Saturday, February 20, 2016

ನೆನೆಪುಗಳು …



ನಿನ್ನ ನೆನಪು ಮತ್ತೆ ಮತ್ತೆ ಮರುಕಳಿಸುತಿದೆ
ನೀನಾಡಿದ ಮಾತುಗಳು ಹೃದಯದಲಿ ಅಚ್ಚೊತ್ತಿವೆ
ಕಳೆದ ದಿನಗಳು ಮತ್ತೆ ಬರಲಾರವು
ಸುಂದರ ಸ್ವಪ್ನಗಳು ಮತ್ತೆಂದೂ ಬೀಳವು
ಹೂವಿನ ರಾಶಿಯಲಿ ಜೊತೆಜೊತೆಯಾಗಿ
ಹೆಜ್ಜೆ ಹಾಕಿದ ನೆನಪುಗಳು
ನೆನಪುಗಳಾಗಿಯೇ ಜೊತೆಗುಳಿಯುವುವು ...

Monday, February 15, 2016

ಚಿಂತೆ ಯಾರಿಗಿಲ್ಲ ಹೇಳು ...

ಚಿಂತೆ ಯಾರಿಗಿಲ್ಲ ಹೇಳು
ಅದು ರೋಗವಾಗುವ ಮುನ್ನ
ಬಿಟ್ಟುಬಿಡು, ಮರೆತುಬಿಡು
ಚಿಂತೆ ಎಂಬ ರೋಗವನು
ಆರಿಸಿಬಿಡು ಮನಸಿನ ಜ್ವಾಲೆಯನು
ನನ್ನನ್ನ ಯಾರೂ ಪ್ರೀತಿಸುವವರಿಲ್ಲ
ಎಂಬ ವ್ಯಥೆಗಿಂತ
ನಿನ್ನನ್ನು ನೀನು ಪ್ರೀತಿಸು
ಮನಸಿಗಾದ ಆಘಾತವಾದರೂ
ವಾಸಿಯಾದೀತು ...

Sunday, February 14, 2016

ಏನಿದು ಪ್ರೀತಿ ಅಂದ್ರೆ....?

Happy Valentines day...

