಿ ‘ಪುರಾಣ’ ಎಂದು ಇಲ್ಲಿ ಎಣಿಸಲಾಗಿದೆ.) ಇಂಥದೊಂದು ಜೀವಂತಕೃತಿಗೆ ಒದಗಿರುವ ‘ಆಧುನಿಕ’ ಸಂವೇದನೆಯನ್ನು ಹೇಗೆ ಗ್ರಹಿಸಿಕೊಳ್ಳಬೇಕೆಂಬ ಪ್ರಶ್ನೆಗೆ ಉತ್ತರ ಸುಲಭವಲ್ಲ. ಅಂತೆಯೇ ಭೈರಪ್ಪನವರ ‘ಉತ್ತರಕಾಂಡ’ದ ಕಾದಂಬರಿಯ ವಿಮರ್ಶೆಗೆ ಮಾಡಿಕೊಳ್ಳಬೇಕಾದ ಸಿದ್ಧತೆಗಳೇನು ಎಂದು ನಿರ್ಧರಿಸಿಕೊಳ್ಳುವುದೂ ಸುಲಭವಲ್ಲ. ‘ಗೃಹಭಂಗ’ ಅಥವಾ ‘ಮಂದ್ರ’ದಂಥ ಕಾದಂಬರಿಗಳನ್ನು ರಚಿಸಿದವರೇ ‘ಉತ್ತರಕಾಂಡ’ವನ್ನೂ ರಚಿಸಿದ್ದಾರೆ ಎಂದಾಗ ಓದುಗನ ರಸಮಾರ್ಗದಲ್ಲಿ ಮೂಡುವ ನಿರೀಕ್ಷೆಯ ಕಾವ್ಯಲಕ್ಷಣಗಳ ಮೈಲುಗಲ್ಲುಗಳಷ್ಟೆ ಅದರ ವಿಮರ್ಶೆಗೆ ಮಾನದಂಡವಾಗಬೇಕೆ – ಎಂದು ಕೇಳಿಕೊಂಡಾಗಲೂ ಉತ್ತರವನ್ನು ಕಂಡುಕೊಳ್ಳುವುದು ಕಷ್ಟ. ಎಂದರೆ, ‘ಉತ್ತರಕಾಂಡ ಕಾದಂಬರಿಯಾಗಿ ಗೆದ್ದಿದೆ ಅಥವಾ ಸೋತಿದೆ’ ಎಂದಷ್ಟೆ ಹೇಳುವುದರಿಂದ ಏನನ್ನೂ ಹೇಳಿದಂತಾಗುವುದಿಲ್ಲ. ಬಿಡುಗಡೆಯ ದಿನವೇ ಮರುಮುದ್ರಣವನ್ನೂ ಕಾಣುವಷ್ಟು ಭೈರಪ್ಪನವರ ಕಾದಂಬರಿಗಳು ಅತ್ಯಂತ ಜನಪ್ರಿಯವೂ ಆಗಿವೆ. ಈ ಜನಪ್ರಿಯತೆಗೆ ಕಾರಣಗಳೇನು ಎಂದು ತಿಳಿಯುವುದು ವಿಮರ್ಶೆಯ ಸಂದರ್ಭದಲ್ಲಿ ಬೇಕೆ? ಬೇಡವೆ? – ಈ ಪ್ರಶ್ನೆಗಳಿಗೂ ಉತ್ತರ ಸುಲಭವಲ್ಲ. 

‘ಉತ್ತರಕಾಂಡ’ದ ಜೊತೆಗೆ ನಾವು ಗಮನಿಸಬೇಕಾದ ಭೈರಪ್ಪನವರ ಕಾದಂಬರಿ ಎಂದರೆ ‘ಪರ್ವ’. ಏಕೆಂದರೆ ಪರ್ವದ ಸೃಷ್ಟಿಗೆ ಕಾರಣವಾದ ಅಂಶಗಳೇ ‘ಉತ್ತರಕಾಂಡ’ಕ್ಕೂ ಮೂಲವಾಗಿವೆ. ಕಾವ್ಯ–ಇತಿಹಾಸ–ಪುರಾಣಗಳ ಮಿಶ್ರಣವಾದ ಪ್ರಾಚೀನ ಮಹಾಕೃತಿಗಳಾದ ರಾಮಾಯಣ–ಮಹಾಭಾರತಗಳನ್ನು ಆಧುನಿಕ ಸಾಹಿತ್ಯಪ್ರಕಾರವಾದ ಕಾದಂಬರಿಯಲ್ಲಿ ಪುನರ್‌ಸೃಷ್ಟಿಸುವುದಷ್ಟೆ ಕಾದಂಬರಿಕಾರರ ಆಶಯವಾಗಿಲ್ಲ. ‘ಮೂಲಕೃತಿಗಳನ್ನು ಅಲೌಕಿಕ ಅಂಶಗಳಿಂದ ಪಾರು ಮಾಡಿಸಿ, ಸಾಮಾನ್ಯರನ್ನೂ ಅಸಾಮಾನ್ಯರನ್ನೂ ಒಂದೇ ದೃಷ್ಟಿಯಿಂದ ನೋಡಿ, ಯಾವುದೋ ಕಾಲದ ವ್ಯಕ್ತಿ–ಸಂಗತಿಗಳು ನಮ್ಮ ಕಾಲದವಾಗಿ, ನಮಗೆ ತೀರ ಹತ್ತಿರದವಾಗಿ ಮಾರ್ಪಡಿಸುವ ಕುಶಲತೆಯೂ ಈ ರಚನೆಗಳ ಹಿಂದಿನ ಆಶಯದಲ್ಲಿ ಸೇರಿಕೊಂಡಿದೆ.’ ಇದನ್ನು ಸುಲಭವಾಗಿ ಹೇಳಬೇಕೆಂದರೆ, ಪುರಾಣವನ್ನು ಅದರ ಪೌರಾಣಿಕತೆಯಿಂದ ಕಳಚುವುದು. ಇಲ್ಲಿ ಕೇಳಿಕೊಳ್ಳಬೇಕಾದ ಪ್ರಶ್ನೆ: ಪುರಾಣಭಂಜನ ಎನ್ನುವುದು ನಮ್ಮ ಸಂಸ್ಕೃತಿಗೆ ಒಗ್ಗುವ ಸಂಗತಿಯೇ? ಕೆಲವರಿಗೆ ‘ಪುರಾಣ’ ಎಂದರೆ ಕಲ್ಪನೆ, ಊಹೆಗಳಿಂದ ಕಟ್ಟಿಕೊಂಡ ಕಥೆಗಳು ಮಾತ್ರವೇ. ಇವುಗಳಿಗೆ ಇತಿಹಾಸದ ಶಿಷ್ಟಗುಣಗಳು ಇರದು; ತರ್ಕ–ಅರ್ಥ–ವಾಸ್ತವಿಕತೆಗಳ ಬಲವೂ ಇರದು; ಹೀಗಾಗಿ ಅವನ್ನು ನಮ್ಮ ಪ್ರತಿಭೆಯಿಂದ ಅರ್ಥೈಸಿ ಉಳಿಸಬೇಕಿದೆ ಎಂದೂ ಕೆಲವರು ಯೋಚಿಸುವುದುಂಟು. ನಮ್ಮ ‘ಪುರಾಣ’ಗಳನ್ನು ಹೀಗೆ ಸರಳೀಕರಿಸಿಕೊಂಡು ಪಡುತ್ತಿರುವ ಪಾಡುಗಳಿಂದ ಉಂಟಾಗಿರುವ/ಉಂಟಾಗುತ್ತಿರುವ ಸಾಂಸ್ಕೃತಿಕ ಕ್ಷೋಭೆಗಳಿಗೇನೂ ಕೊರತೆಯಿಲ್ಲ. ಪುರಾಣಗಳು ಸಂಸ್ಕೃತಿಯೊಂದಕ್ಕೆ ನಿರಂತವಾಗಿ ಪ್ರಾಣಶಕ್ತಿಯನ್ನು ಒದಗಿಸುತ್ತಿರುತ್ತದೆ. ನಮ್ಮ ವಾಸ್ತವಜಗತ್ತಿನ ‘ಸತ್ಯ’ಗಳು ಪುರಾಣಪ್ರಜ್ಞೆಯನ್ನು ಮುಕ್ಕಾಗಿಸುವುದರಲ್ಲಿಯೇ ಸುಖ ಕಾಣಲು ತೊಡಗಿದರೆ ಸಂಸ್ಕೃತಿಯು ಭಾವದ ಬಡತನದಿಂದ ಕಳಾಹೀನವಾಗಬೇಕಾಗುತ್ತದೆ. ‘ಯೂರೋಪಿನಲ್ಲಾಗಲಿ, ನಮ್ಮ ದೇಶದಲ್ಲಿಯೇ ಆಗಲಿ ಮಾನವತಾವಾದ ಮಾಡಿದ ಕೆಲಸವೆಂದರೆ ಪೌರಾಣಿಕತೆಯನ್ನು ತನ್ನ ಸರಳವಾದ ಭಾಷೆಯಲ್ಲಿ ಅನುವಾದ ಮಾಡಿದ್ದು. ಮಾನವತಾವಾದ ತನ್ನ ತಾಪಮಾನಕ್ಕೆ ಒಗ್ಗುವಂತೆ ಜಗತ್ತಿನ ಪ್ರತಿಯೊಂದು ವಸ್ತುವನ್ನೂ ಹದಗೊಳಿಸಿ ಇಡಬೇಕೆನ್ನುತ್ತದೆ’ ಎಂದ ಕೀರ್ತಿನಾಥ ಕುರ್ತಕೋಟಿಯವರ ಮಾತು ಇಲ್ಲಿ ಮನನೀಯ. ಮಾನವತಾವಾದ ಎಂದರೆ ಪ್ರಜ್ಞಾವಲಯದಿಂದ ಹೊರಗೆ ನಿಂತು, ನಮ್ಮ ಬುದ್ಧಿ–ತರ್ಕವನ್ನಷ್ಟೆ ನಂಬಿ ಇತಿಹಾಸವನ್ನು ಕಟ್ಟುತ್ತ ಅದಕ್ಕೆ ಪ್ರಗತಿಶೀಲತೆಯ ಅಲಂಕಾರವನ್ನು ಮಾಡುವುದು. 

ಇತಿಹಾಸವನ್ನು ಕುರಿತು ನಮಗಿರುವ ಭಯವೇ ಪುರಾಣವನ್ನೂ ಇತಿಹಾಸದ ಚೌಕಟ್ಟಿಗೆ ಬಗ್ಗಿಸಲು ನಮ್ಮ ಮೇಲೆ ಒತ್ತಡವನ್ನು ಹೇರುತ್ತದೆ. ಆದರೆ ಪುರಾಣಪ್ರಜ್ಞೆಯಿಂದ ವಂಚಿತವಾದ ಮನಸ್ಸು ಜಗತ್ತಿನ ಬಗ್ಗೆ ಉಲ್ಲಾಸ–ನಂಬಿಕೆಗಳನ್ನು ಕಳೆದುಕೊಂಡು ಬದುಕನ್ನು ಒಂದು ಹೊರೆಯಂತೆ ಕಾಣುವಂತಾಗುತ್ತದೆ; ಅರಿವಿನ ವಿಶ್ವಾತ್ಮಕತೆಯನ್ನು ಅದು ತರ್ಕದ ಗೂಟಕ್ಕೆ ಬಿಗಿಯುತ್ತದೆ. ‘Men live by myths, ... they are no mere poetic invention’ – ಆನಂದ ಕುಮಾರಸ್ವಾಮಿಯವರು ಉಲ್ಲೇಖಿಸುವ ಈ ಮಾತು ನಮ್ಮ ಸಂಸ್ಕೃತಿಗೆ ಒಪ್ಪುವಂಥದ್ದು; ಒಗ್ಗಿರುವಂಥದ್ದು. ಪುರಾಣಗಳು ನಮ್ಮಲ್ಲಿ ಹೇಗೆ ಜೀವಿಸುತ್ತವೆ, ಅಥವಾ ಪುರಾಣಗಳಲ್ಲಿ ನಾವು ಹೇಗೆ ಬದುಕುತ್ತಿರುತ್ತೇವೆ ಎನ್ನುವುದನ್ನು ವಿಶದೀಕರಿಸಲು ಕುರ್ತಕೋಟಿಯವರ ಈ ಮಾತುಗಳು ನೆರವಾಗುತ್ತವೆ: 

‘ಮನುಷ್ಯನ ಇತಿಹಾಸ ಪ್ರಾರಂಭವಾಗುವದಕ್ಕಿಂತ ಮೊದಲಿನ ಸಂಗತಿಗಳಿಗೆ ಸಂಬಂಧಿಸಿದವುಗಳೆಂದು ಅವುಗಳನ್ನು ‘‘ಪುರಾಣ’’ ಎಂದು ಕರೆಯಬೇಕಾಯಿತು. ಆ ದೃಷ್ಟಿಯಿಂದ ನೋಡಿದಾಗ ನಮ್ಮ ಇತಿಹಾಸ ತೀರ ಅರ್ವಾಚೀನವಾದದ್ದು. ಆದರೂ ಪೌರಾಣಿಕ ಪ್ರತಿಭೆ ಬೇಗ ಅಳಿದುಹೋಗಲಿಲ್ಲ. ವಿಶ್ವದ ಉತ್ಪತ್ತಿ ಮತ್ತು ಅದರ ಸ್ಥಿತಿಗತಿಗಳ ಬಗ್ಗೆ, ದೇವಮಾನವ ಸಂಬಂಧದ ಬಗ್ಗೆ ಹೊಸ ಹೊಸ ಪೌರಾಣಿಕ ಕಲ್ಪನೆಗಳು ಕಾಲಕಾಲಕ್ಕೆ ಪ್ರಕಟವಾಗುತ್ತಲೇ ಬಂದಿವೆ. ಇದರಿಂದಾಗಿ ನಮ್ಮ ಸಾಮಾಜಿಕ ಸಂಸ್ಕೃತಿಯ ರೂಪುರೇಷೆಗಳು, ನಮ್ಮ ಜ್ಞಾನದ ಪರಿಸೀಮೆಗಳು ಪುರಾಣಗಳಲ್ಲಿ ಕಾಣಸಿಗುತ್ತವೆ. ಒಟ್ಟಿನಲ್ಲಿ ಹೇಳುವುದಾದರೆ ಮನುಷ್ಯನ ಸಾರ್ವತ್ರಿಕ ಪ್ರಜ್ಞೆಯ ಬೇರುಗಳು ನಮಗೆ ಪುರಾಣಗಳಲ್ಲಿಯೇ ದೊರೆಯುತ್ತವೆ. ದಂತಕತೆಗಳು, ಭೂತಪ್ರೇತಗಳ ಕತೆಗಳು, ಕಲ್ಪಕ ಕತೆಗಳು, ಜಾನಪದ ನಂಬಿಕೆಗಳು ಇವೆಲ್ಲವೂ ನಮ್ಮ ಪೌರಾಣಿಕತೆಯ ಅಂಶಗಳೇ ಆಗಿವೆ. ಸೂರ್ಯಚಂದ್ರರ ಗ್ರಹಣಗಳ ಬಗ್ಗೆ ಈಗ ಇರುವ ತಿಳಿವಳಿಕೆ ಕೂಡ, ನಮ್ಮ ದೇಶದ ಮಟ್ಟಿಗೆ ಹೇಳುವುದಾದರೆ ಹಳೆಯದೇ. ಆದರೆ ಅದರ ಜೊತೆಗೇ ರಾಹುಕೇತುಗಳು ಚಂದ್ರ–ಸೂರ್ಯರನ್ನು ಹಿಡಿಯುತ್ತಾರೆಂಬ ಕತೆ ಮತ್ತು ಅದಕ್ಕೆ ಹಿನ್ನೆಲೆಯ ಕಾರಣವಾಗಿ ಸಮುದ್ರಮಂಥನದ ಕತೆ ಇಂದಿನವರೆಗೂ ಪ್ರಚಲಿತವಾಗಿದೆ. ಚಂದ್ರ–ಸೂರ್ಯರ ಗ್ರಹಣ ಹೇಗೆ ಆಗುತ್ತದೆಂಬ ರಹಸ್ಯವನ್ನು ಬಯಲು ಮಾಡಲು ಈ ಕತೆ ರಚಿತವಾಗಿದೆಯೆಂದು ಹೇಳಿದರೆ ಅದಕ್ಕಿಂತ ದೊಡ್ಡದಾದ ತಪ್ಪು ತಿಳಿವಳಿಕೆ ಇನ್ನೊಂದಿಲ್ಲ. ಸ್ವರ್ಗದಲ್ಲಿಯ ವ್ಯವಸ್ಥೆ ಆ ಕತೆಯ ಆಶಯವೇ ಹೊರತು ಗ್ರಹಣದ ತಿಳಿವಳಿಕೆಯಲ್ಲ.’ 

ಮನುಷ್ಯನ ಭಾವ–ಬುದ್ಧಿ–ದೇಹಗಳು ಸಾಧಿಸಿರುವ ಎಲ್ಲ ಬಗೆಯ ಸಿದ್ಧಿಗಳ ಮೂಲಶಕ್ತಿ ಅವನ ಪುರಾಣ(Myth)ಪ್ರಜ್ಞೆಯೇ ಹೌದು ಎನ್ನುವುದು ಪ್ರಪಂಚದ ಹಲವು ಸಂಸ್ಕೃತಿಗಳ ಪುರಾಣವಾಙ್ಮಯವನ್ನು ಅಧ್ಯಯನ ಮಾಡಿದ್ದ ಜೋಸೆಫ್ ಕ್ಯಾಂಬೆಲ್‌ರ ಸಿದ್ಧಾಂತ. ‘It would not be too much to say that myth is the secret opening through which the inexhaustible energies of the cosmos pour into the human cultural manifestation. Religions, philosophies, arts, the social forms of primitive and historic man, prime discoveries in science and technology, the very dreams that blister sleep, boil up from the basic, magic ring of myth’ – ಅವರ ಈ ವಾಕ್ಯಗಳೂ ಮನನೀಯವಾಗಿವೆ. ಇಂಥ ಮಾತುಗಳ ಸತ್ತ್ವಪರೀಕ್ಷೆ ನಡೆಯದೆ ‘ಅವೈಜ್ಞಾನಿಕ’ ಎಂದು ತಳ್ಳಿಹಾಕುವುದು ದಿಟವಾಗಿಯೂ ಅವೈಜ್ಞಾನಿಕ ಧೋರಣೆಯೇ ಆಗುತ್ತದೆಯಷ್ಟೆ! ಜಗತ್ತಿನ ಶ್ರೇಷ್ಠ ಗಣಿತಜ್ಞರಲ್ಲಿ ಒಬ್ಬರೆನಿಸಿರುವ ಶ್ರೀನಿವಾಸ ರಾಮಾನುಜನ್‌ ‘An equation has no meaning for me unless it expresses a thought of God’ ಎಂದು ಉದ್ಗರಿಸಿದ್ದರು. ರಾಮಾನುಜನ್‌ರ ಗಣಿತಭಾಗ್ಯವಾದ ‘ದೈವ’ವು ಅವರ ಭಾವಕೋಶದ ಪುರಾಣಪ್ರಜ್ಞೆಯೇ ಹೊರತು ಅದು ಬುದ್ಧಿಕೋಶದ ಲೆಕ್ಕಾಚಾರವಾಗಿರಲು ಸಾಧ್ಯವಿಲ್ಲವಷ್ಟೆ. ಪುರಾಣವೊಂದರ ವಾಗರ್ಥಗಳ ಪದರಗಳನ್ನು ಈರುಳ್ಳಿಯನ್ನು ಸುಲಿದಂತೆ ಬಿಡಿಸುತ್ತಹೋದರೆ ಅಂತಿಮವಾಗಿ ದೊರೆಯುವ ಭಾವಶೂನ್ಯದ ಬಗ್ಗೆ ಎಚ್ಚರಿಸಲು ಇಷ್ಟೆಲ್ಲ ಹೇಳಬೇಕಾಯಿತು. 

ಹಾಗಾದರೆ ಭೈರಪ್ಪನವರ ‘ಉತ್ತರಕಾಂಡ’ವನ್ನು ವಾಲ್ಮೀಕಿ ರಾಮಾಯಣದ ನೆರಳಿನಲ್ಲಿಯೇ ನೋಡಬೇಕೇ? ಇದಕ್ಕೆ ‘ಹೌದು’ ಎಂದರೂ ಅಥವಾ ‘ಇಲ್ಲ’ ಎಂದರೂ – ಮತ್ತಷ್ಟು ಪ್ರಶ್ನೆಗಳು, ಉಪಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಸರಿಯೇ, ಇದಕ್ಕೆ ಸಮಾಧಾನವಾದರೂ ಏನು? ಕಾವ್ಯದ (ಅಥವಾ ಕಾದಂಬರಿಯ) ಉದ್ದೇಶವಾದರೂ ಏನು? ಕಾವ್ಯಕ್ಕೂ ಅದರ ಓದುಗನಿಗೂ ಇರಬೇಕಾದ ಸಂಬಂಧ ಎಂಥದ್ದು? ಈ ಪ್ರಶ್ನೆಗಳಿಗೂ ಉತ್ತರ ಸುಲಭವಲ್ಲ. ನಮ್ಮ ಪ್ರಾಚೀನ ಕಾವ್ಯಮೀಮಾಂಸಕರೂ ಈ ಪ್ರಶ್ನೆಯನ್ನು ಎತ್ತಿಕೊಂಡು ಉತ್ತರಿಸಲು ಪ್ರಯತ್ನಿಸಿದ್ದಾರೆ. ‘ರಸಾನುಭವ’ – ಎಂದರೆ ವಾಸ್ತವಜಗತ್ತಿನ ಸದ್ಯದ ಸುಖ–ದುಃಖಗಳಿಂದ ನಮ್ಮನ್ನು ಆ ಕ್ಷಣಕ್ಕಾದರೂ ಬಿಡುಗಡೆಗೊಳಿಸಿ ನೆಮ್ಮದಿಯಲ್ಲಿ ನಮ್ಮ ಭಾವ–ಬುದ್ಧಿಗಳಿಗೆ ನೆಲೆಯೊಂದನ್ನು ಒದಗಿಸುವುದೇ ಕಾವ್ಯದ ಅಂತಿಮ ಗುರಿ ಎಂಬ ನಿಲುವಿಗೆ ಹೆಚ್ಚಿನ ಮನ್ನಣೆ ಒದಗಿದೆ. ನಮ್ಮ ಹೊರಗಿನ ಬದುಕನ್ನು ಬದಲಾಯಿಸುವ ಒತ್ತಡ ಕಾವ್ಯಕ್ಕಿದೆ ಎಂಬ ಘೋಷಣೆಯನ್ನು ಪೋಷಿಸಿದವರು ಕಡಿಮೆ ಎಂದೇ ಹೇಳಬೇಕು. ‘ಉತ್ತರಕಾಂಡ’ದ ಕೊನೆಯ ಮಾತು ಕೂಡ ‘ಕವಿಯು ಏನನ್ನು ತಾನೆ ಬದಲಿಸಬಲ್ಲ?’ ಎಂಬ ಪ್ರಶ್ನೆಯೇ ಆಗಿದೆ. ಹಾಗಾದರೆ ರಾಮಾಯಣದ ಪೌರಾಣಿಕಸತ್ಯವನ್ನು ವಾಸ್ತವಸತ್ಯಕ್ಕೆ ಬದಲಾಯಿಸಿ ಭೈರಪ್ಪನವರು ಸೃಷ್ಟಿಸಿರುವ ಅವರ ಕಾವ್ಯಸತ್ಯ ಓದುಗನಿಗೆ ಕಟ್ಟಿಕೊಡುವ ಕಾವ್ಯಾನುಭೂತಿಯಾದರೂ ಎಂಥದ್ದು? ರಾಮನ ವ್ಯಕ್ತಿತ್ವವನ್ನು ಪ್ರಶ್ನಿಸಲಾಗಿದೆ – ಎನ್ನುವುದೇ ಆ ಕಾದಂಬರಿಯ ಹೊಗಳಿಕೆಗೋ ತೆಗಳಿಕೆಗೋ ಮಾನದಂಡವಾಗುವುದು ಸರಿಯೇ? ನಮ್ಮ ಪ್ರತಿಕ್ರಿಯೆಗಳು ಇಂಥ ಸರಳ ತೀರ್ಪುಗಳಿಗೆ ಪಕ್ಕಾಗಿಲ್ಲ ಎಂದು ಧೈರ್ಯದಿಂದ ಹೇಳುವಷ್ಟು ನಮ್ಮ ಸಾಹಿತ್ಯಲೋಕವನ್ನು ವಿಮರ್ಶಕರೂ ಓದುಗರೂ ಪ್ರಬುದ್ಧವಾಗಿಸಿದ್ದಾರೆಯೆ? 

ಇಡಿಯ ರಾಮಾಯಣದ ಕಥನವನ್ನು ಸೀತೆಯ ದಾರಿಯಲ್ಲಿ ನಿರ್ಮಿಸಿರುವ ಭೈರಪ್ಪನವರು ರಾಮಾಯಣಕ್ಕಿರುವ ಮತ್ತೊಂದು ಹೆಸರನ್ನಂತೂ ಸಾರ್ಥಕಗೊಳಿಸಿದ್ದಾರೆ. ಈ ಕಾರಣದಿಂದ ಕಥನದ ಉದ್ದಕ್ಕೂ ಹಲವು ಪಾತ್ರಗಳನ್ನು ಪೋಷಿಸಿದ್ದಾರೆ, ಸೃಷ್ಟಿಸಿದ್ದಾರೆ ಕೂಡ. ಊರ್ಮಿಳೆಯ ಪಾತ್ರದ ಬೆಳವಣಿಗೆ, ಲಕ್ಷ್ಮಣನ ವ್ಯಕ್ತಿತ್ವಕ್ಕೆ ಒದಗಿಸಿದ ಆಯಾಮ, ಧರ್ಮಸಭೆ ಮುಂತಾದವು ಅವರ ಕಾವ್ಯಸೃಷ್ಟಿಶಕ್ತಿಗೆ ನಿದರ್ಶನಗಳಾಗಿವೆ. ಆದರೆ ಒಟ್ಟು ಕಥನಶೈಲಿ ಒಂದು ವರದಿಯಂತೆ, ಸೀತೆಯ ‘ಡೈರಿ’ಯಂತೆ ಸಾಗಿ, ಗಾಢವಾದ ಕಾವ್ಯಾನುಭವವನ್ನು ಒದಗಿಸುವಲ್ಲಿ ಯಶಸ್ವಿಯಾಗಿಲ್ಲ. ಅತಿಯಾದ ವಾಸ್ತವಪ್ರಜ್ಞೆಯ ಹೊರೆಯೂ ಕಥೆಯ ನಡಿಗೆಯನ್ನೂ ಕಾವ್ಯಸಂಭ್ರಮವನ್ನೂ ಕುಂಠಿತಗೊಳಿಸಿದೆ. ಅತಿ ವಾಸ್ತವದ ನಿರೂಪಣೆಗೊಂದು ಉದಾಹರಣೆಯನ್ನು ನೋಡಬಹುದು. ಅಹಲ್ಯೆ ಮತ್ತು ರಾಮನ ಸಂದರ್ಶನದ ಆರಂಭದ ಸಂಭಾಷಣೆಯ ತುಣುಕೊಂದು ಹೀಗಿದೆ: 

‘ನಮ್ಮ ಊಟವಾಗಿದೆ. ನೀನು ಹಸಿದಿದ್ದೀಯ. ನೀನು ಉಣ್ಣು,’ ರಾಮ ಹೇಳಿದ. (ಅಹಲ್ಯೆಗೆ) 

‘ದಿನಗಟ್ಟಲೆ ಉಪವಾಸ ಮಾಡುವ ನನಗೆ ಹಸಿವಿನ ಬಾಧೆಯೇ ಇಲ್ಲ. ಯಾರೋ ಪುಣ್ಯಾತ್ಮರು ಅನ್ನ, ನೀರು ಇಟ್ಟು ಹೋಗುತ್ತಾರೆ. ಯಾರೆಂತ ಗೊತ್ತಿಲ್ಲ. ಅನ್ನ ಬಹುತೇಕ ಹಕ್ಕಿ ಪಕ್ಷಿಗಳಿಗೆ ಆಹಾರವಾಗುತ್ತೆ. ನೀರು ಮಾತ್ರ ನನ್ನ ಹೊಟ್ಟೆಗೆ, ಮೈ ಬೆವರು ಒರೆಸಿಕೊಳ್ಳುಕ್ಕೆ, ಬಹಿರ್ದೆಸೆಗೆ’ ಎಂದಳು. 

ಇನ್ನು ಸೀತೆ. ರಾಮನನ್ನು ಪ್ರಶ್ನಿಸುವ, ನಮ್ಮ ಸಹಾನುಭೂತಿಯನ್ನೂ ಗಳಿಸಿಕೊಳ್ಳುವ ಸೀತೆ, ‘ಉತ್ತರಕಾಂಡ’ದಲ್ಲಿ ‘ಸೀತೆ’ಯೇ ಆಗಿದ್ದಾಳೆಯೆ ಎಂಬ ಪ್ರಶ್ನೆಗೂ ಕಾರಣವಾಗುತ್ತಾಳೆ. ಹೀಗಿದ್ದರೂ ‘ಉತ್ತರಕಾಂಡ’ ನಮ್ಮನ್ನು ವಾಲ್ಮೀಕಿ ರಾಮಾಯಣದ ಓದಿಗೆ, ಮರು ಓದಿಗೆ ಪ್ರಚೋದಿಸುತ್ತದೆ ಎನ್ನುವುದೂ ಸುಳ್ಳಲ್ಲ. ಇದು ಕಾದಂಬರಿಯ ಸಾಫಲ್ಯವಲ್ಲದೆ ಮತ್ತೇನು? 

Source: Prajavani, 29-01-2017.

Sunday, December 11, 2016

ಸ್ವಾತಂತ್ರ್ಯ, ಸ್ವೇಚ್ಛೆ ಹಾಗೂ ಮೌಲ್ಯಗಳನ್ನು ಒರೆಗೆ ಹಚ್ಚುವ ‘ಕ್ಷಮೆ’



ಅವಳೊಬ್ಬಳು ಸಾಫ್ಟ್’ವೇರ್ ಇಂಜಿನಿಯರ್. ಗಂಡ ಮತ್ತು ಮುದ್ದಾದ ಮಗಳ ಸುಂದರ ಸಂಸಾರವಿದೆ ಆಕೆಗೆ. ಗತಿಸಿ ಹೋದ ತಾಯಿಯ ನೆನಪಿನಲ್ಲೇ ಅಮ್ಮನ ಸಾವಿಗೆ ಪರೋಕ್ಷವಾಗಿ ಕಾರಣವಾದ ತನ್ನ ಅಪ್ಪನನ್ನೂ ತನ್ನ ಮನೆಯಲ್ಲೇ ಇರಿಸಿಕೊಂಡಿದ್ದಾಳೆ. ಹೆಸರು ಪಲ್ಲವಿ. ಉದ್ಯೋಗದ ಕಾರಣದಿಂದ ವಿದೇಶಗಳಿಗೂ ಹೋಗಬೇಕಾಗಿ ಬರುತ್ತದೆ. ಸದಾ ಅವಳ ಬೆನ್ನೆಲುಬಾಗಿರುವ ಗಂಡ ರಘು ಏನೂ ಕ್ಯಾತೆ ತೆಗೆಯದೇ ಅವಳು ಹೋಗಬೇಕೆಂದಲ್ಲೆಲ್ಲ ಕಳಿಸುತ್ತಾನೆ. ಪುಟ್ಟ ಮಗು ಪೂರ್ವಿ ಕೂಡಾ ತನಗೆ ತರಬೇಕಾದ ವಸ್ತುಗಳ ದೊಡ್ಡದೊಂದು ಪಟ್ಟಿಯನ್ನು ಕೊಟ್ಟೇ ಅಮ್ಮನನ್ನು ಪ್ರೀತಿಯಿಂದ ಬೀಳ್ಕೊಡುತ್ತದೆ. ಒಮ್ಮೆ ನಾಲ್ಕು ತಿಂಗಳ ಅಮೇರಿಕಾ ಪ್ರವಾಸ ಮಾತ್ರ ಆಕೆಯ ಜೀವನದಲ್ಲಿ ಒಂದು ತಿರುವನ್ನು ತಂದಿಡುತ್ತದೆ.

ಸ್ವತ: ಸಾಫ್ಟ್’ವೇರ್ ಇಂಜಿನಿಯರ್ ಆಗಿರುವ, ಪತ್ರಿಕೆಗಳಲ್ಲಿ ಹಲವಾರು ಲೇಖನಗಳನ್ನು ಬರೆದು ಪ್ರಸಿದ್ಧರಾಗಿರುವ, ಭೈರಪ್ಪನವರ ಕಾದಂಬರಿಗಳಲ್ಲಿನ ಸ್ತ್ರೀ ಪಾತ್ರಗಳ ಬಗ್ಗೆ ಭೈರಪ್ಪನವರ ಮುಂದೆಯೇ ಭಾಷಣ ಮಾಡಿ ಎಲ್ಲರಿಂದ ಭೇಷ್ ಎನ್ನಿಸಿಕೊಂಡಿರುವ ಸಹನಾ ವಿಜಯ್ ಕುಮಾರ್ ಬರೆದಿರುವ ಚೊಚ್ಚಲ ಕಾದಂಬರಿ ‘ಕ್ಷಮೆ’. ಸರಳ ಸುಂದರ ಭಾಷೆಯ ಸರಾಗವಾಗಿ ಓದಿಸಿಕೊಂಡು ಹೋಗುವ ಕಾದಂಬರಿ.

ಕಾದಂಬರಿಯ ಮುಖ್ಯ ಪಾತ್ರ ಪಲ್ಲವಿ ಯಾವುದೋ ಪ್ರಾಜೆಕ್ಟ್ ನಿಮಿತ್ತ ಅಮೇರಿಕಾಕ್ಕೆ ವಿಮಾನದಲ್ಲಿ ಹಾರುವುದರೊಂದಿಗೆ ಕಾದಂಬರಿ ಶುರುವಾಗುತ್ತದೆ. ವಿದ್ಯಾವಂತೆ, ಯಾವುದು ತಪ್ಪು ಯಾವುದು ಸರಿ ಎನ್ನುವುದನ್ನು ವಿಮರ್ಶೆ ಮಾಡುವ ಸಾಮರ್ಥ್ಯವುಳ್ಳವಳು, ಪ್ರೀತಿ ಯಾವುದು ಅನೈತಿಕತೆ ಯಾವುದು ಎಂಬುದನ್ನು ಒರೆಗೆ ಹಚ್ಚುವ ಮನಸ್ಥಿತಿಯುಳ್ಳ ಪಲ್ಲವಿಯ ಸ್ವಗತದಂತಿದೆ ‘ಕ್ಷಮೆ’. ತನ್ನ ಅಪ್ಪ ಇನ್ನೊಬ್ಬ ಹೆಂಗಸಿನ ಜೊತೆ ಅಕ್ರಮ ಸಂಬಂಧ ಹೊಂದಿದ್ದನ್ನು ತಿಳಿದು ಅಮ್ಮ ಆತ್ಮಹತ್ಯೆ ಮಾಡಿಕೊಂಡ ನೆನಪು ಅವಳನ್ನು ಸದಾ ಕಾಡುತ್ತಿರುತ್ತದೆ. ಬಾಲ್ಯದಿಂದಲೂ ಎಲ್ಲದರಲ್ಲೂ ಗೆದ್ದವಳು ಅಮ್ಮನನ್ನು ಕಳೆದುಕೊಂಡದ್ದಕ್ಕಾಗಿ ಅಪ್ಪನನ್ನು ಸೋಲಿಸಲು ನಿರ್ಧರಿಸುತ್ತಾಳೆ. ಆದರೂ ತನ್ನ ಮನೆಯಲ್ಲೇ ಅಪ್ಪನನ್ನು ಸಲಹುತ್ತಿರುತ್ತಾಳೆ. ಅವಳಣ್ಣ ಚರಣ್ ಅಂತೂ ಕ್ಷಣ ಕ್ಷಣಕ್ಕೂ ಅಪ್ಪನ ಮೇಲೆ ದ್ವೇಷ ಕಾರುತ್ತಿರುತ್ತಾನೆ.

ಹದಿ ಹರೆಯದಲ್ಲಿ ಅವಳ ಹೃದಯದಲ್ಲಿ ಚೇತನ್ ಎಂಬವನ ಪ್ರೀತಿ ಮೊಳಕೆಯೊಡೆಯುತ್ತದೆ. ಕಾರಣಾಂತರಗಳಿಂದ ಆತ ಸಿಗದಾದಾಗ ಲೆಕ್ಚರರ್ ಆಗಿರುವ ರಘುವನ್ನು ಮದುವೆಯಾಗುತ್ತಾಳೆ. ಆದರೆ,  ಪ್ರಾಜೆಕ್ಟ್’ಗೆಂದು ಅಮೇರಿಕಾಕ್ಕೆ ತೆರಳಿದಾಗ ಅಲ್ಲಿ ಚೇತನ್ ಸಿಕ್ಕಿ ಬಿಡುತ್ತಾನೆ. ಮೊದ ಮೊದಲು ಆತನನ್ನು ದೂರವಿಟ್ಟರೂ ನಂತರ ಆತನ ಸಾಂಗತ್ಯ ಅವಳಿಗೆ ಹಿತ ಕೊಡುತ್ತದೆ. ಆತನ ಜೊತೆ ಇರುವಾಗ ಮನೆ, ಗಂಡ, ಮಗು, ಅಪ್ಪ, ಗತಿಸಿದ ಅಮ್ಮನ ಕಹಿ ನೆನಪು ಯಾವುದೂ ಆಕೆಯನ್ನು ಕಾಡುವುದಿಲ್ಲ. ಗೆಳೆಯನಿಗಿಂತಲೂ ಹತ್ತಿರನಾದ, ಇನಿಯನಿಗಿಂತಲೂ ಎತ್ತರನಾದ ಆತ್ಮೀಯ ಸಖನಾಗುತ್ತಾನೆ ಚೇತನ್.

ಚೇತನ್ ಎದುರಿಗಿದ್ದಾಗ ಎಲ್ಲವನ್ನೂ ಮರೆಯುವ ಅವಳು ಒಂಟಿಯಾಗಿರುವಾಗ ಮಾತ್ರ ಅತ್ಯಂತ ಭೀಕರವಾದ ಮಾನಸಿಕ ತೊಳಲಾಟಕ್ಕೆ ಸಿಲುಕುತ್ತಾಳೆ. ಕಳೆದುಕೊಂಡಿದ್ದ ತನ್ನ ಮೊದಲ ಪ್ರೀತಿ ಮತ್ತೆ ಸಿಗುತ್ತಿದೆ ಎಂಬ ಪುಳಕ ಒಂದೆಡೆಯಾದರೆ ತಾನು ಮಾಡುತ್ತಿರುವುದು ನೈತಿಕ ನೆಲೆಗಟ್ಟಿನಲ್ಲಿ ಸರಿಯೇ? ತನ್ನ ಕುಟುಂಬದವರು ತನಗೆ ಕೊಟ್ಟಿರುವ ಸ್ವಾತಂತ್ರ್ಯವನ್ನು ತಾನು ದುರುಪಯೋಗಪಡಿಸಿಕೊಳ್ಳುತ್ತಿರುವೆನೇ ಎಂಬ ಗೊಂದಲದಲ್ಲಿ ಸಿಲುಕುತ್ತಾಳೆ. ”ಸ್ವಂತ ಮನೆ, ಸಂಬಳಗಳೆಲ್ಲ ನಮ್ಮನ್ನು ಕಷ್ಟದಿಂದ ಪಾರು ಮಾಡುತ್ತವಷ್ಟೇ. ಕಷ್ಟ ಇಲ್ಲದಿರೋದೇ ಬೇರೆ, ಸುಖದಿಂದಿರೋದೇ ಬೇರೆ” ಎಂಬ ಜಿಜ್ಞಾಸೆಗಳು ಅವಳ ಮನದಲ್ಲಿ ಮೂಡುತ್ತವೆ.

ತನ್ನನ್ನು ಪ್ರೀತಿಸುವ, ಕಾಪಾಡುವ ಗಂಡನಿದ್ದೂ ಚೇತನ್’ನ ಕಡೆಗೇ ಕ್ರಮೇಣ ವಾಲುತ್ತಾಳೆ. ಆದರೆ,  ಏರ್ ಪೋರ್ಟ್’ನಲ್ಲಿ ಗಂಡನನ್ನು ಬಲವಾಗಿ ತಬ್ಬಿಕೊಂಡು ‘ಮಿಸ್ ಯೂ ಹನಿ’ ಎಂದು ಹೇಳಿ ಅಮೇರಿಕಾದಲ್ಲಿ ಪರ ಪುರುಷನ ಜೊತೆ ಸರಸವಾಡುವ ಮೌಶಮಿಯಂತೆ ಮತ್ತು ಗಂಡನಿಗೆ ಪಾಠ ಕಲಿಸಲು ತನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವನ್ನು ಅಬಾರ್ಷನ್ ಮಾಡಿಸುವ ಮಾಲಿನಿಯಂತೆ ತಾನು ಆಗಲಾರೆ ಎಂಬ ನಂಬಿಕೆ ಅವಳಿಗಿದೆ. ಅತ್ತ ಗಂಡ, ಮಗುವನ್ನೂ ಬಿಡಲಾರದೇ ಇತ್ತ ಚೇತನ್’ನ ಸಾಂಗತ್ಯವನ್ನೂ ತೊರೆಯಲಾರದೇ ಸದಾ ಒದ್ದಾಡುತ್ತಾಳೆ. ಆದರೂ ದಿನದಿಂದ ದಿನಕ್ಕೆ ಚೇತನ್’ನ ಕಡೆಗೆ ಅವಳ ಒಲವು ಹೆಚ್ಚುತ್ತಲೇ ಹೋಗುತ್ತದೆ. ”ಮದುವೆ ಮಾಡಿಕೊಂಡು ಬಿಡೋಣ ನಾವು ಪಲ್ಲು” ಎಂದು ಚೇತನ್ ಹೇಳಿದಾಗ ಸಾರಾಸಗಟಾಗಿ ತಿರಸ್ಕರಿಸಲು ಸಾಧ್ಯವಾಗುವುದಿಲ್ಲ. ಮೊದಲ ಪ್ರೀತಿ ಅವಳನ್ನು ಮಾನಸಿಕವಾಗಿ ತುಂಬಾ ಹದಗೆಡಿಸುತ್ತದೆ. ಪ್ರಾಜೆಕ್ಟ್ ಮುಗಿಸಿ ಭಾರತಕ್ಕೆ ವಾಪಾಸ್ ಬಂದರೂ ಸದಾ ಚೇತುವಿಗಾಗಿ ಹಂಬಲಿಸುತ್ತಾಳೆ. ಆಗ ಮತ್ತೊಮ್ಮೆ ಅಮೇರಿಕಾಗೆ ತೆರಳುವ ಅವಕಾಶ ಸಿಗುತ್ತದೆ. ಅಲ್ಲಿ ಅವಳ ಮತ್ತು ಚೇತನ್ ಮಧ್ಯೆ ಏನಾಗುತ್ತದೆ ಎಂಬುದನ್ನು ತಿಳಿಯಲು ‘ಕ್ಷಮೆ’ ಓದಬೇಕು.

ಮಹಿಳಾವಾದದ ವ್ಯಾಖ್ಯಾನ ತಿರುಚಲ್ಪಡುತ್ತಿರುವ ಇಂದಿನ ದಿನದಲ್ಲಿ, ಸ್ವಾತಂತ್ರ್ಯಕ್ಕೂ ಸ್ವೇಚ್ಛೆಗೂ ವ್ಯತ್ಯಾಸ ಕಡಿಮೆಯಾಗುತ್ತಿರುವ ಹೈಟೆಕ್ ಯುಗದಲ್ಲಿ ಅವುಗಳ ನಿಜವಾದ ಅರ್ಥವನ್ನು ಮಥಿಸುವ ಕೆಲಸವನ್ನು ಮಾಡಲು ‘ಕ್ಷಮೆ’ ಪ್ರಯತ್ನಿಸುತ್ತದೆ. ತನ್ನ ಬದುಕು ತನ್ನದು, ತನ್ನಿಷ್ಟದ ಮುಂದೆ ಯಾವ ನೈತಿಕತೆಗೂ, ಮೌಲ್ಯಕ್ಕೂ ಬೆಲೆ ಕೊಡಲಾರೆ ಎಂದು ಹೇಳುತ್ತಲೇ ಕಥಾ ನಾಯಕಿ ಮೌಲ್ಯಗಳ ಚೌಕಟ್ಟಿನಿಂದ ಹೊರ ಬರಲಾರದೇ ಒದ್ದಾಡುತ್ತಾಳೆ. ತಾನೂ ಸ್ವೇಚ್ಛಾಚಾರ ಮಾಡಿದರೆ ಉಳಿದವರಿಗೂ ತನಗೂ ಏನು ವ್ಯತ್ಯಾಸ ಉಳಿಯಿತು ಎಂಬ ಅಲೋಚನೆ ಅವಳ ತಲೆಯಲ್ಲಿ ಸದಾ ಕೊರೆಯುತ್ತದೆ.

ಕಾದಂಬರಿಯ ಬಹುತೇಕ ಭಾಗ ಅಮೇರಿಕಾದಲ್ಲಿ ನಡೆಯುತ್ತದಾದರೂ ಅಮೇರಿಕಾದ ಭೌತಿಕ ವರ್ಣನೆ ಎಲ್ಲೂ ಕಂಡು ಬರುವುದಿಲ್ಲ. ಭಾರತೀಯ ಸ್ತ್ರೀವಾದಕ್ಕೂ, ಪಾಶ್ಚಾತ್ಯ ಸ್ತ್ರೀವಾದಕ್ಕೂ ಏನಾದರೂ ವ್ಯತ್ಯಾಸ ಇದೆಯೇ? ಇದ್ದರೆ ಅವೆರಡೂ ಹೇಗೆ ಭಿನ್ನ ಎಂಬುದನ್ನು ಕಾದಂಬರಿ ವಿಮರ್ಶಿಸುವುದಿಲ್ಲ. ಕಾದಂಬರಿಯುದ್ದಕ್ಕೂ ಬರೀ ಪಲ್ಲವಿ ಮತ್ತು ಚೇತನ್ ತುಂಬಿಕೊಳ್ಳುತ್ತಾರೆ. ಬರೀ ಅವರಿಬ್ಬರ ನಡುವಿನ ಮಾತುಕತೆ, ಅಮೇರಿಕಾದಲ್ಲಿ ಅವರ ಸುತ್ತಾಟ, ಪದೇ ಪದೇ ಅವಳು “ಚೇತು ನನ್ನನ್ನು ಬಿಟ್ಟು ಹೋಗ ಬೇಡವೋ” ಎನ್ನುವುದು ಕೆಲವು ಓದುಗರಿಗೆ ಏಕತಾನತೆಯಂತೆ ಭಾಸವಾದರೂ ಆಶ್ಚರ್ಯವಿಲ್ಲ. ಅವಳ ಗಂಡ ರಘುವಿನ ಬಗ್ಗೆ, ಮಗಳು ಪೂರ್ವಿ ಬಗ್ಗೆ ಸ್ವಲ್ಪ ಜಾಸ್ತಿ ಬರೆಯಬೇಕಿತ್ತೇನೋ.

ಮೈಸೂರಿನ ಅಗ್ರಹಾರದ ಸಾಂಪ್ರದಾಯಿಕ ಮನೆಯಲ್ಲಿ ಬೆಳೆದ ಹುಡುಗಿ, ಮದುವೆಯಾಗಿ ಒಂದು ಮಗು ಇರುವವಳು ತನ್ನ ಹಳೆಯ ಪ್ರೇಮಿ ಸಿಕ್ಕಿದೊಡನೆ ಏಕಾಏಕಿ ಬದಲಾಗಿ ಆತನಿಗಾಗಿ ಹಾತೊರೆಯುವುದನ್ನು ಭಾರತದ ಸಾಂಪ್ರದಾಯಿಕ ಕುಟುಂಬಗಳಲ್ಲಿ  ಒಪ್ಪಿಕೊಳ್ಳುವುದು ಸ್ವಲ್ಪ ಕಷ್ಟ. ಆದರೂ, ನಾವು ಭಾರತೀಯರು ಯಾವತ್ತೂ ಪ್ರತಿಪಾದಿಸುತ್ತಾ ಬಂದ ಮೌಲ್ಯ, ನಂಬಿಕೆ, ಕುಟುಂಬ ವ್ಯವಸ್ಥೆಯ ಮುಂದೆ ಯಾವುದೂ ದೊಡ್ಡದಲ್ಲ ಎನ್ನುವುದನ್ನು ಕಾದಂಬರಿಯೂ ಒಪ್ಪಿಕೊಳ್ಳುತ್ತದೆ.

ಪಲ್ಲವಿ-ಚೇತನ್’ನ ನಡುವಿನ ಮಾತುಕತೆಯನ್ನು ಸ್ವಲ್ಪ ಎಳೆದಿರುವಂತೆ ಭಾಸವಾಗುತ್ತದೆ. ಇಡೀ ಕಾದಂಬರಿಯನ್ನು ಅವರಿಬ್ಬರ ಸುತ್ತಲೇ ಸುತ್ತಿಸುವುದನ್ನು ಬಿಟ್ಟು ಇತರ ಪಾತ್ರಗಳನ್ನೂ ಸ್ವಲ್ಪ ಜಾಸ್ತಿ ಪೋಷಿಸಿದ್ದರೆ ಚೆನ್ನಾಗಿರುತ್ತಿತ್ತು ಎಂಬುದು ನನ್ನ ಅನಿಸಿಕೆ .ಅವರಿಬ್ಬರ ನಡುವಿನ ಕಥೆಯನ್ನು ಕಡಿಮೆ ಪುಟಗಳಲ್ಲೇ ಇನ್ನೂ ಪರಿಣಾಮಕಾರಿಯಾಗಿ ಹೇಳಬಹುದಿತ್ತೇನೋ. ಕಾದಂಬರಿಯಲ್ಲಿ ಬಳಸಿರುವ ಭಾಷೆಯನ್ನು ಗಮನಿಸಿದಾಗ ಸಹನಾ ಅವರು ಭೈರಪ್ಪನವರ ಕಾದಂಬರಿಗಳಿಂದ ಸ್ಫೂರ್ತಿ ಪಡೆದು ‘ಕ್ಷಮೆ’ ಬರೆದಿದ್ದಾರೆಂದು ಓದುಗರಿಗೆ ಅನ್ನಿಸಲೂಬಹುದು.

ಮೊದಲಿನಿಂದಲೂ ತಮ್ಮ ಲೇಖನಗಳ ಮೂಲಕ ಢೋಂಗಿ ಮಹಿಳಾವಾದಿಗಳ ಪೊಳ್ಳು ಸಿದ್ಧಾಂತಗಳನ್ನು ಅನಾವರಣಗೊಳಿಸುತ್ತಲೇ ಬಂದಿರುವ ಸಹನಾ ವಿಜಯ್ ಕುಮಾರ್ ‘ಕ್ಷಮೆ’ಯ ಮೂಲಕ ತಮ್ಮ ವಿಚಾರಧಾರೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹೇಳುವಲ್ಲಿ ಸಫಲರಾಗಿದ್ದಾರೆ. ಭೈರಪ್ಪನವರಿಂದ ಕಾದಂಬರಿಯ ಬಗ್ಗೆ ಮೆಚ್ಚುಗೆಯನ್ನೂ ಪಡೆದಿದ್ದಾರೆ. ವಿಷಯವನ್ನು ಕಗ್ಗಂಟಾಗಿಸದೇ ಒಂದೇ ಸಮನೇ ಕಾದಂಬರಿ ಓದಿಸಿಕೊಂಡು ಹೋಗುತ್ತದೆ. ಚೊಚ್ಚಲ ಕಾದಂಬರಿಯನ್ನು ಪರಿಣಾಮಕಾರಿಯಾಗಿ ಓದುಗರಿಗೆ ನೀಡುವಲ್ಲಿ ಸಫಲರಾಗಿದ್ದಕ್ಕೆ ಸಹನಾ ಅಭಿನಂದನಾರ್ಹರು. ಅವರ ಲೇಖನಿಯಿಂದ ಇನ್ನಷ್ಟು ಕಾದಂಬರಿಗಳು ಹೊರಬರಲಿ. ‘ಕ್ಷಮೆ’ಯನ್ನು ಒಮ್ಮೆ ಓದಿ.

Sunday, February 22, 2015

ಎಂಬತ್ತರಲ್ಲೂ ನಿಲ್ಲದೇ ಸಾಗುತಿದೆ ಮಹಾ‘ಯಾನ’

ಎಸ್.ಎಲ್.ಭೈರಪ್ಪನವರು ನಾಲ್ಕು ವರ್ಷಗಳ ಬಳಿಕ ಹೊಸ ಕಾದಂಬರಿ ‘ಯಾನ’ವನ್ನು ಬರೆದಿದ್ದಾರೆ.ಎಂದಿನಂತೆ ಪ್ರತಿಗಳು ದಾಖಲೆ ಮಾರಾಟವಾಗುತ್ತಿವೆ.ಹಿಂದಿನ ಕಾದಂಬರಿಗಳಷ್ಟು ಸತ್ವವನ್ನು ಈ ಕಾದಂಬರಿ ಹೊಂದಿಲ್ಲ ಎಂದು ಕೆಲವರು ಹೇಳುತ್ತಿದ್ದರೆ,ಇನ್ನು ಕೆಲವರು ಕವಲು ಕಾದಂಬರಿ ಬರೆದಾಗಲೇ ಭೈರಪ್ಪನವರು ತಮ್ಮತನವನ್ನು ಕಳೆದುಕೊಂಡಿದ್ದರು.ಹಾಗಾಗಿ ಈ ಕಾದಂಬರಿ ನೀರಸವಾಗಿದ್ದರೆ ಆಶ್ಚರ್ಯವೇನಿಲ್ಲ ಎಂದು ಹೇಳುತ್ತಿದ್ದಾರೆ.ಆದರೆ ಭೈರಪ್ಪನವರ ಕೋಟ್ಯಾಂತರ ಅಭಿಮಾನಿಗಳು ಕಾದಂಬರಿಯನ್ನು ಮುಗಿಬಿದ್ದು ಕೊಂಡು ಓದುತ್ತಿದ್ದಾರೆ.
ಯಾನದ ಕಥೆಯೇನೂ ವೈಜ್ಞಾನಿಕ ಕಥೆ,ಕಾದಂಬರಿಗಳನ್ನು ಓದುವವರಿಗೆ ಹೊಸದಲ್ಲ.ಆದರೆ ಭೈರಪ್ಪನವರು ವೈಜ್ಞಾನಿಕ ಕಾದಂಬರಿಯನ್ನು ಹೇಗೆ ಬರೆದಿರಬಹುದು ಎಂಬ ಕುತೂಹಲಕ್ಕೇ ಎಲ್ಲರೂ ‘ಯಾನ’ವನ್ನು ಓದುತ್ತಿದ್ದಾರೆ.ಅದೊಂದು ಮಹಾಯಾನ.ದೇಶಾಂತರ ಅಲ್ಲ,ಭೂಮ್ಯಾಂತರ ಅಲ್ಲ,ಸೂರ್ಯಾಂತರ ಹೋಗಿ ‘ಪ್ರಾಕ್ಸಿಮಾ ಸೆಂಟಾರಿಸ್’ ಎಂಬ ನಕ್ಷತ್ರದ ಸುತ್ತ ಬೇರೆ ಗ್ರಹಗಳಿವೆಯೇ?ಇದ್ದರೆ ಅವು ಭೂಮಿಯಂತೆ ವಾಸಯೋಗ್ಯವೇ? ಎಂದು ತಿಳಿಯುವುದೇ ಯಾನದ ಉದ್ದೇಶ.ಈ ಯಾನ ಸಾವಿರಾರು ವರ್ಷಗಳ ಕಾಲ ಸಾಗುವಂಥದ್ದು.ಅಂಥ ಒಂದು ಮಹಾಯಾನಕ್ಕೆ ಒಬ್ಬ ಗಂಡು ಮತ್ತು ಹೆಣ್ಣನ್ನು ಗೊತ್ತು ಮಾಡಿ ನೌಕೆಯಲ್ಲಿ ಅಂತರಿಕ್ಷಕ್ಕೆ ಕಳಿಸುತ್ತಾರೆ.ಆ ನೌಕೆಯಲ್ಲಿ ಭೂಮಿಯಲ್ಲಿರುವಂತೆಯೇ ವಾತಾವರಣವಿರುತ್ತದೆ.ಭೂಮಿಯಷ್ಟೇ ಗುರುತ್ವಾಕರ್ಷಣೆ ಇರುತ್ತದೆ.ಮಳೆ ಸುರಿಯುತ್ತದೆ,ಗಾಳಿ ಬೀಸುತ್ತದೆ.ಭೂಮಿಯಂತೆ ಸಸ್ಯಗಳೂ ಬೆಳೆಯುತ್ತವೆ.ಆ ಗಂಡು ಹೆಣ್ಣು ಯಾನದಲ್ಲಿಯೇ ಲೈಂಗಿಕ ಸಂಪರ್ಕ ಮಾಡಿ ಇಬ್ಬರು ಮಕ್ಕಳನ್ನು ಪಡೆಯಬೇಕು.ನಂತರ ಆ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಬಾಹ್ಯಾಕಾಶ,ಖಗೋಳ ಜ್ಞಾನ ಮತ್ತು ಇತರ ವಿಜ್ಞಾನದ ಎಲ್ಲಾ ವಿಷಯಗಳನ್ನು ಕಲಿತು,ಅವರೂ ಸಂಪರ್ಕ ಮಾಡಿ ಮಕ್ಕಳನ್ನು ಪಡೆಯಬೇಕು.ಅವರಿಗೂ ನೌಕೆಯಲ್ಲೇ ಎಲ್ಲಾ ಶಿಕ್ಷಣವನ್ನು ನೀಡಿ ಸಮರ್ಥರನ್ನಾಗಿ ಮಾಡಬೇಕು.ಹೀಗೆ ಯಾನದಲ್ಲಿಯೇ ಸಂತತಿ ಬೆಳೆಯಬೇಕು.ಆ ಮೂಲಕ ಸಹಸ್ರಾರು ವರ್ಷಗಳ ಯಾನ ಯಶಸ್ವಿಯಾಗಿ ಭಾರತ ಬಾಹ್ಯಾಕಾಶ ವಿಜ್ಞಾನದ ದೊಡ್ಡಣ್ಣನಾಗಬೇಕು.ಹೀಗೆ ಯಾನ ಹೋಗುತ್ತಿರುವಾಗ ನೌಕೆಯಲ್ಲೇ ಹುಟ್ಟಿದ ಆಕಾಶ್ ಮತ್ತು ಮೇದಿನಿ ತಮ್ಮ ಜನ್ಮ ರಹಸ್ಯವನ್ನು ತಿಳಿಯುವುದಕ್ಕಾಗಿ ತಮ್ಮ ಅಪ್ಪ-ಅಮ್ಮ ಯಾನದುದ್ದಕ್ಕೂತಮ್ಮ ತಮ್ಮ ಕಂಪ್ಯೂಟರ್ ಗಳಲ್ಲಿ  ಬರೆದಿಟ್ಟ ಸಂಗತಿಗಳನ್ನು ಓದುತ್ತಾರೆ.ಆಗ ಮತ್ತೊಂದು ಕಥೆ ಆರಂಭವಾಗುತ್ತದೆ.ಅದು ಆಕಾಶ್ ಮತ್ತು ಮೇದಿನಿಯ ತಂದೆ-ತಾಯಿಯರಾದ ಡಾ.ಸುದರ್ಶನ್ ಮತ್ತು ಉತ್ತರಾಳದ್ದು.
ಡಾ.ಸುದರ್ಶನ್ ಮತ್ತು ಉತ್ತರಾರಿಗೆ ಯಾನಕ್ಕೆ ತೆರಳುವ ಮುನ್ನ ಅವರು ನೌಕೆಯಲ್ಲೇ ಸಂಪರ್ಕ ನಡೆಸಿ ಮಕ್ಕಳನ್ನು ಪಡೆದು ಸಂತತಿಯನ್ನು ಮುಂದುವರೆಸಿ ಯಾನ ಸುಸೂತ್ರವಾಗಿ ಸಾಗುವಂತೆ ಮಾಡಲು ಸೂಚಿಸಲಾಗಿರುತ್ತದೆ.ಸಂಪರ್ಕ ಮಾಡದೇ ಪ್ರನಾಳ ಶಿಶು ವಿಧಾನದಿಂದಲೂ ಮಕ್ಕಳನ್ನು ಪಡೆಯಬಹುದೆಂದು ಸೂಚಿಸಲಾಗುತ್ತದೆ.ಆದರೆ ಯಾನ ಆರಂಭವಾದ ಮೇಲೆ ಉತ್ತರಾ ತನ್ನ ಹಳೆಯ ಪ್ರೇಮಿ ಯಾದವ್ ನ ನೆನಪಲ್ಲೇ ಉಳಿದು ಸುದರ್ಶನ್ ನನ್ನು ನಿರಾಕರಿಸುತ್ತಾಳೆ.ಯಾನ ಹೊರಡುವ ಮುನ್ನ ಮಾತು ಕೊಟ್ಟಂತೆ ನಾವು ನಡೆದುಕೊಂಡು ಸಂಪರ್ಕ ಮಾಡಿ ಕನಿಷ್ಟ ಒಂದು ಮಗುವನ್ನಾದರೂ ಪಡೆಯಬೇಕು, ಇಲ್ಲವಾದರೆ ನಾವು ವಚನಭ್ರಷ್ಠರಾದಂತಾಗುತ್ತದೆ ಎಂದು ಸುದರ್ಶನ್ ಹೇಳಿದಾಗ ಉತ್ತರಾ “ವಚನ,ಕರ್ತವ್ಯ ಎಂಬ ಭೂಮಿಯ ಮೇಲೆ ಮಾಡಿಕೊಂಡ ಕಲ್ಪನೆಗೆ ಭೂಮಿಯಿಂದ ಹೊರಗೆ ಬೆಲೆ ಇರುತ್ತದೆಯೇ?ಭೂಮಿಯ ಸಮಸ್ತ ಜನಾಂಗಕ್ಕೂ ಸೂರ್ಯನೇ ಅಧಿದೇವತೆ.ಹಾಗಾಗಿ ವಚನ,ಕರ್ತವ್ಯ ಎಲ್ಲವೂ ಸೂರ್ಯಾಧಾರಿತವಾಗಿ ನಡೆಯುತ್ತವೆ.ಆದರೆ ಇಲ್ಲಿ ಅಂತರಿಕ್ಷದಲ್ಲಿ ಸೂರ್ಯನು ಯಾವ ಶಕ್ತಿವ್ಯಾಪಿ, ಗುರುತ್ವಾಕರ್ಷಣೆಯೂ ಇಲ್ಲದ ಒಂದು ಕಿರುನಕ್ಷತ್ರವಾಗಿರುವಾಗ  ಅದರ ದೈವತ್ವದ ಕಲ್ಪನೆ ತನಗೆ ತಾನೇ ಕಳಚಿಕೊಳುತ್ತದೆ.ಅದನ್ನವಲಂಬಿಸಿದ ನಿಷ್ಠೆಯೂ ಸತ್ತು ಹೋಗುತ್ತದೆ.ಆದ್ದರಿಂದ ನಾವು ಕೊಟ್ಟ ಮಾತಿಗೆ ಬದ್ಧತೆ ಉಳಿದಿಲ್ಲ″ಎನ್ನುತ್ತಾಳೆ.ಇದು ಓದುಗರನ್ನೂ ಚಿಂತನೆಗೆ ಹಚ್ಚಿ ಕೆಲ ಕಾಲ ತಲೆ ಕೆರೆದುಕೊಳ್ಳುವಂತೆ ಮಾಡುತ್ತದೆ.

