Saturday, May 17, 2014

ಕಟ್ಟುವೆವು ನಾವು ಹೊಸ ನಾಡೊಂದನು

ಕಟ್ಟುವೆವು ನಾವು ಹೊಸ ನಾಡೊಂದನು
ರಸದ ಬೀಡೊಂದನು

ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ
ಹರೆಯದೀ ಮಾಂತ್ರಿಕನ ಮಾಟ ಮುಸುಳುವ ಮುನ್ನ
ಉತ್ಸಾಹಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ಧ ಸಾಗರವು ಬತ್ತಿ ಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು

ನಮ್ಮೆದೆಯ ಕನಸುಗಳೇ ಕಾಮಧೇನು
ಆದಾವು ಕರೆದಾವು ವಾ೦ಛಿತವನು
ಕರೆವ ಕೈಗಿಹುದಿದೋ ಕನಸುಗಳ ಹರಕೆ
ಗುರಿ ತಪ್ಪದೊಮ್ಮುಖದ ಬಯಕೆ ಬೆಂಬಲಕೆ

ಜಾತಿ ಮತ ಬೇದಗಳ ಕಂದಕವು ಸುತ್ತಲೂ
ದುರ್ಭೇದ್ಯವೆನೆ ಕೋಟೆಕೊತ್ತಲಗಳು
ರೂಢಿರಾಕ್ಷಸನರಸುಗೈಯುವನು, ತೋಳ್ತಟ್ಟಿ
ತೊಡೆತಟ್ಟಿ ಕರೆಯುವನು ಸಂಗ್ರಾಮಕೆ

ನಾವು ಹಿಂದೆಗೆವೆವೇ? ವೀರ ತರುಣರು ನಾವು
ಒಂದೆ ನೆಗೆತಕೆ ನೆಗೆವೆವೋ ಕಂದಕವನು
ಕುಟ್ಟಿ ಪುಡಿಮಾಡುವೆವು ಕೋಟೆಗಳನು
ಎದೆಯ ಮೆಟ್ಟಿ ಮುರಿಯುವೆವಸುರರರಟ್ಟೆಗಳನು
ಕೋಟೆಗೋಡೆಗೆ  ನಮ್ಮ  ಹೆಣಗಳೇ ಮೆಟ್ಟಿಲು
ನಮ್ಮ ಸಾವೇ ನೋವೆ ಹೊಸ ನಾಡ ತೊಟ್ಟಿಲು  ಆದಾವು
ಅಂಜುವೆದೆ ನಮ್ಮದಲ್ಲ
ಸೋಲುಬಗೆ ವೀರನಿಗೆ ಸಲ್ಲ ಹೊಲ್ಲ

ಎಡರುಗಳ ಕಡಲುಗಳನೀಸಿ ಬರುವೆವು
ಘೋರ ನೈರಾಶ್ಯದಗ್ನಿಮುಖದಲ್ಲು ಕೂಡ
ಹೊಕ್ಕು ಹೊರಡುವೆವೆಲ್ಲ ತೊಡಕುಗಳ ಒಡಕುಗಳ
ಬಿಡಿಸಿ ಇಡಿಗೊಳಿಸಿ ಕಟ್ಟುವೆವು ನಾಡ
ಇಂದು ಬಾಳಿದು ಕೂಳ ಕಾಳಗವು

ಹೊಟ್ಟೆಯೇ ಕೇಂದ್ರವಾಗಿದೆ ನರನ ಜೀವಿತಕ್ಕೆ
ಅನ್ನದನ್ಯಾಯದಾವಾಗ್ನಿಯಲಿ ಕರಗುತಿದೆ
ನರತೆ, ಸಂಸ್ಕೃತಿ, ಪ್ರೀತಿ, ದಿವದ ಬಯಕೆ

ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ
ಸಮಬಗೆಯ ಸಮಸುಖದ ಸಮದುಃಖದ
ಸಾಮರಸ್ಯದ ಸಾಮಗಾನಲಹರಿಯ ಮೇಲೆ
ತೇಲಿ ಬರಲಿದೆ ನೋಡು, ನಮ್ಮ ನಾಡು

ಇಲ್ಲೇ ಈ ಎಡೆಯಲ್ಲೆ ನಮ್ಮ ಮುಂಗಡೆಯಲ್ಲೆ
ಅಳಲುಗಳ ಹೆಡೆಯಲ್ಲೆ
ಸೋಲುಗಳ ತೊಡೆಯಲ್ಲೆ
ಅರಳೀತು ನಮ್ಮ ನಾಡು
ನಮ್ಮೆದೆಯ ತುಂಬಿರುವ ಅದರ ನರುಗಂಪು ಹೊರ
ಹೊಮ್ಮುವುದ ಕಾದು ನೋಡು

ಉತ್ಸಾಹ ಉದ್ವೇಗ ಉದ್ರೇಕಗಳ ವೀರ
ಯುವಜನದ ನಾಡ ಗುಡಿಯು
ಅದರ ಹಾರಾಟಕ್ಕೆ ಬಾನೆ ಗಡಿಯು
ಬರಲು ಬಿಡೆವೆಂದಿಗೂ ಅದಕೆ ತಡೆಯು
ತಡೆವವರು ಬನ್ನಿರೋ ಹೊಡೆವವರು ಬನ್ನಿರೋ
ಕೆಡೆನುಡಿವ ಕೆಡೆಬಗೆವ ಕೆಡುಕು ಜನರೇ ಬನ್ನಿ
ಕೊಟ್ಟೆವಿದೋ ವೀಳೆಯವನು
ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ
ಕಟ್ಟುವೆವು ನಾವು ಹೊಸ ನಾಡೊಂದನು
ಸುಖದ ಬೀಡೊಂದನು

ಎಂ. ಗೋಪಾಲಕೃಷ್ಣ ಆಡಿಗ
ಈ ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

No comments: