Friday, October 23, 2015

ಕ್ಷಮಿಸಿಬಿಡು ನನ್ನ ಕಂದಮ್ಮ

ಆಸೆಗಳ ಮೂಟೆ ಹೊತ್ತು ಮದುವೆಯಾದೆ
ಕನಸುಗಳ ಸಿರಿಯ ಹೊತ್ತು ಮಡದಿಯಾದೆ
ದೈವಗಳಿಗೆ ಹರಕೆ ಹೊತ್ತು ನಾ ತಾಯಿಯಾದೆ..
ಯಾವ ಜನ್ಮದ ಪಾಪವೋ ಯಾವ ದೈವದ ಶಾಪವೋ
ನೂರ್ಕಾಲ ಜೊತೆಯಿರುವೆನೆಂದವ ತಾರೆಯಾದ
ನಿನ್ನ ಬೆಳೆಸಿ ಅರಸನಾಗಿ ಮಾಡೆಂದು ಮರೆಯಾದ..
ನನ್ನವರೆಂದವರೆಲ್ಲಾ ನನ್ನ ಹೊರದೂಡಿದರೂ
ನೆತ್ತರ ತೋಯಿಸಿ ಉಸಿರ ಬಸಿದು ಮುನ್ನಡೆದೆ
ನಿನ್ನ ಅರಸನಾಗಿಸಬೇಕೆಂದು ಬಾಳ ಸವೆಸಿದೆ...
ನಿನಗೆ ಹಾಲುಣಿಸಿದ ಮೊಲೆಗಳ ಕಂಡರಷ್ಟೇ
ಮೊಲೆಯುಣಿಸುವ ಮಾತೆಯ ಕಾಣದಾದರು
ದೇಹವನು ಚೆಂಡಾಡಿದ ಪಿಶಾಚಿಗಳಾದರು...
ನಿನ್ನ ಭವಿಷ್ಯದ ಭಯವೇ ಕಾಡುತಿಹುದು
ಕೊನೆಯುಸಿರಿನ ಕಣ್ಣಂಚಿನ ಹನಿಯಲೂ
ಬಾರದೂರಿಗೆ ಭಾರದ ಮನದಿ ಹೊರಟಿರುವೆ
ಕ್ಷಮಿಸಿಬಿಡು ನನ್ನ ಕಂದಮ್ಮ....

ಎಂ. ಆರ್. ಸತೀಶ್ - ಕೋಲಾರ

Tuesday, September 1, 2015

ಎತ್ತರಕ್ಕೇರಿದವರ ಅಂತಃಕರಣ

ಒಂದು ದಿನ ಡಾ. ದ.ರಾ ಬೇಂದ್ರೆ ಹಾಗೂ ಸುರೇಶ ಕುಲಕರ್ಣಿಯವರು ಕುದುರೆಗಾಡಿ ಮಾಡಿಕೊಂಡು ದತ್ತಾತ್ರೇಯ ಗುಡಿಗೆ ಹೋದರು. ದೇವರಿಗೆ ನಮಸ್ಕಾರ ಮಾಡಿ ಹೊರಗೆ ಬಂದಾಗ ಕುದುರೆಗಾಡಿ ಇರಲಿಲ್ಲ. `ಮತ್ತೊಂದು ಗಾಡಿ ತೆಗೆದುಕೊಂಡು ಬರಲಾ' ಎಂದು ಕೇಳಿದಾಗ, `ಬೇಡ ನಡೆದೇ ಮುಂದೆ ಹೋಗೋಣ. ಅಲ್ಲಿಯೇ ಟಾಂಗಾ (ಕುದುರೆಗಾಡಿ) ಸಿಗುತ್ತದೆ' ಎಂದರು ಬೇಂದ್ರೆ. ಇಬ್ಬರೂ ನಡೆದು ಕೆ ಸಿ ಸಿ ಬ್ಯಾಂಕಿನ ಹತ್ತಿರ ಬಂದರು. ಅಲ್ಲೊಬ್ಬ ರಸ್ತೆಯ ಬದಿಯಲ್ಲಿ ಚಪ್ಪಲಿ ಹೊಲಿಯುತ್ತ ಕುಳಿತಿದ್ದ. ಇವರ ಚಪ್ಪಲಿಯ ಉಂಗುಷ್ಠ ಹರಿದದ್ದನ್ನು ನೋಡಿ, `ಅಜ್ಜಾವ್ರ, ಉಂಗುಷ್ಠ ಹಚ್ಚಿಕೊಡತೇನಿ ಕೊಡ್ರಿ' ಎಂದ. `ಆತು ಹಚ್ಚಿಕೊಡು' ಎಂದು ಅವನ ಕಡೆಗೆ ಹೋದರು. ತಮ್ಮ ಚಪ್ಪಲಿ ತೆಗೆದುಕೊಡುವಾಗ ಆ ರಿಪೇರಿ ಮಾಡುವವ ಹೇಳಿದ, `ಬಿಸಲಾಗ ಕಾಲು ಸುಡತಾವ, ಇದರ ಮೇಲೆ ಕಾಲು ಇಡ್ರಿ' ಎಂದು ಮತ್ತೊಂದು ಚಪ್ಪಲಿಯನ್ನು ಅವರ ಕಾಲಿನ ಹತ್ತಿರ ಇಟ್ಟ. ಅವನ ಪ್ರೀತಿ ಕಂಡು ಬೇಂದ್ರೆಯವರಿಗೆ ಅಂತಃಕರಣ ತುಂಬಿ ಬಂತು. `ಅಲ್ಲೋ ನನ್ನ ಕಾಲು ಸುಡೋದರ ಬಗ್ಗೆ ನಿನಗೆ ಕಾಳಜಿ ಅದ. ಆದರೆ ಸುಡೋ ಬಿಸಿಲೊಳಗ ನೀನು ಕೂತಿ. ನಿನ್ನ ಮೈ ಸುಡೋದರ ಬಗ್ಗೆ ಎಚ್ಚರ ಇಲ್ಲಾ' ಎಂದು ತಮ್ಮ ಕೊಡೆಯನ್ನು ಬಿಚ್ಚಿ ಅವನ ತಲೆಯ ಮೇಲೆ ಹಿಡಿದು ನಿಂತರು. ಆತ ಇವರ ಚಪ್ಪಲಿ ರಿಪೇರಿ ಮಾಡುತ್ತಿದ್ದ. ಅದು ಮುಗಿದ ಮೇಲೆ, `ಪಾಲೀಶ್ ಮಾಡಲೇನ್ರಿ?' ಎಂದು ಕೇಳಿದ. ಇವರು `ಹೂಂ' ಎಂದು ಮಾತಿಗಿಳಿದು ಅವನ ಮನೆತನದ ಇತಿಹಾಸವನ್ನೆಲ್ಲ ತಿಳಿದರು.

ಎಷ್ಟು ಮಕ್ಕಳು ನಿನಗ?

ಎರಡು

ದಿನಕ್ಕ ಎಷ್ಟು ಹಣ ದುಡಿತೀ?

ಹತ್ತು ರೂಪಾಯಿ, ಒಮ್ಮಮ್ಮೆ ಹೆಚ್ಚು ಕಡಿಮೆ ಆಗತೈತಿ .

ಶೆರೆ ಕುಡಿತೀ ಏನು?

ಇಲ್ಲ, ಯಾವಾಗರೇ ಒಮ್ಮಮ್ಮೆ .

ಮನ್ಯಾಗ ಛತ್ರಿ (ಕೊಡೆ) ಅದ ಏನು?

ಇದೇರಿ

ಇಷ್ಟು ಮಾತು ಆಗುವುದರೊಳಗೆ ಚಪ್ಪಲಿ ರಿಪೇರಿ ಕೆಲಸ ಮುಗಿದಿತ್ತು. ` ಎಷ್ಟು ಆತು?' ಬೇಂದ್ರೆ ಕೇಳಿದರು.

ಆತ ಕ್ಷಣ ವಿಚಾರ ಮಾಡಿ, `ಒಂದೂವರೆ ರೂಪಾಯಿ ಆತ್ರಿ' ಎಂದ. ಇವರು ಹತ್ತು ರೂಪಾಯಿ ತೆಗೆದು ಕೊಟ್ಟರು. ಆತ `ನನ್ನ ಕಡೆಗೆ ಚಿಲ್ರೆ ಇಲ್ಲರಿ' ಎಂದಾಗ ಬೇಂದ್ರೆ, `ನೀನು ದಿನಕ್ಕೆ ಹತ್ತು ರೂಪಾಯಿ ದುಡೀತಿ. ಇದು ಇವತ್ತಿನ ಗಳಿಕೆ. ಮೊದಲು ಮನೆಗೆ ಹೋಗಿ ಕೊಡೆ ತೊಗೊಂಡು ಬಾ. ನೆರಳು ಮಾಡಿಕೊಂಡು ದುಡಿ. ನಿನ್ನ ಹಿಂದ ಹೆಂಡತಿ ಮಕ್ಕಳು ಅವಲಂಬಿಸಿದ್ದಾರೆ ಎಂಬುದನ್ನು ಮರೀಬ್ಯಾಡ. ಅವರಿಗೆ ಹಣ್ಣು ಹಂಪಲು ಒಯ್ಯಿ, ಕುಡೀಬ್ಯಾಡಾ' ಎಂದರು. ಅವರ ಅಂತಃಕರಣದ ಮಾತಿಗೆ, ನೀಡಿದ ಹಣಕ್ಕೆ ಅವನ ಕಣ್ಣು ಒದ್ದೆಯಾದವು.

