Wednesday, March 23, 2016

ಕಥೆಯಾಗಿ ಬಂದವಳು ...

ಕಥೆಯಾಗಿ ಬಂದವಳು
ವ್ಯಥೆಕೊಟ್ಟು ಹೋದಳು

ಮಿಂಚಂತೆ ಬಂದವಳು
ಸಿಡಿಲು ಬಡಿದು ಹೋದಳು

ಆದರೂ ಬಾಳುವೆನು
ಹೃದಯವನು ಬಿಗಿಹಿಡಿದು

ಬೆಂದ ಭೂರಮೆಗೆ ಮಳೆ ಬರುವಿಕೆಯ
ಆಶಯದೊಂದಿಗೆ

Monday, March 21, 2016

ಚಂದ್ರನೂರಿನಲ್ಲಿಂದು ...

ಚಂದ್ರನೂರಿನಲ್ಲಿಂದು
ಕತ್ತಲೆಯಂತೆ
ಕೇಳುತ್ತಿದ್ದಾನೆ ಸಾಲ
ನಿನ್ನ ಕಣ್ಣುಗಳ ಹೊಳಪನ್ನು
ಕೊಡಲೆ?

ನೀನಿಲ್ಲದೆ ...

ನೀನಿಲ್ಲದೆ
ಬರಿದಾಗಿದೆ
ಮನಸು
ಕಾಣಲಿನ್ನೇನಿದೆ
ಕನಸು?

Wednesday, March 9, 2016

ಯುದ್ಧವೆಂದರೆ ...

ಯುದ್ಧವೆಂದರೆ
ಕೋವಿ ಫಿರಂಗಿಗಳು
ಮದ್ದು ಗುಂಡುಗಳು
ಸೋಲು ಗೆಲುವುಗಳು
ಮಾತ್ರವಲ್ಲ ...

ಯುದ್ಧವೆಂದರೆ
ಅಂಗೈಯ ಮದರಂಗಿ ಆರುವ ಮುಂಚೆಯೇ
ಹಣೆಯ ಕುಂಕುಮ ಅಳಿಸಿಕೊಳ್ಳುವ ಹೆಣ್ಣುಗಳು

ಅಪ್ಪನ ತಬ್ಬುವ ಮೊದಲೇ
ತಬ್ಬಲಿಯಾಗುವ ಹಸುಗೂಸುಗಳು
ಮಗನ ಮನಿಯಾರ್ಡರಿಗೆ ಕಾದು ಕುಳಿತ ಹಿರಿಯ ಜೀವಗಳು ...
 

ಯುದ್ಧವೆಂದರೆ
ಇರುವುದೆಲ್ಲವನು ಇಲ್ಲವಾಗಿಸುವ
ಪರರ ನಾಶ ಮಾಡಲು ಹೊರಟು ತಾವೂ ನಾಶವಾಗುವ
ಮನುಷ್ಯರ ಪುರಾತನ
ಆಟ ...

ಸ್ಮಶಾನದ ಗೋರಿಗಳ ನಡುವೆಯೇ ...

ಸ್ಮಶಾನದ ಗೋರಿಗಳ ನಡುವೆಯೇ
ಹಸಿರು ಗರಿಕೆ
ಚಿಗುರೊಡೆಯುವುದು
ಒಡೆದ ಹೃದಯಗಳ ಚೂರುಗಳಲ್ಲಿಯೇ
ಹೊಸ ಕನಸುಗಳು
ಮೂಡುವವು ...

ಹೂಗಳಷ್ಟೇ ಬಾಡುವುದಿಲ್ಲ ...

ಹೂಗಳಷ್ಟೇ ಬಾಡುವುದಿಲ್ಲ
ಕನಸುಗಳೂ ಬಾಡುತ್ತವೆ
ಬರೆಸಿಕೊಂಡವಷ್ಟೇ ಕವಿತೆಗಳಲ್ಲ
ಬರೆಯದೇ ಉಳಿದವೂ ಕವಿತೆಗಳಾಗುತ್ತವೆ ...

ಪಡೆದ ದುಂಬಿಯಷ್ಟೇ ಸುಖಿಸದು ...

ಪಡೆದ ದುಂಬಿಯಷ್ಟೇ ಸುಖಿಸದು
ನೀಡಿದ ಹೂವೂ ಸಂಭ್ರಮಿಸುವುದು
ಸುರಿದ ಆಕಾಶವಷ್ಟೇ ಸುಖಿಸದು
ಪಡೆದ ಇಳೆಯೂ ಸಂಭ್ರಮಿಸುವುದು ...

ಕುಳಿತಿಹೆನು ಕತ್ತಲಲಿ ...

ಕುಳಿತಿಹೆನು ಕತ್ತಲಲಿ
ನಿನ್ನ ನೆನಪ ದೀಪ ಬೆಳಗಿಸಿ
ನಡೆದೆ ನೀನು ಬೆಳಕಿನತ್ತ
ನನ್ನ ಕತ್ತಲಲ್ಲಿರಿಸಿ ...

ಬಾರದಿರು ನಾ ಸತ್ತಾಗ ...

ಬಾರದಿರು ನಾ ಸತ್ತಾಗ 
ಕೊನೆಯ ದರ್ಶನಕೆ
ಇದ್ದಾಗ ಬಾರದವಳು 
ಸತ್ತಾಗ ಬಂದೇಕೆ
ಕಣ್ಣೀರ ವ್ಯರ್ಥ ಮಾಡುವೆ ...

ಒಡೆದ ಹೃದಯದ ...

