Thursday, June 18, 2020

ಕೆಸರಿನ ಕಮಲಗಳು

ಕೆಸರಕೊಳದಲಿ ಅರಳಿಬಂದ
ಕಮಲ ಸುಮಗಳೇ
ಕೆಸರು ಸೋಕದೆ ಮೇಲೆ ಬಂದೆವೆಂಬ
ಗವ೯ ಯಾಕೆ ?

ಬಡತನದಲೇ ಬೆಂದು ನಗುವ
ಈ ಬಾಲೆಯರ ನಯನ ಕಮಲಗಳಲಿ
ನಿಮ್ಮಂತೆ ಮೇಲೆ ಬರುವ
ಭರವಸೆಯ ಬೆಳಕ ಕಾಣಿರೇಕೆ?

ಸುಕೋಮಲ ಸ್ವಚ್ಛಂದದಳಗಳ
ಮೋಹಕ ತಾವರೆಗಳೇ
ರವಿ-ಕವಿಯನೊಳಗೊಂಡು
ಜಗವನಾಕರ್ಷಿಸಿದೆವೆಂಬ
ಹಿರಿ ಹಿಗ್ಗು ಯಾಕೆ?

ಲೋಕವಿಕಾರಗಳ ಪರಿಧಿ ದಾಟಿ
ಆ ಶಶಿಯು ಕೂಡ ನಾಚುವಂತ
ಮುಗ್ಧಮನಸ್ಸಿನ ಮುದ್ದುಮಕ್ಕಳ
ನಿಮ೯ಲ ನಗುವಿನಾಭರಣಕೆ
ಮಿಗಿಲಾದ ಬೇರೆ ಉಪಮೆ ಬೇಕೇ ..??

ಜಗದ ಜಡವ ನೀಗೊ ರವಿಯ
ಎದುರು ನೋಡುವ ನೈದಿಲೆಗಳೇ
ನೇಸರನ ಪ್ರಕಿರಣ ಸೋಕಲಷ್ಟೇ
ಅರಳಿ ತೂಗುವ ನಿಮ್ಮ ಪರಿಯ
ನೀವು ಅರಿಯಿರೇನು...?

ಧಗೆಯ ಉಡುಪನೇ ಧರಿಸಿ ನಿಂತ
ಹಾಲುಗೆನ್ನೆಯ ಇವರ ನಗುವಿನಲ್ಲಿ
ನೋವ ಕುಳಿಯ ಕಂಡಿರೇನು?
ಜ್ಞಾನದೀವಿಗೆ ಕಿರಣ ಬೀರಲು
ಮೆಟ್ಟಿ ನಿಲ್ಲುವ ಈ ಕೆಸರ  ಕಮಲಗಳಿಗೆ
ದಿಟ್ಟತನದ ಸ್ಫೂರ್ತಿಯಾಗೋ
ಧನ್ಯತೆಯೇ ನಿಮಗೆ ಸಾಲದೇನು...??? 

ಶ್ರೀಮತಿ ಪದ್ಮಾವತಿ ಸಿ.
ಸಹಾಯಕ ಪ್ರೌಢಶಾಲಾ ಶಿಕ್ಷಕಿ
ಸರ್ಕಾರಿ ಪ್ರೌಢ ಶಾಲೆಶಾಪೂರು
ಕೋಲಾರ ತಾಲ್ಲೂಕು

No comments: