Tuesday, April 29, 2014

ವಿಮುಖನಾಗಿಹ ನನ್ನನು

ವಿಮುಖನಾಗಿಹ ನನ್ನನು
ಬದುಕು ಬಯಸಿತು
ಮಾತನಾಡಲಾರದ ನನ್ನನು
ಕವಿತೆ ಬಯಸಿತು

ನಿರಾಶೆಯ ಬೆಂಗಾಡಲ್ಲಿದ್ದ ನನ್ನನು
ನನ್ನ ನೆರಳು ಬಯಸಿತು
ಉಸಿರ ಮರೆತ ನನ್ನನು
ನಿನ್ನ ಹೆಸರು ಬಯಸಿತು

ವಿನೋದ್ ಕುಮಾರ್ 

ಅವಳು ಬಿಟ್ಟುಹೋದಳು

ಅವಳು ಬಿಟ್ಟುಹೋದಳು
ಅರ್ಧವಾದನು ಅವನು
ವಿರಹವೆಂಬ ಇರುವೆಗಳು
ಮುಗಿಸಿದವು ಉಳಿದರ್ಧವನು

ವಿನೋದ್ ಕುಮಾರ್

Wednesday, April 23, 2014

ತೆರೆದಿದೆ ಮನೆ ಓ ಬಾ ಅತಿಥಿ

ತೆರೆದಿದೆ ಮನೆ ಓ ಬಾ ಅತಿಥಿ
ಹೊಸಬೆಳಕಿನ ಹೊಸಗಾಳಿಯಾ
ಹೊಸಬಾಳನು ತಾ ಅತಿಥಿ

ಆವರೂಪದೊಳು ಬಂದರು ಸರಿಯೇ
ಆವವೇಷದೊಳು ನಿಂದರು ಸರಿಯೇ
ನೇಸರುದಯದೊಳು ಬಹೆಯಾ ಬಾ
ತಿಂಗಳಂದದಲಿ ಬಹೆಯಾ ಬಾ

ತೆರೆದಿದೆ ಮನೆ ಓ ಬಾ ಅತಿಥಿ...

ಇಂತಾದರು ಬಾ ಅಂತಾದರು ಬಾ
ಎಂತಾದರು ಬಾ ಬಾ
ಬೇಸರವಿದಕೂ ಸರಿಸುವ ಹೊಸ ಬಾಳ
ಉಸಿರಾಗಿ ಬಾ ಬಾ ಬಾ

ತೆರೆದಿದೆ ಮನೆ ಓ ಬಾ ಅತಿಥಿ...

ಕಡಲಾಗಿ ಬಾ ಬಾನಾಗಿ ಬಾ
ಗಿರಿಯಾಗಿ ಬಾ ಕಾನಾಗಿ ಬಾ
ಕಡಲಾಗಿ ಬಾನಾಗಿ ಗಿರಿಯಾಗಿ ಕಾನಾಗಿ
ತೆರೆದಿದೆ ಮನ ಓ ಬಾ
ಹೊಸ ತಾನದ ಹೊಸ ಗಾನದ
ಹೊಸ ತಾನದ ಹೊಸ ಗಾನದ
ರಸ ಜೀವವ ತಾ ತಾ ತಾ

ತೆರೆದಿದೆ ಮನೆ ಓ ಬಾ ಅತಿಥಿ...

ಕುವೆಂಪು
ಈ ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

ತನುವು ನಿನ್ನದು ಮನವು ನಿನ್ನದು

ತನುವು ನಿನ್ನದು ಮನವು ನಿನ್ನದು
ನನ್ನ ಜೀವನ ಧನವು ನಿನ್ನದು
ನಾನು ನಿನ್ನವನೆಂಬ ಹೆಮ್ಮೆಯ
ತೃಣವು ಮಾತ್ರವೆ ನನ್ನದು

ನೀನು ಹೊಳೆದರೆ ನಾನು ಹೊಳೆವೆನು
ನೀನು ಬೆಳೆದರೆ ನಾನು ಬೆಳೆವೆನು
ನನ್ನ ಹರಣದ ಹರಣ ನೀನು
ನನ್ನ ಮರಣದ ಮರಣವು

ನನ್ನ ಮನದಲಿ ನೀನೆ ಯುಕ್ತಿ
ನನ್ನ ಹೃದಯದಿ ನೀನೆ ಭಕ್ತಿ
ನೀನೆ ಮಾಯಾ ಮೋಹ ಶಕ್ತಿಯು
ನನ್ನ ಜೀವನ ಮುಕ್ತಿಯು

