Saturday, August 23, 2014

ಮತ್ತೀನ್ನೇನು

ಮತ್ತೀನ್ನೇನು (What, then)
ಡಬ್ಲ್ಯೂ.ಬಿ. ಯೀಟ್ಸ್
ಕನ್ನಡ ಅನುವಾದ: ಡಾ|| ಯು.ಆರ್. ಅನಂತಮೊರ್ತಿ

ಮತ್ತೀನ್ನೇನು

ಸ್ಕೂಲಲ್ಲಿ ಇವನ ಖಾಸ ದೋಸ್ತರಿಗೆ ಗೊತ್ತಿತ್ತು
ಇವನು ಖ್ಯಾತನಾಗಿಯೇ ತೀರುವ;
 ಇವನೂ ಹಾಗೇ ತಿಳಿದ; ರೂಲು ತಪ್ಪದೆ ನಡೆದ;
ತನ್ನ ಎಳೆ ಹರೆಯವೆಲ್ಲಾ ತುರುಕುತ್ತ ಹೆಣಗಿದ;
'ಮತ್ತೀನ್ನೇನು?' ಪ್ಲೇಟೋ ಭೂತ ಹಾಡಿತು,  'ಮತ್ತೀನ್ನೇನು?'

ಅವನು ಬರೆದದ್ದೆಲ್ಲವೂ ಓದಿಸಿಕೊಂಡಿತು.
ಕಾಲಾನುಕ್ರಮೇಣ ಸಾಕಷ್ಟು ಹಣವಾಗಿ
ಅವನ ಅಗತ್ಯಗಳ ಪೂರೈಕೆಯಾಯಿತು
ಗೆಳೆಯರಾದರು, ಆಗ ಬೇಕಾದಂಥ ಗೆಳೆಯರು.
'ಮತ್ತೀನ್ನೇನು?' ಪ್ಲೇಟೋ ಭೂತ ಹಾಡಿತು,  'ಮತ್ತೀನ್ನೇನು?'

 ಅವನ ಅತಿಶಯದ ಸೌಖ್ಯದ ಕನಸುಗಳೆಲ್ಲ ನನಸಾದವು
ಒಂದು ಪುಟ್ಟ ಪೂರ್ವಕಾಲದ  ಮನೆ, ಹೆಂಡತಿ, ಮಗಳು, ಮಗ,
ಕೋಸು ಪ್ಲಮ್ಮುಗಳನ್ನು  ಬೆಳೆಯುವಷ್ಟು ತೋಟ ;
ಸುತ್ತಮುತ್ತ ಕವಿಗಳು, ಜಾಣರು.
'ಮತ್ತೀನ್ನೇನು?' ಪ್ಲೇಟೋ ಭೂತ ಹಾಡಿತು,  ' ಮತ್ತೀನ್ನೇನು?'

 'ಕೆಲಸ ಮುಗಿದಿದೆ' ವಯೋ ವೃದ್ಧನಾದ ಮೇಲೆ ಅಂದುಕೊಂಡ,
'ಬಾಲ್ಯದ ಯೋಜನೆಗಳೆಷ್ಟೋ  ಫಲಿಸಿವೆ,
ಮೂರ್ಖರು   ರೋಷ ಪಡಲಿ, ನಾನಂತು ಗುರಿಗೆಡಲಿಲ್ಲ
ಅಷ್ಟಿಷ್ಟು ಪರಿಪೂರ್ಣಗೊಳಿಸಿದ.'
ಇನ್ನಷ್ಟು ಜೋರಲ್ಲಿ ಆ ಭೂತ ಹಾಡಿತು , ' ಮತ್ತೀನ್ನೇನು?'


What, then?
W.B. Yeats

His chosen comrades thought at school
He must grow a famous man;
He thought the same and lived by rule,
All his twenties crammed with toil;
'What then?' sang Plato's ghost. 'What then?'

Everything he wrote was read,
After certain years he won
Sufficient money for his need,
Friends that have been friends indeed;
'What then?' sang Plato's ghost. ' What then?'

All his happier dreams came true --
A small old house, wife, daughter, son,
Grounds where plum and cabbage grew,
poets and Wits about him drew;
'What then.?' sang Plato's ghost. 'What then?'

The work is done,' grown old he thought,
'According to my boyish plan;
Let the fools rage, I swerved in naught,
Something to perfection brought';
But louder sang that ghost, 'What then?'

Friday, August 22, 2014

ವಿದಾಯ : ಡಾ|| ಯು.ಆರ್. ಅನಂತಮೂರ್ತಿ

ವಿದಾಯ : ಡಾ|| ಯು.ಆರ್. ಅನಂತಮೂರ್ತಿ

 

 

ಕನ್ನಡ ಪ್ರಭ ಸುದ್ದಿ

ಡಾ|| ಯು.ಆರ್. ಅನಂತಮೂರ್ತಿ ಇನ್ನಿಲ್ಲ

 
 ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಅವರು ಶುಕ್ರವಾರ ನಿಧನರಾಗಿದ್ದಾರೆ.

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅನಂತಮೂರ್ತಿ ಅವರನ್ನು ಇಂದು ಬೆಳಗ್ಗೆ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ, ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸಂಜೆ 6 ಗಂಟೆ ವೇಳೆಗೆ ಲಘು ಹೃದಯಾಘಾತವಾಗಿ, ನಂತರ ಚೇತರಿಕೆ ಕಾಣದೆ ಕೊನೆಯುಸಿರೆಳೆದರು ಎಂದು ಮಣಿಪಾಲ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಸುದರ್ಶನ್ ಬಲ್ಲಾಳ್ ತಿಳಿಸಿದರು.

ಅನಂತಮೂರ್ತಿ ಅವರು ನಡೆದು ಬಂದ ಹಾದಿ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಳಿಗೆ ಗ್ರಾಮದಲ್ಲಿ 1932ರ ಡಿಸೆಂಬರ್ 21ರಂದು ಜನಿಸಿದ್ದ ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಇನ್ನಿಲ್ಲ. ಇನ್ನು ಮುಂದೆ ಅವರು ನನೆಪು ಮಾತ್ರ.

ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠವನ್ನು ಕನ್ನಡಕ್ಕೆ ತಂದ ಆರನೇಯವರು. ಸಮಗ್ರ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ. 1998ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಕೇಂದ್ರ ಸರ್ಕಾರ ಗೌರವಿಸಿತ್ತು.

ಇಂಗ್ಲೀಷ್ ಮತ್ತು ತೌಲನಿಕ ಸಾಹಿತ್ಯ ಕುರಿತು ಪಿಎಚ್‌ಡಿ(ಬರ್ಮಿಂಗ್‌ಹ್ಯಾಮ್ ವಿವಿ, ಯುನೈಟೆಡ್ ಕಿಂಗ್‌ಡಂ) 1966. ಸಂಸ್ಕೃತ ಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭಿಸಿದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕಲಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

1970ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲೇ ಇಂಗ್ಲೀಷ್ ಬೋಧಕರಾಗಿ ಸೇವೆ ಆರಂಭಿಸಿ ತದ ನಂತರ 1987ರಲ್ಲಿ ಕೇರಳದ ತಿರುವಂತನಪುರಂನಲ್ಲಿರುವ ಕೇರಳ ವಿಶ್ವವಿದ್ಯಾಲಯದಲ್ಲಿ ಉಪಕುಲಪತಿಗಳಾಗಿದ್ದರು. 1993ರಲ್ಲಿ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಜವಹರಲಾಲ್ ನೆಹರು ವಿಶ್ವವಿದ್ಯಾಲಯ, ಈಬರ್‌ಹಾರ್ಡ್ ವಿಶ್ವವಿದ್ಯಾಲಯ, ಲೋವಾ ವಿಶ್ವವಿದ್ಯಾಲಯ, ಟಫ್ಟ್ಸ್ ವಿಶ್ವವಿದ್ಯಾಲಯ, ಶಿವಾಜಿ ವಿಶ್ವವಿದ್ಯಾಲಯದಲ್ಲಿ ಸೇರಿದಂತೆ ಭಾರತ ಮತ್ತು ವಿದೇಶಗಳ ವಿಶ್ವವಿದ್ಯಾಲಯಗಳಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿದ್ದಾರೆ.

ಸಂಸ್ಕಾರ, ಭವ, ಭಾರತೀಪುರ ಮತ್ತು ಅವಸ್ಥೆ ಕಾದಂಬರಿಗಳು ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಇವರ ಅನೇಕ ಪುಸ್ತಕಗಳು ಯೂರೋಪಿಯನ್ ಭಾಷೆ ಸೇರಿದಂತೆ ಭಾರತ ಅನೇಕ ಭಾಷೆಗಳಿಗೆ ಭಾಷಾಂತರಗೊಂಡಿದೆ. ಅವರು ಬರೆದಂತೆ ಕಾದಂಬರಿಗಳಲ್ಲಿ ಕೆಲವು ಚಲನಚಿತ್ರವಾಗಿ ಮೂಡಿ ಬಂದಿದೆ.