ಆತ ಕೇಳಿದ, `ಅಜ್ಜಾವ್ರ, ನಿಮ್ಮ ಮನೆ ಎಲ್ಲಿ ಐತಿ?'. `ಸಾಧನಕೇರಿಯೊಳಗ' ಎಂದರು ಬೇಂದ್ರೆ.. `ಬೇಂದ್ರೆಯವರ ಮನೀ ಹತ್ತಿರ ಏನ್ರಿ?' ಎಂದು ಕೇಳಿದ.

ಇವರು `ಹೂಂ' ಎನ್ನುತ್ತ ಟಾಂಗಾ ನಿಲ್ದಾಣದ ಕಡೆಗೆ ನಡೆದರು. ಅನಂತರ ಆ ಚಪ್ಪಲಿ ರಿಪೇರಿ ಮಾಡುವವ ಆಗಾಗ ಬೇಂದ್ರೆಯವರ ಮನೆಗೆ ಬಂದು ಹೋಗುತ್ತಿದ್ದನಂತೆ.

ನಿಜವಾಗಿಯೂ ಎತ್ತರಕ್ಕೇರಿದವರು ಯಾವ ಹಂತಕ್ಕಾದರೂ ಇಳಿದು ಹೃದಯವಂತಿಕೆಯನ್ನು ತೋರಬಲ್ಲರು.

ಇದನ್ನು ಸುರೇಶ ಕುಲಕರ್ಣಿಯವರು ತಮ್ಮ `ಬೇಂದ್ರೆ ಬೆಳಕು' ಕೃತಿಯಲ್ಲಿ ಬರೆದಿದ್ದಾರೆ. ಇದರ ಬೆಳಕು ನಮಗೆ ಕಂಡಿದ್ದು ಡಾ. ಗುರುರಾಜ ಕರ್ಜಗಿ ಅವರ ಪ್ರಜಾವಾಣಿಯ ‘ಕರುಣಾಳು ಬಾ ಬೆಳಕೆ’ ಅಂಕಣದಲ್ಲಿ.

ಬೇಂದ್ರೆ ಅಜ್ಜನಿಗೆ, ಇದನ್ನು ನಮಗೆ ಉಣಬಡಿಸಿದ ಸುರೇಶ್ ಕುಲಕರ್ಣಿ ಮತ್ತು ಡಾ. ಗುರುರಾಜ ಕರ್ಜಗಿ ಅವರಿಗೆ ನಮಿಸೋಣ.

ಮೂಲ: ಅಂತರ್ಜಾಲ

Saturday, March 14, 2015

ಪರ್ವ ಮತ್ತು ಮಹಾಭಾರತ

ಹರವು ಸ್ಫೂರ್ತಿ ಗೌಡ ಅವರು ‘ಅವಧಿ’ಯಲ್ಲಿ ೬-೩-೧೫ರಂದು ಬರೆದಿರುವ ‘ಭೈರಪ್ಪನವರಿಗೆ ಕೆಲವು ಪ್ರಶ್ನೆಗಳು’ ಲೇಖನದಲ್ಲಿ ಭೈರಪ್ಪನವರು ಮಹಾಭಾರತವನ್ನು ಆಧರಿಸಿ ಬರೆದಿರುವ ಪರ್ವ ಕಾದಂಬರಿಯ ಬಗ್ಗೆ  ಪ್ರಸ್ತಾಪಿಸಿರುಪ  ಪ್ರಶ್ನೆಗಳನ್ನು ಕುರಿತಂತೆ ಕೆಲವು ವಿಷಯಗಳನ್ನು ನಿಲುಮೆಯ ಓದುಗರ ಜತೆ ಹಂಚಿಕೊಳ್ಳುವುದು ಈ ನನ್ನ ಬರಹದ ಉದ್ದೇಶ. ಸ್ಪೂರ್ತಿ ಗೌಡ ಅವರ ಲೇಖನಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಅವುಗಳು ಸದ್ಯದ ನಮ್ಮ ಓದುಗರ ಮನೋಭಾವ, ಅವರ ಓದಿನ ರೀತಿ ನೀತಿ, ಕನ್ನಡ ಸಾಹಿತ್ಯದ ಸದ್ಯದ  ವಿಮರ್ಶೆಯ ವಾತಾವರಣ  ಇತ್ಯಾದಿಗಳ  ಪ್ರತಿಫಲನದಂತೆ ಇದೆ. ಇದು ಸಹಜ.ಆ ಪ್ರತಿಕ್ರಿಯೆಗಳ ಬಗ್ಗೆ ಇದಕ್ಕಿಂತ ಹೆಚ್ಚೇನು ಹೇಳುವುದು ಇಲ್ಲ.
ಸ್ಫೂರ್ತಿ ಗೌಡ ಅವರು ‘ಪರ್ವ’ದ ಬಗ್ಗೆ random ಆಗಿ ಎತ್ತಿರುವ  ಮೂರ್ನಾಲಕ್ಕು ಆಕ್ಷೇಪಣೆಗಳು ಮತ್ತು ಉಪ ಆಕ್ಷೇಪಣೆಗಳ relevanceಗೆ ಮಾತ್ರ ನನ್ನ ಈ ಬರಹ ಸೀಮಿತವಾಗಿದೆ. ಇತಿಹಾಸ, ಕಾವ್ಯ ಮತ್ತು ಪುರಾಣಗಳು ಬೆರೆತಿರುವ ಮಹಾಭಾರತದ ಕತೆಯನ್ನು ಈಗ ಚಾಲ್ತಿಯಲ್ಲಿರುವ ವಿಮರ್ಶೆಯ ಅಳತೆಗೋಲಿನಿಂದ ಅಳೆದು ಬೆಲೆ ಕಟ್ಟುವ ಕ್ರಿಯೆಯೇ ಸರಿಯಾದುದಲ್ಲ. ಇಂದು ನಮ್ಮ ಸಾಹಿತ್ಯದ ವಿಮರ್ಶಕ ಮತ್ತು ವಿಮರ್ಶಕಿಯರಿಗೆ  ಹಿಂದಿನ ಮತ್ತು ಇಂದಿನ ಕೃತಿಗಳಿಗೆ (ಅದು ಸಾಮಾಜಿಕ/ಐತಿಹಾಸಿಕ/ಪೌರಾಣಿಕ ಯಾವುದೇ ಆಗಿರಲಿ) ಪ್ರಗತಿಗಾಮಿ.ಪ್ರತಿಗಾಮಿ,ಮಹಿಳಾ ವಿರೋಧಿ,ವೈದಿಕ ಶಾಹಿ ಇತ್ಯಾದಿ ಹಣೆ ಪಟ್ಟಿಗಳನ್ನು ಕಟ್ಟಿ ಆ ಕೃತಿಗಳ  ಲೇಖಕರನ್ನು ಏರಿಸುವುದೋ ಇಳಿಸುವುದೋ ಮಾಡುವುದು ತುಂಬಾ ಖುಷಿ ಕೊಡುವ  ಕೆಲಸವಾಗಿದೆ. ಹಾಗೆ ನೋಡಿದರೆ ಇಂತಹ ವಿದ್ಯಮಾನ ಮೂವತ್ತು ನಲವತ್ತು ವರ್ಷಗಳಷ್ಟು ಹಳೆಯದೇ. ಈಗ  ಈ ಕೆಲಸ ಇನ್ನೂ ಜೋರಾಗಿದೆ ಅಷ್ಟೇ. ವಿಮರ್ಶೆಯ ಪರಿಭಾಷೆಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತವೆ; ಬದಲಾಗಬೇಕು ಎಂಬುದರ ಬಗ್ಗೆ  ಯಾರೂ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಆದರೆ ಬದಲಾಗುತ್ತಿರುವ ವಿಮರ್ಶೆಯ ಪರಿಭಾಷೆಗಳನ್ನು ಸಾಹಿತ್ಯ ಕೃತಿಯೊಂದಕ್ಕೆ ನಾವು ಯಾವ ರೀತಿ apply ಮಾಡಬೇಕು? ಆ ಪರಿಭಾಷೆಗಳ limits ಏನು? ಎಂಬುದರ ಬಗ್ಗೆ ನಾವು ಯೋಚಿಸದಿದ್ದರೆ ಆಭಾಸವಾಗುತ್ತದೆ. ಸ್ಪೂರ್ತಿಗೌಡ ಅವರು ಪರ್ವದ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ಮೂಲ ಕಾರಣ ಹೊಸ ವಿಮರ್ಶೆಯ ಪರಿಭಾಷೆಗಳ wrong application.

