Wednesday, January 29, 2014

ನನ್ನವಳು ನನ್ನೆದೆಯ ಹೊನ್ನಾಡನಾಳುವಳು

ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ಬೆಳಗುಗೆನ್ನೆಯ ಚೆನ್ನೆ ನನ್ನ ಮಡದಿ

ಹೊಳೆಯ ಸುಳಿಗಳಿಗಿಂತ ಆಳಗಣ್ಣಿನ ಚೆಲುವು
ಅವಳೊಮ್ಮೆ ಹೆರಳ ಕೆದರಿ ಕಪ್ಪುಗುರುಳನ್ನು
ಬೆನ್ನ ಮೇಲೆಲ್ಲ ಹರಡಿದರೆ
ದೂರದಲಿ ಗಿರಿಯ ಮೇಲೆ ಇಳಿದಂತೆ ಇರುಳ ಮಾಲೆ
ಇಳಿದಂತೆ ಇರುಳ ಮಾಲೆ

ಕರೆದಾಗ ತೌರು ಮನೆ ನೆನೆದಾಗ ನನ್ನ ಮನೆ
ಹಳ್ಳಿಯೆರಡರ ಮುದ್ದು ಬಳ್ಳಿ ಅವಳು
ಮುಚ್ಚು ಮರೆ ಇಲ್ಲದೆ ಅಚ್ಚ ಮಲ್ಲಿಗೆಯಂತೆ
ಅರಳುತಿಹುದು ಅವಳ ಬದುಕು
ಬಂಗಾರದೊಡವೆಗಳ ಬಯಸಿಲ್ಲ ಮನಸಿನಲಿ
ಬಂಗಾರದಂತ ಹುಡುಗಿ
ನನ್ನೊಡವೆ ನನ್ನ ಬೆಡಗಿ

ಹಸಿರು ಸೀರೆಯನುಟ್ಟು ಕೆಂಪು ಬಳೆಗಳ ತೊಟ್ಟು
ತುಂಬು ದನಿಯಲಿ ಕರೆವಳೆನ್ನ ಚೆಲುವೆ
ಹಣೆಯನಾಳುವುದು ಅವಳ ಕುಂಕುಮದ ನಿಡುವಟ್ಟು
ಲಕ್ಷ್ಮಿ ಅವಳೆನ್ನ ಮನೆಗೆ
ನಮಗಿದುವೇ ಸೊಗಸು ಬದುಕಿನ ಬಣ್ಣಗಳಾ ಸಂತೆ
ನಮಗಿಲ್ಲ ನೂರು ಚಿಂತೆ ನಾವು ಗಂಧರ್ವರಂತೆ
ನಾವು ಗಂಧರ್ವರಂತೆ

ಕೆ.ಎಸ್. ನರಸಿಂಹಸ್ವಾಮಿ
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

Tuesday, January 14, 2014

ಕರುಣಾಳು ಬಾ ಬೆಳಕೆ

ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು
ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ
ಕೈ ಹಿಡಿದು ನಡೆಸೆನ್ನನು

ಹೇಳಿ ನನ್ನಡಿಯಿಡಿಸು ಬಲುದೂರ ನೋಟವನು
ಕೇಳನೊಡನೆಯೆ ಸಾಕು ನನಗೊಂದು ಹೆಜ್ಜೆ
ಮುನ್ನ ಇಂತಿರದಾದೆ ನಿನ್ನ ಬೇಡದೆ ಹೋದೆ
ಕೈ ಹಿಡಿದು ನಡೆಸೆನ್ನನು

ಇಷ್ಟುದಿನ ಸಲಹಿರುವೆ ಮೂರ್ಖನನು ನೀನು ಮುಂದೆಯೂ
ಕೈ ಹಿಡಿದು ನಡೆಸದಿಹೆಯಾ
ಕಷ್ಟದಡವಿಯ ಕಳೆದು ಬೆಟ್ಟ ಹೊಳೆಗಳ ಹಾದು
ಇರುಳನ್ನು ನೂಕದಿಹೆಯಾ?

ಬೆಳಗಾಗ ಹೊಳೆಯದೆಯೆ ಹಿಂದೊಮ್ಮೆ ನಾನೊಲಿದು
ನಡುವೆ ಕಳಕೊಂಡೆ ದಿವ್ಯ ಮುಖ ನಗುತ

ಬಿ.ಎಂ. ಶ್ರೀಕಂಠಯ್ಯ
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

Lead, Kindly Light

"Lead, Kindly Light, amidst th'encircling gloom,
Lead Thou me on!
The night is dark, and I am far from home,
Lead Thou me on!
Keep Thou my feet; I do not ask to see
The distant scene; one step enough for me.


I was not ever thus, nor prayed that Thou
Shouldst lead me on;
I loved to choose and see my path; but now
Lead Thou me on!
I loved the garish day, and, spite of fears,
Pride ruled my will. Remember not past years!


So long Thy power hath blest me, sure it still
Will lead me on.
O'er moor and fen, o'er crag and torrent, till
The night is gone,
And with the morn those angel faces smile,
Which I have loved long since, and lost awhile!


Meantime, along the narrow rugged path,
Thyself hast trod,
Lead, Saviour, lead me home in childlike faith,
Home to my God.
To rest forever after earthly strife
In the calm light of everlasting life."


John Henry Newman

Note:

Lead, Kindly Light is a hymn with words written in 1833 by John Henry Newman as a poem titled "the Pillar of Cloud". In some hymnals, one may find a fourth verse added by Edward H Bickersteth Jr, Bishop of Exeter . It is usually sung to the tune Lux Benigna, composed by John Bacchus Dykes in 1865, to Alberta by William H Harris, or as a choral anthem by John Stainer (1886). New choral settings have been composed by Nottingham-based composer Alex Patterson, first performed in December 2011, and by American composer Dan Forrest, first performed April 3, 2012.

