Monday, December 23, 2013

ವಿದಾಯ : ರಾಷ್ಟ್ರಕವಿ ಡಾ|| ಜಿ.ಎಸ್. ಶಿವರುದ್ರಪ್ಪ

ವಿ ದಾ ಯ

ರಾಷ್ಟ್ರಕವಿ ಡಾ|| ಜಿ.ಎಸ್. ಶಿವರುದ್ರಪ್ಪ

hqdefault[1]

07-02-1926 – 23-12-2013

"ಕಾಣದ ಕಡಲಿಗೆ ಹಂಬಲಿಸಿದೆ ಮನ
  ಕಾಣ ಬಲ್ಲೆನೆ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ"  

 
ಜಿ.ಎಸ್. ಶಿವರುದ್ರಪ್ಪನವರ ಬಗ್ಗೆ ಸಾಹಿತ್ಯ ಅಕಾಡೆಮಿ ನಿರ್ಮಿಸಿರುವ ಡಾಕ್ಯುಮೆಂಟರಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
 

ಪ್ರಜಾವಾಣಿ ಸುದ್ದಿ
 
ರಾಷ್ಟ್ರಕವಿ ಡಾ|| ಜಿ.ಎಸ್. ಶಿವರುದ್ರಪ್ಪ ಇನ್ನಿಲ್ಲ
 
ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ, ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ ಅವರು ಸೋಮವಾರ ಬನಶಂಕರಿಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು.
 
ಗೋವಿಂದ ಪೈ, ಕುವೆಂಪು ಅವರ ನಂತರ ನವೆಂಬರ್ 1, 2006ರಂದು ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು ಶಿವರುದ್ರಪ್ಪನವರನ್ನು ಮೂರನೆಯ ರಾಷ್ಟ್ರಕವಿ ಎಂದು ಘೋಷಿಸಲಾಗಿತ್ತು.
 
ಜಿಎಸ್ಎಸ್ ಅವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ 1926ರಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಕುವೆಂಪು ಅವರ ಶಿಷ್ಯರಾಗಿ ಅವರ ಬರವಣಿಗೆ ಮತ್ತು ಜೀವನದಿಂದ ಪ್ರಭಾವಿತರಾಗಿದ್ದರು. 1965ರಲ್ಲಿ ಕುವೆಂಪು ಅವರ ಮಾರ್ಗದರ್ಶನದಲ್ಲಿ ಬರೆದ ‘ಸೌಂದರ್ಯ ಸಮೀಕ್ಷೆ’ ಗ್ರಂಥಕ್ಕೆ ಪಿಎಚ್ ಡಿ ಪದವಿ ಪಡೆದಿದ್ದರು.
 
1946ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲೇ ಕನ್ನಡ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. 1963ರಲ್ಲಿ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ರೀಡರ್ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾಗಿ 1966ರ ವರೆಗೆ ಅಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ 1966ರಿಂದ 1987ರ ವರೆಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಹಾಗೂ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
 
ಸಾಮಗಾನ, ಚೆಲುವು-ಒಲವು, ದೇವಶಿಲ್ಪಿ, ದೀಪದ ಹೆಜ್ಜೆ, ಅನಾವರಣ, ತೆರೆದ ಬಾಗಿಲು, ಗೋಡೆ, ವ್ಯಕ್ತ ಮಧ್ಯ, ಓರೆ ಅಕ್ಷರಗಳು, ತೀರ್ಥವಾಣಿ, ಕಾರ್ತಿಕ, ಕಾಡಿನ ಕತ್ತಲಲ್ಲಿ, ಪ್ರೀತಿ ಇಲ್ಲದ ಮೇಲೆ ಮತ್ತು ಚಕ್ರಗತಿ ಇವು ಜಿಎಸ್ಎಸ್ ಅವರ ಕವನ ಸಂಕಲನಗಳಾಗಿವೆ.
 
ಇನ್ನೂ ಪರಿಶೀಲನ, ವಿಮರ್ಶೆಯ ಪೂರ್ವ ಪಶ್ಚಿಮ, ಸೌಂದರ್ಯ ಸಮೀಕ್ಷೆ (ಇದು ಅವರ ಪಿಹೆಚ್‌ಡಿ ಪ್ರಬಂಧ), ಕಾವ್ಯಾರ್ಥ ಚಿಂತನ, ಗತಿಬಿಂಬ, ಅನುರಣನ, ಪ್ರತಿಕ್ರಿಯೆ, ಕನ್ನಡ ಸಾಹಿತ್ಯ ಸಮೀಕ್ಷೆ, ಮಹಾಕಾವ್ಯ ಸ್ವರೂಪ, ಕನ್ನಡ ಕವಿಗಳ ಕಾವ್ಯಕಲ್ಪನೆ, ಹೊಸಗನ್ನಡ ಕವಿತೆಗಳಲ್ಲಿ ಕಾವ್ಯ ಚಿಂತನ, ಕುವೆಂಪು : ಪುನರಾವಲೋಕನ ಮತ್ತು ಸಮಗ್ರ ಗದ್ಯ ಭಾಗ 1, 2 ಮತ್ತು 3 ಇವು ವಿಮರ್ಶೆ ಮತ್ತು ಗದ್ಯ ಬರಹಗಳಾಗಿವೆ.
 
ಮಾಸ್ಕೋದಲ್ಲಿ 22 ದಿನ (ಸೋವಿಯತ್‌ಲ್ಯಾಂಡ್ ನೆಹರೂ ಪ್ರಶಸ್ತಿ ಬಂದಿದೆ), ಇಂಗ್ಲೆಂಡಿನಲ್ಲಿ ಚತುರ್ಮಾಸ, ಅಮೆರಿಕದಲ್ಲಿ ಕನ್ನಡಿಗ ಮತ್ತು ಗಂಗೆಯ ಶಿಖರಗಳಲ್ಲಿ ಇವು ಜಿಎಸ್ಎಸ್ ಅವರ ಪ್ರವಾಸಕಥನಗಳಾಗಿವೆ.
 
ಬದುಕಿನುದ್ದಕ್ಕೂ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗುತ್ತ ಬಂದ ಜಿಎಸ್‌ಎಸ್‌ ಅವರಿಗೆ 1984 ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, 1973 ರಲ್ಲಿ ಸೋವಿಯತ್‌ಲ್ಯಾಂಡ್ ನೆಹರೂ ಪ್ರಶಸ್ತಿ, 2006ರಲ್ಲಿ  ರಾಷ್ಟ್ರಕವಿ ಪುರಸ್ಕಾರ, 1982ರಲ್ಲಿ  ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ ಸಂದಿವೆ. ಜತೆಗೆ ಬೆಂಗಳೂರು ವಿ.ವಿ. ಮತ್ತು ಕುವೆಂಪು ವಿ.ವಿಗಳು ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ. ಅಷ್ಟೇ ಅಲ್ಲದೇ, ದಾವಣಗೆರೆಯಲ್ಲಿ ನಡೆದ 61 ನೇ ಅಖಿಲ-ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಜಿಎಸ್ಎಸ್‌  ಆಯ್ಕೆಯಾಗಿದ್ದರು.

Friday, December 20, 2013

ಮೆರೆಯಬೇಡವೋ ಮನುಜ

ಮೆರೆಯಬೇಡವೋ ಮನುಜ
ಅಂತರಾಳದ ಅಂಕೆ ಮೀರಿ
ಕೊಂಕು ಬೀರಿದೆ ಸುಂಕ ಕಾದಿದೆ

ನೀತಿ ಮೀರದೆ ನೀನು ಭ್ರಾಂತಿ ಕಾಣದೆ
ಹಾದಿ ಸಾಗಯ್ಯ ಮುಂದೆ ಬಿಂಕ ಮಾಡದೆ
ಡಂಭಾಚಾರವು ಏಕೋ ಏಕೋ
ತುಂಬಾ ತೋರಿಕೆ ಏಕೋ ಏಕೋ
ಸಹಜವಾಗಿ ಬಾಳಿ ಬದುಕಯ್ಯ
                                               
ಡೌಲು ತೋರದೆ ಎಂದೂ ಕೇಡು ಹಂಚದೆ
ಪ್ರೀತಿ ಕಾಣಯ್ಯ ಬಂಧು ದ್ವೇಷ ಕಾರದೆ
ಪೊಳ್ಳು ಜಂಭವು ಸಾಕೋ ಸಾಕೋ
ಸುಳ್ಳು ವಂಚನೆ ಸಾಕೋ ಸಾಕೋ
ಸ್ನೇಹದಿಂದ ಲೋಕ ನೋಡಯ್ಯ

ಪ್ರೊ|| ದೊಡ್ಡರಂಗೇಗೌಡ
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

Tuesday, December 17, 2013

ಇವಳು ಯಾರು ಬಲ್ಲೆಯೇನು

ಇವಳು ಯಾರು ಬಲ್ಲೆಯೇನು
ಇವಳ ಹೆಸರ ಹೇಳಲೇನು
ಇವಳ ದನಿಗೆ ತಿರುಗಲೇನು
ಇವಳು ಏತಕೋ ಬಂದು
ನನ್ನ ಸೆಳೆದಳು

ಅಡಿಯ ಮುಟ್ಟ ನೀಳ ಜಡೆ
ಮುಡಿಯ ತುಂಬ ಹೂವು ಹೆಡೆ
ಇವಳು ಅಡಿಯನಿಟ್ಟ ಕಡೆ
ಹೆಜ್ಜೆಹೆಜ್ಜೆಗೆ ಒಂದು
ದೊಡ್ಡ ಮಲ್ಲಿಗೆ

ಅಂಗಾಲಿನ ಸಂಜೆಗೆಂಪು
ಕಾಲಂದುಗೆ ಗೆಜ್ಜೆಯಿಂಪು
ಮೋಹದ ಮಲ್ಲಿಗೆಯ ಕಂಪು
ಕರೆದುವೆನ್ನನು ನಾನು
ಹಿಡಿಯ ಹೋದೆನು

ಬಂಗಾರದ ಬೆಳಕಿನೊಳಗೆ
ಮುಂಗಾರಿನ ಮಿಂಚು ಬೆಳಗೆ
ಇಳೆಗಿಳಿದಿಹ ಮೋಡದೊಳಗೆ
ಮೆರೆಯುತಿದ್ದಳು ನನ್ನ
ಕರೆಯುತಿದ್ದಳು

ತಾರೆಯಿಂದ ತಾರೆಗವಳು
ಅಡಿಯಿಡುವುದ ಕಂಡೆನು
ಹೂವನೆಸದು ನಡೆದಳವಳು
ಒಂದೆರಡನು ತಂದೆನು

ತಂದ ಹೂವೆ ಇನಿತು ಚಂದ
ಮುಡಿದವಳನು ನೆನೆಯಿರಿ
ಕಾಣಿಸದಾ ವೀಣೆಯಿಂದ
ಹಾಡಿಳಿವುದು ಕೇಳಿರಿ

ಕೆ.ಎಸ್. ನರಸಿಂಹಸ್ವಾಮಿ
ಈ ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

Monday, December 16, 2013

ಶ್ರುತಿ ಮೀರಿದ ಹಾಡು

ಶ್ರುತಿ ಮೀರಿದ ಹಾಡು
ಪ್ರೇಮ ಸುಳಿವ ಜಾಡು
ಅಂದು ಕನಸಿನರಸ
ಇಂದು ಏನೋ ವಿರಸ
ಹಳಸಿತೆ ಆ ಒಲವು
ತಳೆಯಿತೆ ಈ ನಿಲುವು

ಯಾರಿವಳೀ ಹುಡುಗಿ
ಹೊಸ ಹರೆಯದ ಬೆಡಗಿ
ಸಾವಿನ ನಾಡಿನೊಳು
ಜೀವರಸದ ಹೊನಲು

ಮಗುವಿನ ನಗೆಯವನು
ಮಿಡಿಯುವ ಬಗೆಯವನು
ಬಾಗಿಲ ಬಡಿಯುವನು
ಇಂದು ಯಾರೊ ಇವನು

ತೆರೆಗಳ ಮೊರೆತದಲಿ
ಆಳದ ಮೌನದಲಿ
ಹೊರಳು ದಾರಿಗಳಲಿ
ನನ್ನ ಮೂಕ ಅಳಲು

ಬಿ.ಆರ್. ಲಕ್ಷ್ಮಣರಾವ್
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

ಬಾ ಫಾಲ್ಗುಣ ರವಿ ದರ್ಶನಕೆ

ಶಿವಮಂದಿರಸಮ ವನಸುಂದರ ಸುಮಶೃಂಗಾರದ ಗಿರಿಶೃಂಗಕೆ ಬಾ
ಬಾ ಫಾಲ್ಗುಣ ರವಿ ದರ್ಶನಕೆ

ಕುಂಕುಮ ಧೂಳಿಯ ದಿಕ್ತಟವೇದಿಯೊಳೋಕುಳಿಯಲಿ ಮಿಂದೇಳುವನು
ಕೋಟಿವಿಹಂಗಮ ಮಂಗಲರವ ರಸನೈವೇದ್ಯಕೆ ಮುದ ತಾಳುವನು
ಚಿನ್ನದ ಚೆಂಡನೆ ಮೂಡುವನು; ಹೊನ್ನನೆ ಹೊಯ್‌ನೀರ್ ನೀಡುವನು
ಸೃಷ್ಟಿಯ ಹೃದಯಕೆ ಪ್ರಾಣಾಗ್ನಿಯ ಹೊಳೆಹರಿಯಿಸಿ ರವಿ ದಯಮಾಡುವನು

ತೆರೆತೆರೆಯಾಗಿಹ ನೊರೆನೊರೆ ಕಡಲೆನೆ ನೋಡುವ ಕಣ್ಣೋಡುವವರೆಗೆ
ಬನಸಿರಿ ತುಂಬಿದ ಕಣಿವೆಯ ಹಂಬಿರೆ ಧೂಳೀಸಮಹಿಮ ಬಾನ‌ಕರೆಗೆ
ಪ್ರತಿಭೆಯ ಹೋಮಾಗ್ನಿಯ ಮೇಲೆ ಕವಿಮನ ತಾನುರಿದುರಿದೇಳೆ
ಮರಗಿಡದಲಿ ಜಡದೊಡಲಲಿ ಇದೆಕೋ ಸ್ಪಂದಿಸುತಿದೆ ಭಾವಜ್ವಾಲೆ

ವರ್ಣನದಿಂದ್ರಿಯ ನಂದನವನು ದಾಂಟುತೆ ದರ್ಶನ ಮುಕ್ತಿಯ ಸೇರಿ
ವ್ಯಕ್ತಿತೆ ಮೈಮರೆವುದು ಸೌಂದರ್ಯ ಸಮಾಧಿಯೊಳಾನಂದವ ಹೀರಿ
ಸರ್ವೇಂದ್ರಿಯ ಸುಖನಿಧಿ ಅಲ್ಲಿ ಸರ್ವಾತ್ಮನ ಸನ್ನಿಧಿ ಅಲ್ಲಿ
ಸಕಲಾರಾಧನ ಸಾಧನಬೋಧನ ಅನುಭವರಸ ತಾನಹುದಲ್ಲಿ

ಕುವೆಂಪು
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

Sunday, December 15, 2013

ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ

ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು

ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು
ಧನ್ಯತೆಯ ಕುಸುಮಗಳ ಅರ್ಪಿಸಿಲ್ಲಿ 

