Monday, November 4, 2013

ಬೆಳಗು ಬಾ ಹಣತೆಯನು

ಬೆಳಗು ಬಾ ಹಣತೆಯನು
ನನ್ನೆದೆಯ ಗುಡಿಯಲ್ಲಿ
ದಿವ್ಯ ದೀಪಾವಳಿಯ
ಶುಭ ಘಳಿಗೆಯಲ್ಲಿ
ಬೆಳಗು ಬಾ ಗೆಳತಿ
ನಿನ್ನ ಒಲವಿನ ಪ್ರಣತಿ
ಶತಮಾನಗಳ ತಿಮಿರ
ಮುಸುಕಿದೀ ಮಂದಿರದ ಎದೆಯಾಳದಲ್ಲಿ

ಬೆಳಗು ಬಾ ದೀವಿಗೆಯ
ನನ್ನೆದೆಯ ಗುಡಿಯಲ್ಲಿ
ದಿವ್ಯ ದೀಪಾವಳಿಯ
ಶುಭ ಲಗ್ನದಲ್ಲಿ
ಎದೆಯ ಕಸವನು ಗುಡಿಸಿ
ರಂಗವಲ್ಲಿಯನ್ನಿರಿಸಿ
ಸಿಂಗರಿಸು ನನ್ನೆದೆಯ
ನಿನ್ನ ಪ್ರೇಮದ
ಅಮೃತ ಸಂಪತ್ತಿನಲ್ಲಿ

ಬೆಳಗು ಬಾ ಜ್ಯೋತಿಯನು
ಎದೆಯ ಮಂದಿರದಲ್ಲಿ
ಜಗಕೆ ಬೆಳಕಾಗುವೀ
ಶುಭ ಘಳಿಗೆಯಲ್ಲಿ
ಇನಿತು ದಿನ ಜಡ ನಾನು
ಬಂದೆ ಚೇತನ ನೀನು
ನಿನ್ನ ಶಕ್ತಿಯ ಬಲದಿ
ವ್ಯಕ್ತಿಯಾದೆನು ನಾನು
ಲೋಕದಲ್ಲಿ

ಜಿ.ಎಸ್. ಶಿವರುದ್ರಪ್ಪ
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

ಯಾವ ಮೋಹನ ಮುರಲಿ ಕರೆಯಿತು

ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು

ಹೂವು ಹಾಸಿಗೆ, ಚಂದ್ರ, ಚಂದನ, ಬಾಹುಬಂಧನ, ಚುಂಬನ
ಬಯಕೆ ತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ

ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ

ವಿವಶವಾಯಿತು ಪ್ರಾಣ ಹಾ! ಪರವಶವು ನಿನ್ನೀ ಚೇತನ
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ

ಯಾವ ಮೋಹನ ಮುರಲಿ ಕರೆಯಿತು ಇದ್ದಕಿದ್ದೊಲೆ ನಿನ್ನನು
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು

ಎಂ. ಗೋಪಾಲಕೃಷ್ಣ ಅಡಿಗ
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

Sunday, November 3, 2013

ಬಾ, ಮಳೆಯೇ ಬಾ ...

ಬಾ, ಮಳೆಯೇ ಬಾ, ಅಷ್ಟು ಬಿರುಸಾಗಿ ಬಾರದಿರು
ನಲ್ಲೆ ಬರಲಾಗದಂತೆ
ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ

ನಲ್ಲೆ, ಹಿಂತಿರುಗಿ ಹೋಗದಂತೆ
ಓಡು, ಕಾಲವೇ,ಓಡು, ಬೇಗ ಕವಿಯಲಿ ಇರುಳು
ಕಾದಿಹಳು ಅಭಿಸಾರಿಕೆ
ಅವಳಿಲ್ಲಿ ಬಂದೊಡನೆ ನಿಲ್ಲು, ಕಾಲವೇ ನಿಲ್ಲು

ತೆಕ್ಕೆ ಸಡಿಲಾಗದಂತೆ
ನಮ್ಮ ತೆಕ್ಕೆ ಸಡಿಲಾಗದಂತೆ
ಬೀರು, ದೀಪವೇ, ಬೀರು, ನಿನ್ನ ಹೊಂಬೆಳಕಲ್ಲಿ
ನೋಡುವೆನು ನಲ್ಲೆ ರೂಪ

ಆರು, ಬೇಗನೆ ಆರು, ಶೃಂಗಾರ ಶಯ್ಯೆಯಲಿ
ನಾಚಿ ನೀರಾಗದಂತೆ
ನಲ್ಲೆ ನಾಚಿ ನೀರಾಗದಂತೆ
ಹೋಗು, ನಿದ್ದೆಯೇ, ಹೋಗು, ನಿನಗಿಲ್ಲಿ ಎಡೆಯಿಲ್ಲ

