ಎಸ್. ಸೂರ್ಯಪ್ರಕಾಶ ಪಂಡಿತ್
ಸ್.ಎಲ್. ಭೈರಪ್ಪನವರ ನೂತನ ಕಾದಂಬರಿ ‘ಉತ್ತರಕಾಂಡ’. ಶೀರ್ಷಿಕೆಯೇ ಅದರ ವಸ್ತುವನ್ನು
ಗುಟ್ಟು ಮಾಡದೆ ನೇರವಾಗಿ ವಾಲ್ಮೀಕಿ ರಾಮಾಯಣ ಎಂದು ಹೇಳಿಬಿಡುತ್ತದೆ. ರಾಮಾಯಣವನ್ನು
ಆಧರಿಸಿ ರಚಿತವಾದ ಅಸಂಖ್ಯ ಕಾವ್ಯ–ನಾಟಕ–ಕಥೆ–ಕಾದಂಬರಿಗಳ ಉದ್ದೇಶವಾದರೂ ಏನು
ಎನ್ನುವುದನ್ನು ನಾವು ಗಂಭೀರವಾಗಿ ಅಧ್ಯಯನ ಮಾಡಬೇಕಿದೆ. ರಾಮಾಯಣದ ಬಹುಪಾಲು
‘ಪುನರ್‌ಸೃಷ್ಟಿ’ಗಳು ರಾಮಾಯಾಣವನ್ನು ವಿಮರ್ಶಾತ್ಮಕವಾಗಿಯೇ ಕಂಡರಿಸಲು ತವಕಿಸಿವೆ
ಎಂಬುದು ನಮ್ಮ ದೇಶದ ಕಾವ್ಯಪರಂಪರೆಯ ಬಹುದೊಡ್ಡ ಸಿದ್ಧಿಯಾಗಿದೆ. ಉದಾಹರಣೆಗಾಗಿ,
ಕಾಳಿದಾಸನ ‘ರಘುವಂಶ’ವನ್ನು ಗಮನಿಸಬಹುದು. ಅವನು ತನ್ನ ಕಾವ್ಯದಲ್ಲಿ ಚಿತ್ರಿಸಿರುವುದು
‘ರಘುವಂಶ’ದ ಏಳು–ಬೀಳುಗಳನ್ನು. ರಾಮನಂಥ ಆದರ್ಶರಾಜನನ್ನು ಕೊಟ್ಟ ವಂಶದ ಅಧಃಪತನವನ್ನು
ಅಗ್ನಿವರ್ಣನ ಮೂಲಕ ಚಿತ್ರಿಸಿದ್ದಾನೆ; ಆ ಮೂಲಕ ಆದರ್ಶದ ಭಾಗ್ಯವನ್ನೇ ಅವನು ವಿಮರ್ಶೆಗೆ
ಒಡ್ಡಿದ್ದಾನೆ. ಆದರೆ, ಕಾಳಿದಾಸಾದಿಗಳ ಈ ರಾಮಾಯಣದ ವಿಮರ್ಶೆ ಕೇವಲ ಬೌದ್ಧಿಕ
ವ್ಯಾಯಾಮವಾಗಿರದೆ ಕಾವ್ಯದ ಭಿತ್ತಿಯಲ್ಲಿ ನಡೆದಿರುವ ರಸವ್ಯಾಪಾರ ಎನ್ನುವುದನ್ನು
ಮರೆಯುವಂತಿಲ್ಲ. ಅಂತೆಯೇ ರಾಮನನ್ನೂ ರಾಮಾಯಣವನ್ನೂ ಸೀತೆಯ ನೋಟದಿಂದ ಕಂಡರಿಸಲು
ಹೊರಟಿರುವುದೇ ಭೈರಪ್ಪನವರ ಕೃತಿ ‘ಉತ್ತರಕಾಂಡ’.
ರಾಮಾಯಣ ನಮ್ಮ ಪಾಲಿಗೆ ಕೇವಲ ಒಂದು ಮಹಾಕಾವ್ಯವಷ್ಟೆ ಅಲ್ಲ; ಅದು ಇತಿಹಾಸ; ಪುರಾಣವೂ
ಕೂಡ. ಮಾತ್ರವಲ್ಲ, ನಮ್ಮ ಸಂಸ್ಕೃತಿಯ ಆಧಾರಶ್ರುತಿಯೂ ಹೌದು. (ಮಹಾಭಾರತವನ್ನು ‘ಇತಿಹಾಸ’
ಎಂದೂ ರಾಮಾಯಣವನ್ನು ‘ಕಾವ್ಯ’ ಎಂದೂ ವಿಂಗಡಿಸಲಾಗಿದ್ದರೂ ವಿಶಾಲಾರ್ಥದಲ್ಲಿ ‘ಪುರಾಣ’
ಎಂದು ಇಲ್ಲಿ ಎಣಿಸಲಾಗಿದೆ.) ಇಂಥದೊಂದು ಜೀವಂತಕೃತಿಗೆ ಒದಗಿರುವ ‘ಆಧುನಿಕ’
ಸಂವೇದನೆಯನ್ನು ಹೇಗೆ ಗ್ರಹಿಸಿಕೊಳ್ಳಬೇಕೆಂಬ ಪ್ರಶ್ನೆಗೆ ಉತ್ತರ ಸುಲಭವಲ್ಲ. ಅಂತೆಯೇ
ಭೈರಪ್ಪನವರ ‘ಉತ್ತರಕಾಂಡ’ದ ಕಾದಂಬರಿಯ ವಿಮರ್ಶೆಗೆ ಮಾಡಿಕೊಳ್ಳಬೇಕಾದ ಸಿದ್ಧತೆಗಳೇನು
ಎಂದು ನಿರ್ಧರಿಸಿಕೊಳ್ಳುವುದೂ ಸುಲಭವಲ್ಲ. ‘ಗೃಹಭಂಗ’ ಅಥವಾ ‘ಮಂದ್ರ’ದಂಥ
ಕಾದಂಬರಿಗಳನ್ನು ರಚಿಸಿದವರೇ ‘ಉತ್ತರಕಾಂಡ’ವನ್ನೂ ರಚಿಸಿದ್ದಾರೆ ಎಂದಾಗ ಓದುಗನ
ರಸಮಾರ್ಗದಲ್ಲಿ ಮೂಡುವ ನಿರೀಕ್ಷೆಯ ಕಾವ್ಯಲಕ್ಷಣಗಳ ಮೈಲುಗಲ್ಲುಗಳಷ್ಟೆ ಅದರ ವಿಮರ್ಶೆಗೆ
ಮಾನದಂಡವಾಗಬೇಕೆ – ಎಂದು ಕೇಳಿಕೊಂಡಾಗಲೂ ಉತ್ತರವನ್ನು ಕಂಡುಕೊಳ್ಳುವುದು ಕಷ್ಟ. ಎಂದರೆ,
‘ಉತ್ತರಕಾಂಡ ಕಾದಂಬರಿಯಾಗಿ ಗೆದ್ದಿದೆ ಅಥವಾ ಸೋತಿದೆ’ ಎಂದಷ್ಟೆ ಹೇಳುವುದರಿಂದ ಏನನ್ನೂ
ಹೇಳಿದಂತಾಗುವುದಿಲ್ಲ. ಬಿಡುಗಡೆಯ ದಿನವೇ ಮರುಮುದ್ರಣವನ್ನೂ ಕಾಣುವಷ್ಟು ಭೈರಪ್ಪನವರ
ಕಾದಂಬರಿಗಳು ಅತ್ಯಂತ ಜನಪ್ರಿಯವೂ ಆಗಿವೆ. ಈ ಜನಪ್ರಿಯತೆಗೆ ಕಾರಣಗಳೇನು ಎಂದು
ತಿಳಿಯುವುದು ವಿಮರ್ಶೆಯ ಸಂದರ್ಭದಲ್ಲಿ ಬೇಕೆ? ಬೇಡವೆ? – ಈ ಪ್ರಶ್ನೆಗಳಿಗೂ ಉತ್ತರ
ಸುಲಭವಲ್ಲ.
‘ಉತ್ತರಕಾಂಡ’ದ ಜೊತೆಗೆ ನಾವು ಗಮನಿಸಬೇಕಾದ ಭೈರಪ್ಪನವರ ಕಾದಂಬರಿ ಎಂದರೆ ‘ಪರ್ವ’.
ಏಕೆಂದರೆ ಪರ್ವದ ಸೃಷ್ಟಿಗೆ ಕಾರಣವಾದ ಅಂಶಗಳೇ ‘ಉತ್ತರಕಾಂಡ’ಕ್ಕೂ ಮೂಲವಾಗಿವೆ.
ಕಾವ್ಯ–ಇತಿಹಾಸ–ಪುರಾಣಗಳ ಮಿಶ್ರಣವಾದ ಪ್ರಾಚೀನ ಮಹಾಕೃತಿಗಳಾದ ರಾಮಾಯಣ–ಮಹಾಭಾರತಗಳನ್ನು
ಆಧುನಿಕ ಸಾಹಿತ್ಯಪ್ರಕಾರವಾದ ಕಾದಂಬರಿಯಲ್ಲಿ ಪುನರ್‌ಸೃಷ್ಟಿಸುವುದಷ್ಟೆ ಕಾದಂಬರಿಕಾರರ
ಆಶಯವಾಗಿಲ್ಲ. ‘ಮೂಲಕೃತಿಗಳನ್ನು ಅಲೌಕಿಕ ಅಂಶಗಳಿಂದ ಪಾರು ಮಾಡಿಸಿ, ಸಾಮಾನ್ಯರನ್ನೂ
ಅಸಾಮಾನ್ಯರನ್ನೂ ಒಂದೇ ದೃಷ್ಟಿಯಿಂದ ನೋಡಿ, ಯಾವುದೋ ಕಾಲದ ವ್ಯಕ್ತಿ–ಸಂಗತಿಗಳು ನಮ್ಮ
ಕಾಲದವಾಗಿ, ನಮಗೆ ತೀರ ಹತ್ತಿರದವಾಗಿ ಮಾರ್ಪಡಿಸುವ ಕುಶಲತೆಯೂ ಈ ರಚನೆಗಳ ಹಿಂದಿನ
ಆಶಯದಲ್ಲಿ ಸೇರಿಕೊಂಡಿದೆ.’ ಇದನ್ನು ಸುಲಭವಾಗಿ ಹೇಳಬೇಕೆಂದರೆ, ಪುರಾಣವನ್ನು ಅದರ
ಪೌರಾಣಿಕತೆಯಿಂದ ಕಳಚುವುದು. ಇಲ್ಲಿ ಕೇಳಿಕೊಳ್ಳಬೇಕಾದ ಪ್ರಶ್ನೆ: ಪುರಾಣಭಂಜನ
ಎನ್ನುವುದು ನಮ್ಮ ಸಂಸ್ಕೃತಿಗೆ ಒಗ್ಗುವ ಸಂಗತಿಯೇ? ಕೆಲವರಿಗೆ ‘ಪುರಾಣ’ ಎಂದರೆ ಕಲ್ಪನೆ,
ಊಹೆಗಳಿಂದ ಕಟ್ಟಿಕೊಂಡ ಕಥೆಗಳು ಮಾತ್ರವೇ. ಇವುಗಳಿಗೆ ಇತಿಹಾಸದ ಶಿಷ್ಟಗುಣಗಳು ಇರದು;
ತರ್ಕ–ಅರ್ಥ–ವಾಸ್ತವಿಕತೆಗಳ ಬಲವೂ ಇರದು; ಹೀಗಾಗಿ ಅವನ್ನು ನಮ್ಮ ಪ್ರತಿಭೆಯಿಂದ ಅರ್ಥೈಸಿ
ಉಳಿಸಬೇಕಿದೆ ಎಂದೂ ಕೆಲವರು ಯೋಚಿಸುವುದುಂಟು. ನಮ್ಮ ‘ಪುರಾಣ’ಗಳನ್ನು ಹೀಗೆ
ಸರಳೀಕರಿಸಿಕೊಂಡು ಪಡುತ್ತಿರುವ ಪಾಡುಗಳಿಂದ ಉಂಟಾಗಿರುವ/ಉಂಟಾಗುತ್ತಿರುವ ಸಾಂಸ್ಕೃತಿಕ
ಕ್ಷೋಭೆಗಳಿಗೇನೂ ಕೊರತೆಯಿಲ್ಲ. ಪುರಾಣಗಳು ಸಂಸ್ಕೃತಿಯೊಂದಕ್ಕೆ ನಿರಂತವಾಗಿ
ಪ್ರಾಣಶಕ್ತಿಯನ್ನು ಒದಗಿಸುತ್ತಿರುತ್ತದೆ. ನಮ್ಮ ವಾಸ್ತವಜಗತ್ತಿನ ‘ಸತ್ಯ’ಗಳು
ಪುರಾಣಪ್ರಜ್ಞೆಯನ್ನು ಮುಕ್ಕಾಗಿಸುವುದರಲ್ಲಿಯೇ ಸುಖ ಕಾಣಲು ತೊಡಗಿದರೆ ಸಂಸ್ಕೃತಿಯು
ಭಾವದ ಬಡತನದಿಂದ ಕಳಾಹೀನವಾಗಬೇಕಾಗುತ್ತದೆ. ‘ಯೂರೋಪಿನಲ್ಲಾಗಲಿ, ನಮ್ಮ ದೇಶದಲ್ಲಿಯೇ
ಆಗಲಿ ಮಾನವತಾವಾದ ಮಾಡಿದ ಕೆಲಸವೆಂದರೆ ಪೌರಾಣಿಕತೆಯನ್ನು ತನ್ನ ಸರಳವಾದ ಭಾಷೆಯಲ್ಲಿ
ಅನುವಾದ ಮಾಡಿದ್ದು. ಮಾನವತಾವಾದ ತನ್ನ ತಾಪಮಾನಕ್ಕೆ ಒಗ್ಗುವಂತೆ ಜಗತ್ತಿನ ಪ್ರತಿಯೊಂದು
ವಸ್ತುವನ್ನೂ ಹದಗೊಳಿಸಿ ಇಡಬೇಕೆನ್ನುತ್ತದೆ’ ಎಂದ ಕೀರ್ತಿನಾಥ ಕುರ್ತಕೋಟಿಯವರ ಮಾತು
ಇಲ್ಲಿ ಮನನೀಯ. ಮಾನವತಾವಾದ ಎಂದರೆ ಪ್ರಜ್ಞಾವಲಯದಿಂದ ಹೊರಗೆ ನಿಂತು, ನಮ್ಮ
ಬುದ್ಧಿ–ತರ್ಕವನ್ನಷ್ಟೆ ನಂಬಿ ಇತಿಹಾಸವನ್ನು ಕಟ್ಟುತ್ತ ಅದಕ್ಕೆ ಪ್ರಗತಿಶೀಲತೆಯ
ಅಲಂಕಾರವನ್ನು ಮಾಡುವುದು.
ಇತಿಹಾಸವನ್ನು ಕುರಿತು ನಮಗಿರುವ ಭಯವೇ ಪುರಾಣವನ್ನೂ ಇತಿಹಾಸದ ಚೌಕಟ್ಟಿಗೆ ಬಗ್ಗಿಸಲು
ನಮ್ಮ ಮೇಲೆ ಒತ್ತಡವನ್ನು ಹೇರುತ್ತದೆ. ಆದರೆ ಪುರಾಣಪ್ರಜ್ಞೆಯಿಂದ ವಂಚಿತವಾದ ಮನಸ್ಸು
ಜಗತ್ತಿನ ಬಗ್ಗೆ ಉಲ್ಲಾಸ–ನಂಬಿಕೆಗಳನ್ನು ಕಳೆದುಕೊಂಡು ಬದುಕನ್ನು ಒಂದು ಹೊರೆಯಂತೆ
ಕಾಣುವಂತಾಗುತ್ತದೆ; ಅರಿವಿನ ವಿಶ್ವಾತ್ಮಕತೆಯನ್ನು ಅದು ತರ್ಕದ ಗೂಟಕ್ಕೆ ಬಿಗಿಯುತ್ತದೆ.
‘Men live by myths, ... they are no mere poetic invention’ – ಆನಂದ
ಕುಮಾರಸ್ವಾಮಿಯವರು ಉಲ್ಲೇಖಿಸುವ ಈ ಮಾತು ನಮ್ಮ ಸಂಸ್ಕೃತಿಗೆ ಒಪ್ಪುವಂಥದ್ದು;
ಒಗ್ಗಿರುವಂಥದ್ದು. ಪುರಾಣಗಳು ನಮ್ಮಲ್ಲಿ ಹೇಗೆ ಜೀವಿಸುತ್ತವೆ, ಅಥವಾ ಪುರಾಣಗಳಲ್ಲಿ
ನಾವು ಹೇಗೆ ಬದುಕುತ್ತಿರುತ್ತೇವೆ ಎನ್ನುವುದನ್ನು ವಿಶದೀಕರಿಸಲು ಕುರ್ತಕೋಟಿಯವರ ಈ
ಮಾತುಗಳು ನೆರವಾಗುತ್ತವೆ:
‘ಮನುಷ್ಯನ ಇತಿಹಾಸ ಪ್ರಾರಂಭವಾಗುವದಕ್ಕಿಂತ ಮೊದಲಿನ ಸಂಗತಿಗಳಿಗೆ ಸಂಬಂಧಿಸಿದವುಗಳೆಂದು
ಅವುಗಳನ್ನು ‘‘ಪುರಾಣ’’ ಎಂದು ಕರೆಯಬೇಕಾಯಿತು. ಆ ದೃಷ್ಟಿಯಿಂದ ನೋಡಿದಾಗ ನಮ್ಮ ಇತಿಹಾಸ
ತೀರ ಅರ್ವಾಚೀನವಾದದ್ದು. ಆದರೂ ಪೌರಾಣಿಕ ಪ್ರತಿಭೆ ಬೇಗ ಅಳಿದುಹೋಗಲಿಲ್ಲ. ವಿಶ್ವದ
ಉತ್ಪತ್ತಿ ಮತ್ತು ಅದರ ಸ್ಥಿತಿಗತಿಗಳ ಬಗ್ಗೆ, ದೇವಮಾನವ ಸಂಬಂಧದ ಬಗ್ಗೆ ಹೊಸ ಹೊಸ
ಪೌರಾಣಿಕ ಕಲ್ಪನೆಗಳು ಕಾಲಕಾಲಕ್ಕೆ ಪ್ರಕಟವಾಗುತ್ತಲೇ ಬಂದಿವೆ. ಇದರಿಂದಾಗಿ ನಮ್ಮ
ಸಾಮಾಜಿಕ ಸಂಸ್ಕೃತಿಯ ರೂಪುರೇಷೆಗಳು, ನಮ್ಮ ಜ್ಞಾನದ ಪರಿಸೀಮೆಗಳು ಪುರಾಣಗಳಲ್ಲಿ
ಕಾಣಸಿಗುತ್ತವೆ. ಒಟ್ಟಿನಲ್ಲಿ ಹೇಳುವುದಾದರೆ ಮನುಷ್ಯನ ಸಾರ್ವತ್ರಿಕ ಪ್ರಜ್ಞೆಯ ಬೇರುಗಳು
ನಮಗೆ ಪುರಾಣಗಳಲ್ಲಿಯೇ ದೊರೆಯುತ್ತವೆ. ದಂತಕತೆಗಳು, ಭೂತಪ್ರೇತಗಳ ಕತೆಗಳು, ಕಲ್ಪಕ
ಕತೆಗಳು, ಜಾನಪದ ನಂಬಿಕೆಗಳು ಇವೆಲ್ಲವೂ ನಮ್ಮ ಪೌರಾಣಿಕತೆಯ ಅಂಶಗಳೇ ಆಗಿವೆ.
ಸೂರ್ಯಚಂದ್ರರ ಗ್ರಹಣಗಳ ಬಗ್ಗೆ ಈಗ ಇರುವ ತಿಳಿವಳಿಕೆ ಕೂಡ, ನಮ್ಮ ದೇಶದ ಮಟ್ಟಿಗೆ
ಹೇಳುವುದಾದರೆ ಹಳೆಯದೇ. ಆದರೆ ಅದರ ಜೊತೆಗೇ ರಾಹುಕೇತುಗಳು ಚಂದ್ರ–ಸೂರ್ಯರನ್ನು
ಹಿಡಿಯುತ್ತಾರೆಂಬ ಕತೆ ಮತ್ತು ಅದಕ್ಕೆ ಹಿನ್ನೆಲೆಯ ಕಾರಣವಾಗಿ ಸಮುದ್ರಮಂಥನದ ಕತೆ
ಇಂದಿನವರೆಗೂ ಪ್ರಚಲಿತವಾಗಿದೆ. ಚಂದ್ರ–ಸೂರ್ಯರ ಗ್ರಹಣ ಹೇಗೆ ಆಗುತ್ತದೆಂಬ ರಹಸ್ಯವನ್ನು
ಬಯಲು ಮಾಡಲು ಈ ಕತೆ ರಚಿತವಾಗಿದೆಯೆಂದು ಹೇಳಿದರೆ ಅದಕ್ಕಿಂತ ದೊಡ್ಡದಾದ ತಪ್ಪು
ತಿಳಿವಳಿಕೆ ಇನ್ನೊಂದಿಲ್ಲ. ಸ್ವರ್ಗದಲ್ಲಿಯ ವ್ಯವಸ್ಥೆ ಆ ಕತೆಯ ಆಶಯವೇ ಹೊರತು ಗ್ರಹಣದ
ತಿಳಿವಳಿಕೆಯಲ್ಲ.’
ಮನುಷ್ಯನ ಭಾವ–ಬುದ್ಧಿ–ದೇಹಗಳು ಸಾಧಿಸಿರುವ ಎಲ್ಲ ಬಗೆಯ ಸಿದ್ಧಿಗಳ ಮೂಲಶಕ್ತಿ ಅವನ
ಪುರಾಣ(Myth)ಪ್ರಜ್ಞೆಯೇ ಹೌದು ಎನ್ನುವುದು ಪ್ರಪಂಚದ ಹಲವು ಸಂಸ್ಕೃತಿಗಳ
ಪುರಾಣವಾಙ್ಮಯವನ್ನು ಅಧ್ಯಯನ ಮಾಡಿದ್ದ ಜೋಸೆಫ್ ಕ್ಯಾಂಬೆಲ್‌ರ ಸಿದ್ಧಾಂತ. ‘It would
not be too much to say that myth is the secret opening through which the
inexhaustible energies of the cosmos pour into the human cultural
manifestation. Religions, philosophies, arts, the social forms of
primitive and historic man, prime discoveries in science and technology,
the very dreams that blister sleep, boil up from the basic, magic ring
of myth’ – ಅವರ ಈ ವಾಕ್ಯಗಳೂ ಮನನೀಯವಾಗಿವೆ. ಇಂಥ ಮಾತುಗಳ ಸತ್ತ್ವಪರೀಕ್ಷೆ ನಡೆಯದೆ
‘ಅವೈಜ್ಞಾನಿಕ’ ಎಂದು ತಳ್ಳಿಹಾಕುವುದು ದಿಟವಾಗಿಯೂ ಅವೈಜ್ಞಾನಿಕ ಧೋರಣೆಯೇ
ಆಗುತ್ತದೆಯಷ್ಟೆ! ಜಗತ್ತಿನ ಶ್ರೇಷ್ಠ ಗಣಿತಜ್ಞರಲ್ಲಿ ಒಬ್ಬರೆನಿಸಿರುವ ಶ್ರೀನಿವಾಸ
ರಾಮಾನುಜನ್ ‘An equation has no meaning for me unless it expresses a
thought of God’ ಎಂದು ಉದ್ಗರಿಸಿದ್ದರು. ರಾಮಾನುಜನ್‌ರ ಗಣಿತಭಾಗ್ಯವಾದ ‘ದೈವ’ವು ಅವರ
ಭಾವಕೋಶದ ಪುರಾಣಪ್ರಜ್ಞೆಯೇ ಹೊರತು ಅದು ಬುದ್ಧಿಕೋಶದ ಲೆಕ್ಕಾಚಾರವಾಗಿರಲು
ಸಾಧ್ಯವಿಲ್ಲವಷ್ಟೆ. ಪುರಾಣವೊಂದರ ವಾಗರ್ಥಗಳ ಪದರಗಳನ್ನು ಈರುಳ್ಳಿಯನ್ನು ಸುಲಿದಂತೆ
ಬಿಡಿಸುತ್ತಹೋದರೆ ಅಂತಿಮವಾಗಿ ದೊರೆಯುವ ಭಾವಶೂನ್ಯದ ಬಗ್ಗೆ ಎಚ್ಚರಿಸಲು ಇಷ್ಟೆಲ್ಲ
ಹೇಳಬೇಕಾಯಿತು.
ಹಾಗಾದರೆ ಭೈರಪ್ಪನವರ ‘ಉತ್ತರಕಾಂಡ’ವನ್ನು ವಾಲ್ಮೀಕಿ ರಾಮಾಯಣದ ನೆರಳಿನಲ್ಲಿಯೇ