ಪ್ರಶಸ್ತಿಗಳು:

  • ಬಷೀರ್ ಪುರಸ್ಕಾರಂ, ಕೇರಳ, 2012
  • ಗೌರವ ಡಾಕ್ಟರೇಟ್, ಕೇಂದ್ರೀಯ ವಿವಿ, ಗುಲ್ಬರ್ಗ, 2012
  • ಗೌರವ ಡಾಕ್ಟರೇಟ್, ಕಲ್ಕತ್ತಾ ವಿವಿ, 2012
  • ರವೀಂದ್ರನಾಥ್ ಟ್ಯಾಗೋರ್ ಸ್ಮಾರಕ ಪದಕ, ಕಲ್ಕತ್ತಾ ವಿವಿ, 2012
  • ಫಕೀರ್ ಮೋಹನ್ ಸೇನಾಪತಿ ರಾಷ್ಟ್ರೀಯ ಪುರಸ್ಕಾರ, ಒರಿಸ್ಸಾ, 2012
  • ದಿ ಹಿಂದೂ ಲಿಟರೆರಿ ಪ್ರಶಸ್ತಿ, 2011
  • ಗಣಕ್‌ಸೃಷ್ಟಿ ಪ್ರಶಸ್ತಿ, ಕೊಲ್ಕತ್ತ, 2002
  • ಕನ್ನಡ ವಿಶ್ವವಿದ್ಯಾಲಯದಿಂದ 'ನಾಡೋಜ' 2008
  • ಪದ್ಮಭೂಷಣ, 1998
  • ಮಾಸ್ತಿ, 1995
  • ಜ್ಞಾನಪೀಠ ಪ್ರಶಸ್ತಿ, 1994
  • ರಾಜ್ಯೋತ್ಸವ ಪ್ರಶಸ್ತಿ, 1984

ಸಣ್ಣ ಕಥೆಗಳು

  • ಎಂದೆಂದಿಗೂ ಮುಗಿಯದ ಕಥೆ
  • ಮೌನಿ
  • ಪ್ರಶ್ನೆ
  • ಕ್ಲಿಫ್ ಜಾಯಿಂಟ್
  • ಆಕಾಶ ಮತ್ತು ಬೆಕ್ಕು
  • ಎರಡು ದಶಕದ ಕಥೆಗಳು
  • ಐದು ದಶಕದ ಕಥೆಗಳು

ಕಾದಂಬರಿಗಳು

  • ಸಂಸ್ಕಾರ
  • ಭಾರತೀಪುರ
  • ಅವಸ್ಥೆ
  • ಭವ
  • ದಿವ್ಯಾ

ನಾಟಕ

  • ಆವಾಹನೆ

ವಿಮರ್ಶೆ ಮತ್ತು ಪ್ರಬಂಧ

  • ಪ್ರಜ್ಞೆ ಮತ್ತು ಪರಿಸರ
  • ಸನ್ನಿವೇಶ
  • ಸಮಕ್ಷಮ
  • ಪೂರ್ವಾಪರ
  • ಯುಗಪಲ್ಲಟ
  • ವಾಲ್ಮಿಕಿಯ ನೆವದಲ್ಲಿ
  • ಮಾತು ಸೋತ ಭಾರತ
  • ಸದ್ಯ ಮತ್ತು ಶಾಶ್ವತ

ಚಲನಚಿತ್ರವಾಗಿ ಮೂಡಿಬಂದ ಕಾದಂಬರಿಗಳು

  • ಸಂಸ್ಕಾರ
  • ಬರ
  • ಅವಸ್ಥೆ
  • ಮೌನಿ
  • ದೀಕ್ಷಾ
  • ಭಾರತೀಪುರ

Wednesday, August 13, 2014

ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ

ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ
ಚುಂಬಕ ಗಾಳಿಯು ಬೀಸುತಿದೆ 
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಜಿಸಿ ನಗೆಯಲಿ ಮೀಸುತಿದೆ

ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
ತುಂಬುತ ತುಳುಕುತ ತೀರುತ ತನ್ನೊಳು
ತಾನೇ ಸವಿಯನು ಸವಿಯುತಿದೆ

ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸೆಯಿಸಿತು
ಮಿತ್ರನ ಮೈತ್ರಿಯ ಒಸಗೆ ಮಸಗದಿದೆ
ಮರುಕದ ಧಾರೆಯ ಮಸೆಯಿಸಿತು

ಅಕ್ಷಿನಿಮೀಲನ ಮಾಡದೆ ನಕ್ಷತ್ರದ
ಗಣ ಗಗನದಿ ಹಾರದಿದೆ
ಬಿದಿಗೆಯ ಬಿಂಬಾಧರದಲಿ ಇಂದಿಗು
ಮಿಲನದ ಚಿಹ್ನವು ತೋರದಿದೆ

