Showing posts with label ಭಾರತಿ ಬಿ. ವಿ.. Show all posts
Showing posts with label ಭಾರತಿ ಬಿ. ವಿ.. Show all posts

Saturday, June 16, 2018

ನನಗೆ ನನ್ನ ವಯಸ್ಸನ್ನು ನಿಮ್ಮಿಂದ ಮುಚ್ಚಿಡಬೇಕೆಂದೇನೂ ಇಲ್ಲ ...

ನನಗೆ ನನ್ನ ವಯಸ್ಸನ್ನು
ನಿಮ್ಮಿಂದ ಮುಚ್ಚಿಡಬೇಕೆಂದೇನೂ ಇಲ್ಲ,‌
ಹಾಗೆ ಮುಚ್ಚಿಟ್ಟರೂ,
ಪ್ರತಿ ನೆರಿಗೆಯ ಲೆಕ್ಕಾಚಾರ ಮಾಡಿ
ನನ್ನ ವಯಸ್ಸು ಅಂದಾಜಿಸುವ ಛಾತಿ ನಿಮಗಿದೆ 
ಎನ್ನುವುದು ನನಗೆ ಗೊತ್ತು!
ಆದರೆ ನನ್ನ ವಯಸ್ಸು ಹೇಳಿದೊಡನೆ
ವಯಸ್ಸಿನಲ್ಲಿ
ಏನು ಮಾಡಬೇಕು
ಏನು ಮಾಡಬಾರದು
ಎಂಥ ಬಟ್ಟೆ ತೊಡಬೇಕು
ಯಾರೊಡನೆ ಹೇಗೆ ವರ್ತಿಸಬೇಕು
ಎಲ್ಲಿಗೆ ಹೋಗಬೇಕು
ದುಃಖವಾದಾಗ ಎಷ್ಟು ಅಳಬೇಕು
ಖುಷಿಯಾದಾಗ ಎಷ್ಟು ಮಾತ್ರ ತುಟಿಯಗಲಿಸಬೇಕು
ಗಹಗಹಿಸಿ ನಗುವುದದೆಷ್ಟು ಅಸಭ್ಯ
ಎತ್ತ ಕಡೆ ಸುಳಿಯಬಾರದು
ಯಾರೊಡನೆ ಬೆರೆಯಬಾರದು
ಪ್ರೀತಿಯಲ್ಲಿ ಬೀಳಬಾರದು
ರಸ್ತೆಯಲ್ಲಿ ನಡೆವಾಗ ಸೀಬೆಕಾಯಿ ತಿನ್ನಬಾರದು
ಫುಟ್ಪಾತ್ ಮೇಲೆ ಕುಳಿತು ಕಾಫಿ ಹೀರಬಾರದು 
ಇಂಥದ್ದನ್ನು ಬರೆಯಬಾರದು 
ದೇವರ ಧ್ಯಾನ ಮಾಡಬೇಕು
ಹಲ್ಲು ಕಿಸಿಯುತ್ತ ಸೆಲ್ಫಿ ತೆಗೆಯಬಾರದು
ಫೇಸ್ಬುಕ್ ಪ್ರೊಫೈಲ್ ಚಿತ್ರ 
ದಿನ ಬೆಳಗಾದರೆ ಬದಲಿಸಬಾರದು
ವೈನು, ವೋಡ್ಕಾ ಹೀರಬಾರದು
ಯಾರ ಮೇಲೂ ಮೋಹಗೊಳ್ಳಬಾರದು
ಕಾಮದ ಬಗ್ಗೆಯಂತೂ ... ಉಹು! ಸದ್ದು!!
ಹೀಗೆಲ್ಲ ನೀವು ನನ್ನ ಬದುಕನ್ನು ನಿರ್ದೇಶಿಸುವ 
ಉದ್ದಟತನ ತೋರುತ್ತೀರಿ
ಹಾಗಾಗಿ ನಾನು ನನ್ನ ವಯಸ್ಸು
ಎಷ್ಟೆಂದು ಹೇಳುವುದಿಲ್ಲವಷ್ಟೇ
ನನಗೂ ನನ್ನ ವಯಸ್ಸು
ಮುಚ್ಚಿಡಬೇಕೆಂದೇನೂ ಇಲ್ಲ...


ಭಾರತಿ ಬಿ. ವಿ.

Saturday, September 10, 2016

ನೆನಪು ....


ನೆನಪು ...