ನೋಡಬೇಕೇ? ಇದಕ್ಕೆ ‘ಹೌದು’ ಎಂದರೂ ಅಥವಾ ‘ಇಲ್ಲ’ ಎಂದರೂ – ಮತ್ತಷ್ಟು ಪ್ರಶ್ನೆಗಳು,
ಉಪಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಸರಿಯೇ, ಇದಕ್ಕೆ ಸಮಾಧಾನವಾದರೂ ಏನು? ಕಾವ್ಯದ
(ಅಥವಾ ಕಾದಂಬರಿಯ) ಉದ್ದೇಶವಾದರೂ ಏನು? ಕಾವ್ಯಕ್ಕೂ ಅದರ ಓದುಗನಿಗೂ ಇರಬೇಕಾದ ಸಂಬಂಧ
ಎಂಥದ್ದು? ಈ ಪ್ರಶ್ನೆಗಳಿಗೂ ಉತ್ತರ ಸುಲಭವಲ್ಲ. ನಮ್ಮ ಪ್ರಾಚೀನ ಕಾವ್ಯಮೀಮಾಂಸಕರೂ ಈ
ಪ್ರಶ್ನೆಯನ್ನು ಎತ್ತಿಕೊಂಡು ಉತ್ತರಿಸಲು ಪ್ರಯತ್ನಿಸಿದ್ದಾರೆ. ‘ರಸಾನುಭವ’ – ಎಂದರೆ
ವಾಸ್ತವಜಗತ್ತಿನ ಸದ್ಯದ ಸುಖ–ದುಃಖಗಳಿಂದ ನಮ್ಮನ್ನು ಆ ಕ್ಷಣಕ್ಕಾದರೂ ಬಿಡುಗಡೆಗೊಳಿಸಿ
ನೆಮ್ಮದಿಯಲ್ಲಿ ನಮ್ಮ ಭಾವ–ಬುದ್ಧಿಗಳಿಗೆ ನೆಲೆಯೊಂದನ್ನು ಒದಗಿಸುವುದೇ ಕಾವ್ಯದ ಅಂತಿಮ
ಗುರಿ ಎಂಬ ನಿಲುವಿಗೆ ಹೆಚ್ಚಿನ ಮನ್ನಣೆ ಒದಗಿದೆ. ನಮ್ಮ ಹೊರಗಿನ ಬದುಕನ್ನು ಬದಲಾಯಿಸುವ
ಒತ್ತಡ ಕಾವ್ಯಕ್ಕಿದೆ ಎಂಬ ಘೋಷಣೆಯನ್ನು ಪೋಷಿಸಿದವರು ಕಡಿಮೆ ಎಂದೇ ಹೇಳಬೇಕು.
‘ಉತ್ತರಕಾಂಡ’ದ ಕೊನೆಯ ಮಾತು ಕೂಡ ‘ಕವಿಯು ಏನನ್ನು ತಾನೆ ಬದಲಿಸಬಲ್ಲ?’ ಎಂಬ ಪ್ರಶ್ನೆಯೇ
ಆಗಿದೆ. ಹಾಗಾದರೆ ರಾಮಾಯಣದ ಪೌರಾಣಿಕಸತ್ಯವನ್ನು ವಾಸ್ತವಸತ್ಯಕ್ಕೆ ಬದಲಾಯಿಸಿ
ಭೈರಪ್ಪನವರು ಸೃಷ್ಟಿಸಿರುವ ಅವರ ಕಾವ್ಯಸತ್ಯ ಓದುಗನಿಗೆ ಕಟ್ಟಿಕೊಡುವ
ಕಾವ್ಯಾನುಭೂತಿಯಾದರೂ ಎಂಥದ್ದು? ರಾಮನ ವ್ಯಕ್ತಿತ್ವವನ್ನು ಪ್ರಶ್ನಿಸಲಾಗಿದೆ –
ಎನ್ನುವುದೇ ಆ ಕಾದಂಬರಿಯ ಹೊಗಳಿಕೆಗೋ ತೆಗಳಿಕೆಗೋ ಮಾನದಂಡವಾಗುವುದು ಸರಿಯೇ? ನಮ್ಮ
ಪ್ರತಿಕ್ರಿಯೆಗಳು ಇಂಥ ಸರಳ ತೀರ್ಪುಗಳಿಗೆ ಪಕ್ಕಾಗಿಲ್ಲ ಎಂದು ಧೈರ್ಯದಿಂದ ಹೇಳುವಷ್ಟು
ನಮ್ಮ ಸಾಹಿತ್ಯಲೋಕವನ್ನು ವಿಮರ್ಶಕರೂ ಓದುಗರೂ ಪ್ರಬುದ್ಧವಾಗಿಸಿದ್ದಾರೆಯೆ?