ದ.ರಾ. ಬೇಂದ್ರೆ
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ (ಪಂ|| ಭೀಮಸೇನ ಜೋಷಿ)
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ (ಪಿ.ಬಿ. ಶ್ರೀನಿವಾಸ್ ಮತ್ತು ಪಿ. ಸುಶೀಲ)

Thursday, August 7, 2014

ನಾನೇಕೆ ಬಡವನೊ ನಾನೇಕೆ ಪರದೇಶಿ

ನಾನೇಕೆ ಬಡವನೊ ನಾನೇಕೆ ಪರದೇಶಿ
ಶ್ರೀನಿಧೇ ಹರಿ ಎನಗೆ ನೀನಿರುವ ತನಕ

ಹುಟ್ಟಿಸಿದ ತಾಯ್ತಂದೆ ಇಷ್ಟಮಿತ್ರನು ನೀನೆ
ಅಷ್ಟ ಬಂಧು ಬಳಗ ಸರ್ವ ನೀನೆ
ಪೆಟ್ಟಿಗೆಯೊಳಗಿನ ಅಷ್ಟಾಭರಣ ನೀನೆ
ಶ್ರೇಷ್ಠ ಮೂರುತಿ ಕೃಷ್ಣ ನೀನಿರುವತನಕ

ಒಡಹುಟ್ಟಿದವ ನೀನೆ ಒಡಲಿಗಾಕುವ ನೀನೆ
ಉಡಲು ಹೊದೆಯಲು ವಸ್ತ್ರ ಕೊಡುವ ನೀನೆ
ಮಡದಿ ಮಕ್ಕಳನೆಲ್ಲ ಕಡೆಹಾಯಿಸುವ ನೀನೆ
ಬಿಡದೆ ಸಲಹುವ ಒಡೆಯ ನೀನಿರುವತನಕ

ವಿದ್ಯೆ ಹೇಳುವ ನೀನೆ ಬುದ್ಧಿ ಕಲಿಸುವ ನೀನೆ
ಉದ್ಧಾರಕರ್ತ ಮಮಸ್ವಾಮಿ ನೀನೆ
ಮುದ್ದು ಶ್ರೀ ಪುರಂದರವಿಠಲ ನಿನ್ನಡಿ ಮೇಲೆ
ಬಿದ್ದು ಕೊಂಡಿರುವ ಎನಗೆ ಏತರ ಭಯವೊ

ಪುರಂದರ ದಾಸರು
ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

Sunday, August 3, 2014

ಗುಮ್ಮನ ಕರೆಯದಿರೆ ಅಮ್ಮ ನೀನು

ಗುಮ್ಮನ ಕರೆಯದಿರೆ ಅಮ್ಮ ನೀನು
ಸುಮ್ಮನೆ ಇದ್ದೇನು ಅಮ್ಮಿಯ ಬೇಡೆನು
ಮಮ್ಮು ಉಣ್ಣುತೇನೆ ಅಮ್ಮ ಅಳುವುದಿಲ್ಲ

ಹೆಣ್ಣುಗಳಿರುವಲ್ಲಿ ಪೋಗಿ ಅವರ
ಕಣ್ಣು ಮುಚ್ಚುವದಿಲ್ಲವೆ
ಚಿಣ್ಣರ ಬಡಿಯೆನು, ಅಣ್ಣನ ಬೈಯೆನು
ಬೆಣ್ಣೆಯ ಬೇಡೆನು ಮಣ್ಣು ತಿನ್ನುವುದಿಲ್ಲ

ಬಾವಿಗೆ ಪೋಗೆ ಕಾಣೆ ಅಮ್ಮ ನಾನು
ಹಾವಿನೊಳಾಡೆ ಕಾಣೆ
ಆವಿನ ಮೊಲೆಯೂಡೆ ಕರುಗಳ ಬಿಡೆ ನೋಡೆ
ದೇವರಂತೆ ಒಂದು ಠಾವಿಲಿ ಕೂಡುವೆ

ಮಗನ ಮಾತ ಕೇಳಿ ಗೋಪಿದೇವಿ
ಮುಗುಳು ನಗೆ ನಗುತ
ಜಗದೊಡೆಯನ ಶ್ರೀ ಪುರಂದರವಿಠಲನ
ಬಿಗಿದಪ್ಪಿಕೊಂಡಳು ಮೋಹದಿಂದಲಾಗ

ಪುರಂದರ ದಾಸರು
ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