ಪರ್ವ ವ್ಯಾಸರ ಸಂಸ್ಕೃತ ಮಹಾಭಾರತದ ಕಥಾ ಚೌಕಟ್ಟಿನಲ್ಲಿ ರಚಿತವಾಗಿರುವ ಕಾದಂಬರಿ. ಆ ಕಥಾ ಚೌಕಟ್ಟಿನ ಒಳಗೆ ವ್ಯಾಸರ ಮೂಲ ಕೃತಿಗೆ ಚ್ಯುತಿ ಬಾರದಂತೆ  ಅಲ್ಪ ಸ್ವಲ್ಪ ಬದಲಾವಣೆಗಳು . ಪಾಂಡವ-ಕೌರವರ ಕಥನಕ್ಕೆ ಅಷ್ಟೇನೂ ಅನಿವಾರ್ಯವಲ್ಲದ ನೂರಾರು ಉಪಕಥೆಗಳು, ಪ್ರಸಂಗಗಳನ್ನು ಬಿಟ್ಟುಬಿಡುವುದು ಮತ್ತು ‘ಪರ್ವ’ ಕಾದಂಬರಿಯ ತಂತ್ರದ ಅನುಕೂಲಕ್ಕಾಗಿ ಒಂದೆರೆಡು ಹೊಸ ಪಾತ್ರಗಳ ಸೃಷ್ಟಿ  (ದಾಸಿ, ಸೇವಕ, ಸಾರಥಿ ಇತ್ಯಾದಿ) ಇವುಗಳನ್ನು ಮಾಡಬಹುದೇ ಹೊರತು ಪೂರ್ತಿ ಕಥೆಯನ್ನೇ ಬದಲಾಯಿಸಿದರೆ ಅದು ವ್ಯಾಸರ ಕಥಾ ಚೌಕಟ್ಟನ್ನು ಮೀರಿದಂತೆ ಆಗುತ್ತದೆ.ಹಾಗಾದರೆ ದಾಸಿ, ಸೇವಕ ಸಾರಥಿ ಇವರುಗಳು  ಕೀಳು ಪಾತ್ರಗಳೋ ಎಂದು ಕೇಳುವುದರಲ್ಲಿ ಅರ್ಥವಿಲ್ಲ. ನಾವು  ಇಂದು  ದಿನ ನಿತ್ಯ ಪ್ರಯಾಣಿಸುವ  ಬಸ್ಸಿನ ಡ್ರೈವರ್ , ರಿಕ್ಷಾ ಚಾಲಕರು ಇರುವಂತೆ ಹಿಂದೆ ರಥಕ್ಕೆ ಸಾರಥಿಗಳಿದ್ದರು ಅಷ್ಟೇ.ಒಮ್ಮೆ ಭೀಮ ಪ್ರಯಾಣಿಸುವಾಗ   ತನ್ನ ಯೋಚನೆಗಳನ್ನು, ಹಿಂದಿನ ಕಥೆಯನ್ನು ತನ್ನ ರಥದ  ಸಾರಥಿಗೆ ಹೇಳುತ್ತಾ ಹೋಗುತ್ತಾನೆ. ಕೆಲವೊಮ್ಮೆ ತಾನೇ ಯೋಚಿಸುತ್ತಾ ಹೋಗುತ್ತಾನೆ. ವ್ಯಾಸ ಭಾರತದಲ್ಲೂ ಭೀಮ ರಾಕ್ಷಸರನ್ನು ಕೊಂದಿದ್ದು,ರಾಕ್ಷಸ ಕುಲದ ಸಾಲಕಟಂಕಟಿಯನ್ನು ಮದುವೆಯಾಗಿದ್ದು ಅವರಿಬ್ಬರಿಗೆ ಘಟೋದ್ಗಜ ಹುಟ್ಟಿದ ಪ್ರಸಂಗ ಬರುತ್ತದೆ. ಆ ನಂತರ ಅಲ್ಲಿಂದ ಭೀಮ ಹೊರಟುಹೋಗಿದ್ದೂ   ಇದೆ. ಇದನ್ನು ಪುರುಷ ಪ್ರಧಾನ ಸಮಾಜ, ಮನು ಶಾಸ್ತ್ರ ವೇದ ಪುರಾಣ ಇತ್ಯಾದಿಗಳನ್ನೆಲ್ಲಾ ಹೇಳಿ ಸಾಲಕಟಂಕಟಿಗೆ ಮೋಸ ಆಯ್ತು ಎಂದು  ಸ್ಫೂರ್ತಿ ಗೌಡ ಅವರು ಟೀಕಿಸುವುದರಲ್ಲಿ ಅರ್ಥವಿಲ್ಲ. ಇಂದು ಜಾತಿ ಜಾತಿಗಳಿಗೆ, ಬುಡಕಟ್ಟು ಜನತೆಗೆ ತಮ್ಮ ತಮ್ಮ ಆಚಾರ ವಿಚಾರಗಳಲ್ಲಿ ಭಿನ್ನತೆ ಇರುವಂತೆ ಹಿಂದೆಯೂ ಇದ್ದವು.ಈ ಜಾತಿ ಬೇಧ ತಪ್ಪು, ಇದು ಶೋಷಣೆ ಎಂಬ ಮಾತುಗಳು ಪರ್ವ ಕಾದಂಬರಿಯ ವಿಮರ್ಶೆಯ ಚೌಕಟ್ಟನ್ನು ಮೀರಿದ್ದು. ಅದಕ್ಕೆ ಬೇರೆ ವೇದಿಕೆ ಇದೆ. ಅದೇ ರೀತಿ ದ್ರಾವಿಡ ವರ್ಣ, ಮೀನು ಹಿಡಿಯುವ ಜಾತಿ ಕೀಳೆ ಎಂಬ ಮಾತುಗಳೂ ಅರ್ಥವಿಲ್ಲದ್ದು.


