Saturday, August 18, 2018


ಡಾ|| ಜಿ.ಎಸ್. ಶಿವರುದ್ರಪ್ಪ

ಕನ್ನಡದ ರಾಷ್ಟ್ರಕವಿಗಳಲ್ಲಿ ಒಬ್ಬರಾಗಿ ವಿಮರ್ಶಕರು ಕವಿಗಳೆಂದು ಪ್ರಸಿದ್ಧರಾದ ಡಾ.ಜಿ.ಎಸ್. ಶಿವರುದ್ರಪ್ಪನವರು ಗುಗ್ಗುರಿ ಶಾಂತವೀರಪ್ಪ ಮತ್ತು ವೀರಮ್ಮನವರ ಪುತ್ರರಾಗಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ --೧೯೨೬ರಲ್ಲಿ ಜನಿಸಿದರು. ಶಾಲಾ ಉಪಾಧ್ಯಾಯರ ಮಗನಾದ ಜಿ.ಎಸ್.ಎಸ್ (ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ) ಅವರು ಎಸ್.ಎಸ್.ಎಲ್.ಸಿ ಮುಗಿಯುತ್ತಿದ್ದಂತೆಯೇ ಬಡತನದಿಂದಾಗಿ ಸರಕಾರಿ ನೌಕರಿ ಹಿಡಿದು ದುಡಿಯಲಾರಂಭಿಸಿದರು. ಗುಬ್ಬಿ ತಾಲ್ಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ಸೇರಿದರು. ಆದರೆ ಓದಲೇಬೇಕೆಂಬ ಅದಮ್ಯ ಆಸೆಯಿಂದ ಕೆಲಸಕ್ಕೆ ವಿದಾಯ ಹೇಳಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದನ್ನು ಮುಂದುವರೆಸಿ ೧೯೪೯ರಲ್ಲಿ ಬಿ.. ಪದವಿಯನ್ನು, ೧೯೫೩ರಲ್ಲಿ ಸ್ವರ್ಣಪದಕದೊಂದಿಗೆ ಎಂ.. ಪದವಿಯನ್ನು ಪಡೆದರು. ಮೈಸೂರಿನ ಯುವರಾಜ ಕಾಲೇಜು, ಮಹಾರಾಜ ಕಾಲೇಜು, ಮಾನಸ ಗಂಗೋತ್ರಿಯಲ್ಲಿ ಅಧ್ಯಾಪಕರಾಗಿ ೧೯೪೯ರಿಂದ ೧೯೬೩ವರೆಗೆ ಸೇವೆ ಸಲ್ಲಿಸಿದ ಇವರು ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ೧೯೬೩ರಿಂದ ೬೬ವರೆಗೆ ದುಡಿದರು. ೧೯೬೬ರಿಂದ ೧೯೮೬ವರೆಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು.

ಇವರ ಸಾಹಿತ್ಯ ಸೇವೆಗೆ ಹತ್ತಾರು ಪುರಸ್ಕಾರ ಪ್ರಶಸ್ತಿಗಳು ದೊರೆತಿವೆ. ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ (೧೯೭೪), ಕರ್ನಾಟಕ ರಾಜ್ಯ ಸರಕಾರದ ಪುರಸ್ಕಾರ (೧೯೮೨), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೮೪), ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ (೧೯೮೪), ಮದರಾಸ್ ಕನ್ನಡಿಗರ ಸಮ್ಮೇಳನದ ಅಧ್ಯಕ್ಷತೆ (೧೯೮೬), ೧೯೯೨ರಲ್ಲಿ ದಾವಣಗೆರೆಯಲ್ಲಿ ನಡೆದ ೬೧ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆ (೧೯೮೭), ಪಂಪ ಪ್ರಶಸ್ತಿ (೧೯೯೮), ೨೦೦೦ರಲ್ಲಿ ರಾಷ್ಟ್ರಕವಿ ಗೌರವ ಕುವೆಂಪು ವಿಶ್ವವಿದ್ಯಾಲಯ(೨೦೦೬) ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್ (೨೦೦೩) ದೊರೆಯಿತು.

ಜಿ.ಎಸ್. ಶಿವರುದ್ರಪ್ಪನವರ ಮುಖ್ಯವಾದ ಕೃತಿಗಳು:

ಬಹುಮುಖ ಪ್ರತಿಭೆಯ ಸಮನ್ವಯ ಕವಿ ಎನಿಸಿದ ಜಿ.ಎಸ್.ಎಸ್ ಅವರು ಶ್ರೇಷ್ಠ ಅಧ್ಯಾಪಕರು, ವಿಮರ್ಶಕರು, ಆಡಳಿತಗಾರರು, ಸಂಘಟಕರು ಆಗಿರುವಂತೆಯೇ ಶ್ರೇಷ್ಠ ಬರಹಗಾರರೂ ಆಗಿದ್ದರು. ಅವರು ಬರೆದ ಕೆಲವು ಕೃತಿಗಳನ್ನು ಇಲ್ಲಿ ಉಲ್ಲೇಖಿಸಿದೆ :

ಸಂಪಾದನೆ : ೧೯೭೧ರಿಂದ ಹೊರಬಂದ ಸಾಹಿತ್ಯ ವಾರ್ಷಿಕಗಳು, ಶಬರವಿಳಾಸ ಸಂಗ್ರಹ (ಬಿ.ಎನ್. ಶಾಸ್ತ್ರಿ ಜತೆ), ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ ಸಂಪುಟಗಳು, ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ೧೦ ಸಂಪುಟಗಳು, ಕೆ.ಎಸ್. ಸಂಭಾವನಾ ಗ್ರಂಥ ಚಂದನ.

ವಿಮರ್ಶಾ ಕೃತಿಗಳು : ವಿಮರ್ಶೆಯ ಪೂರ್ವಪಶ್ಚಿಮ (೧೯೬೧), ಸೌಂದರ್ಯ ತಿಬಿಂಬ (೧೯೬೯), ಕನ್ನಡ ಕವಿಗಳ ಕಾವ್ಯ ಕಲ್ಪನೆ (೧೯೮೯) ಇತ್ಯಾದಿ.

ಪ್ರವಾಸ ಗ್ರಂಥಗಳು :ಮಾಸ್ಕೊದಲ್ಲಿ ೨೨ ದಿನ (೧೯೭೩), ಗಂಗೆಯ ಶಿಖರಗಳಲ್ಲಿ, ಅಮೇರಿಕದಲ್ಲಿ ಕನ್ನಡಿಗ, ಇಂಗ್ಲೆಂಡಿನಲ್ಲಿ ಚತುರ್ಮಾಸ.

ಕವನ ಸಂಗ್ರಹಗಳು : ಸಾಮಗಾನ (೧೯೫೧), ಚೆಲುವು-ಒಲವು (೧೯೫೩), ದೇವಶಿಲ್ಪ (೧೯೫೬), ದೀಪದ ಹೆಜ್ಜೆ (೧೯೫೯), ಕಾರ್ತೀಕ (೧೯೬೧), ತೀರ್ಥವಾಣಿ (೧೯೬0), ಅನಾವರಣ (೧೯೬೩), ನನ್ನ ನಿನ್ನ ನಡುವೆ (೧೯೭೩), ವ್ಯಕ್ತ-ಮಧ್ಯ (೧೯೯೯) ಇತ್ಯಾದಿ.

ಜಿ.ಎಸ್. ಶಿವರುದ್ರಪ್ಪನವರು ಬೆಂಗಳೂರಿನಲ್ಲಿ ೨೩-೧೨-೨೦೧೩ರಲ್ಲಿ ದೈವಾಧೀನರಾದರು.


ಕುವೆಂಪು (ಕುಪ್ಪಳ್ಳಿ ವೆಂಕಟಪ್ಪಗೌಡ ಪುಟ್ಟಪ್ಪ)

ಕನ್ನಡದ ಮಹಾಕವಿ ಕುವೆಂಪು (ಕುಪ್ಪಳ್ಳಿ ವೆಂಕಟಪ್ಪಗೌಡ ಪುಟ್ಟಪ್ಪ) ವೆಂಕಟಪ್ಪಗೌಡ ಮತ್ತು ಸೀತಮ್ಮ ದಂಪತಿಗಳಿಗೆ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ ೨೯-೧೨-೧೯೦೪ರಲ್ಲಿ ಜನಿಸಿದರು. ೧೯೧೬ರಲ್ಲಿ ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ೧೯೨೯ರಲ್ಲಿ ಎಂ.. ಪದವಿ ಗಳಿಸಿದರು.

೧೯೨೯ರಲ್ಲಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ಪ್ರಿನ್ಸಿಪಾಲರಾಗಿ ೧೯೫೬ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿ ೧೯೬೦ರಲ್ಲಿ ನಿವೃತ್ತರಾದರು.

ಕುವೆಂಪು ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದರು.  ಅವರು ಕನ್ನಡಕ್ಕೆ ನೀಡಿದ ಕೊಡುಗೆಗಳಿಗಾಗಿ ಕನ್ನಡದ ಸಾಹಿತ್ಯಗಳನ್ನು ರಚಿಸಿದ್ದಕ್ಕಾಗಿ ಅವರಿಗೆ ಅನೇಕ ಮನ್ನಣೆ ಪ್ರಶಸ್ತಿಗಳು ದೊರೆತವು. ಮೈಸೂರಿನಲ್ಲಿ ನಡೆದ ೩೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತಾಧ್ಯಕ್ಷರಾದರು. ಧಾರವಾಡದಲ್ಲಿ ೧೯೫೭ರಲ್ಲಿ ನಡೆದ ೩೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ರಾಷ್ಟ್ರಪತಿಗಳಿಂದ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದರು. ರಾಜ್ಯಸರ್ಕಾರದಿಂದ ರಾಷ್ಟ್ರಕವಿ ಪ್ರಶಸ್ತಿಯನ್ನೂ, ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನೂ ಪಡೆದರು.

ಬೆಂಗಳೂರು ವಿಶ್ವವಿದ್ಯಾನಿಲದಿಂದ ೧೯೬೯ರಲ್ಲಿ ಗೌರವ ಡಿ.ಲಿಟ್. ಲಭಿಸಿತು. ಪಂಪ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ರಾಷ್ಟ್ರಕವಿ ಪ್ರಶಸ್ತಿಗಳು ಕುವೆಂಪು ಅವರ ದೈತ್ಯಸಾಹಿತ್ಯ ಪ್ರತಿಭೆಗೆ ಸಿಕ್ಕ ಪುರಸ್ಕಾರಗಳಾಗಿವೆ.

೧೯೬೮ರಲ್ಲಿ ಶ್ರೀರಾಮಾಯಣ ದರ್ಶನಂ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಇದು ಕನ್ನಡದಲ್ಲಿ ಮೊದಲ ಜ್ಞಾನಪೀಠ ಪ್ರಶಸ್ತಿ ಆಗಿದೆ. ೧೯೯೫ರಲ್ಲಿ ನಾಡೋಜ ಪ್ರಶಸ್ತಿಯನ್ನು ಅವರಿಗೆ ಮರಣೋತ್ತರ ನೀಡಲಾಯಿತು. ೧೯೮೫ರಲ್ಲಿ ಮೈಸೂರಿನಲ್ಲಿ ನಡೆದ ಮೊದಲನೇ ವಿಶ್ವಕನ್ನಡ ಸಮ್ಮೇಳನವನ್ನು ಉದ್ಘಾಟಿಸಿದರು.

ಅಪಾರ ಅನುಪಮ ಸಾಹಿತ್ಯ ರಚನೆ ಮಾಡಿದ್ದ ಕುವೆಂಪು ಅವರು, ಕವನ ಸಂಕಲನ, ಖಂಡಕಾವ್ಯ, ಮಹಾಕಾವ್ಯಗಳನ್ನು ರಚಿಸಿದರು. ಅನುವಾದಿತ ಮತ್ತು ಸ್ವತಂತ್ರ ನಾಟಕಗಳನ್ನು ಬರೆದರು. ಕಾದಂಬರಿ, ಕಥೆ, ಗದ್ಯಚಿತ್ರ. ಆತ್ಮಚರಿತ್ರೆ, ಭಾಷಾಂತರ ಗ್ರಂಥಗಳನ್ನು ರಚಿಸಿದರು. ಮಾಸ್ತಿ ಜತೆ  ಕರ್ಣಾಟಕ ಭಾರತ ಕಥಾಮಂಜರಿಯನ್ನು ಸಂಪಾದಿಸಿದ್ದಾರೆ.

ಅವರ ಕೆಲವು ಪ್ರಸಿದ್ಧ ಕೃತಿಗಳು ಇವು:

ಶ್ರೀರಾಮಯಣ ದರ್ಶನಂ, ಕಬ್ಬಿಗನ ಕೈಬುಟ್ಟಿ, ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ, ವಿಚಾರ ಕ್ರಾಂತಿಗೆ ಆಹ್ವಾನ, ಬೆರಳ್ಗೆ ಕೊರಳ್, ಶೂದ್ರತಪಸ್ವಿ, ಸ್ವಾಮಿ ವಿವೇಕಾನಂದ, ಚಿತ್ರಾಂಗದಾ, ಪಾಂಚಜನ್ಯ, ಬೊಮ್ಮನಹಳ್ಳ್ಳಿ ಕಿಂದರಿಜೋಗಿ, ಕೊಳಲು ಇತ್ಯಾದಿ.

ರಾಷ್ಟ್ರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾಗಿದ್ದ ಕುವೆಂಪು ಅವರು ೧೧-೧೧-೧೯೯೪ರಲ್ಲಿ ಮೈಸೂರಿನಲ್ಲಿ ನಿಧನರಾದರು.

Friday, August 17, 2018

ಹೊಂದಾಣಿಕೆಯ ಪಾಠ


ಹೆಂಗಸರು ಹೊಂದಾಣಿಕೆಯ ಪಾಠ
ಚಪಾತಿಯಿಂದಲೂ ಕಲಿಯುತ್ತಾರೆ,
ಹಿಟ್ಟು ಕಡಿಮೆ ಇದ್ದಾಗ ಕೂಡ
ಸುತ್ತಳತೆ ಕಡಿಮೆಯಾಗದಂತೆ ಲಟ್ಟಿಸಬಹುದು

ಭಾರತಿ ಬಿ. ವಿ.

Thursday, August 16, 2018

ಒಮ್ಮೆ ಕರಿದ ಎಣ್ಣೆಯಲ್ಲಿ ...


ಒಮ್ಮೆ ಕರಿದ ಎಣ್ಣೆಯಲ್ಲಿ ಮತ್ತೆ ಕರಿಯಬಾರದು,
ಹೃದಯಕ್ಕೆ ಹಾನಿಕರ ಎನ್ನುತ್ತಾರೆ
ಸಂಬಂಧಗಳಿಗೇ ಎರಡನೇ ಅವಕಾಶ ಕೊಡುತ್ತೇವಂತೆ,
ಇನ್ನು ಎಣ್ಣೆಯೇನು ಪಾಪ ಮಾಡಿತ್ತು!

ಭಾರತಿ ಬಿ. ವಿ.

Saturday, June 16, 2018

ನನಗೆ ನನ್ನ ವಯಸ್ಸನ್ನು ನಿಮ್ಮಿಂದ ಮುಚ್ಚಿಡಬೇಕೆಂದೇನೂ ಇಲ್ಲ ...