ಏನಿದು ಪ್ರೀತಿ ಅಂದ್ರೆ....?
ಯಾವಾಗ ನಿಮ್ಮ ತಾಯಿ ಮುತ್ತನ್ನಿತ್ತು "ನನ್ನ ಮಗ ಲಕ್ಷಕ್ಕೆ ಒಬ್ಬ" ಅಂತಾಳಲ್ವಾ...? ಅದು ಪ್ರೀತಿ ...!!
ಯಾವಾಗ ಕೆಲಸ ಮುಗಿಸಿ ಮನೆಗೆ ಬಂದಾಗ ಅಪ್ಪ "ಏನು ಮಗನೇ ತುಂಬಾ ಸುಸ್ತಾದಂತೆ ಕಾಣ್ತಾ ಇದೀಯಾ ?" ಅಂತಾರಲ್ವಾ ಅದು ಪ್ರೀತಿ ...!!
ಯಾವಾಗ ತಮ್ಮ "ಯಾಕೆ ಟೆನ್ಷನ್ ಮಾಡ್ಕೋತೀಯಾ ನಾನಿಲ್ವ ನಿನ್ ಜೊತೇಲಿ" ಅಂತಾನಲ್ವಾ ಅದು ಪ್ರೀತಿ ...!!
ಯಾವಾಗ ಗೆಳೆಯರು "ನೀನು ನಮ್ ಜೊತೆ ಇರ್ಲಿಲ್ಲ ಅಂದ್ರೆ ಮಜಾನೆ ಇಲ್ಲ ಕಣೋ" ಅಂತಾರಲ್ವಾ ಅದು ಪ್ರೀತಿ ...!!
ಇದು ನಿಜವಾದ ಪ್ರೀತಿ ...
ಇಂತಹ ಪ್ರೀತಿಯನ್ನು ಕಳೆದುಕೊಳ್ಳಬೇಡಿ ...
ಪ್ರೀತಿ ಅನ್ನೋದು ಕೇವಲ ಪ್ರೇಮಿಗಳ ನಡುವೆ ಇರುವಂಥದ್ದಲ್ಲ...
ಯಾರು ನಿಮ್ಮ ಜೊತೆಯಲ್ಲಿ ಸದಾ ಇರ್ತಾರೋ ಅವರೆಲ್ಲರೂ ಕೂಡ ನಿಮ್ಮ ಪ್ರೀತಿಯಲ್ಲಿ ವಿಶೇಷವಾಗಿರೋರು
ಇದು ಪ್ರೀತಿ...
ಯಾವಾಗ ಚಿಕ್ಕ ಮಗಳು ತನ್ನೆಲ್ಲ ಶಕ್ತಿಯನ್ನು ಹಾಕಿ ತಂದೆಯ ತಲೆಗೆ ಮಸಾಜ್ ಮಾಡುತ್ತಾಳೋ...
ಯಾವಾಗ ಹೆಂಡತಿ ಗಂಡನಿಗೋಸ್ಕರ ಮಾಡಿದ ಕಾಫಿಯನ್ನು ಒಂದು ಸಿಪ್ ಕುಡಿದು ಕೊಡುತ್ತಾಳೋ...
ಯಾವಾಗ ತಾಯಿ ಕೇಕ್ ವಿಶೇಷವಾದ ಭಾಗವನ್ನ ತನ್ನ ಮಗನಿಗೆ ಅಂತ ತೆಗೆದಿಡುತ್ತಾಳೋ...
ಯಾವಾಗ ಗೆಳೆಯನೊಬ್ಬ ತನ್ನ ಗೆಳೆಯ ಎಲ್ಲಿ ಜಾರಿ ಬೀಳುತ್ತಾನೋ ಅನ್ನೋ ಕಾಳಜಿಯಿಂದ ಕೈಯನ್ನು ಗಟ್ಟಿಯಾಗಿ ಹಿಡಿದು ಕೊಳ್ಳುತ್ತಾನೋ..
ಯಾವಾಗ ತಮ್ಮ ಮೆಸೇಜ್ ಮಾಡಿಯಾವಾಗ ಮನೆಗೆ ಬರ್ತಾ ಇದೀಯಾ” ಅಂತಾ ಕೇಳ್ತಾನಲ್ವಾ?
ಇದು ಪ್ರೀತಿ ಅಂದ್ರೆ ...
ಪ್ರೀತಿಯಂದ್ರೆ ಕೇವಲ ಒಂದು ಹುಡುಗ ಅಥವಾ ಹುಡ್ಗಿನಾ ಕರ್ಕೊಂಡು ಪಾರ್ಕು, ಹೋಟೆಲ್, ಸಿನಿಮಾ ಅಂತಾ ತಿರುಗೊದಲ್ಲ ...!!
ಪ್ರೀತಿಯ ನಿಜವಾದ ಅರ್ಥ " ಕಾಳಜಿ " ಅಂತ...

ಮಧುರ ಪ್ರೇಮ

ನನ್ನ ನಿನ್ನ ಮಧುರ ಪ್ರೇಮ
ಜನುಮಜನುಮದ ಅಮರಪ್ರೇಮ
ಚಿರಕಾಲವಿರಲಿ ನನ್ನ ನಿನ್ನ ಬಾಂಧವ್ಯದ
ನವನವೀನ ಜೀವನದ ಸುಂದರ ಗಾನ
ಅಂಬಾರಿಯ ಮೇಲೇರಿಸಿ ಕರೆದೊಯ್ಯುವೆ
ನಾ ನಿನ್ನ ಅವಾಗಲೇ ಪ್ರಾರಂಭ
ಹೊಸಜೀವನದ ಪುನರಾರಂಭ
ನಿನ್ನೊಲುಮೆ ನನಗಿರಲು
ಸುಂದರ ಸ್ನೇಹ ನನ್ನದಾದಂತೆ
ನೀ ಕೊಡುವ ಪ್ರೀತಿ ಮಮತೆ ನನಗಿರಲು
ದುಃಖದ ದಿನಗಳು ಕರಗಿ ಹರಿಯುವ ನದಿಯಂತೆ
ನೀ ಭಾವನೆಯ ಸಾಗರ
ನನ್ನ ಜೀವದಲಿ ಬೆರೆತ ಮಂದಾರ
ನನ್ನ ನಿನ್ನ ಮಧುರ ಪ್ರೇಮ
ಕಲ್ಪನೆಗೂ ಮೀರಿದ ನನ್ನೊಲವಿನ ಕಾವ್ಯಪ್ರೇಮ

Thursday, February 11, 2016

ಒಮ್ಮೊಮ್ಮೆ ... (ಕಭಿ ಕಭಿ ...)

ಒಮ್ಮೊಮ್ಮೆ ನನ್ನ ಮನಸ್ಸಿನಲ್ಲಿ ಈ ಭಾವನೆ ಮೂಡುತ್ತದೆ
ನಿನ್ನ ಕಪ್ಪು ಕೂದಲಿನ ತಂಪು ನೆರಳಿನಲ್ಲಿ
ನನ್ನ ಬದುಕು ಸಾಗಿದ್ದಿದ್ದರೆ ಅದು ಅತ್ಯಂತ ಮಧುರವಾಗಿರುತ್ತಿತ್ತು

ನನ್ನ ಮನಸ್ಸನ್ನಾವರಿಸಿರುವ ಈ ದುಃಖದ ಛಾಯೆ
ನಿನ್ನ ಕಣ್ಣುಗಳ ಹೊಳಪಿನಲ್ಲಿ ಕಳೆದುಹೋಗಬಹುದಿತ್ತು

ಆದರೆ, ಹಾಗಾಗಲಿಲ್ಲ
ಈಗ ನೀನೂ ಇಲ್ಲ, ನಿನ್ನನ್ನು ಕಳೆದುಕೊಂಡ ದುಃಖವಾಗಲೀ
ಮರಳಿ ಪಡೆಯಬೇಕೆಂಬ ಹಂಬಲವಾಗಲೀ
ಯಾವುದೂ ಇಲ್ಲ

ಸಾಗುತಿಹುದು ಬದುಕು ಅದಕ್ಕೆ ಯಾರ
ಆಸರೆಯ ಬಯಕೆಯೂ ಇಲ್ಲವೆಂಬಂತೆ

ಹಾದಿಯಿಲ್ಲ, ಗುರಿಯಿಲ್ಲ, ಬೆಳಕಿನ ಕುರುಹಿಲ್ಲ
ಕತ್ತಲೆಯಲಿ ಸಾಗುತಿಹುದು ಬದುಕು

ನನಗೆ ಗೊತ್ತು ಗೆಳತಿ
ಅದೇ ಕತ್ತಲೆಯಲಿ ನಾನೊಂದು ದಿನ ಕಳೆದುಹೋಗಿಬಿಡುವೆನೆಂದು
ಆದರೂ, ಹಾಗೆಯೇ, ಒಮ್ಮೊಮ್ಮೆ ನನ್ನ ಮನಸ್ಸಿನಲ್ಲಿ
ಈ ಭಾವನೆ ಮೂಡುತ್ತದೆ...

ಉರ್ದುವಿನಿಂದ ಕನ್ನಡಕ್ಕೆ: ರಮೇಶ್ ಹೆಚ್.ಟಿ.
"ಕಭಿ ಕಭಿ" ಹಿಂದಿ ಚಲನಚಿತ್ರದ ಹಾಡು; ಕವಿ: ಸಾಹಿರ್ ಲುಧಿಯಾನ್ವಿ. 

