Thursday, June 18, 2020

ಕೆಸರಿನ ಕಮಲಗಳು

ಕೆಸರಕೊಳದಲಿ ಅರಳಿಬಂದ
ಕಮಲ ಸುಮಗಳೇ
ಕೆಸರು ಸೋಕದೆ ಮೇಲೆ ಬಂದೆವೆಂಬ
ಗವ೯ ಯಾಕೆ ?

ಬಡತನದಲೇ ಬೆಂದು ನಗುವ
ಈ ಬಾಲೆಯರ ನಯನ ಕಮಲಗಳಲಿ
ನಿಮ್ಮಂತೆ ಮೇಲೆ ಬರುವ
ಭರವಸೆಯ ಬೆಳಕ ಕಾಣಿರೇಕೆ?

ಸುಕೋಮಲ ಸ್ವಚ್ಛಂದದಳಗಳ
ಮೋಹಕ ತಾವರೆಗಳೇ
ರವಿ-ಕವಿಯನೊಳಗೊಂಡು
ಜಗವನಾಕರ್ಷಿಸಿದೆವೆಂಬ
ಹಿರಿ ಹಿಗ್ಗು ಯಾಕೆ?

ಲೋಕವಿಕಾರಗಳ ಪರಿಧಿ ದಾಟಿ
ಆ ಶಶಿಯು ಕೂಡ ನಾಚುವಂತ
ಮುಗ್ಧಮನಸ್ಸಿನ ಮುದ್ದುಮಕ್ಕಳ
ನಿಮ೯ಲ ನಗುವಿನಾಭರಣಕೆ
ಮಿಗಿಲಾದ ಬೇರೆ ಉಪಮೆ ಬೇಕೇ ..??

ಜಗದ ಜಡವ ನೀಗೊ ರವಿಯ
ಎದುರು ನೋಡುವ ನೈದಿಲೆಗಳೇ
ನೇಸರನ ಪ್ರಕಿರಣ ಸೋಕಲಷ್ಟೇ
ಅರಳಿ ತೂಗುವ ನಿಮ್ಮ ಪರಿಯ
ನೀವು ಅರಿಯಿರೇನು...?

ಧಗೆಯ ಉಡುಪನೇ ಧರಿಸಿ ನಿಂತ
ಹಾಲುಗೆನ್ನೆಯ ಇವರ ನಗುವಿನಲ್ಲಿ
ನೋವ ಕುಳಿಯ ಕಂಡಿರೇನು?
ಜ್ಞಾನದೀವಿಗೆ ಕಿರಣ ಬೀರಲು
ಮೆಟ್ಟಿ ನಿಲ್ಲುವ ಈ ಕೆಸರ  ಕಮಲಗಳಿಗೆ
ದಿಟ್ಟತನದ ಸ್ಫೂರ್ತಿಯಾಗೋ
ಧನ್ಯತೆಯೇ ನಿಮಗೆ ಸಾಲದೇನು...??? 

ಶ್ರೀಮತಿ ಪದ್ಮಾವತಿ ಸಿ.
ಸಹಾಯಕ ಪ್ರೌಢಶಾಲಾ ಶಿಕ್ಷಕಿ
ಸರ್ಕಾರಿ ಪ್ರೌಢ ಶಾಲೆಶಾಪೂರು
ಕೋಲಾರ ತಾಲ್ಲೂಕು

ಬದುಕು ಏಳು ಬೀಳುಗಳ ಯಾನ

ಮುಳುಗಿಹೋಗುವೆನೆಂಬ ಭಯದಿ
ದೋಣಿ ಎಂದೂ ಪಯಣಿಸದು
ದಡಸೇರುವೆನೆಂಬ  ಆತ್ಮವಿಶ್ವಾಸದಿ
ಸಾಗುವುದು ಮುಂದೆ ಮುಂದೆ

ಮುಳುಗುವವನಿಗೆ ತೃಣಮಾತ್ರ
ಹುಲುಕಡ್ಡಿಯೂ ಆಸರೆಯಂತೆ
ಬದುಕಲು ಬಲವೊಂದಿದ್ದರೆ ಸಾಕೆ 
ಬಿದ್ದಾಗ ಮೇಲೇಳುವ ಛಲಬೇಕು

ಪಡುವಣದಿ ಮುಳುಗುವ ಸೂರ್ಯನು
ಮೂಡಣದಿ ಮತ್ತೆ ಏಳದಿಹನೇ
ಸಕಲ ಜೀವರಾಶಿಗೆ ಚೈತನ್ಯ ನೀಡುತ
ಜಗದ ಆದಿ ಅಂತ್ಯಕೆ ನಾಂದಿಯಾಗುತಿಹನು

ಏಳು ಬೀಳುಗಳ ಸಂತೆಯಲ್ಲಿ
ಅಳಿವು ಉಳಿವುಗಳ ಸ್ಪರ್ಧೆಯಲ್ಲಿ
ಭೂತಭವಿಷ್ಯಗಳ ಚಿಂತೆಯಲ್ಲಿ
ಬೀಳುವುದೇ ಕರ್ಮವಾದರೂ
ಏಳುವುದು ನಮ್ಮ ಧರ್ಮವಾಗಬೇಕು

ಬದುಕೆಂಬುದು ಬರಡು ಬಯಲಲ್ಲ
ಇಲ್ಲಿ ಏಳಲು ಎತ್ತರೆತ್ತರದ ಏರಿಗಳಿವೆ
ಬೀಳಲೆಂದೇ ಆಳದ ಪ್ರಪಾತಗಳಿವೆ
ತುಳಿದು ಮೇಲೇಳುವ ತವಕದಲಿ
ಅನ್ಯರಳಿದು ತಾನುಳಿದರೆ ಸಾಕೆ ???

ತುಳಿಯುವವರನ್ನು ಅಳಿಯದೆ
ಮುಳುಗಿಸುವವರನು ಜರಿಯದೆ
ತೇಲಿಸಲು ಮೇಲೊಬ್ಬನಿರುವಾಗ
ಬಿದ್ದವರನ್ನು ಕೈನೀಡಿ ಮೇಲೆತ್ತುವ
ಸಹಕಾರತತ್ತ್ವ  ನಮ್ಮದಾಗಬೇಕು
ನಮ್ಮಂತೆ ಪರರೆಂಬ ಸಮರಸದ
ದಿವ್ಯಮಂತ್ರ ನಮ್ಮದಾಗಬೇಕು

ಶ್ರೀಮತಿ ಪದ್ಮಾವತಿ ಸಿ.
ಸಹಾಯಕ ಪ್ರೌಢಶಾಲಾ ಶಿಕ್ಷಕಿ
ಸರ್ಕಾರಿ ಪ್ರೌಢ ಶಾಲೆಶಾಪೂರು
ಕೋಲಾರ ತಾಲ್ಲೂಕು

Monday, June 15, 2020

ತರುಣಿ

ಜೀವನ ಪೂರ್ತಿ ಕತ್ತೆಯಂತೆ ದುಡಿದ
ಗಂಡು ದಿಕ್ಕಿಲ್ಲದ ಹೆತ್ತವಳಿಗೆ
ಗಂಡು ಮಗುವಾಗಿ ಉಳಿಯುವೆನೆಂದಳು ತರುಣಿ
ಸಾಕು ನಡೆ ನೀ ಹೆಣ್ಣೆಂದಳು
ಅತ್ತೆಯಲಿ ಅಮ್ಮನನು ಕಾಣುವ ತವಕ
ಲೋಕದಲಿ ಅತ್ತೆ ಅಮ್ಮನಾಗುವುದು೦ಟೇ ?
ನಾನೂ ಹಿಂದೊಮ್ಮೆ ಸೊಸೆಯಲ್ಲವೇ ?
ಅತ್ತೆಯ ಸೇಡಿನುತ್ತರದಲಿ ತತ್ತರಿಸಿದಳು ತರುಣಿ
ಪತಿಯೇ ಪರದೈವ ತನಗಿನ್ನಾರು ಸರಿಸಾಟಿ
ಸ್ವರ್ಗಕ್ಕೆ ಮೂರೇ ಗೇಣು
ಭ್ರಮೆಯಲ್ಲಿ ಉಲಿದಳು ತರುಣಿ
ಸವತಿ ಮತ್ಸರ ಸಹಿಸಿಕೋ ಎಂದವನ ಬರಸಿಡಿಲ
ಬೇಗೆಯಲಿ ಕಾವು ನೋವುಗಳ ನುಂಗಿ
ಸಂಸಾರದ ನೊಗ ಹೊತ್ತಳು ತರುಣಿ
ಮಾಂಸ ಮುದ್ದೆಗಳ ತಮ್ಮವೇ ಪ್ರತಿರೂಪ
ಇಂದು ಎದೆಯುದ್ದ ಬೆಳೆದ ಅವರ ಉತ್ತರವೂ ಎತ್ತರ
ಹೆಣ್ಣಲ್ಲವೇ ನೀನು ಅದು ನಿನ್ನ ಕರ್ತವ್ಯ
ನಕ್ಕಳು ....ಮುನಿಸಲಿಲ್ಲ ತರುಣಿ
ಮಗಳು - ಮಡದಿ ಸೊಸೆ - ಸೋದರಿ
ಅಮ್ಮ - ಅಕ್ಕ ಎಲ್ಲರಲಿ ತನ್ನ ಪಾತ್ರವ ಅರಿತಳು ತರುಣಿ
ತನ್ನರಿವು ಯಾರಿಗೂ ಇಲ್ಲ ತಾನು ಅನಿವಾರ್ಯ ಮಾತ್ರ
ಕಷ್ಟಗಳಿಗೆ ಕಲ್ಲಾಗಿ ಕರಗಿದಳು ತರುಣಿ
ಇಷ್ಟಗಳಿಗೆ ಬೇಲಿ ಹಾಕಿಕೊಂಡಳು ತರುಣಿ
ಇಂದವಳು ಅಬಲೆಯಲ್ಲ ಮಿಗಿಲಾಗಿ ತರುಣಿಯೂ ಅಲ್ಲ
ಮೌನದಲ್ಲಿ ಎಲ್ಲವನೂ ನುಂಗಿಕೊಂಡ
ಕ್ಷಮಯಾ ಧರಿತ್ರಿ ...