ಮಹಾಭಾರತ ಮತ್ತು ಪರ್ವದಲ್ಲಿ ಆರ್ಯ ಮತ್ತು ಆರ್ಯೇತರ ಎಂದು ಹೇಳಿರುವುದನ್ನು ಸ್ಫೂರ್ತಿ ಅವರು ಆರ್ಯ ಮತ್ತು ದ್ರಾವಿಡ ಎಂದು ತಮ್ಮ ವಾದಕ್ಕೆ ತಕ್ಕಂತೆ ಬದಲಾಯಿಸಿಕೊಂಡರೆ ಅದು ಭೈರಪ್ಪನವರ ತಪ್ಪೇ? ಬಡತನ, ಗುಡಿಸಲು,ಕಪ್ಪು ವರ್ಣದ ಹೆಂಗಸಿನ ಮೇಲೆ ತಿರಸ್ಕಾರವೇಕೆ ಎಂಬ ಮಾತುಗಳೂ ಇದೇ ರೀತಿ context ಅನ್ನು ಮರೆತು ಇಂದಿನ ವಿಮರ್ಶೆಯ ಪರಿಭಾಷೆಯಲ್ಲಿ ಆಡಿದ ಮಾತುಗಳು. ಪರ್ವದಲ್ಲಿ ಭೈರಪ್ಪನವರು ಮಹಾಭಾರತ ಮತ್ತು ನಮ್ಮ ಭಾರತ ದೇಶದ ಜಾತಿ ಪದ್ಧತಿ ಸರಿಯೋ ತಪ್ಪೋ ಎಂಬುದರ ಮೇಲೆ  ವ್ಯಾಖ್ಯಾನ ಮಾಡಿಲ್ಲ. ಸುಮಾರು ಮೂರ್ನಾಲಕ್ಕು  ಸಾವಿರದಷ್ಟು ಹಿಂದಿನ ಕಥೆಯನ್ನು ನಮ್ಮ ಇಂದಿನ ಜೀವನದ ದೃಷ್ಟಿಕೋನದಿಂದ ಅಳೆಯುವುದೇ ತಪ್ಪಾಗುತ್ತದೆ.  ಹೀಗಾಗಿ ಸ್ಫೂರ್ತಿ ಗೌಡ ಅವರು ಭೈರಪ್ಪನವರ ಮೇಲೆ ಹಾಕಿರುವ FIR ಮತ್ತು charge sheet ನೇರವಾಗಿ ಮೂಲ ಮಹಾಭಾರತಕ್ಕೆ ಸಂಬಂಧಿಸಿದ್ದು. ಇದನ್ನು ನಾವು ಮರೆಯಬಾರದು. ಅಂತಹ ಕಥೆಯನ್ನು ಒದಲೇಬಾರದು , ವಿರೋಧಿಸಬೇಕು ಎಂಬುದು ಸ್ಫೂರ್ತಿ ಗೌಡ ಮತ್ತು ಅವರ ಲೇಖನಕ್ಕೆ ಸಹಮತ ವ್ಯಕ್ತಪಡಿಸಿರುವ ಓದುಗರ ಅಭಿಪ್ರಾಯವಾದರೆ ಅವರು ಆ ರೀತಿ ಮಾಡಲು ಸ್ವತಂತ್ರರು.
ಕೊನೆಯದಾಗಿ ಒಂದೆರೆಡು ಮಾತು. ಪರ್ವವನ್ನು ಪೂರ್ತಿ ಓದಿರುವವರು ಆ ಕಾದಂಬರಿಯ ಶಕ್ತಿ ಮತ್ತು ದೌರ್ಬಲ್ಯಗಳನ್ನು ಅರಿಯುವ ಆಸಕ್ತಿ ಇದ್ದರೆ ಈ ಕೆಳಗಿನ ಪುಸ್ತಕಗಳನ್ನು ಓದಬಹುದು.
೧. ಯುಗಾಂತ –ಇರಾವತಿ ಕರ್ವೆ ( ಪ್ರಕಾಶಕರು- ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ) — ಇದರ ಕನ್ನಡ ಅನುವಾದ ಇದೆ.
೨. ಎಸ್ ಎಲ್ ಭೈರಪ್ಪನವರ ಪರ್ವ ಒಂದು ಸಮೀಕ್ಷೆ–ಸಂಪಾದಕಿ ವಿಜಯಾ  (ಪ್ರಕಾಶಕರು–ಇಳಾ ಪ್ರಕಾಶನ. ಬೆಂಗಳೂರು-೧೮)
೩. ಎಸ್ ಎಲ್ ಭೈರಪ್ಪನವರ ‘ನಾನೇಕೆ ಬರೆಯುತ್ತೇನೆ? ಕೃತಿಯಲ್ಲಿರುವ ಪರ್ವ ಬರೆದಿದ್ದು ಎಂಬ ಲೇಖನ. (ಪ್ರಕಾಶಕರು -ಸಾಹಿತ್ಯ ಭಂಡಾರ  ಬೆಂಗಳೂರು–೫೩)

- ಮು.ಅ. ಶ್ರೀರಂಗ
"ನಿಲುಮೆ" ಅಂತರ್ಜಾಲ ತಾಣದಿಂದ

Wednesday, March 11, 2015

ಭೈರಪ್ಪಗೆ ಸಾಹಿತ್ಯ ಅಕಾಡೆಮಿ ಫೆಲೋ ಗೌರವ

ನವದೆಹಲಿ: ಹಿರಿಯ ಸಾಹಿತಿ ಎಸ್‌.ಎಲ್‌. ಭೈರಪ್ಪ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋ ಗೌರವಕ್ಕೆ ಪಾತ್ರರಾಗಿದ್ದಾರೆ. ಸೋಮವಾರ ಸೇರಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಸಾಮಾನ್ಯ ಸಭೆ­ಯಲ್ಲಿ ಭೈರಪ್ಪ ಅವರನ್ನು ಫೆಲೋ ಗೌರವಕ್ಕೆ ಆಯ್ಕೆ ಮಾಡಲಾಯಿತು. ಭೈರಪ್ಪನವರ ಜತೆ ತೆಲುಗು ಸಾಹಿತಿ ಸಿ. ನಾರಾಯಣ ರೆಡ್ಡಿ ಅವರೂ ಈ ಗೌರವಕ್ಕೆ ಭಾಜನರಾಗಿದ್ದಾರೆ.



ಸಾಹಿತ್ಯ ಅಕಾಡೆಮಿಯ ಫೆಲೋ, ಸಾಹಿತಿಗಳಿಗೆ ಸಲ್ಲುವ ಅತ್ಯಂತ ದೊಡ್ಡ ಗೌರವವಾಗಿದೆ. ಇದಕ್ಕೂ ಮೊದಲು ಡಾ.ಯು.ಆರ್‌.ಅನಂತಮೂರ್ತಿ ಅವರಿಗೆ ಈ ಗೌರವ ಸಂದಿತ್ತು. ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂ ಗಾರ್‌, ದ.ರಾ. ಬೇಂದ್ರೆ ಮತ್ತು ಕೆ.ಎಸ್‌. ನರಸಿಂಹಸ್ವಾಮಿ ಅವರೂ ಸೇರಿದಂತೆ ಕನ್ನಡದ ಅನೇಕ ಲೇಖಕರಿಗೆ ಗೌರವ ಸಿಕ್ಕಿತ್ತು.
ಅಕಾಡೆಮಿ 21ಫೆಲೋಗಳಲ್ಲಿ ಭೈರಪ್ಪ­ನವರೂ ಒಬ್ಬರು. ಕರ್ನಾ ಟಕದಲ್ಲಿ ಮನೆ ಮಾತಾಗಿರುವ ಭೈರಪ್ಪ­ನವರು ದೊಡ್ಡ ಓದುಗ ಅಭಿಮಾನಿ­ಗಳನ್ನು ಹೊಂದಿದ್ದಾರೆ. ಮರಾಠಿ ಹಾಗೂ ಹಿಂದಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಿಗೆ ಅವರ ಕೃತಿಗಳು ಭಾಷಾಂತರಗೊಂಡಿದೆ. ಅವರ ಕೃತಿಗಳು ಇಂಗ್ಲಿಷ್‌ಗೂ ಅನುವಾದಗೊಂಡಿವೆ.
2010ರಲ್ಲಿ ಸರಸ್ವತಿ ಸಮ್ಮಾನ್‌ ಪುರ­ಸ್ಕಾರಕ್ಕೂ ಪಾತ್ರರಾಗಿರುವ ಭೈರಪ್ಪನವರ ಒಲವು– ನಿಲುವುಗಳನ್ನು ಇಷ್ಟ ಪಡುವ­ವರಂತೆ ವಿರೋಧಿಸುವವರೂ ಇದ್ದಾರೆ. ಇದರಿಂದಾಗಿ ಸಾಹಿತ್ಯ ವಲಯದಲ್ಲಿ ಭೈರಪ್ಪನವರ ಕೃತಿಗಳು ಉಳಿದವರಿಗಿಂತ ಹೆಚ್ಚು ಚರ್ಚೆಗೆ ಒಳಗಾಗುತ್ತಿವೆ.
‘ಆವರಣ’ ಸೇರಿದಂತೆ ಭೈರಪ್ಪನವರ ಅನೇಕ ಕೃತಿಗಳು ಎಂಟು, ಹತ್ತು ಮುದ್ರಣಗಳನ್ನು ಕಂಡಿವೆ.
ಪ್ರಜಾವಾಣಿ ಸುದ್ದಿ

Sunday, February 22, 2015

ಎಂಬತ್ತರಲ್ಲೂ ನಿಲ್ಲದೇ ಸಾಗುತಿದೆ ಮಹಾ‘ಯಾನ’

ಎಸ್.ಎಲ್.ಭೈರಪ್ಪನವರು ನಾಲ್ಕು ವರ್ಷಗಳ ಬಳಿಕ ಹೊಸ ಕಾದಂಬರಿ ‘ಯಾನ’ವನ್ನು ಬರೆದಿದ್ದಾರೆ.ಎಂದಿನಂತೆ ಪ್ರತಿಗಳು ದಾಖಲೆ ಮಾರಾಟವಾಗುತ್ತಿವೆ.ಹಿಂದಿನ ಕಾದಂಬರಿಗಳಷ್ಟು ಸತ್ವವನ್ನು ಈ ಕಾದಂಬರಿ ಹೊಂದಿಲ್ಲ ಎಂದು ಕೆಲವರು ಹೇಳುತ್ತಿದ್ದರೆ,ಇನ್ನು ಕೆಲವರು ಕವಲು ಕಾದಂಬರಿ ಬರೆದಾಗಲೇ ಭೈರಪ್ಪನವರು ತಮ್ಮತನವನ್ನು ಕಳೆದುಕೊಂಡಿದ್ದರು.ಹಾಗಾಗಿ ಈ ಕಾದಂಬರಿ ನೀರಸವಾಗಿದ್ದರೆ ಆಶ್ಚರ್ಯವೇನಿಲ್ಲ ಎಂದು ಹೇಳುತ್ತಿದ್ದಾರೆ.ಆದರೆ ಭೈರಪ್ಪನವರ ಕೋಟ್ಯಾಂತರ ಅಭಿಮಾನಿಗಳು ಕಾದಂಬರಿಯನ್ನು ಮುಗಿಬಿದ್ದು ಕೊಂಡು ಓದುತ್ತಿದ್ದಾರೆ.
ಯಾನದ ಕಥೆಯೇನೂ ವೈಜ್ಞಾನಿಕ ಕಥೆ,ಕಾದಂಬರಿಗಳನ್ನು ಓದುವವರಿಗೆ ಹೊಸದಲ್ಲ.ಆದರೆ ಭೈರಪ್ಪನವರು ವೈಜ್ಞಾನಿಕ ಕಾದಂಬರಿಯನ್ನು ಹೇಗೆ ಬರೆದಿರಬಹುದು ಎಂಬ ಕುತೂಹಲಕ್ಕೇ ಎಲ್ಲರೂ ‘ಯಾನ’ವನ್ನು ಓದುತ್ತಿದ್ದಾರೆ.ಅದೊಂದು ಮಹಾಯಾನ.ದೇಶಾಂತರ ಅಲ್ಲ,ಭೂಮ್ಯಾಂತರ ಅಲ್ಲ,ಸೂರ್ಯಾಂತರ ಹೋಗಿ ‘ಪ್ರಾಕ್ಸಿಮಾ ಸೆಂಟಾರಿಸ್’ ಎಂಬ ನಕ್ಷತ್ರದ ಸುತ್ತ ಬೇರೆ ಗ್ರಹಗಳಿವೆಯೇ?ಇದ್ದರೆ ಅವು ಭೂಮಿಯಂತೆ ವಾಸಯೋಗ್ಯವೇ? ಎಂದು ತಿಳಿಯುವುದೇ ಯಾನದ ಉದ್ದೇಶ.ಈ ಯಾನ ಸಾವಿರಾರು ವರ್ಷಗಳ ಕಾಲ ಸಾಗುವಂಥದ್ದು.ಅಂಥ ಒಂದು ಮಹಾಯಾನಕ್ಕೆ ಒಬ್ಬ ಗಂಡು ಮತ್ತು ಹೆಣ್ಣನ್ನು ಗೊತ್ತು ಮಾಡಿ ನೌಕೆಯಲ್ಲಿ ಅಂತರಿಕ್ಷಕ್ಕೆ ಕಳಿಸುತ್ತಾರೆ.ಆ ನೌಕೆಯಲ್ಲಿ ಭೂಮಿಯಲ್ಲಿರುವಂತೆಯೇ ವಾತಾವರಣವಿರುತ್ತದೆ.ಭೂಮಿಯಷ್ಟೇ ಗುರುತ್ವಾಕರ್ಷಣೆ ಇರುತ್ತದೆ.ಮಳೆ ಸುರಿಯುತ್ತದೆ,ಗಾಳಿ ಬೀಸುತ್ತದೆ.ಭೂಮಿಯಂತೆ ಸಸ್ಯಗಳೂ ಬೆಳೆಯುತ್ತವೆ.ಆ ಗಂಡು ಹೆಣ್ಣು ಯಾನದಲ್ಲಿಯೇ ಲೈಂಗಿಕ ಸಂಪರ್ಕ ಮಾಡಿ ಇಬ್ಬರು ಮಕ್ಕಳನ್ನು ಪಡೆಯಬೇಕು.ನಂತರ ಆ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಬಾಹ್ಯಾಕಾಶ,ಖಗೋಳ ಜ್ಞಾನ ಮತ್ತು ಇತರ ವಿಜ್ಞಾನದ ಎಲ್ಲಾ ವಿಷಯಗಳನ್ನು ಕಲಿತು,ಅವರೂ ಸಂಪರ್ಕ ಮಾಡಿ ಮಕ್ಕಳನ್ನು ಪಡೆಯಬೇಕು.ಅವರಿಗೂ ನೌಕೆಯಲ್ಲೇ ಎಲ್ಲಾ ಶಿಕ್ಷಣವನ್ನು ನೀಡಿ ಸಮರ್ಥರನ್ನಾಗಿ ಮಾಡಬೇಕು.ಹೀಗೆ ಯಾನದಲ್ಲಿಯೇ ಸಂತತಿ ಬೆಳೆಯಬೇಕು.ಆ ಮೂಲಕ ಸಹಸ್ರಾರು ವರ್ಷಗಳ ಯಾನ ಯಶಸ್ವಿಯಾಗಿ ಭಾರತ ಬಾಹ್ಯಾಕಾಶ ವಿಜ್ಞಾನದ ದೊಡ್ಡಣ್ಣನಾಗಬೇಕು.ಹೀಗೆ ಯಾನ ಹೋಗುತ್ತಿರುವಾಗ ನೌಕೆಯಲ್ಲೇ ಹುಟ್ಟಿದ ಆಕಾಶ್ ಮತ್ತು ಮೇದಿನಿ ತಮ್ಮ ಜನ್ಮ ರಹಸ್ಯವನ್ನು ತಿಳಿಯುವುದಕ್ಕಾಗಿ ತಮ್ಮ ಅಪ್ಪ-ಅಮ್ಮ ಯಾನದುದ್ದಕ್ಕೂತಮ್ಮ ತಮ್ಮ ಕಂಪ್ಯೂಟರ್ ಗಳಲ್ಲಿ  ಬರೆದಿಟ್ಟ ಸಂಗತಿಗಳನ್ನು ಓದುತ್ತಾರೆ.ಆಗ ಮತ್ತೊಂದು ಕಥೆ ಆರಂಭವಾಗುತ್ತದೆ.ಅದು ಆಕಾಶ್ ಮತ್ತು ಮೇದಿನಿಯ ತಂದೆ-ತಾಯಿಯರಾದ ಡಾ.ಸುದರ್ಶನ್ ಮತ್ತು ಉತ್ತರಾಳದ್ದು.
ಡಾ.ಸುದರ್ಶನ್ ಮತ್ತು ಉತ್ತರಾರಿಗೆ ಯಾನಕ್ಕೆ ತೆರಳುವ ಮುನ್ನ ಅವರು ನೌಕೆಯಲ್ಲೇ ಸಂಪರ್ಕ ನಡೆಸಿ ಮಕ್ಕಳನ್ನು ಪಡೆದು ಸಂತತಿಯನ್ನು ಮುಂದುವರೆಸಿ ಯಾನ ಸುಸೂತ್ರವಾಗಿ ಸಾಗುವಂತೆ ಮಾಡಲು ಸೂಚಿಸಲಾಗಿರುತ್ತದೆ.ಸಂಪರ್ಕ ಮಾಡದೇ ಪ್ರನಾಳ ಶಿಶು ವಿಧಾನದಿಂದಲೂ ಮಕ್ಕಳನ್ನು ಪಡೆಯಬಹುದೆಂದು ಸೂಚಿಸಲಾಗುತ್ತದೆ.ಆದರೆ ಯಾನ ಆರಂಭವಾದ ಮೇಲೆ ಉತ್ತರಾ ತನ್ನ ಹಳೆಯ ಪ್ರೇಮಿ ಯಾದವ್ ನ ನೆನಪಲ್ಲೇ ಉಳಿದು ಸುದರ್ಶನ್ ನನ್ನು ನಿರಾಕರಿಸುತ್ತಾಳೆ.ಯಾನ ಹೊರಡುವ ಮುನ್ನ ಮಾತು ಕೊಟ್ಟಂತೆ ನಾವು ನಡೆದುಕೊಂಡು ಸಂಪರ್ಕ ಮಾಡಿ ಕನಿಷ್ಟ ಒಂದು ಮಗುವನ್ನಾದರೂ ಪಡೆಯಬೇಕು, ಇಲ್ಲವಾದರೆ ನಾವು ವಚನಭ್ರಷ್ಠರಾದಂತಾಗುತ್ತದೆ ಎಂದು ಸುದರ್ಶನ್ ಹೇಳಿದಾಗ ಉತ್ತರಾ “ವಚನ,ಕರ್ತವ್ಯ ಎಂಬ ಭೂಮಿಯ ಮೇಲೆ ಮಾಡಿಕೊಂಡ ಕಲ್ಪನೆಗೆ ಭೂಮಿಯಿಂದ ಹೊರಗೆ ಬೆಲೆ ಇರುತ್ತದೆಯೇ?ಭೂಮಿಯ ಸಮಸ್ತ ಜನಾಂಗಕ್ಕೂ ಸೂರ್ಯನೇ ಅಧಿದೇವತೆ.ಹಾಗಾಗಿ ವಚನ,ಕರ್ತವ್ಯ ಎಲ್ಲವೂ ಸೂರ್ಯಾಧಾರಿತವಾಗಿ ನಡೆಯುತ್ತವೆ.ಆದರೆ ಇಲ್ಲಿ ಅಂತರಿಕ್ಷದಲ್ಲಿ ಸೂರ್ಯನು ಯಾವ ಶಕ್ತಿವ್ಯಾಪಿ, ಗುರುತ್ವಾಕರ್ಷಣೆಯೂ ಇಲ್ಲದ ಒಂದು ಕಿರುನಕ್ಷತ್ರವಾಗಿರುವಾಗ  ಅದರ ದೈವತ್ವದ ಕಲ್ಪನೆ ತನಗೆ ತಾನೇ ಕಳಚಿಕೊಳುತ್ತದೆ.ಅದನ್ನವಲಂಬಿಸಿದ ನಿಷ್ಠೆಯೂ ಸತ್ತು ಹೋಗುತ್ತದೆ.ಆದ್ದರಿಂದ ನಾವು ಕೊಟ್ಟ ಮಾತಿಗೆ ಬದ್ಧತೆ ಉಳಿದಿಲ್ಲ″ಎನ್ನುತ್ತಾಳೆ.ಇದು ಓದುಗರನ್ನೂ ಚಿಂತನೆಗೆ ಹಚ್ಚಿ ಕೆಲ ಕಾಲ ತಲೆ ಕೆರೆದುಕೊಳ್ಳುವಂತೆ ಮಾಡುತ್ತದೆ.