Friday, October 23, 2015

ಕ್ಷಮಿಸಿಬಿಡು ನನ್ನ ಕಂದಮ್ಮ

ಆಸೆಗಳ ಮೂಟೆ ಹೊತ್ತು ಮದುವೆಯಾದೆ
ಕನಸುಗಳ ಸಿರಿಯ ಹೊತ್ತು ಮಡದಿಯಾದೆ
ದೈವಗಳಿಗೆ ಹರಕೆ ಹೊತ್ತು ನಾ ತಾಯಿಯಾದೆ..
ಯಾವ ಜನ್ಮದ ಪಾಪವೋ ಯಾವ ದೈವದ ಶಾಪವೋ
ನೂರ್ಕಾಲ ಜೊತೆಯಿರುವೆನೆಂದವ ತಾರೆಯಾದ
ನಿನ್ನ ಬೆಳೆಸಿ ಅರಸನಾಗಿ ಮಾಡೆಂದು ಮರೆಯಾದ..
ನನ್ನವರೆಂದವರೆಲ್ಲಾ ನನ್ನ ಹೊರದೂಡಿದರೂ
ನೆತ್ತರ ತೋಯಿಸಿ ಉಸಿರ ಬಸಿದು ಮುನ್ನಡೆದೆ
ನಿನ್ನ ಅರಸನಾಗಿಸಬೇಕೆಂದು ಬಾಳ ಸವೆಸಿದೆ...
ನಿನಗೆ ಹಾಲುಣಿಸಿದ ಮೊಲೆಗಳ ಕಂಡರಷ್ಟೇ
ಮೊಲೆಯುಣಿಸುವ ಮಾತೆಯ ಕಾಣದಾದರು
ದೇಹವನು ಚೆಂಡಾಡಿದ ಪಿಶಾಚಿಗಳಾದರು...
ನಿನ್ನ ಭವಿಷ್ಯದ ಭಯವೇ ಕಾಡುತಿಹುದು
ಕೊನೆಯುಸಿರಿನ ಕಣ್ಣಂಚಿನ ಹನಿಯಲೂ
ಬಾರದೂರಿಗೆ ಭಾರದ ಮನದಿ ಹೊರಟಿರುವೆ
ಕ್ಷಮಿಸಿಬಿಡು ನನ್ನ ಕಂದಮ್ಮ....

ಎಂ. ಆರ್. ಸತೀಶ್ - ಕೋಲಾರ

Tuesday, September 1, 2015

ಎತ್ತರಕ್ಕೇರಿದವರ ಅಂತಃಕರಣ

ಒಂದು ದಿನ ಡಾ. ದ.ರಾ ಬೇಂದ್ರೆ ಹಾಗೂ ಸುರೇಶ ಕುಲಕರ್ಣಿಯವರು ಕುದುರೆಗಾಡಿ ಮಾಡಿಕೊಂಡು ದತ್ತಾತ್ರೇಯ ಗುಡಿಗೆ ಹೋದರು. ದೇವರಿಗೆ ನಮಸ್ಕಾರ ಮಾಡಿ ಹೊರಗೆ ಬಂದಾಗ ಕುದುರೆಗಾಡಿ ಇರಲಿಲ್ಲ. `ಮತ್ತೊಂದು ಗಾಡಿ ತೆಗೆದುಕೊಂಡು ಬರಲಾ' ಎಂದು ಕೇಳಿದಾಗ, `ಬೇಡ ನಡೆದೇ ಮುಂದೆ ಹೋಗೋಣ. ಅಲ್ಲಿಯೇ ಟಾಂಗಾ (ಕುದುರೆಗಾಡಿ) ಸಿಗುತ್ತದೆ' ಎಂದರು ಬೇಂದ್ರೆ. ಇಬ್ಬರೂ ನಡೆದು ಕೆ ಸಿ ಸಿ ಬ್ಯಾಂಕಿನ ಹತ್ತಿರ ಬಂದರು. ಅಲ್ಲೊಬ್ಬ ರಸ್ತೆಯ ಬದಿಯಲ್ಲಿ ಚಪ್ಪಲಿ ಹೊಲಿಯುತ್ತ ಕುಳಿತಿದ್ದ. ಇವರ ಚಪ್ಪಲಿಯ ಉಂಗುಷ್ಠ ಹರಿದದ್ದನ್ನು ನೋಡಿ, `ಅಜ್ಜಾವ್ರ, ಉಂಗುಷ್ಠ ಹಚ್ಚಿಕೊಡತೇನಿ ಕೊಡ್ರಿ' ಎಂದ. `ಆತು ಹಚ್ಚಿಕೊಡು' ಎಂದು ಅವನ ಕಡೆಗೆ ಹೋದರು. ತಮ್ಮ ಚಪ್ಪಲಿ ತೆಗೆದುಕೊಡುವಾಗ ಆ ರಿಪೇರಿ ಮಾಡುವವ ಹೇಳಿದ, `ಬಿಸಲಾಗ ಕಾಲು ಸುಡತಾವ, ಇದರ ಮೇಲೆ ಕಾಲು ಇಡ್ರಿ' ಎಂದು ಮತ್ತೊಂದು ಚಪ್ಪಲಿಯನ್ನು ಅವರ ಕಾಲಿನ ಹತ್ತಿರ ಇಟ್ಟ. ಅವನ ಪ್ರೀತಿ ಕಂಡು ಬೇಂದ್ರೆಯವರಿಗೆ ಅಂತಃಕರಣ ತುಂಬಿ ಬಂತು. `ಅಲ್ಲೋ ನನ್ನ ಕಾಲು ಸುಡೋದರ ಬಗ್ಗೆ ನಿನಗೆ ಕಾಳಜಿ ಅದ. ಆದರೆ ಸುಡೋ ಬಿಸಿಲೊಳಗ ನೀನು ಕೂತಿ. ನಿನ್ನ ಮೈ ಸುಡೋದರ ಬಗ್ಗೆ ಎಚ್ಚರ ಇಲ್ಲಾ' ಎಂದು ತಮ್ಮ ಕೊಡೆಯನ್ನು ಬಿಚ್ಚಿ ಅವನ ತಲೆಯ ಮೇಲೆ ಹಿಡಿದು ನಿಂತರು. ಆತ ಇವರ ಚಪ್ಪಲಿ ರಿಪೇರಿ ಮಾಡುತ್ತಿದ್ದ. ಅದು ಮುಗಿದ ಮೇಲೆ, `ಪಾಲೀಶ್ ಮಾಡಲೇನ್ರಿ?' ಎಂದು ಕೇಳಿದ. ಇವರು `ಹೂಂ' ಎಂದು ಮಾತಿಗಿಳಿದು ಅವನ ಮನೆತನದ ಇತಿಹಾಸವನ್ನೆಲ್ಲ ತಿಳಿದರು.

ಎಷ್ಟು ಮಕ್ಕಳು ನಿನಗ?

ಎರಡು

ದಿನಕ್ಕ ಎಷ್ಟು ಹಣ ದುಡಿತೀ?

ಹತ್ತು ರೂಪಾಯಿ, ಒಮ್ಮಮ್ಮೆ ಹೆಚ್ಚು ಕಡಿಮೆ ಆಗತೈತಿ .

ಶೆರೆ ಕುಡಿತೀ ಏನು?

ಇಲ್ಲ, ಯಾವಾಗರೇ ಒಮ್ಮಮ್ಮೆ .

ಮನ್ಯಾಗ ಛತ್ರಿ (ಕೊಡೆ) ಅದ ಏನು?

ಇದೇರಿ

ಇಷ್ಟು ಮಾತು ಆಗುವುದರೊಳಗೆ ಚಪ್ಪಲಿ ರಿಪೇರಿ ಕೆಲಸ ಮುಗಿದಿತ್ತು. ` ಎಷ್ಟು ಆತು?' ಬೇಂದ್ರೆ ಕೇಳಿದರು.

ಆತ ಕ್ಷಣ ವಿಚಾರ ಮಾಡಿ, `ಒಂದೂವರೆ ರೂಪಾಯಿ ಆತ್ರಿ' ಎಂದ. ಇವರು ಹತ್ತು ರೂಪಾಯಿ ತೆಗೆದು ಕೊಟ್ಟರು. ಆತ `ನನ್ನ ಕಡೆಗೆ ಚಿಲ್ರೆ ಇಲ್ಲರಿ' ಎಂದಾಗ ಬೇಂದ್ರೆ, `ನೀನು ದಿನಕ್ಕೆ ಹತ್ತು ರೂಪಾಯಿ ದುಡೀತಿ. ಇದು ಇವತ್ತಿನ ಗಳಿಕೆ. ಮೊದಲು ಮನೆಗೆ ಹೋಗಿ ಕೊಡೆ ತೊಗೊಂಡು ಬಾ. ನೆರಳು ಮಾಡಿಕೊಂಡು ದುಡಿ. ನಿನ್ನ ಹಿಂದ ಹೆಂಡತಿ ಮಕ್ಕಳು ಅವಲಂಬಿಸಿದ್ದಾರೆ ಎಂಬುದನ್ನು ಮರೀಬ್ಯಾಡ. ಅವರಿಗೆ ಹಣ್ಣು ಹಂಪಲು ಒಯ್ಯಿ, ಕುಡೀಬ್ಯಾಡಾ' ಎಂದರು. ಅವರ ಅಂತಃಕರಣದ ಮಾತಿಗೆ, ನೀಡಿದ ಹಣಕ್ಕೆ ಅವನ ಕಣ್ಣು ಒದ್ದೆಯಾದವು.

ಆತ ಕೇಳಿದ, `ಅಜ್ಜಾವ್ರ, ನಿಮ್ಮ ಮನೆ ಎಲ್ಲಿ ಐತಿ?'. `ಸಾಧನಕೇರಿಯೊಳಗ' ಎಂದರು ಬೇಂದ್ರೆ.. `ಬೇಂದ್ರೆಯವರ ಮನೀ ಹತ್ತಿರ ಏನ್ರಿ?' ಎಂದು ಕೇಳಿದ.

ಇವರು `ಹೂಂ' ಎನ್ನುತ್ತ ಟಾಂಗಾ ನಿಲ್ದಾಣದ ಕಡೆಗೆ ನಡೆದರು. ಅನಂತರ ಆ ಚಪ್ಪಲಿ ರಿಪೇರಿ ಮಾಡುವವ ಆಗಾಗ ಬೇಂದ್ರೆಯವರ ಮನೆಗೆ ಬಂದು ಹೋಗುತ್ತಿದ್ದನಂತೆ.

ನಿಜವಾಗಿಯೂ ಎತ್ತರಕ್ಕೇರಿದವರು ಯಾವ ಹಂತಕ್ಕಾದರೂ ಇಳಿದು ಹೃದಯವಂತಿಕೆಯನ್ನು ತೋರಬಲ್ಲರು.

ಇದನ್ನು ಸುರೇಶ ಕುಲಕರ್ಣಿಯವರು ತಮ್ಮ `ಬೇಂದ್ರೆ ಬೆಳಕು' ಕೃತಿಯಲ್ಲಿ ಬರೆದಿದ್ದಾರೆ. ಇದರ ಬೆಳಕು ನಮಗೆ ಕಂಡಿದ್ದು ಡಾ. ಗುರುರಾಜ ಕರ್ಜಗಿ ಅವರ ಪ್ರಜಾವಾಣಿಯ ‘ಕರುಣಾಳು ಬಾ ಬೆಳಕೆ’ ಅಂಕಣದಲ್ಲಿ.

ಬೇಂದ್ರೆ ಅಜ್ಜನಿಗೆ, ಇದನ್ನು ನಮಗೆ ಉಣಬಡಿಸಿದ ಸುರೇಶ್ ಕುಲಕರ್ಣಿ ಮತ್ತು ಡಾ. ಗುರುರಾಜ ಕರ್ಜಗಿ ಅವರಿಗೆ ನಮಿಸೋಣ.

ಮೂಲ: ಅಂತರ್ಜಾಲ