Wednesday, August 13, 2014

ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ

ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ
ಚುಂಬಕ ಗಾಳಿಯು ಬೀಸುತಿದೆ 
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಜಿಸಿ ನಗೆಯಲಿ ಮೀಸುತಿದೆ

ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
ತುಂಬುತ ತುಳುಕುತ ತೀರುತ ತನ್ನೊಳು
ತಾನೇ ಸವಿಯನು ಸವಿಯುತಿದೆ

ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸೆಯಿಸಿತು
ಮಿತ್ರನ ಮೈತ್ರಿಯ ಒಸಗೆ ಮಸಗದಿದೆ
ಮರುಕದ ಧಾರೆಯ ಮಸೆಯಿಸಿತು

ಅಕ್ಷಿನಿಮೀಲನ ಮಾಡದೆ ನಕ್ಷತ್ರದ
ಗಣ ಗಗನದಿ ಹಾರದಿದೆ
ಬಿದಿಗೆಯ ಬಿಂಬಾಧರದಲಿ ಇಂದಿಗು
ಮಿಲನದ ಚಿಹ್ನವು ತೋರದಿದೆ

ದ.ರಾ. ಬೇಂದ್ರೆ
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ (ಪಂ|| ಭೀಮಸೇನ ಜೋಷಿ)
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ (ಪಿ.ಬಿ. ಶ್ರೀನಿವಾಸ್ ಮತ್ತು ಪಿ. ಸುಶೀಲ)

Thursday, August 7, 2014

ನಾನೇಕೆ ಬಡವನೊ ನಾನೇಕೆ ಪರದೇಶಿ

ನಾನೇಕೆ ಬಡವನೊ ನಾನೇಕೆ ಪರದೇಶಿ
ಶ್ರೀನಿಧೇ ಹರಿ ಎನಗೆ ನೀನಿರುವ ತನಕ

ಹುಟ್ಟಿಸಿದ ತಾಯ್ತಂದೆ ಇಷ್ಟಮಿತ್ರನು ನೀನೆ
ಅಷ್ಟ ಬಂಧು ಬಳಗ ಸರ್ವ ನೀನೆ
ಪೆಟ್ಟಿಗೆಯೊಳಗಿನ ಅಷ್ಟಾಭರಣ ನೀನೆ
ಶ್ರೇಷ್ಠ ಮೂರುತಿ ಕೃಷ್ಣ ನೀನಿರುವತನಕ

ಒಡಹುಟ್ಟಿದವ ನೀನೆ ಒಡಲಿಗಾಕುವ ನೀನೆ
ಉಡಲು ಹೊದೆಯಲು ವಸ್ತ್ರ ಕೊಡುವ ನೀನೆ
ಮಡದಿ ಮಕ್ಕಳನೆಲ್ಲ ಕಡೆಹಾಯಿಸುವ ನೀನೆ
ಬಿಡದೆ ಸಲಹುವ ಒಡೆಯ ನೀನಿರುವತನಕ

ವಿದ್ಯೆ ಹೇಳುವ ನೀನೆ ಬುದ್ಧಿ ಕಲಿಸುವ ನೀನೆ
ಉದ್ಧಾರಕರ್ತ ಮಮಸ್ವಾಮಿ ನೀನೆ
ಮುದ್ದು ಶ್ರೀ ಪುರಂದರವಿಠಲ ನಿನ್ನಡಿ ಮೇಲೆ
ಬಿದ್ದು ಕೊಂಡಿರುವ ಎನಗೆ ಏತರ ಭಯವೊ

ಪುರಂದರ ದಾಸರು
ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

Sunday, August 3, 2014

ಗುಮ್ಮನ ಕರೆಯದಿರೆ ಅಮ್ಮ ನೀನು

ಗುಮ್ಮನ ಕರೆಯದಿರೆ ಅಮ್ಮ ನೀನು
ಸುಮ್ಮನೆ ಇದ್ದೇನು ಅಮ್ಮಿಯ ಬೇಡೆನು
ಮಮ್ಮು ಉಣ್ಣುತೇನೆ ಅಮ್ಮ ಅಳುವುದಿಲ್ಲ

ಹೆಣ್ಣುಗಳಿರುವಲ್ಲಿ ಪೋಗಿ ಅವರ
ಕಣ್ಣು ಮುಚ್ಚುವದಿಲ್ಲವೆ
ಚಿಣ್ಣರ ಬಡಿಯೆನು, ಅಣ್ಣನ ಬೈಯೆನು
ಬೆಣ್ಣೆಯ ಬೇಡೆನು ಮಣ್ಣು ತಿನ್ನುವುದಿಲ್ಲ