ಕುವೆಂಪು
ಈ ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

ಓ ನನ್ನ ಚೇತನ ಆಗು ನೀ ಅನಿಕೇತನ

ಓ ನನ್ನ ಚೇತನ
ಆಗು ನೀ ಅನಿಕೇತನ

ರೂಪ ರೂಪಗಳನು ದಾಟಿ
ನಾಮ ಕೋಟಿಗಳನು ಮೀಟಿ
ಎದೆಯ ಬಿರಿಯೆ ಭಾವದೀಟಿ

ನೂರುಮತದ ಹೊಟ್ಟ ತೂರಿ
ಎಲ್ಲ ತತ್ವದೆಲ್ಲೆ ಮೀರಿ
ನಿರ್ದಿಗಂತವಾಗಿ ಏರಿ

ಎಲ್ಲಿಯೂ ನಿಲ್ಲದಿರು
ಮನೆಯನೆಂದು ಕಟ್ಟದಿರು
ಕೊನೆಯನೆಂದು ಮುಟ್ಟದಿರು

ಅನಂತ ತಾನನಂತವಾಗಿ
ಆಗುತಿಹನೆ ನಿತ್ಯ ಯೋಗಿ
ಅನಂತ ನೀ ಅನಂತವಾಗು
ಆಗು ಆಗು ಆಗು ಆಗು

ಕುವೆಂಪು
ಈ ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

ಯಾವ ಜನ್ಮದ ಮೈತ್ರಿ

ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು 
ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ
ಎಲ್ಲಿದ್ದರೇನಂತೆ ನಿನ್ನನೊಲಿಯದೆ ಮಾಣೆ

ಗುರುದೇವನಾಣೆ, ಓ ನನ್ನ ನೆಚ್ಚಿನ ಬಂಧು 
ವಿಶ್ವ ಜೀವನವೊಂದು ಪಾರವಿಲ್ಲದ ಸಿಂಧು
ಮೇಲೆ ತೆರೆನೊರೆಯೆದ್ದು ಭೋರ್ಗರೆಯುತಿರೆ ರೇಗಿ
ಅದರಂತರಾಳದಲಿ ಗುಪ್ತಗಾಮಿನಿಯಾಗಿ

ಹೃದಯಗಳು ನಲಿಯುತಿರೆ ಪ್ರೇಮ ತೀರ್ಥದಿ ಮಿಂದು
ಅದರರ್ಥಗಿರ್ಥಗಳು ಸೃಷ್ಟಿಕರ್ತನಿಗಿರಲಿ
ವ್ಯರ್ಥ ಜಿಜ್ಞಾಸೆಯಲಿ ಕಾಲಹರಣವದೇಕೆ?
ಕುರುಡನಾದಗೆ ದಾರಿಯರ್ಥ ತಿಳಿಯಲೆ ಬೇಕೆ?

ಹಾದಿ ಸಾಗಿದರಾಯ್ತು ಬರುವುದೆಲ್ಲಾ ಬರಲಿ 
ಬಾರಯ್ಯ, ಮಮಬಂಧು, ಜೀವನಪಥದೊಳಾವು
ಒಂದಾಗಿ ಮುಂದುವರಿಯುವ; ಹಿಂದಿರಲಿ ಸಾವು

ಕುವೆಂಪು
ಈ ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

Sunday, April 20, 2014

ಎಲೆಕ್ಷನ್ ಮಾಂಜ

ಯಾರ್ ಏನಾದ್ರು ಅನ್ಲಿ
ನಾಕ್ರಲ್ ಮೂರ್ ವೋಟ್ ನಂಗೇ ಬೀಳ್ಲಿ
ಆಮೇಲೆ ಕುರ್ಚಿ ನಂದೆ
ಚರ್ಚೆ ನಿಮ್ದೆ

ಮೂಲ: ಅಂತರ್ಜಾಲ

Friday, April 18, 2014

ದೀಕ್ಷೆಯ ತೊಡು ಇಂದೇ ...