As a young priest, Newman became sick while in Italy and was unable to travel for almost three weeks. In his own words:

Before starting from my inn, I sat down on my bed and began to sob bitterly. My servant, who had acted as my nurse, asked what ailed me. I could only answer, "I have a work to do in England." I was aching to get home, yet for want of a vessel I was kept at Palermo for three weeks. I began to visit the churches, and they calmed my impatience, though I did not attend any services. At last I got off in an orange boat, bound for Marseilles. We were becalmed for whole week in the Straits of Bonifacio, and it was there that I wrote the lines, Lead, Kindly Light, which have since become so well known.

Source: Wikipedia

ಲೋಕದ ಕಣ್ಣಿಗೆ ರಾಧೆಯು ಕೂಡ

ಲೋಕದ ಕಣ್ಣಿಗೆ ರಾಧೆಯು ಕೂಡ
ಎಲ್ಲರಂತೆ ಒಂದು ಹೆಣ್ಣು
ನನಗೋ ಆಕೆ ಕೃಷ್ಣನ ತೋರುವ
ಪ್ರೀತಿಯು ನೀಡಿದ ಕಣ್ಣು

ತಿಂಗಳ ರಾತ್ರಿ ತೊರೆಯ ಸಮೀಪ
ಉರಿದಿರೆ ಯಾವುದೋ ದೀಪ
ಯಾರೋ ಮೋಹನ ಯಾವ ರಾಧೆಗೋ
ಪಡುತಿರುವನು ಪರಿತಾಪ

ನಾನು ನನ್ನದು ನನ್ನವರೆನ್ನುವ
ಹಲವು ತೊಡಕುಗಳ ಮೀರಿ
ಭಾವಿಸಿ ಸೇರಲು ಬೃಂದಾವನವ
ರಾಧೆ ತೋರುವಳು ದಾರಿ

ಮಹಾಪ್ರವಾಹ ತಡೆಯುವರಿಲ್ಲ
ಪಾತ್ರವಿರದ ತೊರೆ ಪ್ರೀತಿ
ತೊರೆದರು ತನ್ನ ತೊರೆಯದು ಪ್ರಿಯನ
ರಾಧೆಯ ಪ್ರೀತಿಯ ರೀತಿ ಇದು
ರಾಧೆಯ ಪ್ರೀತಿಯ ರೀತಿ

ಹೆಚ್.ಎಸ್. ವೆಂಕಟೇಶಮೂರ್ತಿ
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

Friday, January 3, 2014

ಮನದ ಹಂಬಲದ ಕನಸೆಲ್ಲವೂ

ಮನದ ಹಂಬಲದ ಕನಸೆಲ್ಲವೂ
ಮಂಜಂತೆ ಕರಗಿ ಮರೆಯಾಯಿತೆ

ಸೆಲೆ ಬತ್ತಿತೆ ಆ ಪ್ರೀತಿಯ ಹೊಳೆ
ಜೊಳ್ಳಾಯಿತೆ ಆ ಸ್ನೇಹದ ಬೆಳೆ
ಏಕಾಂತವೇ ಈ ಬಾಳಿನ ನೆಲೆ
ಮನಸು ವಿಷಾದಕೆ ಸೆರೆಯಾಯಿತೆ

ಎರಗಿ ಬಿರುಗಾಳಿ, ಬಡಿದು ಸಿಡಿಲು
ನಡುಗಡಲಿನಲ್ಲಿ ಒಡೆದ ಹಡಗು
ನೆರವಿರದೆ ಸೋತು, ತೇಲು ಮುಳುಗು
ಬದುಕು ಹತಾಶೆಗೆ ವಶವಾಯಿತೆ

ಈ ಬಾಳಿಗುಂಟೆ ಮರುವಸಂತ
ಈ ಪಯಣಕುಂಟೆ ಹೊಸ ದಿಗಂತ
ಬೆಳಕು ಮೂಡೀತೆ ಇರುಳು ಕಳೆದು
ಹೊಸ ಅಂಕಕಾಗಿ ತೆರೆ ಸರಿವುದೆ

ಬಿ.ಆರ್. ಲಕ್ಷ್ಮಣರಾವ್
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ

ಹಾಲು ಹಳ್ಳ ಹರಿಯಲಿ

ಹಾಲು ಹಳ್ಳ ಹರಿಯಲಿ
ಬೆಣ್ಣೆ ಬೆಟ್ಟವಾಗಲಿ
ಜೇನು ಮಳೆಯು ಸುರಿಯಲಿ
ತೊಟ್ಟಿಲೊಲಿದು ತೂಗಲಿ

ಪೈರು ಪಚ್ಚೆ ಬೆಳೆಯಲಿ
ತೆನೆಯ ಚಿನ್ನ ಹೊಳೆಯಲಿ
ಹಕ್ಕಿ ಹೊಟ್ಟೆ ತಣಿಯಲಿ
ಮಿಗವು ಸೊಗಸಿ ನಲಿಯಲಿ

ಮುಗಿದು ಸಮರ ನರಗಲಿ
ನರರು ನರರ ನಂಬಲಿ
ಸ್ವಾಮಿ ಅಮೃತ ಕೃಪೆಯಲಿ
ಶಾಂತಿ ಜಗವ ತುಂಬಲಿ

ಕುವೆಂಪು
ಭಾವಗೀತೆಯನ್ನು ಕೇಳಲು ಇಲ್ಲಿ ಕ್ಲಿಕ್ ಮಾಡಿ