ಶ್ರೀಮತಿ ಪದ್ಮಾವತಿ ಸಿ.
ಸಹಾಯಕ ಪ್ರೌಢಶಾಲಾ ಶಿಕ್ಷಕಿ
ಸರ್ಕಾರಿ ಪ್ರೌಢ ಶಾಲೆ, ಶಾಪೂರು
ಕೋಲಾರ ತಾಲ್ಲೂಕು

Thursday, June 11, 2020

ಅಪ್ಪನೆಂಬ ಆಕಾಶ

ಪುಟ್ಟ ಹೆಜ್ಜೆಗೆ ಹೆಜ್ಜೆ ಜೋಡಿಸುತ್ತಾ
ಹಿಡಿದ ಕೊಡೆಯು ಹನಿಯ ಸುರಿಸುತಿರೆ
ನಾಗರಿಕತೆಯ ಮರೀಚಿಕೆಯಲ್ಲಿ
ಕಳೆದುಹೋದ ಮನಸ್ಸು
ಮರಳುತ್ತಿದೆ ಜ್ಞಾಪಕ ಚಿತ್ರ ಶಾಲೆಗೆ
ಅಂದು ನನ್ನಪ್ಪನ ಕೊಡೆಯಲ್ಲಿ
ಇಣುಕುತ್ತಿದ್ದ ನೆತ್ತಿ ಮೇಲಿನ ನೇಸರ
ಇಂದು ನಾನು ಹಿಡಿದ ಛತ್ರಿಯಲಿ
ಬಣ್ಣಗಳ ಚಿತ್ತಾರ
ಕೆತ್ತುತ್ತಿವೆ ಕನಸುಗಳ ರಂಗೋಲಿ
ನನ್ನಪ್ಪನ ನೇಗಿಲ ರೇಖೆಗಳಲ್ಲಿ
ಅವನ ಅಂಗೈ ರೇಖೆಗಳು ಮಟಮಾಯ
ತೇಪೆ ಹಾಕಿದ ಕೊಡೆ ಹಿಡಿದ ನನ್ನಪ್ಪ
ಗೋವರ್ಧನಗಿರಿಯೆಂಬ ನನ್ನಮ್ಮನ
ಮುಂದೆ ಮಂಕಾಗಿಬಿಟ್ಟ
ಹೇಳ ಹೆಸರಿಲ್ಲದೆ ಉಳಿದು ಬಿಟ್ಟ
ನನ್ನಪ್ಪ ನಯ ನಾಜೂಕಿನ ಮನುಷ್ಯನಲ್ಲ
ಭೂತಾಯ ಧೂಳನ್ನು ವಿಭೂತಿ ಎಂದವನು
ಬೆವರಲ್ಲಿಯೇ ಸ್ನಾನವನು ಮಾಡಿದವನು
ತಪ್ಪು ಮಾಡಿ ಬೆಪ್ಪನಾಗಬೇಡೆಂದು
ನನ್ನ ಜೀವನ ಒಪ್ಪ ಮಾಡುವುದರಲ್ಲಿಯೇ
ಗಾಣದೆತ್ತಿನ ಹಾಗೆ ಸವೆದವನು
ಎಲೆಮರೆಯ ಕಾಯಂತೆ ಉಳಿದವನು
ನನ್ನಪ್ಪ ತನಗಾಗಿ ಬದುಕಿದ್ದೇ ಇಲ್ಲ
ನಮಗಾಗಿ ದುಡಿದಿದ್ದೇ ಎಲ್ಲಾ
ಅಮ್ಮನೆಂಬ ಬಂಧದಲ್ಲಿ ಗೌಣವಾಗಿಬಿಟ್ಟ
ಆದರೂ ಕನಸುಗಳ ಕೋಟೆ ಕಟ್ಟಿಕೊಂಡ
ಅದು ಗೆದ್ದಲು ಕಟ್ಟಿದ ಹುತ್ತವೆಂದು
ನನ್ನಪ್ಪನಿಗೆ ತಿಳಿಯಲಿಲ್ಲವೇನೋ
ಕಾರಣ ನನ್ನಪ್ಪನ ಆದರ್ಶಗಳು
ಅಜ್ಜ ಹಾಕಿದ ಆಲದ ಮರ
ಆಲದ ಮರದಲ್ಲಿ ಆಸರೆ ಪಡೆದ ಹಕ್ಕಿಗಳೆಷ್ಟೊ
ಕೊಂಬೆ ಕೊಂಬೆಗೆ ಜೋತುಬಿದ್ದ ಗೂಡುಗಳೆಷ್ಟೊ
ರೆಕ್ಕೆ ಬಲಿತ ಹಕ್ಕಿಗಳು ಎತ್ತೆತ್ತಲೋ ಹಾರಿಹೋದವು
ನನ್ನಪ್ಪನ ಕನಸುಗಳು ನಗರಕ್ಕೆ ಹಾರಿದವು
ನನ್ನ ಕನಸಿನ ಹಕ್ಕಿಯು
ಇನ್ನು ವಿದೇಶಕ್ಕೆ ಹಾರದೆ ಇದ್ದೀತೆ
ಅಪ್ಪ ಈಗ ಆಕಾಶ ಮಾತ್ರ
ನಿತ್ಯ ಮಳೆಯಲಿ ತೋಯುತಿಹನು
ಕೊಡೆಯ ಅಂಚಲಿ ಹನಿಯ ಸುರಿಸುತಿಹನು
ತನ್ನ ಕಣ್ಣ ಹನಿಯ ಕಾಣದಿರಲೆಂದು
ನಿತ್ಯ ಮಳೆಯ ಕೋರುತಿಹನು
ಅಪ್ಪನಿಡಿದ ಕೊಡೆಯು ಸಂಬಂಧಗಳ
ಕೊಂಡಿಯ ಬೆಸೆಯುತಿದೆ
ಭರವಸೆಯ ಬಂಡಿಯ ನಡೆಸುತ್ತಿದೆ