ಪ್ರೇಮಿಗಳ ಸೀಮೆಯಲ್ಲಿ
ನಾವೀಗ ಅನಿಮಿಷರು, ನಮ್ಮ ಮಿಲನ
ಗಂಧರ್ವ ವೈಭೋಗದಂತೆ
ಮಿಲನ, ಗಂಧರ್ವ ವೈಭೋಗದಂತೆ

ಬಿ.ಆರ್. ಲಕ್ಷ್ಮಣರಾವ್
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

ದೀಪವಿರದ ದಾರಿಯಲ್ಲಿ

ದೀಪವಿರದ ದಾರಿಯಲ್ಲಿ
ತಡವರಿಸುವ ನುಡಿಗಳೆ
ಕಂಬನಿಗಳ ತಲಾತಲದಿ
ನಂದುತಿರುವ ಕಿಡಿಗಳೆ
ಉಸಿರನ್ನಿಡುವೆ ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ

ನೀಲಿಯಲ್ಲಿ ಮೈಯಿಲ್ಲದೆ
ತೇಲಾಡುವ ಹನಿಗಳೆ
ಬಾಯಿಲ್ಲದ ಮೌನದಲ್ಲಿ
ಅಲೆಯುತಿರುವ ದನಿಗಳೆ
ಉಸಿರನ್ನಿಡುವೆ ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ

ಜಲವಿಲ್ಲದ ನೆಲಗಳಲ್ಲಿ
ಕಮರುತಿರುವ ಕುಡಿಗಳೆ
ಬಿರು ಬಿಸಿಲಿನ ತುಳಿತದಲ್ಲಿ
ಸೊರಗಿ ಹೋದ ಮಿಡಿಗಳೆ
ಉಸಿರನ್ನಿಡುವೆ ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ

ಶೃತಿಯಿಲ್ಲದ ವಾದ್ಯದಲ್ಲಿ
ಗತಿಯಿಲ್ಲದ ಸ್ವರಗಳೆ
ಬಿರುಗಾಳಿಗೆ ಗರಿವುದುರಿದ
ಹೊಂಗನಸಿನ ಮರಿಗಳೆ
ಉಸಿರನ್ನಿಡುವೆ ಹೆಸರ ಕೊಡುವೆ
ಬನ್ನಿ ನನ್ನ ಹೃದಯಕೆ

ಜಿ.ಎಸ್. ಶಿವರುದ್ರಪ್ಪ
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

ಕಾಣದ ಕಡಲಿಗೆ ಹಂಬಲಿಸಿದೆ ಮನ

ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲೆನೆ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ

ಕಾಣದ ಕಡಲಿನ ಮೊರೆತದ ಜೋಗುಳ
ಒಳಗಿವಿಗಿಂದು ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೆ
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ
ಎಲ್ಲಿರುವುದೋ ಅದು, ಎಂತಿರುವುದೋ ಅದು
ನೋಡಬಲ್ಲೆನೇ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ

ಸಾವಿರ ಹೊಳೆಗಳು ತುಂಬಿ ಹರಿದರೂ
ಒಂದೇ ಸಮನಾಗಿಹುದಂತೆ
ಸುನೀಲ, ವಿಸ್ತರ, ತರಂಗಶೋಭಿತ
ಗಂಭೀರಾಂಬುಧಿ ತಾನಂತೆ
ಮುನ್ನೀರಂತೆ, ಅಪಾರವಂತೆ
ಕಾಣಬಲ್ಲೆನೆ ಒಂದು ದಿನ
ಅದರೊಳು ಕರಗಲಾರೆನೆ ಒಂದು ದಿನ

ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು
ಎಂದಿಗಾದರು ಕಾಣದ ಕಡಲನು
ಸೇರಬಲ್ಲೆನೇನು
ಸೇರಬಹುದೇ ನಾನು
ಕಡಲ ನೀಲಿಯೊಳು ಕರಗಬಹುದೇ ನಾನು

ಜಿ.ಎಸ್. ಶಿವರುದ್ರಪ್ಪ
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

Friday, November 1, 2013

ನಾಡ ದೇವಿಯೇ ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯಾ

ನಾಡ ದೇವಿಯೇ ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯಾ
ನೋವು ನಲಿವು ಸಮ್ಮಿಶ್ರದಲ್ಲಿ ಎದೆಯಾಯಿತದಕೆ ವರ್ಷ
ಒ೦ದೆದೆಯ ಹಾಲ ಕುಡಿದವರ ನಡುವೆ ಎಷ್ಟೊಂದು ಭೇಧ ತಾಯೀ
ಒ೦ದೆ ನೆಲದ ರಸ ಹೀರಲೇನು ಸಿಹಿ ಕಹಿಯ ರುಚಿಯ ಕಾಯೀ

ಕತ್ತಲಲ್ಲಿ ಕಂಗೆಟ್ಟು ಎಡವಿ ತಡವರಿಸುತಿರಲು ಮಂದೀ
ಕಡೆಗಣಿಸುತವರ ನಡೆದಿರುವನೊಬ್ಬ ಸ್ವಹಿತಕ್ಕೆ ಹಿರಿದು ದೊಂದಿ
ಸಂಸ್ಕಾರವಿಲ್ಲ ಹೆಣಕೆಂದು ತಲೆಗೆ ಕೈ ಹೊತ್ತ ಬಡವನೊಬ್ಬ
ಇನ್ನೊಬ್ಬ ತಾನು ಆಚರಿಸುತಿರುವ ವೈಭವದ ಹುಟ್ಟುಹಬ್ಬಾ

ಅನ್ನವಿರದ ಹಸುಳೆಗಳ ತಬ್ಬಿ ಅಳುತಿರುವ ತಾಯ ಕಂಡೆ
ದುಃಖ ಪೂರ ಉಕ್ಕುಕ್ಕಿ ಮೊರೆಯೇ ಕೊಚ್ಚಿತ್ತು ಬಾಳ ದಂಡೆ
ನರನನ್ನೆ ಗಾಳವಾಗಿಸಿಯೇ ಬಾಳ ನೀರಲ್ಲಿ ನರಿಗಳೆಷ್ಟೋ
ನಾವೆಲ್ಲಾ ಒಂದೆನುವ ಸತ್ಯ ಮೆಟ್ಟಿದ ನಾಡಿ ಹರಿಗಳೆಷ್ಟೋ

ಕೆ.ಎಸ್. ನಿಸಾರ್ ಅಹಮದ್
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

ನನ್ನ ಇನಿಯನ ನೆಲೆಯ ಬಲ್ಲೆಯೇನೆ

ನನ್ನ ಇನಿಯನ ನೆಲೆಯ ಬಲ್ಲೆಯೇನೆ
ಹೇಗೆ ತಿಳಿಯಲಿ ಅದನು ಹೇಳೇ ನೀನೆ

ಇರುವೆ ಸರಿಯುವ ಸದ್ದು
ಮೊಗ್ಗು ಬಿರಿಯುವ ಸದ್ದು
ಮಂಜು ಇಳಿಯುವ ಸದ್ದು ಕೇಳಬಲ್ಲ
ನನ್ನ ಮೊರೆಯನು ಏಕೆ ಕೇಳಲೊಲ್ಲ

ಗಿರಿಯ ಎತ್ತಲು ಬಲ್ಲ
ಶರಧಿ ಬತ್ತಿಸಬಲ್ಲ
ಗಾಳಿ ಉಸಿರನೆ ಕಟ್ಟಿ ನಿಲಿಸಬಲ್ಲ
ನನ್ನ ಸೆರೆಯನು ಏಕೆ ಬಿಡಿಸಲೊಲ್ಲ

ನೀರು ಮುಗಿಲಾದವನು
ಮುಗಿಲು ಮಳೆಯಾದವನು
ಮಳೆ ಬಿದ್ದು ತೆನೆಎದ್ದು ತೂಗುವವನು
ನಲ್ಲೆ ಅಳಲನು ಏಕೆ ತಿಳಿಯನವನು

ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

ಹೇಳಿ ಹೋಗು ಕಾರಣ

ಹೇಳಿ ಹೋಗು ಕಾರಣ ಹೋಗುವ ಮೊದಲು
ನನ್ನ ಬಾಳಿನಿಂದ ದೂರಾಗುವ ಮೊದಲು

ಒಲವೆಂಬ ಹಣತೆ ಎದೆಯಲ್ಲಿ ಬೆಳಗಿ
ಬೆಳಕಾದೆ ಬಾಳಿಗೆ
ಇಂದೇಕೆ ಹೀಗೆ ಬೆಳಕನ್ನು ತೊರೆದು
ನೀ ಸರಿದೆ ನೆರಳಿಗೆ
ಇಂದ್ಯಾವ ಬಂಧ ತೊಡರಿದೆ
ನಿನ್ನ ಕಾಲಿಗೆ
ಸುಡುಬೆಂಕಿ ಬೆಳಕು ಉಳಿಯಿತೆ
ನನ್ನ ಪಾಲಿಗೆ

ಸವಿಭಾವಗಳಿಗೆ ನೀ ನಾದ ನೀಡಿ
ಜೊತೆಗೂಡಿ ಹಾಡಿದೆ
ಇಂದ್ಯಾವ ಅಳಲು ಸೆರೆ ಉಬ್ಬಿ ಕೊರಳು
ನೀ ಮೌನ ತಾಳಿದೆ
ನೀ ನೆಟ್ಟು ಬೆಳೆಸಿದ ಮರ
ಫಲ ತೊಟ್ಟ ವೇಳೆಗೆ
ಹೀಗೇಕೆ ಮುರಿದು ಉರುಳಿದೆ
ಯಾವ ದಾಳಿಗೆ

ಬಿ.ಆರ್. ಲಕ್ಷ್ಮಣರಾವ್
ಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