ನನಗೆ ನನ್ನ ವಯಸ್ಸನ್ನು
ನಿಮ್ಮಿಂದ ಮುಚ್ಚಿಡಬೇಕೆಂದೇನೂ ಇಲ್ಲ,‌
ಹಾಗೆ ಮುಚ್ಚಿಟ್ಟರೂ,
ಪ್ರತಿ ನೆರಿಗೆಯ ಲೆಕ್ಕಾಚಾರ ಮಾಡಿ
ನನ್ನ ವಯಸ್ಸು ಅಂದಾಜಿಸುವ ಛಾತಿ ನಿಮಗಿದೆ 
ಎನ್ನುವುದು ನನಗೆ ಗೊತ್ತು!
ಆದರೆ ನನ್ನ ವಯಸ್ಸು ಹೇಳಿದೊಡನೆ
ವಯಸ್ಸಿನಲ್ಲಿ
ಏನು ಮಾಡಬೇಕು
ಏನು ಮಾಡಬಾರದು
ಎಂಥ ಬಟ್ಟೆ ತೊಡಬೇಕು
ಯಾರೊಡನೆ ಹೇಗೆ ವರ್ತಿಸಬೇಕು
ಎಲ್ಲಿಗೆ ಹೋಗಬೇಕು
ದುಃಖವಾದಾಗ ಎಷ್ಟು ಅಳಬೇಕು
ಖುಷಿಯಾದಾಗ ಎಷ್ಟು ಮಾತ್ರ ತುಟಿಯಗಲಿಸಬೇಕು
ಗಹಗಹಿಸಿ ನಗುವುದದೆಷ್ಟು ಅಸಭ್ಯ
ಎತ್ತ ಕಡೆ ಸುಳಿಯಬಾರದು
ಯಾರೊಡನೆ ಬೆರೆಯಬಾರದು
ಪ್ರೀತಿಯಲ್ಲಿ ಬೀಳಬಾರದು
ರಸ್ತೆಯಲ್ಲಿ ನಡೆವಾಗ ಸೀಬೆಕಾಯಿ ತಿನ್ನಬಾರದು
ಫುಟ್ಪಾತ್ ಮೇಲೆ ಕುಳಿತು ಕಾಫಿ ಹೀರಬಾರದು 
ಇಂಥದ್ದನ್ನು ಬರೆಯಬಾರದು 
ದೇವರ ಧ್ಯಾನ ಮಾಡಬೇಕು
ಹಲ್ಲು ಕಿಸಿಯುತ್ತ ಸೆಲ್ಫಿ ತೆಗೆಯಬಾರದು
ಫೇಸ್ಬುಕ್ ಪ್ರೊಫೈಲ್ ಚಿತ್ರ 
ದಿನ ಬೆಳಗಾದರೆ ಬದಲಿಸಬಾರದು
ವೈನು, ವೋಡ್ಕಾ ಹೀರಬಾರದು
ಯಾರ ಮೇಲೂ ಮೋಹಗೊಳ್ಳಬಾರದು
ಕಾಮದ ಬಗ್ಗೆಯಂತೂ ... ಉಹು! ಸದ್ದು!!
ಹೀಗೆಲ್ಲ ನೀವು ನನ್ನ ಬದುಕನ್ನು ನಿರ್ದೇಶಿಸುವ 
ಉದ್ದಟತನ ತೋರುತ್ತೀರಿ
ಹಾಗಾಗಿ ನಾನು ನನ್ನ ವಯಸ್ಸು
ಎಷ್ಟೆಂದು ಹೇಳುವುದಿಲ್ಲವಷ್ಟೇ
ನನಗೂ ನನ್ನ ವಯಸ್ಸು
ಮುಚ್ಚಿಡಬೇಕೆಂದೇನೂ ಇಲ್ಲ...


ಭಾರತಿ ಬಿ. ವಿ.