Monday, June 15, 2020

ತರುಣಿ

ಜೀವನ ಪೂರ್ತಿ ಕತ್ತೆಯಂತೆ ದುಡಿದ
ಗಂಡು ದಿಕ್ಕಿಲ್ಲದ ಹೆತ್ತವಳಿಗೆ
ಗಂಡು ಮಗುವಾಗಿ ಉಳಿಯುವೆನೆಂದಳು ತರುಣಿ
ಸಾಕು ನಡೆ ನೀ ಹೆಣ್ಣೆಂದಳು
ಅತ್ತೆಯಲಿ ಅಮ್ಮನನು ಕಾಣುವ ತವಕ
ಲೋಕದಲಿ ಅತ್ತೆ ಅಮ್ಮನಾಗುವುದು೦ಟೇ ?
ನಾನೂ ಹಿಂದೊಮ್ಮೆ ಸೊಸೆಯಲ್ಲವೇ ?
ಅತ್ತೆಯ ಸೇಡಿನುತ್ತರದಲಿ ತತ್ತರಿಸಿದಳು ತರುಣಿ
ಪತಿಯೇ ಪರದೈವ ತನಗಿನ್ನಾರು ಸರಿಸಾಟಿ
ಸ್ವರ್ಗಕ್ಕೆ ಮೂರೇ ಗೇಣು
ಭ್ರಮೆಯಲ್ಲಿ ಉಲಿದಳು ತರುಣಿ
ಸವತಿ ಮತ್ಸರ ಸಹಿಸಿಕೋ ಎಂದವನ ಬರಸಿಡಿಲ
ಬೇಗೆಯಲಿ ಕಾವು ನೋವುಗಳ ನುಂಗಿ
ಸಂಸಾರದ ನೊಗ ಹೊತ್ತಳು ತರುಣಿ
ಮಾಂಸ ಮುದ್ದೆಗಳ ತಮ್ಮವೇ ಪ್ರತಿರೂಪ
ಇಂದು ಎದೆಯುದ್ದ ಬೆಳೆದ ಅವರ ಉತ್ತರವೂ ಎತ್ತರ
ಹೆಣ್ಣಲ್ಲವೇ ನೀನು ಅದು ನಿನ್ನ ಕರ್ತವ್ಯ
ನಕ್ಕಳು ....ಮುನಿಸಲಿಲ್ಲ ತರುಣಿ
ಮಗಳು - ಮಡದಿ ಸೊಸೆ - ಸೋದರಿ
ಅಮ್ಮ - ಅಕ್ಕ ಎಲ್ಲರಲಿ ತನ್ನ ಪಾತ್ರವ ಅರಿತಳು ತರುಣಿ
ತನ್ನರಿವು ಯಾರಿಗೂ ಇಲ್ಲ ತಾನು ಅನಿವಾರ್ಯ ಮಾತ್ರ
ಕಷ್ಟಗಳಿಗೆ ಕಲ್ಲಾಗಿ ಕರಗಿದಳು ತರುಣಿ
ಇಷ್ಟಗಳಿಗೆ ಬೇಲಿ ಹಾಕಿಕೊಂಡಳು ತರುಣಿ
ಇಂದವಳು ಅಬಲೆಯಲ್ಲ ಮಿಗಿಲಾಗಿ ತರುಣಿಯೂ ಅಲ್ಲ
ಮೌನದಲ್ಲಿ ಎಲ್ಲವನೂ ನುಂಗಿಕೊಂಡ
ಕ್ಷಮಯಾ ಧರಿತ್ರಿ ...

ಶ್ರೀಮತಿ ಪದ್ಮಾವತಿ ಸಿ.
ಸಹಾಯಕ ಪ್ರೌಢಶಾಲಾ ಶಿಕ್ಷಕಿ
ಸರ್ಕಾರಿ ಪ್ರೌಢ ಶಾಲೆ, ಶಾಪೂರು
ಕೋಲಾರ ತಾಲ್ಲೂಕು

No comments: