Sunday, March 23, 2014

ಹಿರಿಯ ಸಾಹಿತಿ ಯಶವಂತ ಚಿತ್ತಾಲ ನಿಧನ

ವಿ ದಾ ಯ
ಯಶವಂತ ಚಿತ್ತಾಲ


1928 – 2014

ಪ್ರಜಾವಾಣಿ ಸುದ್ದಿ

ಮುಂಬೈ: ಕನ್ನಡದ ಹಿರಿಯ ಸಾಹಿತಿ ಯಶ­ವಂತ ಚಿತ್ತಾಲ ಅವರು ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಶನಿವಾರ ನಿಧನ ಹೊಂದಿದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.

ತೀವ್ರ ಅನಾರೋಗ್ಯದಿಂದ ಬಳಲು­ತ್ತಿದ್ದ  ಅವರು, ಕಳೆದ ನಲವತ್ತು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ­ಯುತ್ತಿದ್ದರು. ಭಾನುವಾರ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ತಮ್ಮ ಕಥೆ ಕಾದಂಬರಿಗಳ ಮೂಲಕ ಕನ್ನಡದ ಸಾಹಿತ್ಯದ ಸಾಧ್ಯತೆಗಳನ್ನು ವಿಸ್ತರಿಸಿದ್ದು, ಯಶವಂತ ಚಿತ್ತಾಲರ ಪ್ರಮುಖ ಸಾಧನೆ.

ಕೊಂಕಣಿ ಮರಾಠಿಯನ್ನು ಮನೆ­ಮಾತಾಗಿ ಹೊಂದಿದ್ದ ಅವರು ತಮ್ಮ ಅಭಿವ್ಯಕ್ತಿ ಭಾಷೆಯನ್ನಾಗಿ ಆರಿಸಿ­ಕೊಂಡಿದ್ದು ಕನ್ನಡವನ್ನು. ಉತ್ತರಕನ್ನಡ ಜಿಲ್ಲೆಯ ಹನೇಹಳ್ಳಿ ಚಿತ್ತಾಲರ ಹುಟ್ಟೂರು. ವಿಠೋಬಾ ಮತ್ತು ರುಕ್ಮಿಣಿ ಅವರ ತಂದೆ, ತಾಯಿ. ದಿವಂಗತ ಕವಿ ಗಂಗಾಧರ ಚಿತ್ತಾಲರು ಅವರ ಸಹೋದರ.

ಯಶವಂತ ಚಿತ್ತಾಲರ ಪ್ರಾಥಮಿಕ ವಿದ್ಯಾಭ್ಯಾಸ ನಡೆದಿದ್ದು ಹನೇಹಳ್ಳಿ ಮತ್ತು ಕುಮಟಾದಲ್ಲಿ. ಮುಂಬೈ ಮತ್ತು ಅಮೆರಿಕದಲ್ಲಿ ಉನ್ನತ ವ್ಯಾಸಂಗ ಪಡೆದ ಅವರು ರಾಸಾ­ಯನಿಕ ತಂತ್ರ­ಜ್ಞರಾಗಿ ಹಲವು ಹುದ್ದೆ­ಗಳಲ್ಲಿ ಕಾರ್ಯ­ನಿರ್ವಹಿಸಿದ್ದಾರೆ.

ವೃತ್ತಿಯಲ್ಲಿನ ಅನುಭವಗಳನ್ನು, ಆಧುನಿಕ ಕೈಗಾರಿಕಾ ಜಗತ್ತಿನ ಕುರಿತ ತಮ್ಮ ವಿಶೇಷ ಒಳನೋಟಗಳನ್ನು ಸಾಹಿತ್ಯ ಕೃತಿಗಳನ್ನು ಮೂಡಿಸಿದ್ದಾರೆ. ಹನೇಹಳ್ಳಿ ಮತ್ತು ಮುಂಬೈ ಅವರ ಸಾಹಿತ್ಯ ಸೃಷ್ಟಿಯ ಪ್ರಮುಖ ದ್ರವ್ಯಗಳು.

Sunday, March 16, 2014

ಒಂದಾಗಬೇಕು

ಸಾರುವರು ಈ ಭೂಮಿ ನಮ್ಮಮ್ಮನೆಂದು
ಇಲ್ಲಿರುವ ನಾವೆಲ್ಲ ಬಂಧುಗಳೆ ಎಂದು
ನೀಡುವರು ಭರವಸೆಯೆ ಅವರಾಗೆ ಬಂದು
ಭಯ ಬೇಡ ಬಾಳೋಣ ಜೊತೆಯಾಗಿ ಎಂದು

ಹೂಡುವರು ಸಂಚನ್ನು ಮರೆಯಾಗಿ ನಿಂದು
ಹೆಣೆಯುವರು ಬಲೆಯನ್ನು ವಂಚಿಸಲು ಬಂದು

ನೀಡುವರು ಗರಿಗರಿಯ ಹೊಸ ನೋಟನಿರಿದು
ಹರಿಸುವರು ಸುರೆಧಾರೆ ಮೈಮರೆಯಲೆಂದು
ಬೇಡುವರು ಕೈಮುಗಿದು ನೀಡಿ ಓಟೊಂದು
ತರುವಾಯ ಹೇಳುವರು ನಾವಾಳ್ವರೆಂದು

ಮರುದಿನವೇ ಆರಂಭ ನವನರಕ ನಮಗೆ
ನಗನಾಣ್ಯ, ನವಭಾಗ್ಯ ಅವರೆಲ್ಲರುಡಿಗೆ

ಹಗಲಿರುಳು ಬಗಿಯುವರು ಭೂತಾಯ ಒಡಲ
ನುಡಿಯುವರು ನಾವವಳ ಕೊಂಡಂಥ ಒಡೆಯ
ತಾ ಹಡೆದ ಮಕ್ಕಳ ಭಂಡತೆಗೆ ತಾಯಿ
ಮರುಮರುಗಿ ಹರಿಸಿಹಳು ಕಣ್ಣೀರ ಕೋಡಿ

ಕಡಿದಿಹರು ಬಿಡದಂತೆ ಕಾಡಿನ ಮಡಿಲ
ಕಸಿದಿಹರು ಖಗ ಮೃಗದ ಜೀವದಾ ನೆಲೆಯ
ಮರೆತಿಹರು ಹಸಿರದೇ ಜೀವದುಸಿರೆಂದು
ಮಾರಿಕೊಂಡರದ ತಮ್ಮ ಸೌಭಾಗ್ಯಕ್ಕೆಂದು

ಕೇಳಿದಿರಾ... ಹಸಿದೊಡಲ ಕಂದನಳುವನ್ನ
ದುರ್ದೆಸೆಗೆ ಗೋಳಿಡುವ ತಾಯ ಕರುಳನ್ನ
ಕಂಡಿರಾ... ಸೀರೆಯಾಸೆಗೆ ನೆರೆದು ಸಾವಪ್ಪರನ್ನ
ಒಪ್ಪತ್ತಿನೂಟಕೆ ಕೈಚಾಚಿ ಹಾತೊರೆವರನ್ನ

ಕಾರಣರು ಇದಕೆಲ್ಲ ಕಣ್ಣೆದುರಿಗಿಹರು
ನೂಕಿ ನರಕಕೆ ನಮ್ಮ ಗಹಗಹಿಸುತಿಹರು

ಬಿಡರೆಂದು ಬಾಳಲು ಒಂದಾಗಿ ನಾವು
ಬಿತ್ತುವರು ಜಾತಿಮತ ಧರ್ಮದ ಬೇವು
ಬಾಂಧವರ ಬಿರುಕದೇ ಇವರೆಡೆಗೆ ಠಾವು
ಅದಕಾಗೆ ಹುಡುಕುವರು ನೆಪಗಳನು ತಾವು

ಈ ತಾಯಿ ಶೋಷಣೆಯು ತಾ ನಿಲ್ಲಬೇಕು
ನೊಂದಿರುವ ಬಂಧುಗಳು ನಲಿದಾಡಬೇಕು
ಘಾತಕರ ತಲೆಸಿಡಿದು ಹೋಳಾಗಬೇಕು
ಅದಕಾಗೆ ನಾವೆಲ್ಲ ಒಂದಾಗಬೇಕು

ಕೆ.ಎಂ. ಗಂಗಾಧರಪ್ಪ

Thursday, February 27, 2014

ಅನುಭವಿ ಗಂಡಸಿನ ಚಿನ್ನದ ನುಡಿಗಳು

ನೀನು ಪ್ರಪಂಚವನ್ನು ಬದಲಿಸಬೇಕೆಂದಿದ್ದರೆ
ನೀನು ಬ್ರಹ್ಮಚಾರಿಯಾಗಿರುವಾಗಲೇ ಬದಲಿಸು...
ಮದುವೆಯಾದ ಮೇಲೆ ನೀನು
ಟಿವಿ ಚಾನಲ್ಲನ್ನೂ ಸಹ ಬದಲಿಸಲು ಆಗುವುದಿಲ್ಲ!!!

ಮೂಲ: ಅಂತರ್ಜಾಲ

Saturday, February 8, 2014

ಈ ಬಾನು ಈ ಚುಕ್ಕಿ ಈ ಹೂವು ಈ ಹಕ್ಕಿ

ಈ ಬಾನು ಈ ಚುಕ್ಕಿ ಈ ಹೂವು ಈ ಹಕ್ಕಿ 
ತೇಲಿ ಸಾಗುವ ಮುಗಿಲು ಹರುಷ ಉಕ್ಕಿ 
ಯಾರು ಇಟ್ಟರು ಇದನು ಹೀಗೆ ಇಲ್ಲಿ 
ತುದಿ ಮೊದಲು ತಿಳಿಯದೀ ನೀಲಿಯಲಿ

ಒಂದೊಂದು ಹೂವಿಗು ಒಂದೊಂದು ಬಣ್ಣ 
ಒಂದೊಂದು ಜೀವಕು ಒಂದೊಂದು ಕಣ್ಣ 
ಯಾವುದೋ ಬಗೆಯಲ್ಲಿ ಎಲ್ಲರಿಗು ಅನ್ನ
ಕೊಟ್ಟ ಕರುಣೆಯ ಮೂಲ ಮರೆಸಿಹುದು ತನ್ನ

ನೂರಾರು ನದಿ ಕುಡಿದು ಮೀರದ ಕಡಲು 
ಭೋರೆಂದು ಸುರಿಸುರಿದು ಆರದ ಮುಗಿಲು
ಸೇರಿಯೂ ಕೋಟಿ ತಾರೆ ತುಂಬದಾ ಬಯಲು 
ಯಾರದೀ ಮಾಯೆ ಯಾವ ಬಿಂಬದಾ ನೆರಳು

ಹೊರಗಿರುವ ಪರಿಯೆಲ್ಲ ಅಡಗಿಹುದೇ ಒಳಗೆ 
ಹುಡುಕಿದರೆ ಕೀಲಿಕೈ ಸಿಗದೇ ಎದೆಯೊಳಗೆ 
ತಿಳಿಯದೆ ಅದರಲ್ಲಿ ಕುಳಿತಿರುವೆ ನೀನೆ 
ಎನ್ನುವರು ನನಗೀಗ ಸೋಜಿಗವು ನಾನೇ

ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