ಬಾವಿಗೆ ಪೋಗೆ ಕಾಣೆ ಅಮ್ಮ ನಾನು
ಹಾವಿನೊಳಾಡೆ ಕಾಣೆ
ಆವಿನ ಮೊಲೆಯೂಡೆ ಕರುಗಳ ಬಿಡೆ ನೋಡೆ
ದೇವರಂತೆ ಒಂದು ಠಾವಿಲಿ ಕೂಡುವೆ

ಮಗನ ಮಾತ ಕೇಳಿ ಗೋಪಿದೇವಿ
ಮುಗುಳು ನಗೆ ನಗುತ
ಜಗದೊಡೆಯನ ಶ್ರೀ ಪುರಂದರವಿಠಲನ
ಬಿಗಿದಪ್ಪಿಕೊಂಡಳು ಮೋಹದಿಂದಲಾಗ

ಪುರಂದರ ದಾಸರು
ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

Monday, July 21, 2014

ಕಲ್ಲುಸಕ್ಕರೆ ಕೊಳ್ಳಿರೋ

ಕಲ್ಲುಸಕ್ಕರೆ ಕೊಳ್ಳಿರೋ ನೀವೆಲ್ಲರು
ಕಲ್ಲುಸಕ್ಕರೆ ಕೊಳ್ಳಿರೋ

ಕಲ್ಲುಸಕ್ಕರೆ ಸವಿ ಬಲ್ಲವರೆ ಬಲ್ಲರು
ಪುಲ್ಲಲೋಚನ ಶ್ರೀಕೃಷ್ಣನಾಮವೆಂಬ

ಎತ್ತು ಹೇರುಗಳಿಂದ ಹೊತ್ತು ಮಾರುವುದಲ್ಲ
ಒತ್ತೊತ್ತಿ ಗೋಣಿಯೊಳು ತುಂಬುವದಲ್ಲ
ಎತ್ತ ಹೋದರು ಬಾಡಿಗೆ ಸುಂಕವಿದಕಿಲ್ಲ
ಉತ್ತಮ ಸರಕಿದು ಅತಿ ಲಾಭ ಬರುವಂಥ

ನಷ್ಟ ಬೀಳುವುದಲ್ಲ ನಾತ ಹುಟ್ಟುವುದಲ್ಲ
ಎಷ್ಟು ಒಯ್ಡರು ಬೆಲೆ ರೊಕ್ಕವಿದಕಿಲ್ಲ
ಕಟ್ಟಿರುವೆಯು ತಿಂದು ಕಡಮೆಯಾಗುವುದಲ್ಲ
ಪಟ್ಟಣದೊಳಗೆ ಪ್ರಸಿದ್ದವಾಗಿರುವಂಥ

ಸಂತೆ ಸಂತೆಗೆ ಹೋಗಿ ಶ್ರಮಪಡುವುದಲ್ಲ
ಸಂತೆಯೊಳಗೆ ಇಟ್ಟು ಮಾರುವುದಲ್ಲ
ಸಂತತ ಭಕ್ತರ ನಾಲಗೆ ಸವಿಗೊಂಬ
ಕಾಂತ ಪುರಂದರವಿಠಲ ನಾಮವೆಂಬ

ಪುರಂದರ ದಾಸರು
ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

Tuesday, June 24, 2014

ಆಸೆಗಳು ಸಾವಿರಾರು

ಆಸೆಗಳು ಸಾವಿರಾರು
ಆಕಾಂಕ್ಷೆಗಳಿಗೂ ಬೆಲೆ
ಕೊಡಬೇಕಲ್ಲವೇ?
ಆಸೆಗಳ ಭಾರದಲ್ಲಿ
ಆಕಾಂಕ್ಷೆಗಳು
ಬೂದಿ ಮುಚ್ಚಿದ
ಕೆಂಡವಾಗಬಾರದು

ಪುಟ್ಟಸ್ವಾಮಿ ಹೆಚ್

Tuesday, June 17, 2014

ನಿನ್ನೊಡನೆ ಇಟ್ಟ...

ನಿನ್ನೊಡನೆ ಇಟ್ಟ
ನಾಲ್ಕೇ ಹೆಜ್ಜೆಳು
ಕಟ್ಟಿವೆ ಹೃದಯಕೆ
ಗೆಜ್ಜೆಗಳು

ವಿನೋದ್ ಕುಮಾರ್

Saturday, June 7, 2014

ದರಿದ್ರ ಜನ್ಮವೇಕೆ?

ತುಸು 
ಸಾಂತ್ವಾನದ 
ಮಾತುಗಳಿಗೂ 
ಬರ 
ಇರುವ 
ದರಿದ್ರ
ಜನ್ಮವೇಕೆ ?