ಶ್ರೀಮತಿ ಪದ್ಮಾವತಿ ಸಿ.
ಸಹಾಯಕ ಪ್ರೌಢಶಾಲಾ ಶಿಕ್ಷಕಿ
ಸರ್ಕಾರಿ ಪ್ರೌಢ ಶಾಲೆ, ಶಾಪೂರು
ಕೋಲಾರ ತಾಲ್ಲೂಕು

Friday, May 1, 2020

ಬಿಸಿಲು ಬರಲು ಬಿಡಿ

ನಮಗೆ ಗೊತ್ತು
ತುಂಬಾ ಸಿಹಿ, ಸುಂದರ
ಈ ಭೂಮಿ
ಬೆಲ್ಲದ ಮುದ್ದೆಯಂತೆ

ವಿನಾಶಕಾರಿ ಗಾಳಿ ಬೀಸುತ್ತಿದೆ
ಇದರ ಮೇಲೆ
ಅಂತರ ಕಾಯ್ದು ಕುಳಿತುಕೊಳ್ಳಿ
ತುಸು ಹೊತ್ತು
ಇಲ್ಲದಿದ್ದರೆ
ವೈರಸ್ ತಗುಲೀತು ಇದಕ್ಕೆ
ಬಿಸಿಲು ಬರಲು ಬಿಡಿ
ಸೂರ್ಯ ಉದಯಿಸುತ್ತಾನೆ
ಸೋಸಿ ತೆಗೆಯುತ್ತಾನೆ
ತನ್ನ ಕಿರಣಗಳಿಂದ
ವಿನಾಶಕಾರಿ ಗಾಳಿಯನ್ನ

ಇರುವೆಗಳ ಹಾಗೆ ಜಂಗುಳಿ
ಸೃಷ್ಟಿಸಬೇಡಿ
ಒಬ್ಬರಿಂದ ಒಬ್ಬರು ದೂರ ನಿಲ್ಲಿ
ಬಿಸಿಲು ಬರಲು ಬಿಡಿ
 *****
ಉರ್ದು ಮೂಲ: ಗುಲ್‌ಜ಼ಾರ್
ಕನ್ನಡ ಅನುವಾದ: ರಮೇಶ್ ಹೆಚ್. ಟಿ.
******
धूप आने दो
बहुत मीठी है, खूबसूरत है
ज़मीं, हम जानते हैं
गुड़ की ढेली है
बड़ी मोहलिक हवा उतरी है
इस पर
इसे घुन ना लगे
हट कर, ज़रासी देर ठहरो
धूप आने दो
उठेगा आफ़ताब और छानेगा किरनों से
इस मोहलिक हवा को
मकोड़ों की तरह ना भीड़ ना करना
अलग होकर खड़े हो जाओ
और धूप आने दो