ಉತ್ತರಾಳ ಮಾತಿಗೆ ಸುದರ್ಶನ್ ತನ್ನ ಮನಸ್ಸಿನಲ್ಲೇ ಚಿಂತಿಸುತ್ತಾನೆ.ಸಾವಿರ-ಸಾವಿರ ಜ್ಯೋತಿರ್ವರ್ಷ ದೂರದ ನಕ್ಷತ್ರಗಳ ಗುರುತ್ವಾಕರ್ಷಣೆಗಳು ಎಲ್ಲೆಲ್ಲಿಯೂ ನೇಯ್ದ ಬಲೆಯಾಗಿರುವಾಗ ಸೂರ್ಯನಿಂದ ಸಂಪೂರ್ಣ ಸಂಪರ್ಕರಹಿತರಾಗುವುದು ಹೇಗೆ ಸಾಧ್ಯ?ಸತ್ಯವೆಂಬ ನೈತಿಕ ನಿಯಮವು ಗ್ರಹದಿಂದ ಗ್ರಹಕ್ಕೆ,ಒಂದು ಸೌರ ಮಂಡಲದಿಂದ ಇನ್ನೊಂದು ಸೂರ್ಯಮಂಡಲಕ್ಕೆ ಬದಲಾಗುತ್ತದೆಯೇ?ಒಂದು ಮಂಡಲದಲ್ಲಿ ಕೊಟ್ಟ ವಚನವು ಇನ್ನೊಂದು ಮಂಡಲದಲ್ಲಿ ಅರ್ಥ ಕಳೆದುಕೊಂಡು ನಾಶವಾಗಲು ಹೇಗೆ ಸಾಧ್ಯ?ಈ ಮಾತುಗಳೂ ಸಹ ಓದುಗನಿಗೆ ಇಷ್ಟವಾಗುತ್ತವೆ.ಇನ್ನೊಂದು ಕಡೆ ಉತ್ತರಾ “ಮಾನವ ಕುಲದ ಪ್ರಗತಿಯಾಗಬೇಕಾದರೆ ಕೆಲವರಾದರೂ ಕೆಲವು ಅಪರೂಪದ ತ್ಯಾಗಕ್ಕೆ ಸಿದ್ಧರಾಗಿರಲೇಬೇಕಾಗುತ್ತದೆ.ಅದು ನಾನೇ ಏಕಾಗಬಾರದು” ಈ ಮಾತನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ಕಾರ್ಯಪ್ರವರ್ತರಾದರೆ ಪ್ರಪಂಚ ಅಭಿವೃದ್ಧಿಯಾಗುವುದನ್ನು ತಡೆಯಲು ಯಾರಿಂದಲಾದರೂ ಸಾಧ್ಯವೇ?ತನ್ನ ತಂದೆ-ತಾಯಿಯರನ್ನು,ಬಂಧು-ಬಳಗವನ್ನು,ಸ್ನೇಹಿತರನ್ನು,ಈ ಭೂಮಿಯನ್ನೇ ಬಿಟ್ಟು ಎಂದೆಂದೂ ವಾಪಾಸ್ಸು ಬಾರದ ಅಂತರಿಕ್ಷಕ್ಕೆ ಹೋಗುವವರ ಮನಸ್ಥಿತಿ ಹೇಗಿರಬಹುದು?
ತಮ್ಮ ಹಿಂದಿನ ಹಲವು ಕಾದಂಬರಿಗಳಂತೆ ಭೈರಪ್ಪನವರು ಯಾನದಲ್ಲೂ ಆಧ್ಯಾತ್ಮ,ಧ್ಯಾನ,ಯೋಗದ ಕುರಿತು ತಿಳಿಸಿದ್ದಾರೆ.ಇಲ್ಲಿ ಸೂರ್ಯನನ್ನೇ ಪ್ರಧಾನ ಕೇಂದ್ರವಾಗಿರಿಸಿಕೊಂಡು ಸೂರ್ಯನೆಂದರೆ ಯಾರು?ಆತನಿಗೂ ಮಾನವನಿಗೂ ಸಂಬಂಧವೇನು? ಎಂಬುದರ ಕುರಿತು ಚರ್ಚಿಸುತ್ತಾರೆ.”ಈ ಭೌತಿಕ ಸೂರ್ಯ ಒಂದು ಬಿಂಬ,ಒಂದು ಪ್ರತೀಕ.ಅದರ ಮೂಲಕ ನಮ್ಮೊಳಗಿನ ಸತ್ಯವನ್ನು ನಾವು ತಿಳಿಯುವುದನ್ನೇ ಸೂರ್ಯೋಪಾಸನೆ ಎನ್ನುತ್ತಾರೆ  ಬೆಸೆಯುವಿಕೆ ಆದಿತ್ಯ ಗುಣ,ಒಡೆಯುವಿಕೆ ದೈತ್ಯಗುಣ.ಸೂರ್ಯ ಜಗತ್ತನ್ನು ಪರಿಪಾತಗೊಳಿಸುವವನು.ಅಹಂ ಬ್ರಹ್ಮಾಸ್ಮಿ ಎಂಬುದನ್ನು ಅಹಂ ಆದಿತ್ಯೋಸ್ಮಿ,ಅಹಂ ಸೂರ್ಯಾಸ್ಮಿ ಎಂದೂ ಹೇಳಬಹುದು.ಎಲ್ಲಾ ನಕ್ಷತ್ರಗಳೂ ಬ್ರಹ್ಮ ಸ್ವರೂಪಿಯೇ.ಆದರೆ ಸೂರ್ಯನೆಂದರೆ ಸರ್ವವ್ಯಾಪಿಯಾದ ಪರಬ್ರಹ್ಮ” ಹೀಗೆ ಯಾನದಲ್ಲಿ ಭೈರಪ್ಪನವರು ಅದ್ವೈತ ಸಿದ್ಧಂತವನ್ನು ಸೂರ್ಯನಿಗೂ ಅಳವಡಿಸಿದ್ದಾರೆ.ಧ್ಯಾನದ ಬಗ್ಗೆ ಹೇಳುತ್ತಾ “ವಿಶ್ವದಷ್ಟೇ ನಾನೂ ಶಕ್ತ ಎಂಬ ಭಾವ ಧ್ಯಾನದ ಸಮಯದಲ್ಲಿ ಮಾತ್ರ ತುಂಬಿಕೊಳ್ಳುತ್ತದೆ” ಎಂದಿದ್ದಾರೆ.ತತ್ವಶಾಸ್ತ್ರದ ಬಗ್ಗೆ ಹೇಳುತ್ತಾ “ಕತ್ತಲಿನ ಕ್ಷೇತ್ರವು ಬೆಳಕಿನ ಕ್ಷೇತ್ರಕ್ಕಿಂತ ಕೋಟ್ಯಾಂತರ ಪಟ್ಟು ಹೆಚ್ಚು.ಕತ್ತಲಿನ ಶಕ್ತಿಯ ಮುಂದೆ ಬೆಳಕು ಸದಾ ಹೆಣಗಾಡಬೇಕಾಗುತ್ತದೆ.ಬರುಬರುತ್ತಾ ಕತ್ತಲನ್ನೇ ಪ್ರವೇಶಿಸುವುದೇ ಅಸ್ತಿತ್ವದ ಅಂತ್ಯವಾದರೆ ಇಷ್ಟೆಲ್ಲಾ ಕಷ್ಟಪಟ್ಟು ಭೂಮಿಯಿಂದ ಆ ನಕ್ಷತ್ರ ಲೋಕಕ್ಕೆ ಸಂಚರಿಸುವುದೇಕೆ?ಇರುವ ಭೂಮಿಯನ್ನು ಹಾಳುಗೆಡವಿ ಇನ್ನೊಂದು ಅಂಥದ್ದೇ ಭೂಮಿಯನ್ನು ಅನ್ವೇಷಿಸುವ ಹುಚ್ಚು ಏಕೆ?ಯಾವುದೇ ಮತ ಧರ್ಮಗಳ ಅವಲಂಬನೆಯಿಲ್ಲದೇ ಮನುಷ್ಯ ನೀತಿವಂತನಾಗಿ ಬದುಕಬಹುದು.ಆದರೆ ನೀತಿಯ ಪರಿಕಲ್ಪನೆಗಳನ್ನು ಪುನರ್ ರೂಪಿಸಿಕೊಳ್ಳಬೇಕಷ್ಟೇ”ಈ ಎಲ್ಲಾ ಮಾತುಗಳೂ ಓದುಗನನ್ನು ಕೊರೆಯುತ್ತವೆ.
ಎಂದಿನಂತೆ ಈ ಕಾದಂಬರಿಯಲ್ಲೂ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನು ಆಧಾರವಾಗಿರಿಸಿಕೊಂಡೇ ಕಥೆಯನ್ನು ಹೆಣೆಯಲಾಗಿದೆ. ಉದಾಹರಣೆಗೆ ಭಾರತದ ವಿಜ್ಞಾನಿಗಳು ಸಾವಿರಾರು ವರ್ಷ ಸಾಗುವ ಯಾನಕ್ಕೆ ಉಪಯೋಗವಾಗುವ ಅತ್ಯಾಧುನಿಕ ಅಂತರಿಕ್ಷ ನೌಕೆಯನ್ನು ನಿರ್ಮಿಸಿ,ಪ್ರಾಕ್ಸಿಮಾ ಸೆಂಟಾರಿಸ್ ಆಚೆಗೆ ಗ್ರಹಗಳಿವೆಯೇ ಎಂದು ಹುಡುಕ ಹೊರಟಾಗ ವಿಶ್ವದ ದೊಡ್ಡಣ್ಣ ಅಮೇರಿಕಾ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛೀಮಾರಿ ಹಾಕುತ್ತದೆ.ಇನ್ನೂ ಹಿಂದುಳಿದ ದೇಶ,ಹೊತ್ತಿನ ಊಟಕ್ಕೂ ಪರದಾಡುವ ಜನರಿರುವ ದೇಶ ಸಾವಿರಾರು ಕೋಟಿ ಖರ್ಚು ಮಾಡಿ ಯಾನ ನಡೆಸುವ ಅಗತ್ಯವೇನಿತ್ತು?ಅದನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದಲ್ಲ ಎಂದು ಅಮೇರಿಕಾ ಕೇಳುತ್ತದೆ.ಇತ್ತೀಚೆಗೆ ಇಸ್ರೋ ಅಧ್ಯಕ್ಷ ಡಾ.ರಾಧಾಕೃಷ್ಣನ್ ‘ಮಂಗಳಯಾನ’ದ ಸಮಯದಲ್ಲಿ ರಾಕೆಟ್ ನ ಬೆಳ್ಳಿಯ ಪ್ರತಿಮೆಯನ್ನು ಮಾಡಿ ತಿರುಪತಿ ತಿಮ್ಮಪ್ಪನಿಗೆ ಅರ್ಪಿಸಿ ಪೂಜೆ ಮಾಡಿ,ಯಾನ ಯಶಸ್ವಿಯಾಗುವಂತೆ ಪ್ರಾರ್ಥಿಸಿದ್ದು ಅತ್ಯಂತ ವಿವಾದಕ್ಕೆ ಕಾರಣವಾಗಿತ್ತು.ವಿಜ್ಞಾನದಲ್ಲಿ ಧರ್ಮವನ್ನು ತರಬಾರದು ಎಂದು ಅನೇಕರು ವಾದಿಸಿದ್ದರು. ಸರ್ಕಾರದ ಹಣದಲ್ಲಿ ರಾಕೆಟ್ ನ ಬೆಳ್ಳಿಯ ಪ್ರತಿಮೆ ನಿರ್ಮಿಸಿ ಪೂಜಿಸುವುದು ಎಷ್ಟು ಸರಿ ಎಂದೂ ಕೇಳಿದ್ದರು.‘ಯಾನ’ ಕಾದಂಬರಿಯಲ್ಲೂ ಬಾಹ್ಯಾಕಾಶ ಕೇಂದ್ರದ ಮುಖ್ಯಸ್ಥರಾದ ಡಾ.ವೆಂಕಟ್ ಯಾನಕ್ಕೂ ಮುಂಚೆ ತಿರುಪತಿ ತಿಮ್ಮಪ್ಪನಿಗೆ ರಾಕೆಟ್ ನ ಪ್ರತಿಮೆ ಮಾಡಿ ಪೂಜಿಸಿದ್ದು ವಿವಾದವಾಗುತ್ತದೆ.ಅದಕ್ಕೆ ಡಾ.ವೆಂಕಟ್ ಉತ್ತರಿಸುತ್ತಾ “ಸಾವಿರಾರು ಕೋಟಿ ಖರ್ಚು ಮಾಡುವ ಯೋಜನೆಯಲ್ಲಿ ತೊಡಗಿರುವ ವಿಜ್ಞಾನಿಗಳ ಮನೋಬಲವನ್ನು ಎತ್ತಿ ನಿಲ್ಲಿಸಲು ಒಂದು ಪೂಜೆಯನ್ನು ಮಾಡಿದರೆ ಅದನ್ನು ಕಾನೂನು ಬಾಹಿರವೆಂದು ನಿಷೇಧಿಸುವ ಮಾನವೀಯತೆ ಎಷ್ಟು ಸರಿ?” ಎನ್ನುತ್ತಾರೆ.ಹಿಮಾಲಯದ ವರ್ಣನೆಯೂ ಕಣ್ಣಿಗೆ ಕಟ್ಟುವಂತೆ ಬರುತ್ತದೆ.ಇಪ್ಪತ್ತು ವರ್ಷಗಳ ಹಿಂದಿನ ಹಿಮಾಲಯಕ್ಕೂ ಇಂದಿನ ಹಿಮಾಲಯಕ್ಕೂ ಇರುವ ವ್ಯತ್ಯಾಸಗಳೇನು?ಅಲ್ಲಿ ಕಂಡ ಕಂಡಲ್ಲಿ ರಸ್ತೆಗಳನ್ನು ನಿರ್ಮಿಸಿದ್ದರಿಂದ ಪರಿಸರ ಹೇಗೆ ಹಾಳಾಗಿದೆ ಎಂಬುದನ್ನು ವಿವರವಾಗಿ ಭೈರಪ್ಪನವರು ಬರೆಯುತ್ತಾರೆ.ಕೇದಾರನಾಥ ದುರಂತದ ಕಥೆಯೂ ಬರುತ್ತದೆ.
ಕಾದಂಬರಿಯ ವಸ್ತು ನಲ್ವತ್ತು ವರ್ಷಗಳಿಂದ ತಲೆಯಲ್ಲಿತ್ತು.ಆದರೆ ಖಗೋಳ ಶಾಸ್ತ್ರದ ಬಗ್ಗೆ, ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಅಧ್ಯಯನವನ್ನು ನಿರಂತರವಾಗಿ ಮಾಡಿದ್ದರಿಂದ ಕಾದಂಬರಿ ಬರುವುದು ಇಷ್ಟು ತಡವಾಯಿತು ಎಂದು ‘ಯಾನ’ದ ಬಿಡುಗಡೆಗೆ ಮುನ್ನ ಭೈರಪ್ಪನವರು ಹೇಳಿದ್ದರು.ಕಾದಂಬರಿ ಓದಿದಾಗ ನಮಗೆ ಅವರು ನಿರಂತರವಾಗಿ ವಿಷಯದ ಕುರಿತು ಅಧ್ಯಯನ ಮಾಡಿ,ವೈಜ್ಞಾನಿಕ ಸಂಗತಿಗಳನ್ನು ಓದುಗರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಲು ಎಷ್ಟು ಶ್ರಮ ಪಟ್ಟಿದ್ದಾರೆ ಎಂದು ಗೊತ್ತಾಗುತ್ತದೆ.ಉದಾಹರಣೆಗೆ ನೌಕೆಯಿಂದ ಭೂಮಿಗೆ ಫೋನ್ ಮಾಡಿದಾಗ ಒಂದೊಂದು ಶಬ್ದವೂ ಭೂಮಿಯನ್ನು ತಲುಪಲು ಅರ್ಧ ಗಂಟೆ ಬೇಕು.ನೌಕೆಯಲ್ಲಿ ಸಂಚರಿಸುವಾಗ ನಮ್ಮ ಮೂಳೆಗಳು ನಮಗೇ ಗೊತ್ತಿಲ್ಲದಂತೆ ದುರ್ಬಲಗೊಂಡು ಯಾವಾಗ ಬೇಕಾದರೂ ಮುರಿದುಕೊಳ್ಳಬಹುದು.ಹೀಗೇ ಮುಂತಾದ ಬಾಹ್ಯಾಕಾಶ ವಿಜ್ಞಾನದ ರೋಚಕ ವಿವರಗಳನ್ನು ಎಲ್ಲರಿಗೂ ಅರ್ಥವಾಗುವಂತೆ ಹೇಳಿದ್ದಾರೆ.ಅಗತ್ಯವಿರುವಲ್ಲೆಲ್ಲಾ ಸಂಸ್ಕೃತ ಶ್ಲೋಕಗಳನ್ನು ಉಲ್ಲೇಖಿಸಿ ವಿವರಿಸುತ್ತಾರೆ.ಎಂಬತ್ತರ ಹರೆಯದಲ್ಲೂ ನಿರಂತರ ಅಧ್ಯಯನ,ಮಗುವಿನಂಥ ಕುತೂಹಲ,ಹರೆಯದ ವಿದ್ಯಾರ್ಥಿಗಳೂ ನಾಚುವಂಥ ಏಕಾಗ್ರತೆ,ಶಿಸ್ತಿನ ಜೀವನ ಇವು ಭೈರಪ್ಪನವರ ‘ಯಾನ’ದಲ್ಲಿ ನಮಗೆ ಎದ್ದು ಕಾಣುತ್ತದೆ.‘ದರ್ಮಶ್ರೀ’ಯಿಂದ ಹಿಡಿದು ಅವರ ಇಲ್ಲಿಯವರೆಗಿನ ಎಲ್ಲಾ ಕಾದಂಬರಿಗಳನ್ನು ಓದಿದವರಿಗೆ ‘ಯಾನ’ ಸ್ವಲ್ಪ ಸಪ್ಪೆ ಎನಿಸುತ್ತಿದೆ.ಭೈರಪ್ಪನವರು ತಮ್ಮ ಕಸುವನ್ನು ಕಳೆದುಕೊಂಡಿದ್ದಾರೇನೋ ಎಂದನ್ನಿಸುತ್ತದೆ ಎಂದು ಅನೇಕರು ಹೇಳುತ್ತಿದ್ದರೂ ಭೈರಪ್ಪನವರ ಕೆಲವೇ ಕಾದಂಬರಿಗಳನ್ನು ಓದಿದ ನನ್ನಂಥ ಹುಡುಗರಿಗೆ ಯಾನ ಇಷ್ಟವಾಗುವುದರಲ್ಲಿ ಸಂಶಯವಿಲ್ಲ.