ವಿನೋದ್ ಕುಮಾರ್

Saturday, May 31, 2014

ನಿಶ್ಯಬ್ಧವಾಗಿರಿ

ಸರ್ಕಾರಿ ಕಛೇರಿಯೊಂದರ ಗೋಡೆಯ ಮೇಲೆ ಬರೆದಿತ್ತು, "ನಿಶ್ಯಬ್ಧವಾಗಿರಿ". ಕಿಡಿಗೇಡಿಯೊಬ್ಬ ಅದರ ಕೆಳಗೆ ಬರೆದ, "ಇಲ್ಲದಿದ್ದರೆ ನಮಗೆ ಎಚ್ಚರವಾಗುತ್ತದೆ".

Saturday, May 17, 2014

ಕಟ್ಟುವೆವು ನಾವು ಹೊಸ ನಾಡೊಂದನು

ಕಟ್ಟುವೆವು ನಾವು ಹೊಸ ನಾಡೊಂದನು
ರಸದ ಬೀಡೊಂದನು

ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ
ಹರೆಯದೀ ಮಾಂತ್ರಿಕನ ಮಾಟ ಮುಸುಳುವ ಮುನ್ನ
ಉತ್ಸಾಹಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ಧ ಸಾಗರವು ಬತ್ತಿ ಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು

ನಮ್ಮೆದೆಯ ಕನಸುಗಳೇ ಕಾಮಧೇನು
ಆದಾವು ಕರೆದಾವು ವಾ೦ಛಿತವನು
ಕರೆವ ಕೈಗಿಹುದಿದೋ ಕನಸುಗಳ ಹರಕೆ
ಗುರಿ ತಪ್ಪದೊಮ್ಮುಖದ ಬಯಕೆ ಬೆಂಬಲಕೆ

ಜಾತಿ ಮತ ಬೇದಗಳ ಕಂದಕವು ಸುತ್ತಲೂ
ದುರ್ಭೇದ್ಯವೆನೆ ಕೋಟೆಕೊತ್ತಲಗಳು
ರೂಢಿರಾಕ್ಷಸನರಸುಗೈಯುವನು, ತೋಳ್ತಟ್ಟಿ
ತೊಡೆತಟ್ಟಿ ಕರೆಯುವನು ಸಂಗ್ರಾಮಕೆ

ನಾವು ಹಿಂದೆಗೆವೆವೇ? ವೀರ ತರುಣರು ನಾವು
ಒಂದೆ ನೆಗೆತಕೆ ನೆಗೆವೆವೋ ಕಂದಕವನು
ಕುಟ್ಟಿ ಪುಡಿಮಾಡುವೆವು ಕೋಟೆಗಳನು
ಎದೆಯ ಮೆಟ್ಟಿ ಮುರಿಯುವೆವಸುರರರಟ್ಟೆಗಳನು
ಕೋಟೆಗೋಡೆಗೆ  ನಮ್ಮ  ಹೆಣಗಳೇ ಮೆಟ್ಟಿಲು
ನಮ್ಮ ಸಾವೇ ನೋವೆ ಹೊಸ ನಾಡ ತೊಟ್ಟಿಲು  ಆದಾವು
ಅಂಜುವೆದೆ ನಮ್ಮದಲ್ಲ
ಸೋಲುಬಗೆ ವೀರನಿಗೆ ಸಲ್ಲ ಹೊಲ್ಲ

ಎಡರುಗಳ ಕಡಲುಗಳನೀಸಿ ಬರುವೆವು
ಘೋರ ನೈರಾಶ್ಯದಗ್ನಿಮುಖದಲ್ಲು ಕೂಡ
ಹೊಕ್ಕು ಹೊರಡುವೆವೆಲ್ಲ ತೊಡಕುಗಳ ಒಡಕುಗಳ
ಬಿಡಿಸಿ ಇಡಿಗೊಳಿಸಿ ಕಟ್ಟುವೆವು ನಾಡ
ಇಂದು ಬಾಳಿದು ಕೂಳ ಕಾಳಗವು

ಹೊಟ್ಟೆಯೇ ಕೇಂದ್ರವಾಗಿದೆ ನರನ ಜೀವಿತಕ್ಕೆ
ಅನ್ನದನ್ಯಾಯದಾವಾಗ್ನಿಯಲಿ ಕರಗುತಿದೆ
ನರತೆ, ಸಂಸ್ಕೃತಿ, ಪ್ರೀತಿ, ದಿವದ ಬಯಕೆ

ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ
ಸಮಬಗೆಯ ಸಮಸುಖದ ಸಮದುಃಖದ
ಸಾಮರಸ್ಯದ ಸಾಮಗಾನಲಹರಿಯ ಮೇಲೆ
ತೇಲಿ ಬರಲಿದೆ ನೋಡು, ನಮ್ಮ ನಾಡು