ಇಡಿಯ ರಾಮಾಯಣದ ಕಥನವನ್ನು ಸೀತೆಯ ದಾರಿಯಲ್ಲಿ ನಿರ್ಮಿಸಿರುವ ಭೈರಪ್ಪನವರು
ರಾಮಾಯಣಕ್ಕಿರುವ ಮತ್ತೊಂದು ಹೆಸರನ್ನಂತೂ ಸಾರ್ಥಕಗೊಳಿಸಿದ್ದಾರೆ. ಈ ಕಾರಣದಿಂದ ಕಥನದ
ಉದ್ದಕ್ಕೂ ಹಲವು ಪಾತ್ರಗಳನ್ನು ಪೋಷಿಸಿದ್ದಾರೆ, ಸೃಷ್ಟಿಸಿದ್ದಾರೆ ಕೂಡ. ಊರ್ಮಿಳೆಯ
ಪಾತ್ರದ ಬೆಳವಣಿಗೆ, ಲಕ್ಷ್ಮಣನ ವ್ಯಕ್ತಿತ್ವಕ್ಕೆ ಒದಗಿಸಿದ ಆಯಾಮ, ಧರ್ಮಸಭೆ ಮುಂತಾದವು
ಅವರ ಕಾವ್ಯಸೃಷ್ಟಿಶಕ್ತಿಗೆ ನಿದರ್ಶನಗಳಾಗಿವೆ. ಆದರೆ ಒಟ್ಟು ಕಥನಶೈಲಿ ಒಂದು ವರದಿಯಂತೆ,
ಸೀತೆಯ ‘ಡೈರಿ’ಯಂತೆ ಸಾಗಿ, ಗಾಢವಾದ ಕಾವ್ಯಾನುಭವವನ್ನು ಒದಗಿಸುವಲ್ಲಿ
ಯಶಸ್ವಿಯಾಗಿಲ್ಲ. ಅತಿಯಾದ ವಾಸ್ತವಪ್ರಜ್ಞೆಯ ಹೊರೆಯೂ ಕಥೆಯ ನಡಿಗೆಯನ್ನೂ
ಕಾವ್ಯಸಂಭ್ರಮವನ್ನೂ ಕುಂಠಿತಗೊಳಿಸಿದೆ. ಅತಿ ವಾಸ್ತವದ ನಿರೂಪಣೆಗೊಂದು ಉದಾಹರಣೆಯನ್ನು
ನೋಡಬಹುದು. ಅಹಲ್ಯೆ ಮತ್ತು ರಾಮನ ಸಂದರ್ಶನದ ಆರಂಭದ ಸಂಭಾಷಣೆಯ ತುಣುಕೊಂದು ಹೀಗಿದೆ:
‘ನಮ್ಮ ಊಟವಾಗಿದೆ. ನೀನು ಹಸಿದಿದ್ದೀಯ. ನೀನು ಉಣ್ಣು,’ ರಾಮ ಹೇಳಿದ. (ಅಹಲ್ಯೆಗೆ)
‘ದಿನಗಟ್ಟಲೆ ಉಪವಾಸ ಮಾಡುವ ನನಗೆ ಹಸಿವಿನ ಬಾಧೆಯೇ ಇಲ್ಲ. ಯಾರೋ ಪುಣ್ಯಾತ್ಮರು ಅನ್ನ,
ನೀರು ಇಟ್ಟು ಹೋಗುತ್ತಾರೆ. ಯಾರೆಂತ ಗೊತ್ತಿಲ್ಲ. ಅನ್ನ ಬಹುತೇಕ ಹಕ್ಕಿ ಪಕ್ಷಿಗಳಿಗೆ
ಆಹಾರವಾಗುತ್ತೆ. ನೀರು ಮಾತ್ರ ನನ್ನ ಹೊಟ್ಟೆಗೆ, ಮೈ ಬೆವರು ಒರೆಸಿಕೊಳ್ಳುಕ್ಕೆ,
ಬಹಿರ್ದೆಸೆಗೆ’ ಎಂದಳು.
ಇನ್ನು ಸೀತೆ. ರಾಮನನ್ನು ಪ್ರಶ್ನಿಸುವ, ನಮ್ಮ ಸಹಾನುಭೂತಿಯನ್ನೂ ಗಳಿಸಿಕೊಳ್ಳುವ ಸೀತೆ,
‘ಉತ್ತರಕಾಂಡ’ದಲ್ಲಿ ‘ಸೀತೆ’ಯೇ ಆಗಿದ್ದಾಳೆಯೆ ಎಂಬ ಪ್ರಶ್ನೆಗೂ ಕಾರಣವಾಗುತ್ತಾಳೆ.
ಹೀಗಿದ್ದರೂ ‘ಉತ್ತರಕಾಂಡ’ ನಮ್ಮನ್ನು ವಾಲ್ಮೀಕಿ ರಾಮಾಯಣದ ಓದಿಗೆ, ಮರು ಓದಿಗೆ
ಪ್ರಚೋದಿಸುತ್ತದೆ ಎನ್ನುವುದೂ ಸುಳ್ಳಲ್ಲ. ಇದು ಕಾದಂಬರಿಯ ಸಾಫಲ್ಯವಲ್ಲದೆ ಮತ್ತೇನು?
Source: Prajavani, 29-01-2017.