ಎಂಬತ್ತರ ವಯಸ್ಸಿನಲ್ಲೂ ಯುವಕನಂತೆ ಓಡಾಡುತ್ತಾ,ಯಾವುದೇ ಹಮ್ಮು,ಬಿಂಕ ಇಲ್ಲದೇ ಎಲ್ಲರೊಂದಿಗೇ ಬೆರೆಯುವ,ಯಾವುದೇ ಪ್ರಶಸ್ತಿ, ಹುದ್ದೆಗಳಿಗೆ ಲಾಬಿ ಮಾಡದ,ಪ್ರಚಾರಕ್ಕಾಗಿ ಮೈಕ್ ಸಿಕ್ಕಲ್ಲೆಲ್ಲಾ ಮಾತನಾಡದ,ಸತ್ಯವನ್ನು ನಿರ್ಭಿಡೆಯಿಂದ ಹೇಳಲು ಎಲ್ಲೂ ಹಿಂಜರಿಯದ,ತಮ್ಮ ಬರಹಗಳ ಬಗ್ಗೆ ಯಾರೇನೇ ಅಂದರೂ ತಲೆ ಕೆಡಿಸಿಕೊಳ್ಳದ,ತಕ್ಷಣ ಮುಂದಿನ ಕಾದಂಬರಿಗಾಗಿ ಸಿದ್ಧತೆ ನಡೆಸುವ ಭೈರಪ್ಪನವರ ಮಹಾಯಾನ ನಿರಂತರವಾಗಿ ಸಾಗಲಿ.ಕನ್ನಡದ ಈ ‘ಸರಸ್ವತಿ ಸಮ್ಮಾನ’ದ ಹೆಮ್ಮೆಯ ಪುತ್ರನ ಸಾಹಿತ್ಯ ಸೇವೆ ಇನ್ನೂ ಮುಂದುವರೆಯಲಿ. ಜನರಿಗೆ ಮಾರ್ಗದರ್ಶಕವಾಗುವ ಇನ್ನೂ ಅನೇಕ ಒಳ್ಳೆಯ ಕಾದಂಬರಿಗಳು ಬಂದು ‘ಕಾದಂಬರಿ ಲೋಕಕ್ಕೊಬ್ಬರೇ ಭೈರಪ್ಪ’ ಎನ್ನುವಂತಾಗಲಿ ಎಂಬುದೇ ನನ್ನ ಆಸೆ.
- ಲಕ್ಷ್ಮೀಶ ಜೆ. ಹೆಗಡೆ, ಮಿಜಾರು
(ಈ ವಿಮರ್ಶೆ ಸುರಹೊನ್ನೆ ಅಂತರ್ಜಾಲ ತಾಣದಲ್ಲಿ ಪ್ರಕಟವಾಗಿದೆ)