ಸಾಯುತ್ತೇನೆಂದು ತಿಳಿಯದ
ಅವಳು ಬೆಳಿಗ್ಗೆ ತಾನೇ
ಮದುವೆಗೆ ಹೋಗಿ ಬಂದು
ಕಳಚಿ ಬಿಸುಟ ನೀಲ ರೇಷಿಮೆ ಸೀರೆ,
ಇನ್ನೂ ಲಾಕರಿನಲಿ ಭದ್ರಪಡಿಸದ ಒಡವೆ,
ಹರಡಿದ್ದ ಕ್ಲಿಪ್ಪು, ಪೌಡರ್, ಒಣಹೂವು,
ಮೂಲೆಯಲಿ ಕಳಚಿದ ಮ್ಯಾಚಿಂಗ್ ಚಪ್ಪಲಿ;

ಮನೆಯ ತುಂಬ ಇನ್ನೂ ಮಾಸದ
ಅವಳು ಮೊನ್ನೆ ತಾನೇ ಮಾಡಿಟ್ಟ
ಸಾರಿನ ಪುಡಿಯ ಪರಿಮಳ,
ಒಣಹಾಕಿದ್ದ ಬಟ್ಟೆಗಳ ರಾಶಿ,
ಮಡಿಸದೇ ಬಿಟ್ಟ ಮೃದು ಹೊದಿಕೆ,
ಅವಳು ಮಲಗಿದ್ದ ನಲುಗಿದ ಹಾಸಿಗೆ,
ಅವಳೊರಗಿ ಕೂತಿದ್ದ ಕುರ್ಚಿ;

ಕೋಣೆಯಲಿ ಬೀಡುಬಿಟ್ಟ ಅವಳ ಮುನಿಸು,
ಕೋಣೆಯಲಿ ಅಡಗಿ ಕೂತ ಅವಳ ಕನಸು,
ಇಲ್ಲೇ ಅಡುಗೆ ಕೋಣೆಯಲಿ ನಕ್ಕ ನಗು,
ಬಚ್ಚಲಿನಲಿ ಅವಳ ಗುನುಗು ರಾಗ,
ಹಿತ್ತಲಿನಲ್ಲಿ ಎದೆ ಕಲಕುವ ಬಿಕ್ಕು,
ಅಲ್ಲಲ್ಲಿ ಅಡಗಿ ಕೂತ ಅವಳ ತಳಮಳ, ವಿಷಾದ,
ತುಂಟತನ, ಮೃದು ಪಾದದ ಹೆಜ್ಜೆ ಸದ್ದು ...

ಅಯ್ಯೋ ನೋಯಿಸುತ್ತವೆ ಎಲ್ಲ ನೆನಪುಗಳು,
ಸುಟ್ಟುಬಿಡಬೇಕಿತ್ತು ಎಲ್ಲವನೂ ಅವಳೊಡನೆಯೇ...
ಚಟ್ಟದ ಮೇಲೆ ಎಲ್ಲ ಒಟ್ಟಿ
ಛಟ್ಟಂತ ಸಿಡಿವ ಮೂಳೆಗಳೊಡನೆ
ಸುಟ್ಟು ಬೂದಿಯಾಗಿಸಬೇಕಿತ್ತು
ಎದೆಕೊರೆವ ಎಲ್ಲ ನೆನಪುಗಳನ್ನೂ ...

ಹೀಗೆಂದುಕೊಳ್ಳುವುದರಲ್ಲೇ ಕಂಡಿತು
ಅವಳು ಮುತ್ತಿಡುತ್ತಿದ್ದ ನನ್ನ ಗಲ್ಲ, ತುಟಿ
ಅವಳ ಬಳಸುತ್ತಿದ್ದ ನನ್ನ ಕೈಗಳು,
ಅವಳು ಕೆದರುತ್ತಿದ್ದ ತಲೆಗೂದಲು,
ಅವಳಲ್ಲಿ ಬೆರೆಯುತ್ತಿದ್ದ ನನ್ನ ದೇಹ,
ಅವಳಾಡುತ್ತಿದ್ದ ನನ್ನ ಬೆರಳುಗಳು,
ಅವಳು ಓಡಾಡುತ್ತಿದ್ದ ನನ್ನ ಮನಸ್ಸಿನ ಒಳಕೋಣೆ ...

ನೆನಪುಗಳೇ ಹೀಗೆ ... ಒದ್ದೆ ಒದ್ದೆ ..
ಹಸಿ ಹಸಿ ಕಟ್ಟಿಗೆಯಂತೆ ...
ಹೊತ್ತಿ ಉರಿಸುವುದು ಸುಲಭವಲ್ಲ ...

ಭಾರತಿ ಬಿ.ವಿ.