ನೆನಪುಗಳಲ್ಲಿ ಬದುಕುವುದು 
ಸಾಕಾಗಿದೆ
ಒಡೆದ ಹೃದಯದ ಚೂರುಗಳ 
ಆರಿಸಿ ದಣಿವಾಗಿದೆ ...

Tuesday, March 8, 2016

ಕಮರಿದ ಕನಸುಗಳು ...

ಬಾಡಿದ ಹೂಗಳು
ಮತ್ತೆ ಅರಳುವುದಿಲ್ಲ
ಕಮರಿದ ಕನಸುಗಳು
ಮತ್ತೆ ಚಿಗುರುವುದಿಲ್ಲ
ಮಸಣಕ್ಕೆಸೆದು ಹೋದವಳು
ಮತ್ತೆ ಬರುವುದಿಲ್ಲ ...

ಚಿಗುರಿದ ಕನಸುಗಳಿಗೆ ...

ಒಲವೆಂದು ಬಂದವಳು
ಒಲ್ಲೆನೆಂದು ಹೋದಳು
ಚಿಗುರಿದ ಕನಸುಗಳಿಗೆ
ಬೆಂಕಿ ಹಚ್ಚಿ ಮೈ ಕಾಯಿಸಿಕೊಂಡಳು

ನಿನ್ನ ಕಣ್ಣೆವೆಯೊಳಗಿನಿತು ...

ಹೃದಯದೊಳಗಲ್ಲದಿದ್ದರೂ ಸರಿ
ನಿನ್ನ ಕಣ್ಣೆವೆಯೊಳಗಿನಿತು ನೆಲೆ ನೀಡು
ನಾ ಬದುಕಬೇಕಿದೆ ...

ತೇಲುತ್ತಾ ಮುಳುಗುತ್ತಾ ಸಾಗುತ್ತಿದೆ ಬದುಕು ...

ದಡವಿರದ ನದಿ
ತಳವಿರದ ದೋಣಿ
ಎರಡರ ನಡುವೆ ಬದುಕು
ತೇಲುತ್ತಾ ಮುಳುಗುತ್ತಾ
ಸಾಗುತಿದೆ ...

Monday, March 7, 2016

ಕಳೆದುಕೊಂಡ ನವಿಲುಗರಿಯದೇ ಕನಸು ...

ಗೊತ್ತು ನನಗೆ
ನಾನು ನಿನಗೆ ಇಷ್ಟವಿಲ್ಲವೆಂದು
ಆದರೇನು ಮಾಡಲಿ?
ಮನಸ್ಸು ಕೇಳುತ್ತಿಲ್ಲ
ಚಂಡಿ ಹಿಡಿದ ಮಗುವಿನಂತಹ ಮನಸು
ಎಷ್ಟು ಹೇಳಿದರೂ ಅದಕೆ 
ಕಳೆದುಕೊಂಡ ನವಿಲುಗರಿಯದೇ ಕನಸು ...

Sunday, March 6, 2016

ಒಡೆದ ಕೊಳಲು ಉಲಿಯುವುದಿಲ್ಲ ...

ಒಡೆದ ಕೊಳಲು
ಉಲಿಯುವುದಿಲ್ಲ ನಿಜ
ಒಡೆದ ಹೃದಯ
ಹಾಡುವುದಿಲ್ಲವೆಂದು
ಯಾರು ಹೇಳಿದರು?
ಚರಮಗೀತೆಯದರ ಹಕ್ಕು

ನನ್ನೆದೆಯ ದೀಪವಾಗದಿದ್ದರೂ ...

ನನ್ನೆದೆಯ ದೀಪವಾಗದಿದ್ದರೂ
ಪರವಾಗಿರಲಿಲ್ಲ
ಹಬ್ಬಬಾರದಿತ್ತು ನೀನು
ಕಾಳ್ಗಿಚ್ಚಾಗಿ
ನನ್ನ ಹೃದಯವನು
ಹೀಗೆ ದಹಿಸಬಾರದಿತ್ತು ...

ನಿನಗೇಕೆ ಹೂವಿನ ಕವಿತೆ ಓದುವ ಆಸೆ ...

ಹೇ ಚೆಲುವೆ
ನಿನಗೇಕೆ ಹೂವಿನ ಕವಿತೆ
ಓದುವ ಆಸೆ
ನೀನಾಡುವ ಮಾತೆ ಮುತ್ತಿನಂತಹ
ಕವಿತೆಯಾಗಿರುವಾಗ

ನಿನಗೇಕೆ ಹೂವಿನ
ಪರಿಮಳ ಹೀರುವ ದಾಹ
ನಿನ್ನ ಮನಸಿನ ರೂಪವೇ
ಪರಿಮಳವಾಗಿರುವಾಗ

ನಿನಗೇಕೆ ಹೂವಿನ
ಅಂದ ನೋಡುವ ಆಸೆ
ನಿನ್ನ ಮೊಗದ ಚೆಲುವೇ
ಕಮಲ ಪುಷ್ಪವಾಗಿರುವಾಗ

Wednesday, March 2, 2016

ನಾ ಬೇಡಿದ್ದು ಬೊಗಸೆ ಪ್ರೀತಿ ...

ಪ್ರೀತಿಯ ಹೊರತು ನಾ ಬೇರೇನು
ಕೇಳಿದೆ?
ನೀಡಿದ್ದರೆ ಬೊಗಸೆಯಷ್ಟು ಪ್ರೀತಿ
ನೀನಾಗುತ್ತಿದ್ದೆಯಾ
ನಿರ್ಗತಿಕಳು?