Sunday, April 17, 2016

ಉಳಿದ ಮಲ್ಲೆಯ ಹೂವ ಸಣ್ಣ ಮಾಲೆಯ ಕಟ್ಟಿ

ದಿನದ ವ್ಯಾಪಾರದಲಿ ಹೂವ ರಾಶಿಯ ಮಾರಿ
ಎಷ್ಟು ಗಳಿಸಿದರೇನು? ಲೆಕ್ಕವಲ್ಲ
ಉಳಿದ ಮಲ್ಲೆಯ ಹೂವ, ಸಣ್ಣ ಮಾಲೆಯ ಕಟ್ಟಿ
ಮಡದಿ ಹೆರಳಿಗೆ ಮುಡಿಸೆ, ನಕ್ಕಳಲ್ಲ!

Saturday, April 9, 2016

ಬದುಕು...

ಹೇ ಮನವೇ
ಕೊರಗದಿರು
ಬಾಳಹಾದಿಯಲ್ಲಿ
ಕಲ್ಲುಮುಳ್ಳುಗಳಿರುವುದು
ಸಹಜ
ಅವುಗಳನು
ದಾಟಿ ನಿಂತರೆ
ನೀನಾಗುವೆ ಮನುಜ
ಹೇ ಮನವೇ...

Wednesday, March 23, 2016

ಕಥೆಯಾಗಿ ಬಂದವಳು ...

ಕಥೆಯಾಗಿ ಬಂದವಳು
ವ್ಯಥೆಕೊಟ್ಟು ಹೋದಳು

ಮಿಂಚಂತೆ ಬಂದವಳು
ಸಿಡಿಲು ಬಡಿದು ಹೋದಳು

ಆದರೂ ಬಾಳುವೆನು
ಹೃದಯವನು ಬಿಗಿಹಿಡಿದು

ಬೆಂದ ಭೂರಮೆಗೆ ಮಳೆ ಬರುವಿಕೆಯ
ಆಶಯದೊಂದಿಗೆ

Monday, March 21, 2016

ಚಂದ್ರನೂರಿನಲ್ಲಿಂದು ...

ಚಂದ್ರನೂರಿನಲ್ಲಿಂದು
ಕತ್ತಲೆಯಂತೆ
ಕೇಳುತ್ತಿದ್ದಾನೆ ಸಾಲ
ನಿನ್ನ ಕಣ್ಣುಗಳ ಹೊಳಪನ್ನು
ಕೊಡಲೆ?

ನೀನಿಲ್ಲದೆ ...

ನೀನಿಲ್ಲದೆ
ಬರಿದಾಗಿದೆ
ಮನಸು
ಕಾಣಲಿನ್ನೇನಿದೆ
ಕನಸು?

Wednesday, March 9, 2016

ಯುದ್ಧವೆಂದರೆ ...

ಯುದ್ಧವೆಂದರೆ
ಕೋವಿ ಫಿರಂಗಿಗಳು
ಮದ್ದು ಗುಂಡುಗಳು
ಸೋಲು ಗೆಲುವುಗಳು
ಮಾತ್ರವಲ್ಲ ...

ಯುದ್ಧವೆಂದರೆ
ಅಂಗೈಯ ಮದರಂಗಿ ಆರುವ ಮುಂಚೆಯೇ
ಹಣೆಯ ಕುಂಕುಮ ಅಳಿಸಿಕೊಳ್ಳುವ ಹೆಣ್ಣುಗಳು

ಅಪ್ಪನ ತಬ್ಬುವ ಮೊದಲೇ
ತಬ್ಬಲಿಯಾಗುವ ಹಸುಗೂಸುಗಳು
ಮಗನ ಮನಿಯಾರ್ಡರಿಗೆ ಕಾದು ಕುಳಿತ ಹಿರಿಯ ಜೀವಗಳು ...
 

ಯುದ್ಧವೆಂದರೆ
ಇರುವುದೆಲ್ಲವನು ಇಲ್ಲವಾಗಿಸುವ
ಪರರ ನಾಶ ಮಾಡಲು ಹೊರಟು ತಾವೂ ನಾಶವಾಗುವ
ಮನುಷ್ಯರ ಪುರಾತನ
ಆಟ ...

ಸ್ಮಶಾನದ ಗೋರಿಗಳ ನಡುವೆಯೇ ...

ಸ್ಮಶಾನದ ಗೋರಿಗಳ ನಡುವೆಯೇ
ಹಸಿರು ಗರಿಕೆ
ಚಿಗುರೊಡೆಯುವುದು
ಒಡೆದ ಹೃದಯಗಳ ಚೂರುಗಳಲ್ಲಿಯೇ
ಹೊಸ ಕನಸುಗಳು
ಮೂಡುವವು ...

ಹೂಗಳಷ್ಟೇ ಬಾಡುವುದಿಲ್ಲ ...

ಹೂಗಳಷ್ಟೇ ಬಾಡುವುದಿಲ್ಲ
ಕನಸುಗಳೂ ಬಾಡುತ್ತವೆ
ಬರೆಸಿಕೊಂಡವಷ್ಟೇ ಕವಿತೆಗಳಲ್ಲ
ಬರೆಯದೇ ಉಳಿದವೂ ಕವಿತೆಗಳಾಗುತ್ತವೆ ...

ಪಡೆದ ದುಂಬಿಯಷ್ಟೇ ಸುಖಿಸದು ...

ಪಡೆದ ದುಂಬಿಯಷ್ಟೇ ಸುಖಿಸದು
ನೀಡಿದ ಹೂವೂ ಸಂಭ್ರಮಿಸುವುದು
ಸುರಿದ ಆಕಾಶವಷ್ಟೇ ಸುಖಿಸದು
ಪಡೆದ ಇಳೆಯೂ ಸಂಭ್ರಮಿಸುವುದು ...

ಕುಳಿತಿಹೆನು ಕತ್ತಲಲಿ ...

ಕುಳಿತಿಹೆನು ಕತ್ತಲಲಿ
ನಿನ್ನ ನೆನಪ ದೀಪ ಬೆಳಗಿಸಿ
ನಡೆದೆ ನೀನು ಬೆಳಕಿನತ್ತ
ನನ್ನ ಕತ್ತಲಲ್ಲಿರಿಸಿ ...

ಬಾರದಿರು ನಾ ಸತ್ತಾಗ ...

ಬಾರದಿರು ನಾ ಸತ್ತಾಗ 
ಕೊನೆಯ ದರ್ಶನಕೆ
ಇದ್ದಾಗ ಬಾರದವಳು 
ಸತ್ತಾಗ ಬಂದೇಕೆ
ಕಣ್ಣೀರ ವ್ಯರ್ಥ ಮಾಡುವೆ ...