ದೀಕ್ಷೆಯ ತೊಡು ಇಂದೇ
ಕಂಕಣ ಕಟ್ಟಿಂದೇ
ಕನ್ನಡ ನಾಡೊಂದೇ
ಇನ್ನೆಂದೂ ತಾನೊಂದೇ

ನೃಪತುಂಗನ ದೊರೆಮುಡಿ ಸಾಕ್ಷಿ
ಪಂಪನ ಪದ ಧೂಳಿಯ ಸಾಕ್ಷಿ
ಕೂಡಲ ಸಂಗನ ಅಡಿ ಸಾಕ್ಷಿ
ಗದುಗಿನ ಕವಿದೇವನ ಸಾಕ್ಷಿ

ಇಡು ಸಹ್ಯಾದ್ರಿಯ ಮೇಲಾಣೆ
ಇಡು ಕಾವೇರಿಯ ಮೇಲಾಣೆ
ಇಡು ಚಾಮುಂಡಿಯ ಮೇಲಾಣೆ
ಇಡು ಗೊಮ್ಮಟ ಗುರುದೇವಾಣೆ

ಕಾಣಲಿ ಕನ್ನಡ ವ್ಯೋಮಾಕ್ಷಿ
ನಿಲ್ಲಲಿ ರವಿ ಚಂದ್ರರ ಸಾಕ್ಷಿ
ಕೇಳಲಿ ಕನ್ನಡ ಪಶು ಪಕ್ಷಿ
ಸರ್ವ ದೇವರೂ ಶ್ರೀ ಸಾಕ್ಷಿ

ಇಡು ನಿನ್ನಯ ಸತಿಯಾಣೆ
ಇಡು ನಿನ್ನಯ ಪತಿಯಾಣೆ
ಮಕ್ಕಳ ಮೇಲಾಣೆ
ಅಕ್ಕರೆ ಮೇಲಾಣೆ
ಗುರುದೇವರ ಆಣೆ
ನನ್ನಾಣೆ
ನಿನ್ನಾಣೆ
ತೊಡು ದೀಕ್ಷೆಯ
ಇಡು ರಕ್ಷೆಯ
ಕಂಕಣ ಕಟ್ಟಿಂದೇ
ಇನ್ನೆಂದೂ ತಾನೊಂದೇ
ಕನ್ನಡ ನಾಡೊಂದೇ

ಕುವೆಂಪು
ಈ ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

Sunday, April 13, 2014

ಐದು ವರ್ಷಕ್ಕೊಮ್ಮೆ ಬರುವ ...

ಐದು ವರ್ಷಕ್ಕೊಮ್ಮೆ ಬರುವ 
ಕಡು ಬಡವಗೂ ಹೆಮ್ಮೆಯ ತರುವ
ಎಲ್ಲ ಜನಗಳ ಕಣ್ಣು ತೆರೆಸುವ ವರದಾನ
ಎಲ್ಲರ ಪಾಲಿಗು ಅಮೂಲ್ಯವಾದ ಮತದಾನ

ಪ್ರಜಾ ಪ್ರಭುತ್ವ ಕೊಟ್ಟ ಕೊಡುಗೆಯೋ
ಪರಮಧಿಕಾರ ಇಟ್ಟ ನಡಿಗೆಯೋ
ದುಷ್ಟರ ಕೂಟಕೆ ದಿಟ್ಟ ಸವಾಲೋ
ಜನಗಳ ಅರಿವಿನ ಅಗ್ನಿ ಪರೀಕ್ಷೆಯೋ
ಎಲ್ಲರ ಎದೆಯಲಿ ಕನಸನು ಬೆಳೆಸುತ
ಭ್ರಮೆಗಳ ನೆಲೆಸುವ ಮತದಾನ
ಎಲ್ಲರ ಪಾಲಿಗು ಅಮೂಲ್ಯವಾದ ಮತದಾನ

ಬಣ್ಣ ಬಣ್ಣದ ಭಾಷಣದಲ್ಲಿ
ಕಣ್ಮನ ಸೆಳೆಯುವ ಸ್ವರ್ಗವ ತಂದು
ಎಲ್ಲರ ಎದೆಯಲಿ ಕನಸನು ಬೆಳೆಸುತ
ಭ್ರಮೆಗಳ ಮೆರೆಸುವ ಮತದಾನ

ಆಡುವ ಮಾತು ಹೃದಯದ್ದಲ್ಲ
ಮಾಡುವ ಕೆಲಸ ಮನಸಿನದಲ್ಲ
ಭಾವನೆ ಇಲ್ಲದ ಕನಸನು ಕೊಲ್ಲುವ
ಸುಳಿಯಲಿ ಸಿಲುಕುವ ಮತದಾನ
ಎಲ್ಲರ ಪಾಲಿಗು ಅಮೂಲ್ಯವಾದ ಮತದಾನ

ಪ್ರೊ|| ಸಿದ್ದಲಿಂಗಯ್ಯ
ಈ ಹಾಡನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