ಗಂಟೆಗಳ ದನಿಯಿಲ್ಲ ಜಾಗಟೆಗಳಿಲ್ಲಿಲ್ಲ
ಕರ್ಪೂರದಾರತಿಯ ಜ್ಯೋತಿ ಇಲ್ಲ

ಭಗವಂತನಾನಂದ ರೂಪುಗೊಂಡಿಹುದಿಲ್ಲಿ
ರಸಿಕತೆಯ ಕಡಲುಕ್ಕಿ ಹರಿದಿಹುದಿಲ್ಲಿ

ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ
ಬಾದರಾಯಣನಂತೆ ಬೋಧಿಸಿದೆ ಭಾರತವನಿಲ್ಲಿ
ಕುಶಲತೆಗೆ ಬೆರಗಾಗಿ ಮೂಕವಾಗಿದೆ ಕಾಲವಿಲ್ಲಿ
ಮೂರ್ಛೆಯಲಿ ಮೈಮರೆತು ತೇಲುವುದು ಭೂಭಾರವಿಲ್ಲಿ

ಕುವೆಂಪು
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

Tuesday, December 10, 2013

ಇಷ್ಟು ಕಾಲ ಒಟ್ಟಿಗಿದ್ದು ...

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ
ಅರಿತೆವೇನು ನಾವು ನಮ್ಮ ಅಂತರಾಳವ

ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ
ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ

ಸದಾ ಕಾಲ ತಬ್ಬುವಂತೆ ಮೇಲೆ ಬಾಗಿಯೂ
ಮಣ್ಣ ಮುತ್ತು ದೊರಕಿತೇನು ನೀಲಿ ಬಾನಿಗೆ

ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ
ಒಂದಾದರೂ ಉಳಿಯಿತೆ ಕನ್ನಡಿಯ ಪಾಲಿಗೆ

ಎನ್.ಎಸ್. ಲಕ್ಷ್ಮೀನಾರಾಯಣ ಭಟ್
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

Sunday, December 8, 2013

ಪ್ರೇಯಸಿ ಪ್ರೀತಿಸಿ ಮರೆತೆಯಾ?

ಪ್ರೇಯಸಿ ಪ್ರೀತಿಸಿ ಮರೆತೆಯಾ?
ಒಣಗಿಸಿ ಒಲವಿನ ಒರತೆಯಾ
ಹೊರಳಿ ಹೊರಳಿ ನೀ ಸಾಗಿದೆ
ಮನವೋ ಮಸಣ ತಾನಾಗಿದೆ

ಕಣ್ಣೀರ ಕೊಳದಲ್ಲಿ
ಹುಟ್ಟಿರದ ದೋಣಿಯಲಿ
ಏಕಾಂಗಿ ಕುಳಿತಿರಲು
ನಕ್ಷತ್ರ ಅಳುತಿರಲು
ಇರುಳಿನ ಗಾಳಿ ನರಳಿ
ಗಾನದ ಗಾಯಕೆ ಮಾಯದ ನೋವಿದೆ
ಪ್ರೀತಿಯ ಹೂವಿಗೆ ಆಳದ ಅಳಲಿದೆ

ಕಾರಿರುಳ ಕಾಡಿನಲಿ
ಗುರಿಯಿರದ ಜಾಡಿನಲಿ
ಏಕಾಂಗಿ ಅಲೆದಿರಲು
ಬಿರುಗಾಳಿ ಮೊರೆದಿರಲು
ಕರುಳಿನ ಕಾತರ ಕೆರಳಿ
ವಿರಹದ ದಳ್ಳುರಿ ದೇಹವ ದಹಿಸಿದೆ
ಕುದಿದಿದೆ ಎದೆಗೊಳ ಬೇಗೆಯ ಸಹಿಸದೆ

ಹೆಚ್.ಎಸ್. ವೆಂಕಟೇಶಮೂರ್ತಿ
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

Wednesday, December 4, 2013

ಎಲ್ಲೋ ಹುಡುಕಿದೆ ಇಲ್ಲದ ದೇವರ

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ

ಎಲ್ಲಿದೆ ನಂದನ ಎಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಗೆಗೆ

ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಂಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆಯೆಂಬುದು
ನಾಲ್ಕು ದಿನದ ಈ ಬದುಕಿನಲ್ಲಿ

ಜಿ.ಎಸ್. ಶಿವರುದ್ರಪ್ಪ
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