ಇಲ್ಲೇ ಈ ಎಡೆಯಲ್ಲೆ ನಮ್ಮ ಮುಂಗಡೆಯಲ್ಲೆ
ಅಳಲುಗಳ ಹೆಡೆಯಲ್ಲೆ
ಸೋಲುಗಳ ತೊಡೆಯಲ್ಲೆ
ಅರಳೀತು ನಮ್ಮ ನಾಡು
ನಮ್ಮೆದೆಯ ತುಂಬಿರುವ ಅದರ ನರುಗಂಪು ಹೊರ
ಹೊಮ್ಮುವುದ ಕಾದು ನೋಡು

ಉತ್ಸಾಹ ಉದ್ವೇಗ ಉದ್ರೇಕಗಳ ವೀರ
ಯುವಜನದ ನಾಡ ಗುಡಿಯು
ಅದರ ಹಾರಾಟಕ್ಕೆ ಬಾನೆ ಗಡಿಯು
ಬರಲು ಬಿಡೆವೆಂದಿಗೂ ಅದಕೆ ತಡೆಯು
ತಡೆವವರು ಬನ್ನಿರೋ ಹೊಡೆವವರು ಬನ್ನಿರೋ
ಕೆಡೆನುಡಿವ ಕೆಡೆಬಗೆವ ಕೆಡುಕು ಜನರೇ ಬನ್ನಿ
ಕೊಟ್ಟೆವಿದೋ ವೀಳೆಯವನು
ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ
ಕಟ್ಟುವೆವು ನಾವು ಹೊಸ ನಾಡೊಂದನು
ಸುಖದ ಬೀಡೊಂದನು

ಎಂ. ಗೋಪಾಲಕೃಷ್ಣ ಆಡಿಗ
ಈ ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

ಕಣ್ಣಲ್ಲಿ ಕಸ ಬಿದ್ದಿದೆಯೆಂಬುದು ನೆಪವಾಗಿತ್ತು

ಕಣ್ಣಲ್ಲಿ ಕಸ ಬಿದ್ದಿದೆಯೆಂಬುದು ನೆಪವಾಗಿತ್ತು
ಎದೆಯೊಳಗಿನ ಬಿರುಗಾಳಿಯ ನಾ ಮರೆಮಾಚಬೇಕಿತ್ತು

ವಿನೋದ್ ಕುಮಾರ್

Sunday, May 11, 2014

ನೂರು ದೇವರನೆಲ್ಲ ನೂಕಾಚೆ ದೂರ

ನೂರು ದೇವರನೆಲ್ಲ ನೂಕಾಚೆ ದೂರ
ಭಾರತಾಂಬೆಯೇ ದೇವಿ ನಮಗಿಂದು
ಪೂಜಿಸುವ ಬಾರಾ ಬಾರಾ

ಶತಮಾನಗಳು ಬರಿಯ ಜಡಶಿಲೆಯ ಪೂಜಿಸಾಯ್ತು
ಹಾವುಗಳಿಗೆ ಹಾಲೆರೆದು ಪೋಷಿಸಾಯ್ತು
ಬಿಸಿಲು ಮಳೆ ಗಾಳಿ ಬೆಂಕಿಯನೆಲ್ಲ ಬೇಡಿಯಾಯ್ತು
ದಾಸರನು ಪೂಜಿಸಿಯೇ ದಾಸ್ಯವಾಯ್ತು

ಗುಡಿಯೊಳಗೆ ಕಣ್ಮುಚ್ಚಿ ಬೆಚ್ಚಗಿರುವರನೆಲ್ಲ
ಭಕ್ತ ರಕ್ತವ ಹೀರಿ ಕೊಬ್ಬಿಹರನೆಲ್ಲ
ಘಂಟೆ ಜಾಗಟೆಗಳಿಂ ಬಡಿದು ಕುತ್ತಿಗೆ ಹಿಡಿದು
ಕಡಲಡಿಗೆ ತಳ್ಳಿರೈ ಶಂಖದಿಂ ನುಡಿದು
                                                            
ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು
ಜೀವದಾತೆಯನಿಂದು ಕೂಗಬೇಕು
ಶಿಲೆಯ ಮೂರ್ತಿಗೆ ನೇಯ್ದ ಕಲೆಯ ಬಲೆಯನು ಒಯ್ದು
ಚಳಿಯು ಮಳೆಯಲಿ ನವೆವ ತಾಯ್ಗೆ ಹಾಕು
                                                         

ಕುವೆಂಪು
ಈ ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