Saturday, February 14, 2015

ಅಶ್ರು ನಕ್ಷತ್ರ


ಬೆಳ್ಗೊಡೆಯ ಸುಂಗಿನಲಿ
ನೇತಾಡಿ ಮಿರುಗುವ
ಕೆಂಪು ಮುತ್ತು
ನಿನ್ನ ಖಡ್ಗ ಹರಿದ ಶಿರದಿಂದ
ಒಸರಿ
ಹೆಪ್ಪುಗಟ್ಟಿದ
ಹಸಿಯ ರಕ್ತ

ಅದರ ಪಕ್ಕದಲ್ಲಿಯೇ
ನಗುತಿದೆ ಗಂಡಗತಿಸಿದ
ಗರತಿಯರ ನಿರಾಸೆಯ
ಅಕ್ಷಿಗಳಿಂದ ಉದುರಿ
ಮರಗಟ್ಟಿದ ಸ್ಪಟಿಕ ಸದೃಶ
ಅಶ್ರು ನಕ್ಷತ್ರ

ಜರತಾರಿ ವಸನಗಳಿಂದ
ವಿಜೃಂಭಿಸುತ್ತಿರುವ
ನಿನ್ನ ಹುಸಿನಗೆಯ ಹಿಂದೆ
ಕಪಟವರಿಯದ ಹಸುಗೂಸುಗಳ
ಅನಾಥ ರೋದನದ
ದಳ್ಳುರಿ

ಬಹುಪರಾಕಿನ ಗದ್ದಲದೊಳಗೆ
ದನಿಯಿರದ ಸಮೂಹದೆದುರು
ರತ್ನಖಚಿತ ಸಿಂಹಾಸನದಲಿ
ನೀನು ಪವಡಿಸಿದ್ದರೂ
ನಿನ್ನ ಅಪ್ಪಿರುವ ಖಡ್ಗ
ನಿನ್ನ ಅಳ್ಳೆದೆಯ ಕುರುಹು

ಭೂಪತಿ ಎಂಬ
ಬಿರುದಾಂಕಿತ ನೀನಾದರು
ಒಂದಿಂಚೂ ನೆಲ
ನಿನಗೊಲಿದುದಿಲ್ಲ
ಅನ್ನಕೊಡುವ ಅವ್ವ
ಎಂದು ನೆರೆನಂಬಿದವರನು
ಮಾತ್ರ ಅದು ಹರಸದೆ
ಕೈಬಿಟ್ಟಿಲ್ಲ

ನೀನು, ಈಸು ದೇಶಗಳ ಈಶ
ಎಂದು ಮೆರೆದಾಡಿದರೇನು
ಅಂದಣಗಳಲೇ ಮೆರೆದರೇನು
ಮೃಷ್ಟಾನ್ನವನೇ ಉಂಡರೇನು
ಮರಣಿಸಿದ ಮರು ಘಳಿಗೆ
ಮಣ್ಣಾಗುವುದು ತಪ್ಪುವುದೇನು

- ಕೆ.ಎಂ. ಗಂಗಾಧರಪ್ಪ