Sunday, September 29, 2013

ಅಳುವ ಕಡಲೊಳು ತೇಲಿ ಬರುತಲಿದೆ

ಅಳುವ ಕಡಲೊಳು ತೇಲಿ ಬರುತಲಿದೆ
ನಗೆಯ ಹಾಯಿ ದೋಣಿ
ಬಾಳ ಗಂಗೆಯ ಮಹಾ ಪೂರದೊಳು
ಸಾವಿನೊಂದು ವೇಣಿ

ನೆರೆತಿದೆ ಬೆರೆತಿದೆ ಕುಣಿವ ಮೊರೆವ
ತೆರೆ ತೆರೆಗಳೋಳಿಯಲ್ಲಿ
ಜನನ ಮರಣಗಳ ಉಬ್ಬುತಗ್ಗು ಹೊರ
ಳುರುಳುವಾಟವಲ್ಲಿ

ಆಶೆ ಬೂದಿ ತಳದಲ್ಲು ಕೆರಳುತಿವೆ
ಕಡಿಗಳೆನಿತೋ ಮರಳಿ
ಮುರಿದು ಬಿದ್ದ ಮನ ಮರದ ಕೊರಳು
ಹೂವು ಅರಳಿ ಅರಳಿ

ಆಶೆಯೆಂಬ ತಳವೊಡೆದ ದೋಣಿಯಲಿ
ದೂರತೀರಯಾನ
ಯಾರ ಲೀಲೆಗೋ ಯಾರೋ ಏನೋ ಗುರಿ
ಯಿರದೆ ಬಿಟ್ಟ ಬಾಣ

ಇದು ಬಾಳು ನೋಡು ಇದ ತಿಳಿದೆನೆಂದರೂ
 ತಿಳಿದ ಧೀರನಿಲ್ಲಿ
ಹಲವುತನದ ಮೈ ಮರೆಸುವಾತವಿದು
ನಿಜವು ತೋರದಲ್ಲಿ

ಅರೆ ಬೆಳಕಿನಲ್ಲಿ ಬಾಳಲ್ಲಿ ಸುತ್ತಿ ನಾ
ವೇಕೊ ಮಲೆತು ಕಲೆತು
ಕೊನೆಗೆ ಕರಗುವೆವು ಮರಣ ತೀರ ಘನ
ತಿಮಿರದಲ್ಲಿ ಬೆರೆತು

ಎಂ. ಗೋಪಾಲಕೃಷ್ಣ ಅಡಿಗ

"ಕನ್ನಡ ಸಾಹಿತ್ಯ ಲೋಕ" ಬ್ಲಾಗಿಗೆ ಸ್ವಾಗತ ...

ಆತ್ಮೀಯ ಓದುಗರೆ,

ಕನ್ನಡದ ಕತೆಗಳು, ಕವನಗಳು, ಭಾವಗೀತೆಗಳು, ಚುಟುಕಗಳು, ಹನಿಗವನಗಳು, ಪ್ರಸಿದ್ದ ಸಾಹಿತಿಗಳು ಮತ್ತು ಕವಿಗಳ ಪರಿಚಯ ಮುಂತಾದವುಗಳನ್ನು ಒಂದೆಡೆ ದೊರಕುವಂತೆ ಮಾಡುವುದು ಈ ಬ್ಲಾಗಿನ ಉದ್ಧೇಶ. ಇಲ್ಲಿ ಪೋಸ್ಟ್ ಮಾಡಲಾಗುವ ಎಲ್ಲಾ ಕವಿತೆಗಳು ಮತ್ತು ಭಾವಗೀತೆಗಳನ್ನು ಓದುಗರು ಕೇಳಲು ಅನುಕೂಲವಾಗುವಂತೆ ’ಲಿಂಕ್’ ನೀಡಲು ಸಾಧ್ಯವಾದಷ್ಟೂ ಪ್ರಯತ್ನಿಸುತ್ತೇನೆ. ಓದುಗರ ಅಭಿಪ್ರಾಯಗಳು, ಅನಿಸಿಕೆಗಳು ಮತ್ತು ಸಲಹೆಗಳಿಗೆ ಸ್ವಾಗತ. ನನ್ನ ಇ-ಮೇಲ್ ವಿಳಾಸ: ht_ramesh@yahoo.com

ರಮೇಶ್ ಹೆಚ್.ಟಿ.
ಬೆಂಗಳೂರು-560 100
ದಿನಾಂಕ: 29-09-2013