ಉತ್ತರಾಳ ಮಾತಿಗೆ ಸುದರ್ಶನ್ ತನ್ನ ಮನಸ್ಸಿನಲ್ಲೇ ಚಿಂತಿಸುತ್ತಾನೆ.ಸಾವಿರ-ಸಾವಿರ ಜ್ಯೋತಿರ್ವರ್ಷ ದೂರದ ನಕ್ಷತ್ರಗಳ ಗುರುತ್ವಾಕರ್ಷಣೆಗಳು ಎಲ್ಲೆಲ್ಲಿಯೂ ನೇಯ್ದ ಬಲೆಯಾಗಿರುವಾಗ ಸೂರ್ಯನಿಂದ ಸಂಪೂರ್ಣ ಸಂಪರ್ಕರಹಿತರಾಗುವುದು ಹೇಗೆ ಸಾಧ್ಯ?ಸತ್ಯವೆಂಬ ನೈತಿಕ ನಿಯಮವು ಗ್ರಹದಿಂದ ಗ್ರಹಕ್ಕೆ,ಒಂದು ಸೌರ ಮಂಡಲದಿಂದ ಇನ್ನೊಂದು ಸೂರ್ಯಮಂಡಲಕ್ಕೆ ಬದಲಾಗುತ್ತದೆಯೇ?ಒಂದು ಮಂಡಲದಲ್ಲಿ ಕೊಟ್ಟ ವಚನವು ಇನ್ನೊಂದು ಮಂಡಲದಲ್ಲಿ ಅರ್ಥ ಕಳೆದುಕೊಂಡು ನಾಶವಾಗಲು ಹೇಗೆ ಸಾಧ್ಯ?ಈ ಮಾತುಗಳೂ ಸಹ ಓದುಗನಿಗೆ ಇಷ್ಟವಾಗುತ್ತವೆ.ಇನ್ನೊಂದು ಕಡೆ ಉತ್ತರಾ “ಮಾನವ ಕುಲದ ಪ್ರಗತಿಯಾಗಬೇಕಾದರೆ ಕೆಲವರಾದರೂ ಕೆಲವು ಅಪರೂಪದ ತ್ಯಾಗಕ್ಕೆ ಸಿದ್ಧರಾಗಿರಲೇಬೇಕಾಗುತ್ತದೆ.ಅದು ನಾನೇ ಏಕಾಗಬಾರದು” ಈ ಮಾತನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ಕಾರ್ಯಪ್ರವರ್ತರಾದರೆ ಪ್ರಪಂಚ ಅಭಿವೃದ್ಧಿಯಾಗುವುದನ್ನು ತಡೆಯಲು ಯಾರಿಂದಲಾದರೂ ಸಾಧ್ಯವೇ?ತನ್ನ ತಂದೆ-ತಾಯಿಯರನ್ನು,ಬಂಧು-ಬಳಗವನ್ನು,ಸ್ನೇಹಿತರನ್ನು,ಈ ಭೂಮಿಯನ್ನೇ ಬಿಟ್ಟು ಎಂದೆಂದೂ ವಾಪಾಸ್ಸು ಬಾರದ ಅಂತರಿಕ್ಷಕ್ಕೆ ಹೋಗುವವರ ಮನಸ್ಥಿತಿ ಹೇಗಿರಬಹುದು?
ತಮ್ಮ ಹಿಂದಿನ ಹಲವು ಕಾದಂಬರಿಗಳಂತೆ ಭೈರಪ್ಪನವರು ಯಾನದಲ್ಲೂ ಆಧ್ಯಾತ್ಮ,ಧ್ಯಾನ,ಯೋಗದ ಕುರಿತು ತಿಳಿಸಿದ್ದಾರೆ.ಇಲ್ಲಿ ಸೂರ್ಯನನ್ನೇ ಪ್ರಧಾನ ಕೇಂದ್ರವಾಗಿರಿಸಿಕೊಂಡು ಸೂರ್ಯನೆಂದರೆ ಯಾರು?ಆತನಿಗೂ ಮಾನವನಿಗೂ ಸಂಬಂಧವೇನು? ಎಂಬುದರ ಕುರಿತು ಚರ್ಚಿಸುತ್ತಾರೆ.”ಈ ಭೌತಿಕ ಸೂರ್ಯ ಒಂದು ಬಿಂಬ,ಒಂದು ಪ್ರತೀಕ.ಅದರ ಮೂಲಕ ನಮ್ಮೊಳಗಿನ ಸತ್ಯವನ್ನು ನಾವು ತಿಳಿಯುವುದನ್ನೇ ಸೂರ್ಯೋಪಾಸನೆ ಎನ್ನುತ್ತಾರೆ  ಬೆಸೆಯುವಿಕೆ ಆದಿತ್ಯ ಗುಣ,ಒಡೆಯುವಿಕೆ ದೈತ್ಯಗುಣ.ಸೂರ್ಯ ಜಗತ್ತನ್ನು ಪರಿಪಾತಗೊಳಿಸುವವನು.ಅಹಂ ಬ್ರಹ್ಮಾಸ್ಮಿ ಎಂಬುದನ್ನು ಅಹಂ ಆದಿತ್ಯೋಸ್ಮಿ,ಅಹಂ ಸೂರ್ಯಾಸ್ಮಿ ಎಂದೂ ಹೇಳಬಹುದು.ಎಲ್ಲಾ ನಕ್ಷತ್ರಗಳೂ ಬ್ರಹ್ಮ ಸ್ವರೂಪಿಯೇ.ಆದರೆ ಸೂರ್ಯನೆಂದರೆ ಸರ್ವವ್ಯಾಪಿಯಾದ ಪರಬ್ರಹ್ಮ” ಹೀಗೆ ಯಾನದಲ್ಲಿ ಭೈರಪ್ಪನವರು ಅದ್ವೈತ ಸಿದ್ಧಂತವನ್ನು ಸೂರ್ಯನಿಗೂ ಅಳವಡಿಸಿದ್ದಾರೆ.ಧ್ಯಾನದ ಬಗ್ಗೆ ಹೇಳುತ್ತಾ “ವಿಶ್ವದಷ್ಟೇ ನಾನೂ ಶಕ್ತ ಎಂಬ ಭಾವ ಧ್ಯಾನದ ಸಮಯದಲ್ಲಿ ಮಾತ್ರ ತುಂಬಿಕೊಳ್ಳುತ್ತದೆ” ಎಂದಿದ್ದಾರೆ.ತತ್ವಶಾಸ್ತ್ರದ ಬಗ್ಗೆ ಹೇಳುತ್ತಾ “ಕತ್ತಲಿನ ಕ್ಷೇತ್ರವು ಬೆಳಕಿನ ಕ್ಷೇತ್ರಕ್ಕಿಂತ ಕೋಟ್ಯಾಂತರ ಪಟ್ಟು ಹೆಚ್ಚು.ಕತ್ತಲಿನ ಶಕ್ತಿಯ ಮುಂದೆ ಬೆಳಕು ಸದಾ ಹೆಣಗಾಡಬೇಕಾಗುತ್ತದೆ.ಬರುಬರುತ್ತಾ ಕತ್ತಲನ್ನೇ ಪ್ರವೇಶಿಸುವುದೇ ಅಸ್ತಿತ್ವದ ಅಂತ್ಯವಾದರೆ ಇಷ್ಟೆಲ್ಲಾ ಕಷ್ಟಪಟ್ಟು ಭೂಮಿಯಿಂದ ಆ ನಕ್ಷತ್ರ ಲೋಕಕ್ಕೆ ಸಂಚರಿಸುವುದೇಕೆ?ಇರುವ ಭೂಮಿಯನ್ನು ಹಾಳುಗೆಡವಿ ಇನ್ನೊಂದು ಅಂಥದ್ದೇ ಭೂಮಿಯನ್ನು ಅನ್ವೇಷಿಸುವ ಹುಚ್ಚು ಏಕೆ?ಯಾವುದೇ ಮತ ಧರ್ಮಗಳ ಅವಲಂಬನೆಯಿಲ್ಲದೇ ಮನುಷ್ಯ ನೀತಿವಂತನಾಗಿ ಬದುಕಬಹುದು.ಆದರೆ ನೀತಿಯ ಪರಿಕಲ್ಪನೆಗಳನ್ನು ಪುನರ್ ರೂಪಿಸಿಕೊಳ್ಳಬೇಕಷ್ಟೇ”ಈ ಎಲ್ಲಾ ಮಾತುಗಳೂ ಓದುಗನನ್ನು ಕೊರೆಯುತ್ತವೆ.
ಎಂದಿನಂತೆ ಈ ಕಾದಂಬರಿಯಲ್ಲೂ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನು ಆಧಾರವಾಗಿರಿಸಿಕೊಂಡೇ ಕಥೆಯನ್ನು ಹೆಣೆಯಲಾಗಿದೆ. ಉದಾಹರಣೆಗೆ ಭಾರತದ ವಿಜ್ಞಾನಿಗಳು ಸಾವಿರಾರು ವರ್ಷ ಸಾಗುವ ಯಾನಕ್ಕೆ ಉಪಯೋಗವಾಗುವ ಅತ್ಯಾಧುನಿಕ ಅಂತರಿಕ್ಷ ನೌಕೆಯನ್ನು ನಿರ್ಮಿಸಿ,ಪ್ರಾಕ್ಸಿಮಾ ಸೆಂಟಾರಿಸ್ ಆಚೆಗೆ ಗ್ರಹಗಳಿವೆಯೇ ಎಂದು ಹುಡುಕ ಹೊರಟಾಗ ವಿಶ್ವದ ದೊಡ್ಡಣ್ಣ ಅಮೇರಿಕಾ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛೀಮಾರಿ ಹಾಕುತ್ತದೆ.ಇನ್ನೂ ಹಿಂದುಳಿದ ದೇಶ,ಹೊತ್ತಿನ ಊಟಕ್ಕೂ ಪರದಾಡುವ ಜನರಿರುವ ದೇಶ ಸಾವಿರಾರು ಕೋಟಿ ಖರ್ಚು ಮಾಡಿ ಯಾನ ನಡೆಸುವ ಅಗತ್ಯವೇನಿತ್ತು?ಅದನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದಲ್ಲ ಎಂದು ಅಮೇರಿಕಾ ಕೇಳುತ್ತದೆ.ಇತ್ತೀಚೆಗೆ ಇಸ್ರೋ ಅಧ್ಯಕ್ಷ ಡಾ.ರಾಧಾಕೃಷ್ಣನ್ ‘ಮಂಗಳಯಾನ’ದ ಸಮಯದಲ್ಲಿ ರಾಕೆಟ್ ನ ಬೆಳ್ಳಿಯ ಪ್ರತಿಮೆಯನ್ನು ಮಾಡಿ ತಿರುಪತಿ ತಿಮ್ಮಪ್ಪನಿಗೆ ಅರ್ಪಿಸಿ ಪೂಜೆ ಮಾಡಿ,ಯಾನ ಯಶಸ್ವಿಯಾಗುವಂತೆ ಪ್ರಾರ್ಥಿಸಿದ್ದು ಅತ್ಯಂತ ವಿವಾದಕ್ಕೆ ಕಾರಣವಾಗಿತ್ತು.ವಿಜ್ಞಾನದಲ್ಲಿ ಧರ್ಮವನ್ನು ತರಬಾರದು ಎಂದು ಅನೇಕರು ವಾದಿಸಿದ್ದರು. ಸರ್ಕಾರದ ಹಣದಲ್ಲಿ ರಾಕೆಟ್ ನ ಬೆಳ್ಳಿಯ ಪ್ರತಿಮೆ ನಿರ್ಮಿಸಿ ಪೂಜಿಸುವುದು ಎಷ್ಟು ಸರಿ ಎಂದೂ ಕೇಳಿದ್ದರು.‘ಯಾನ’ ಕಾದಂಬರಿಯಲ್ಲೂ ಬಾಹ್ಯಾಕಾಶ ಕೇಂದ್ರದ ಮುಖ್ಯಸ್ಥರಾದ ಡಾ.ವೆಂಕಟ್ ಯಾನಕ್ಕೂ ಮುಂಚೆ ತಿರುಪತಿ ತಿಮ್ಮಪ್ಪನಿಗೆ ರಾಕೆಟ್ ನ ಪ್ರತಿಮೆ ಮಾಡಿ ಪೂಜಿಸಿದ್ದು ವಿವಾದವಾಗುತ್ತದೆ.ಅದಕ್ಕೆ ಡಾ.ವೆಂಕಟ್ ಉತ್ತರಿಸುತ್ತಾ “ಸಾವಿರಾರು ಕೋಟಿ ಖರ್ಚು ಮಾಡುವ ಯೋಜನೆಯಲ್ಲಿ ತೊಡಗಿರುವ ವಿಜ್ಞಾನಿಗಳ ಮನೋಬಲವನ್ನು ಎತ್ತಿ ನಿಲ್ಲಿಸಲು ಒಂದು ಪೂಜೆಯನ್ನು ಮಾಡಿದರೆ ಅದನ್ನು ಕಾನೂನು ಬಾಹಿರವೆಂದು ನಿಷೇಧಿಸುವ ಮಾನವೀಯತೆ ಎಷ್ಟು ಸರಿ?” ಎನ್ನುತ್ತಾರೆ.ಹಿಮಾಲಯದ ವರ್ಣನೆಯೂ ಕಣ್ಣಿಗೆ ಕಟ್ಟುವಂತೆ ಬರುತ್ತದೆ.ಇಪ್ಪತ್ತು ವರ್ಷಗಳ ಹಿಂದಿನ ಹಿಮಾಲಯಕ್ಕೂ ಇಂದಿನ ಹಿಮಾಲಯಕ್ಕೂ ಇರುವ ವ್ಯತ್ಯಾಸಗಳೇನು?ಅಲ್ಲಿ ಕಂಡ ಕಂಡಲ್ಲಿ ರಸ್ತೆಗಳನ್ನು ನಿರ್ಮಿಸಿದ್ದರಿಂದ ಪರಿಸರ ಹೇಗೆ ಹಾಳಾಗಿದೆ ಎಂಬುದನ್ನು ವಿವರವಾಗಿ ಭೈರಪ್ಪನವರು ಬರೆಯುತ್ತಾರೆ.ಕೇದಾರನಾಥ ದುರಂತದ ಕಥೆಯೂ ಬರುತ್ತದೆ.
ಕಾದಂಬರಿಯ ವಸ್ತು ನಲ್ವತ್ತು ವರ್ಷಗಳಿಂದ ತಲೆಯಲ್ಲಿತ್ತು.ಆದರೆ ಖಗೋಳ ಶಾಸ್ತ್ರದ ಬಗ್ಗೆ, ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಅಧ್ಯಯನವನ್ನು ನಿರಂತರವಾಗಿ ಮಾಡಿದ್ದರಿಂದ ಕಾದಂಬರಿ ಬರುವುದು ಇಷ್ಟು ತಡವಾಯಿತು ಎಂದು ‘ಯಾನ’ದ ಬಿಡುಗಡೆಗೆ ಮುನ್ನ ಭೈರಪ್ಪನವರು ಹೇಳಿದ್ದರು.ಕಾದಂಬರಿ ಓದಿದಾಗ ನಮಗೆ ಅವರು ನಿರಂತರವಾಗಿ ವಿಷಯದ ಕುರಿತು ಅಧ್ಯಯನ ಮಾಡಿ,ವೈಜ್ಞಾನಿಕ ಸಂಗತಿಗಳನ್ನು ಓದುಗರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಲು ಎಷ್ಟು ಶ್ರಮ ಪಟ್ಟಿದ್ದಾರೆ ಎಂದು ಗೊತ್ತಾಗುತ್ತದೆ.ಉದಾಹರಣೆಗೆ ನೌಕೆಯಿಂದ ಭೂಮಿಗೆ ಫೋನ್ ಮಾಡಿದಾಗ ಒಂದೊಂದು ಶಬ್ದವೂ ಭೂಮಿಯನ್ನು ತಲುಪಲು ಅರ್ಧ ಗಂಟೆ ಬೇಕು.ನೌಕೆಯಲ್ಲಿ ಸಂಚರಿಸುವಾಗ ನಮ್ಮ ಮೂಳೆಗಳು ನಮಗೇ ಗೊತ್ತಿಲ್ಲದಂತೆ ದುರ್ಬಲಗೊಂಡು ಯಾವಾಗ ಬೇಕಾದರೂ ಮುರಿದುಕೊಳ್ಳಬಹುದು.ಹೀಗೇ ಮುಂತಾದ ಬಾಹ್ಯಾಕಾಶ ವಿಜ್ಞಾನದ ರೋಚಕ ವಿವರಗಳನ್ನು ಎಲ್ಲರಿಗೂ ಅರ್ಥವಾಗುವಂತೆ ಹೇಳಿದ್ದಾರೆ.ಅಗತ್ಯವಿರುವಲ್ಲೆಲ್ಲಾ ಸಂಸ್ಕೃತ ಶ್ಲೋಕಗಳನ್ನು ಉಲ್ಲೇಖಿಸಿ ವಿವರಿಸುತ್ತಾರೆ.ಎಂಬತ್ತರ ಹರೆಯದಲ್ಲೂ ನಿರಂತರ ಅಧ್ಯಯನ,ಮಗುವಿನಂಥ ಕುತೂಹಲ,ಹರೆಯದ ವಿದ್ಯಾರ್ಥಿಗಳೂ ನಾಚುವಂಥ ಏಕಾಗ್ರತೆ,ಶಿಸ್ತಿನ ಜೀವನ ಇವು ಭೈರಪ್ಪನವರ ‘ಯಾನ’ದಲ್ಲಿ ನಮಗೆ ಎದ್ದು ಕಾಣುತ್ತದೆ.‘ದರ್ಮಶ್ರೀ’ಯಿಂದ ಹಿಡಿದು ಅವರ ಇಲ್ಲಿಯವರೆಗಿನ ಎಲ್ಲಾ ಕಾದಂಬರಿಗಳನ್ನು ಓದಿದವರಿಗೆ ‘ಯಾನ’ ಸ್ವಲ್ಪ ಸಪ್ಪೆ ಎನಿಸುತ್ತಿದೆ.ಭೈರಪ್ಪನವರು ತಮ್ಮ ಕಸುವನ್ನು ಕಳೆದುಕೊಂಡಿದ್ದಾರೇನೋ ಎಂದನ್ನಿಸುತ್ತದೆ ಎಂದು ಅನೇಕರು ಹೇಳುತ್ತಿದ್ದರೂ ಭೈರಪ್ಪನವರ ಕೆಲವೇ ಕಾದಂಬರಿಗಳನ್ನು ಓದಿದ ನನ್ನಂಥ ಹುಡುಗರಿಗೆ ಯಾನ ಇಷ್ಟವಾಗುವುದರಲ್ಲಿ ಸಂಶಯವಿಲ್ಲ.

ಎಂಬತ್ತರ ವಯಸ್ಸಿನಲ್ಲೂ ಯುವಕನಂತೆ ಓಡಾಡುತ್ತಾ,ಯಾವುದೇ ಹಮ್ಮು,ಬಿಂಕ ಇಲ್ಲದೇ ಎಲ್ಲರೊಂದಿಗೇ ಬೆರೆಯುವ,ಯಾವುದೇ ಪ್ರಶಸ್ತಿ, ಹುದ್ದೆಗಳಿಗೆ ಲಾಬಿ ಮಾಡದ,ಪ್ರಚಾರಕ್ಕಾಗಿ ಮೈಕ್ ಸಿಕ್ಕಲ್ಲೆಲ್ಲಾ ಮಾತನಾಡದ,ಸತ್ಯವನ್ನು ನಿರ್ಭಿಡೆಯಿಂದ ಹೇಳಲು ಎಲ್ಲೂ ಹಿಂಜರಿಯದ,ತಮ್ಮ ಬರಹಗಳ ಬಗ್ಗೆ ಯಾರೇನೇ ಅಂದರೂ ತಲೆ ಕೆಡಿಸಿಕೊಳ್ಳದ,ತಕ್ಷಣ ಮುಂದಿನ ಕಾದಂಬರಿಗಾಗಿ ಸಿದ್ಧತೆ ನಡೆಸುವ ಭೈರಪ್ಪನವರ ಮಹಾಯಾನ ನಿರಂತರವಾಗಿ ಸಾಗಲಿ.ಕನ್ನಡದ ಈ ‘ಸರಸ್ವತಿ ಸಮ್ಮಾನ’ದ ಹೆಮ್ಮೆಯ ಪುತ್ರನ ಸಾಹಿತ್ಯ ಸೇವೆ ಇನ್ನೂ ಮುಂದುವರೆಯಲಿ. ಜನರಿಗೆ ಮಾರ್ಗದರ್ಶಕವಾಗುವ ಇನ್ನೂ ಅನೇಕ ಒಳ್ಳೆಯ ಕಾದಂಬರಿಗಳು ಬಂದು ‘ಕಾದಂಬರಿ ಲೋಕಕ್ಕೊಬ್ಬರೇ ಭೈರಪ್ಪ’ ಎನ್ನುವಂತಾಗಲಿ ಎಂಬುದೇ ನನ್ನ ಆಸೆ.
- ಲಕ್ಷ್ಮೀಶ ಜೆ. ಹೆಗಡೆ, ಮಿಜಾರು
(ಈ ವಿಮರ್ಶೆ ಸುರಹೊನ್ನೆ ಅಂತರ್ಜಾಲ ತಾಣದಲ್ಲಿ ಪ್ರಕಟವಾಗಿದೆ)